ಭಾರತವನ್ನು ಒಂದು ಗಣತಂತ್ರವಾಗಿ ಮಾಡಿದ್ದು ಸಂವಿಧಾನ. ಈ ಸಂವಿಧಾನ ಸದ್ಯಕ್ಕೆ ತನ್ನ ಚರಿತ್ರೆಯಲ್ಲೆ ಅತಿ ದೊಡ್ಡ ಬೆದರಿಕೆಯನ್ನು ಎದುರಿಸುತ್ತಿದೆ. ಆ ಬೆದರಿಕೆ ಬಂದಿರುವುದು ಅದನ್ನು ನಡೆಸಬೇಕಾದವರಿಂದಲೇ. ಈ ಪ್ರಹಾರವನ್ನು ಪ್ರತಿರೋಧಿಸಲೇ ಬೇಕು, ಅದನ್ನು ಹಿಮ್ಮೆಟ್ಟಿಸಲೇ ಬೇಕು. ಜನತೆ ಮಾತ್ರವೇ ಅದನ್ನು ಮಾಡಲು ಸಾಧ್ಯ, ಏಕೆಂದರೆ ಅಂತಿಮವಾಗಿ ಅವರೇ ಅದರ ರಕ್ಷಕರು.
ಪ್ರಕಾಶ ಕಾರಟ್
ದೇಶವು ಗಣತಂತ್ರದ 68ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಭಾರತವನ್ನು ಒಮದು ಗಣತಂತ್ರವಾಗಿಸಿದ್ದು ಜನವರಿ 26, 1950ರಂದು ಜಾರಿಗೆ ಬಂದ ಸಂವಿಧಾನ ಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಇದೀಗ ತನ್ನ ಚರಿತ್ರೆಯಲ್ಲೇ ಅತ್ಯಂತ ದೊಡ್ಡ ಬೆದರಿಕೆಯನ್ನು ಎದುರಿಸುತ್ತಿದೆ ಎಂಬುದು ಒಂದು ಕಳೆಗುಂದಿಸುವ ಸಂಗತಿ.
ಭಾರತ ಜಾತ್ಯತೀತತೆಯನ್ನು ಆಧರಿಸಿದ ಒಂದು ಸಂಸದೀಯ ಪ್ರಜಾಪ್ರಭುತ್ವವಾದದ್ದು ಈ ಸಂವಿಧಾನದಿಂದಾಗಿಯೇ. ಜನಾಂಗ, ಧರ್ಮ, ಪಂಥ ಅಥವ ಲಿಂಗದ ತಾರತಮ್ಯವಿಲ್ಲದೆ ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಕೊಡಮಾಡಿದ್ದು ಇದೇ ಸಂವಿಧಾನ. ಅದು ಅಲ್ಪಸಂಖ್ಯಾತರು ಮತ್ತು ದಲಿತರು, ಆದಿವಾಸಿಗಳು ಮುಂತಾದ ಸಾಮಾಜಿಕವಾಗಿ ದಮನಕ್ಕೊಳಗಾಗಿರುವ ಗುಂಪುಗಳ ಹಕ್ಕುಗಳನ್ನು ಗುರುತಿಸಿದೆ.
ಸಂವಿಧಾನದ ಮೂಲ ನಿಯಮಗಳಿಗೆ ಬೆದರಿಕೆ ಅದನ್ನು ಎತ್ತಿಹಿಡಿಯುವ ಮತ್ತು ಅದರ ಸಂಸ್ಥೆಗಳನ್ನು ಕ್ರಿಯೆಗಿಳಿಸುವ ಕರ್ತವ್ಯವನ್ನು ಯಾರಿಗೆ ವಹಿಸಿಕೊಡಲಾಗಿದೆಯೋ ಅವರಿಂದಲೇ ಹೊಮ್ಮಿದೆ. ಆಳುವ ಬಿಜೆಪಿ-ಆರೆಸ್ಸೆಸ್ ಕೂಟ ಹಿಂದುತ್ವ ತತ್ವಕ್ಕೆ ಬದ್ಧವಾಗಿವೆ, ಇದು ಸಂವಿಧಾನದ ಮೂಲ ಮೌಲ್ಯಗಳಿಗೆ ಪ್ರತಿಕೂಲವಾÀಗಿರುವಂತದ್ದು.
