ಜನಗಳಿಗೆ ಮಂಕುಬೂದಿ ಎರಚುವ ಮೋದಿ ಸರಕಾರದ ಎಂದಿನ ಒಂದು ಪ್ರಚಾರ ಮೂಟೆ: ಜನಗಳ ಪ್ರತಿಭಟನೆಗಳನ್ನು ಸಂಘಟಿಸಲು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ
ಮುಂದಿನ ಸಾರ್ವತ್ರಿಕ ಚುನಾವಣೆಗಳ ಮುನ್ನದ ಮೋದಿ ಸರಕಾರದ ಕೊನೆಯ ಪೂರ್ಣ ಬಜೆಟ್ ಮತ್ತೊಮ್ಮೆ ನಮ್ಮ ದೇಶದ ಬಹುಪಾಲು ದುಡಿಯುವ ಜನಗಳ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸುತ್ತಲೇ ವಿದೇಶಿ ಮತ್ತು ದೇಶೀ ದೊಡ್ಡ ಕಾರ್ಪೊರೇಟ್ಗಳ ಹಿತಗಳನ್ನು ಪೂರೈಸಲು ಈ ಸರಕಾರ ಕಟಿಬದ್ಧವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. ಆದರೆ ಜನಗಳ ಮೇಲಿನ ಈ ದಾಳಿಗಳನ್ನು ಅವು ದಾಳಿಗಳಲ್ಲ, ತದ್ವಿರುದ್ಧವಾಗಿ ಸೇವೆಗಳೇ ಎಂಬ ವೇಷ ತೊಡಿಸಿ ಮಂಡಿಸಲು ಪ್ರಯತ್ನಿಸಿದೆ ಎಂದು ಕೇಂದ್ರದ 2018-19ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಈ ಬಜೆಟ್, 2017ರಲ್ಲಿ ನಿರ್ಮಾಣವಾದ ಹೆಚ್ಚಿನ ಸಂಪತ್ತಿನಲ್ಲಿ 73% ವನ್ನು ಕೇವಲ ಒಂದು ಶೇಕಡಾ ಅತಿ ಶ್ರೀಮಂತರು ಬಾಚಿಕೊಂಡಿದ್ದಾರೆ ಎಂದು ಕಂಡು ಬಂದಿದ್ದರೂ, ಶ್ರೀಮಂತರಿಗೆ ಅನ್ವಯವಾಗುವ ತೆರಿಗೆಗಳನ್ನು ಹೆಚ್ಚಿಸಿ ಆದಾಯ ಸಂಗ್ರಹಿಸುವ ಪ್ರಯತ್ನವನ್ನೆಮಾಡಿಲ್ಲ. ತದ್ವಿರುದ್ಧವಾಗಿ, ಸರಕಾರೀ ಖರ್ಚುಗಳಿಗೆ ಜನಸಾಮಾನ್ಯರ ಮೇಲೆ ಹೊರೆ ಹಾಕುವ ಪರೋಕ್ಷ ತೆರಿಗೆಗಳನ್ನೆಹೆಚ್ಚೆಚ್ಚಾಗಿ ಅವಲಂಬಿಸುವ ಪ್ರವೃತ್ತಿ ಮುಂದುವರೆದಿದೆ. ನಿಜ ಹೇಳಬೇಕೆಂದರೆ ಒಟ್ಟು ಕೇಂದ್ರೀಯ ತೆರಿಗೆಗಳಲ್ಲಿ ಪ್ರತ್ಯಕ್ಷ ತೆರಿಗೆಗಳ ಪಾಲು ಒಂದು ಶೇಕಡಾ , 51.6%ದಿಂದ 50.6%ಕ್ಕೆ ಇಳಿದಿದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಗಮನ ಸೆಳೆದಿದೆ.