ಆರೆಸ್ಸೆಸ್ ಮತ್ತು ಅದರ ಸಿದ್ಧಾಂತಿಗಳು ಎಂದೂ ಸಂವಿಧಾನವನ್ನು ಕುರಿತಂತೆ ತಮ್ಮ ತುಚ್ಛೀಕಾರವನ್ನು ಅಡಗಿಸಿಟ್ಟಿಲ್ಲ. ಆರೆಸ್ಸೆಸ್ನ ಎರಡನೇ ಸರಸಂಘಚಾಲಕ ಎಂಎಸ್ ಗೋಲ್ವಾಲ್ಕರ್ ಪ್ರಕಾರ, ಸಂವಿಧಾನ “ಪಾಶ್ಚಿಮಾತ್ಯ ದೇಶಗಳ ವಿವಿಧ ಸಂವಿಧಾನಗಳಿಂದ ವಿವಿಧ ವಿಧಿಗಳನ್ನು ಎತ್ತಿಕೊಂಡು ಸಾಂಗತ್ಯವಿಲ್ಲದೆ ಪೋಣಿಸಿದ” ದಸ್ತಾವೇಜು. ಇನ್ನೊಬ್ಬ ಆರೆಸ್ಸೆಸ್ ಮುಖಂಡರು ಮತ್ತು ಜನಸಂಘದ ಅಧ್ಯಕ್ಷರಾಗಿದ್ದ ದೀನ್ ದಯಾಳ್ ಉಪಾಧ್ಯಾಯರು ಇದೇ ವಿಚಾರವನ್ನು ಪ್ರತಿಧ್ವನಿಸುತ್ತ ಸಂವಿಧಾನ ನಕಲು ಮಾಡಿದಂತದ್ದು, ಭಾರತದ ಬದುಕು ಮತ್ತು ಆದರ್ಶಗಳಿಗೆ ಹೊರತಾದದ್ದು ಎಂದಿದ್ದರು. ಅವರಿಗೆಲ್ಲ ಬೇಕಾಗಿದ್ದದ್ದು ಭಾರತದ ಪ್ರಾಚೀನ ಸಂಸ್ಕೃತಿಗೆ ಮತ್ತು ಪ್ರಕೃತಿಗೆ ಸರಿ ಹೊಂದುವಂತಹ ಒಂದು ಸಂವಿಧಾನ, ಬಹುಶಃ “ಮೊದಲ ಕಾನೂನುಕಾರ’” ಮನು ವಿರಚಿತ ಮನುಸ್ಮೃತಿಯೂ ಇದರಲ್ಲಿ ಸೇರಿದೆ.
ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಮಂತ್ರಿಗಳು ಮತ್ತು ವಿವಿಧ ಪ್ರಭುತ್ವ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಇರುವವರು ಸಂವಿಧಾನವನ್ನು ಬದಲಿಸುವ ಬಗ್ಗೆ ಮಾತಾಡುತ್ತಲೇ ಇದ್ದಾರೆ. ಇಂತಹ ತೀರ ಇತ್ತೀಚಿನ ಅಭಿವ್ಯಕ್ತಿ ಎಂದರೆ ಒಬ್ಬ ಕೇಂದ್ರ ಮಂತ್ರಿಯಾದ ಅನಂತಕುಮಾರ ಹೆಗ್ಡೆಯದ್ದು. ಮುಂಬರುವ ದಿನಗಳಲ್ಲಿ ಸಂವಿಧಾನವನ್ನು ಬದಲಿಸಲಾಗುವುದು ಎಂದು ಅವರು ಸಾರಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ‘ಜಾತ್ಯತೀತ’ ಎಂಬ ಪದ ಸ್ವಾತಂತ್ರ್ಯದ ನಂತರ ಹೇಳಿರುವ ಅತಿ ದೊಡ್ಡ ಸುಳ್ಳು ಎಂದು ಸಾರಿದ್ದಾರೆ, ಆಮೂಲಕ ಸಂವಿಧಾನದ ಒಂದು ಮೂಲ ನಿಯಮದ ಮೇಲೆ ದಾಳಿ ಮಾಡಿದ್ದಾರೆ.