ಕೃಷಿ, ಗ್ರಾಮೀಣ ಅಭಿವೃದ್ಧಿ ಮತ್ತು 10 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 5ಲಕ್ಷ ರೂ. ವೈದ್ಯಕೀಯ ವಿಮಾರಕ್ಷಣೆ ಒದಗಿಸಲಾಗುತ್ತದೆ ಎನ್ನುವ ರಾಷ್ಟ್ರೀಯ ಆರೋಗ್ಯಪಾಲನೆ ಯೋಜನೆಗೆ ಬೃಹತ್ ಪ್ರಮಾಣದಲ್ಲಿ ಖರ್ಚು ಮಾಡಲಾಗುತ್ತದೆ ಎಂದು ಬಿಂಬಿಸುತ್ತ ಈ ಬಜೆಟಿಗೆ ಬಡಜನರ ಪರ ಎಂಬ ವೇಷ ತೊಡಿಸಿ ಮೆರೆಸುವ ಪ್ರಯತ್ನ ನಡೆದಿದೆ. ಆದರೆ ವಾಸ್ತವವಾಗಿ ಈ ಆರೋಗ್ಯಪಾಲನೆ ಯೋಜನೆಗೆ ಈ ಬಜೆಟಿನಲ್ಲಿ ಯಾವುದೇ ಹೆಚ್ಚುವರಿ ಹಣವನ್ನು ಕೊಟ್ಟಿಲ್ಲ, ಈಗಿರುವ ಯೋಜನೆಯನ್ನೆಹೊಸದೆಂಬಂತೆ ಪ್ರಸ್ತುತ ಪಡಿಸಲಾಗಿದೆ. ಇದು ಕೂಡ ಈ ಹಿಂದಿನ ಸ್ಕೀಮಿನಂತೆ ವಿಮಾ ಕಂಪನಿಗಳಿಗೆ ಹಣ ವರ್ಗಾಯಿಸುವ ಸಾಧನವಾಗಿಯೇ ಬಳಕೆಯಾಗುತ್ತದೆ ಎಂಬುದು ಸ್ಪಷ್ಟ. ಆರೋಗ್ಯ ವಿಮೆಯಾಗಲೀ, ಬೆಳೆ ವಿಮೆಯಾಗಲೀ ಅದರ ಅಂತಿಮ ಫಲಿತಾಂಶ ಎಂದರೆ ಕಾರ್ಪೊರೇಟ್ಗಳಿಗೆ ಲಾಭದ ಬಕ್ಷೀಸೇ ಹೊರತು, ಜನಗಳಿಗೆ ಅದರಿಂದೇನೂ ಪ್ರಯೋಜನ ವಾಗುವುದಿಲ್ಲ ಎಂಬುದನ್ನು ಅನುಭವವಗಳೇ ತೋರಿಸಿ ಕೊಟ್ಟಿವೆ.
ಸಾಮಾಜಿಕ ಕಲ್ಯಾಣವನ್ನು ಕಡಿತಗೊಳಿಸುವ ಬಜೆಟ್
ಇದು ಒಂದು ಸಂಕುಚನಗೊಳಿಸುವ ಬಜೆಟ್, ಅಂದರೆ ಉದ್ಯೋಗಾವಕಾಶಗಳು ಮತ್ತು ಸಾಮಾಜಿಕ ಕಲ್ಯಾಣ ಖರ್ಚುಗಳನ್ನು ಮತ್ತಷ್ಟು ಕಡಿತಗೊಳಿಸುವ ಬಜೆಟ್ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ವಿಶ್ಲೇಷಿಸಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದಲ್ಲಿ ಸರಕಾರ ಮಾಡುವಖರ್ಚುಗಳ ಪ್ರಮಾಣ ಕಳೆದ ಬಾರಿ 13.2% ಇತ್ತು. ಈ ಬಜೆಟಿನಲ್ಲಿ ಅದು 13%ಕ್ಕೆ ಇಳಿದಿದೆ.
ಕಳೆದ ವರ್ಷ ಕೇಂದ್ರೀಯ ಸಾಮಾಜಿಕ ಸ್ಕೀಮುಗಳಲ್ಲಿ ಬಂಡವಾಳ ಖರ್ಚಿನ ಮಟ್ಟಗಳು ಬಜೆಟಿನಲ್ಲಿ ಸೂಚಿಸಿದ್ದ ಗುರಿಗಳಿಗಿಂತ ಕೆಳ ಮಟ್ಟದಲ್ಲಿದ್ದವು. ಇದರರ್ಥ ಅಂರ್ರಾಷ್ಟ್ರೀಯ ಬಂಡವಾಳಿಗರು ವಿಧಿಸಿರುವ ಹಣಕಾಸು ಕೊರತೆಯ ಮಿತಿಯನ್ನು ಪಾಲಿಸಲು ಜನಗಳ ಕಲ್ಯಾಣಕ್ಕೆ ಮಾಡಬೇಕಾಗಿದ್ದ ಖರ್ಚುಗಳಲ್ಲಿ ಕಡಿತ ಮಾಡಲಾಯಿತು. ರೆವಿನ್ಯೂ ಸಂಗ್ರಹದ ಬೆಳವಣಿಗೆ ಬಜೆಟ್ ಗುರಿಯನ್ನು ತಲುಪದೇ ಕೆಳಗೇ ಇದೆಯೆಂಬ ಸೂಚನೆಯಿಂದಾಗಿ ಸರಕಾರ ತನ್ನ ಖರ್ಚುಗಳನ್ನು ಕಡಿತ ಮಾಡಿದೆ. ಇದು ನೇರವಾಗಿ ಜನಗಳ ಜೀವನಾಧಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
- ಕೃಷಿ ಮತ್ತು ಗ್ರಾಮಿಣಾಭಿವೃದ್ಧಿಗೆ ಮಾಡುವ ಖರ್ಚಿನ ಪ್ರಮಾಣ ಜಿಡಿಪಿಯ 1.15% ದಿಂದ 1.08%ಕ್ಕೆ ಕಡಿತವಾಗಿದೆ.
- ಆರೋಗ್ಯದ ಮೇಲಿನ ಒಟ್ಟು ಖರ್ಚಿನ ಪ್ರಮಾಣ ಜಿಡಿಪಿಯ0.32% ದಿಂದ 0.29%ಕ್ಕೆ ಇಳಿದಿದೆ.
- ಶಿಕ್ಷಣದ ಮೇಲಿನ ಕೇಂದ್ರಿÃಯ ಖರ್ಚಿನ ಪ್ರಮಾಣ ಜಿಡಿಪಿಯ 0.49% ದಿಂದ 0.45% ಕ್ಕೆ ಇಳಿದಿದೆ.
- ಲಿಂಗ ಬಜೆಟಿನ ಪ್ರಮಾಣ ಜಿಡಿಪಿಯ 0.68%ದಿಂದ 0.65%ಕ್ಕೆ ಇಳಿದಿದೆ.
ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣಕ್ಕೆ ನೀಡಿರುವ ಮೊತ್ತ ಒಟ್ಟು ಬಜೆಟಿನ 1.6% ಮಾತ್ರ; ಪರಿಶಿಷ್ಟ ಜಾತಿಗಳಿಗೆ 2.32% ಮಾತ್ರ. ಇದು ಒಟ್ಟು ಜನಸಂಖ್ಯೆಯಲ್ಲಿ ಈ ವಿಭಾಗಗಳ ಪ್ರಮಾಣಕ್ಕೆ ಹೋಲಿಸಿದರೆ ಏನೇನೂ ಸಾಲದು.
ಮನರೇಗಕ್ಕೆ ನೀಡಿರುವ ಹಣದಲ್ಲಿ ಏನೂ ಹೆಚ್ಚಳವಾಗಿಲ್ಲ. ರಾಜ್ಯಸರಕಾರಗಳಿಗೆ 2017-18ರ ಸಾಲಿನಲ್ಲಿ ಕೊಡಬೇಕಾದ ಬಾಕಿಯ ಮೊತ್ತ 4800 ಕೋಟಿ ರೂ. ಎಂಬುದನ್ನು ಇಲ್ಲಿ ಗಮನಿಸಬೇಕು.
ಮತ್ತೊಮ್ಮೆ ಸರಕಾರ ಬೆಳೆಗಳಿಗೆ ಉತ್ಪಾದನೆಯ ಖರ್ಚಿನ ಕನಿಷ್ಟ ಒಂದೂವರೆ ಪಟ್ಟಿನಷ್ಟು ಕನಿಷ್ಟ ಬೆಂಬಲ ಬೆಲೆ ಘೋಷಿಸುವುದಾಗಿ ಭರವಸೆ ನೀಡಿದೆ. ಈಗಾಗಲೇ ಬಹುಪಾಲು ಹಿಂಗಾರು ಬೆಳೆಗಳಿಗೆ ಇಂತಹ ಕನಿಷ್ಟ ಬೆಂಬಲ ಬೆಲೆ ಘೋಷಿಸಲಾಗಿದೆ ಎನ್ನುತ್ತ ಹಣಕಾಸು ಮಂತ್ರಿಗಳು ದೇಶವನ್ನು ತಪ್ಪು ದಾರಿಗೆ ಎಳೆದಿದ್ದಾರೆ, ಇದನ್ನು ಎಂದೂ ದೇಶದಲ್ಲಿ ಎಲ್ಲಿಯೂ ಜಾರಿಗೆ ತಂದಿರುವುದು ಕಂಡುಬಂದಿಲ್ಲ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ.