ಸಂವಿಧಾನದ ವಿಭಿನ್ನ ಆಯಾಮಗಳು ದಾಳಿಗೊಳಗಾಗಿವೆ. ಸಂವಿಧಾನ ಪ್ರತಿಪಾದಿಸುವ ವೈಜ್ಞಾನಿಕ ಮನೋಭಾವ ಹಿಂದುತ್ವದ ಭಕ್ತರುಗಳಿಗೆ ವರ್ಜ್ಯ. ಅವೈಜ್ಞಾನಿಕ ವಿಚಾರಗಳು ಮತ್ತು ವಿಚಾರಹೀನತೆಗೆ ಪ್ರೋತ್ಸಾಹ ಈ ಮಂದಿಯ ಮುಖ್ಯ ಲಕ್ಷಣ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ರಾಜ್ಯಮಂತ್ರಿ ಸತ್ಯಪಾಲ್ ಸಿಂಗ್ ಡಾರ್ವಿನ್ರವರ ವಿಕಾಸವಾದದ ಸಿದ್ಧಾಂತ ವೈಜ್ಞಾನಿಕವಾಗಿ ತಪ್ಪು ಎಂದಿರುವುದು ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ.
ಈ ಸಂದರ್ಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ನವಂಬರ್ 25, 1949ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ನೀಡಿದ ಎಚ್ಚರಿಕೆಯನ್ನು ನೆನಪಿಸಿಕೊಳ್ಳುವುದು ಸೂಕ್ತ : “ಒಂದು ಸಂವಿಧಾನ ಎಷ್ಟೆ ಉತ್ತಮವಾಗಿರಲಿ, ಅದನ್ನು ಪ್ರಸ್ತುತ ದುಡಿಸಬೇಕಾದವರು ಒಂದು ಕೆಟ್ಟ ಗುಂಪಾದರೆ ಅದು ಕೆಟ್ಟದಾಗುವುದು ಖಂಡಿತ ಎಂದು ನನ್ನ ಭಾವನೆ”. ಪ್ರಸ್ತುತ ಅದನ್ನು ನಡೆಸಬೇಕಾದವರು ನಿಜವಾಗಿಯೂ ಒಂದು ಕೆಟ್ಟ ಗುಂಪು. ಬಿಜೆಪಿ ಮತ್ತು ಆರೆಸ್ಸೆಸ್ನ ಅಂತಿಮ ಗುರಿ ಈ ಸಂವಿಧಾನವನ್ನೆ ಬದಲಿಸುವುದು ಎಂಬ ಆತಂಕ ಉಂಟಾಗಿರುವುದು ಸಹಜವೇ. ಈಗ ಆಗುತ್ತಿರುವುದು ಅದನ್ನು ನಡೆಸಬೇಕಾದವರೇ ಅದನ್ನು ಬುಡಮೇಲು ಮಾಡುತ್ತಿರುವ ಕೆಲಸ.
ಸಂವಿಧಾನದ ಅಡಿಯಲ್ಲಿರುವ ಪ್ರತಿಯೊಂದು ಸಂಸ್ಥೆಯೂ, ಅದು ನ್ಯಾಯಾಂಗವಿರಬಹುದು, ನಾಗರಿಕ ಸೇವಾ ವ್ಯವಸ್ಥೆಯಿರಬಹುದು, ಅಥವ ಸಶಸ್ತ್ರ ಪಡೆಗಳಿರಬಹುದು- ಎಲ್ಲವನ್ನೂ ಒಳಗಿನಿಂದಲೇ ಕೊರೆದು ಹಾಕಲಾಗುತ್ತಿದೆ, ಅವುಗಳ ಸಮಗ್ರತೆಗೆ ಧಕ್ಕೆ ತರಲಾಗುತ್ತಿದೆ. ಸಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು , ರಾಜ್ಯಪಾಲರುಗಳು ಮುಂತಾದವರು ಸಂವಿಧಾನ-ವಿರೋಧಿ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದಾರೆ.
ಸಂವಿಧಾನವನ್ನು ದುರ್ಬಲಗೊಳಿಸುತ್ತಿರುವುದು, ಅದನ್ನು ಕೊರೆದು ಹಾಕುತ್ತಿರುವುದು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಒಂದು ಹಲ್ಲೆ. ಅದು ಜಾತ್ಯತೀತ-ಪ್ರಜಾಸತ್ತಾತ್ಮಕ ಗಣತಂತ್ರಕ್ಕೆ ಒಂದು ದೊಡ್ಡ ಬೆದರಿಕೆ. ಈ ಪ್ರಹಾರವನ್ನು ಪ್ರತಿರೋಧಿಸಲೇ ಬೇಕು, ಅದನ್ನು ಹಿಮ್ಮೆಟ್ಟಿಸಲೇ ಬೇಕು. ಜನತೆ ಮಾತ್ರವೇ ಅದನ್ನು ಮಾಡಲು ಸಾಧ್ಯ, ಏಕೆಂದರೆ ಅಂತಿಮವಾಗಿ ಅವರೇ ಅದರ ರಕ್ಷಕರು.