ಇದೇ ರೀತಿಯಲ್ಲಿ, ವಿಸ್ತರಿತ ಬೆಳೆ ಸಾಲ ಸೌಲಭ್ಯ ಇತ್ಯಾದಿಗಳನ್ನು ಕುರಿತು ಹೇಳಿಕೊಂಡಿರುವುದು ಬಜೆಟ್ ನೀಡಿಕೆಗಳಲ್ಲಿ ಮೂರ್ತವಾಗಿ ಕಾಣ ಬರುತ್ತಿಲ್ಲ. ಆಹಾರ ಸಬ್ಸಿಡಿಗೆ ಮತ್ತು ಬೆಳೆಗಳ ಖರೀದಿಗೆ ಇಟ್ಟಿರುವ ಮೊತ್ತ ರೈತರಿಗೆ ಬೆಂಬಲ ನೀಡಲಾಗಲೀ ಅಥವ ಆಹಾರ ಭದ್ರತಾ ಕಾಯ್ದೆಯ ಬಾಧ್ಯತೆಗಳನ್ನು ಈಡೇರಿಸಲಿಕ್ಕಾಗಲೀ ಏನೇನೂ ಸಾಲದು. ಸಾಲದ ಹೊರೆಯ ಅಡಿಯಲ್ಲಿ ನರಳುತ್ತ ಹತಾಶೆಯಿಂದ ಆತ್ಮಹತ್ಯೆಯತ್ತ ನೂಕಲ್ಪಡುತ್ತಿರುವ ರೈತರಿಗೆ ಸಾಲ ಮನ್ನಾದ ಪ್ರಸ್ತಾಪವೇ ಈ ಬಜೆಟಿನಲ್ಲಿಲ್ಲ ಎಂಬ ಮಹತ್ವದ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಗಮನ ಸೆಳೆದಿದೆ.
ಮಧ್ಯಮವರ್ಗಗಳು ಈ ಬಜೆಟಿನಲ್ಲಿ ನೇರ ಪ್ರಯೋಜನವೇನನ್ನೂ ಕಾಣುತ್ತಿಲ್ಲ. ನೌಕರರು ತಮ್ಮ ಉಳಿತಾಯಗಳ ಮೇಲಿನ ಆದಾಯ ಕಡಿತ ಗೊಳ್ಳುತ್ತಿರುವುದನ್ನು ಕಾಣುತ್ತಿದ್ದಾರೆ. ಪೆಟ್ರೊಲ್ ಮತ್ತು ಡೀಸೆಲ್ ಮೇಲೆ ಲೀಟರಿಗೆ 2ರೂ. ಪರಿಹಾರ ನೀಡಲಾಗಿದೆ ಎಂದು ಹೇಳುತ್ತಲೇ, ಅವುಗಳ ಮೇಲಿನ ಉಪಕರಗಳನ್ನು ಲೀಟರಿಗೆ 6ರೂ.ನಿಂದ 8ರೂ.ಗೆ ಏರಿಸಲಾಗಿದೆ.
ಒಟ್ಟಿನಲ್ಲಿ, ಈ ಬಜೆಟ್ ಜನಗಳಿಗೆ ಮಂಕುಬೂದಿ ಎರಚುವ ಮೋದಿ ಸರಕಾರದ ಎಂದಿನ ಒಂದು ಪ್ರಚಾರ ಮೂಟೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ವರ್ಣಿಸಿದೆ. ಇದು ಹಣಕಾಸು ಕೊರತೆಯನ್ನು ಕಡಿತಗೊಳಿಸಿ ಅಂರ್ರಾಷ್ಟ್ರೀಯ ಹಣಕಾಸು ಬಂಡವಾಳವನ್ನು ತುಷ್ಟೀಕರಿಸಲಿಕ್ಕಾಗಿ ಖರ್ಚುಗಳನ್ನು ಕುಗ್ಗಿಸುತ್ತದೆ, ಸಾರ್ವಜನಿಕ ವಲಯದ ಹೂಡಿಕೆಗಳನ್ನು ಹಿಂಪಡೆಯುತ್ತದೆ, ಇವೆಲ್ಲದಕ್ಕೂ ಹೆಚ್ಚಿನ ಹೊರೆಗಳ ಮೂಲಕ ಬೆಲೆ ತೆರಬೇಕಾದವರು ಭಾರತೀಯ ಜನತೆ .
ಆದ್ದರಿಂದ ನೋಟುರದ್ಧತಿ ಮತ್ತು ಜಿಎಸ್ಟಿ ಹೇರಿದ ಸಂಕಟಗಳನ್ನು ಮತ್ತಷ್ಟು ಹೆಚ್ಚಿಸಲು ಬಂದಿರುವ ಇಂತಹ ಜನ-ವಿರೋಧಿ ಬಜೆಟಿನ ವಿರುದ್ಧ ಜನಗಳ ಪ್ರತಿಭಟನೆಗಳನ್ನು ಸಂಘಟಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ.