‘ವರ್ಗೀಕೃತ ಮಾಹಿತಿ’ ಎಂಬುದು ಒಪ್ಪಲಾಗದ ನೆವ : ಸಿಪಿಐ(ಎಂ) ಪೊಲಿಟ್ಬ್ಯುರೊ
ಫ್ರಾನ್ಸ್ ನಿಂದ ಖರೀದಿಸಲಿರುವ ರಫೇಲ್ ಯುದ್ಧ ವಿಮಾನಕ್ಕೆ ತೆರಬೇಕಾದ ಬೆಲೆ ಎಷ್ಟು ಎಂದು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತ, ರಕ್ಷಣಾ ಮಂತ್ರಿಗಳು ಇದನ್ನು ತಿಳಿಸಲು ಸಾಧ್ಯವಿಲ್ಲ, ಏಕೆಂದರೆ ಈ ಕುರಿತ ಎರಡು ಸರಕಾರಗಳ ನಡುವಿನ ಒಪ್ಪಂದದ ವಿವರಗಳು ‘ವರ್ಗೀಕೃತ ಮಾಹಿತಿ’ ಎಂದು ಹೇಳಿದ್ದಾರೆ. ಅಂದರೆ ಈ ಒಪ್ಪಂದ ಕುರಿತ ಮಾಹಿತಿಗಳನ್ನು ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಕೊಡಬಹುದು, ಸಂಸತ್ ಸದಸ್ಯರು ಈ ‘ಅಧಿಕೃತ ವ್ಯಕ್ತಿಗಳು’ ನಿರೂಪಣೆಯಲ್ಲಿ ಬರುವುದಿಲ್ಲ ಎಂಬದು ಅವರ ಮಾತಿನ ಅರ್ಥ.
ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಪ್ರಧಾನ ಮಂತ್ರಿಗಳ ಫ್ರಾನ್ಸ್ ಭೇಟಿ ಕಾಲದಲ್ಲಿ ಈ ಕುರಿತು ಮರುಚೌಕಾಸಿ ನಡೆಸಿ ಯಶಸ್ವಿಯಾಗಿ ವ್ಯವಹಾರವನ್ನು ಕುದುರಿಸಲಾಗಿದೆ ಎಂದು ಪ್ರಕಟಿಸಿದಂದಿನಿಂದಲೇ, ಈ ಮರುವ್ಯವಹಾರದಲ್ಲಿ ತೆರಬೇಕಾದ ಬೆಲೆ ಈ ಹಿಂದಿನ ಒಪ್ಪಂದದಲ್ಲಿ ನಿರ್ಧರಿಸಿದ್ದಕ್ಕಿಂತ ಬಹಳ ಹೆಚ್ಚು ಎಂದು ಆಪಾದಿಸುವ ಹಲವು ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಭಾರತ ತೆರಲು ಒಪ್ಪಿದ ಬೆಲೆ ಎಷ್ಟೆಂದು ತಿಳಿಸದಿರಲು ರಕ್ಷಣಾ ಮಂತ್ರಿಗಳು ಇದು ‘ವರ್ಗೀಕೃತ ಮಾಹಿತಿ’ ಎಂದು ನೆವ ಒಡ್ಡಿರುವುದು ಸಮರ್ಥನೀಯವಲ್ಲ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.
ಕೋಟಿಗಟ್ಟಲೆ ಡಾಲರುಗಳ ಒಂದು ರಕ್ಷಣಾ ವ್ಯವಹಾರವನ್ನು ರಹಸ್ಯವಾಗಿಡಲು ಸಾಧ್ಯವಿಲ್ಲ. ಸಂಸತ್ತು ದೇಶದ ಸಾರ್ವಭೌಮ ಅಧಿಕಾರಯುತ ಸಂಸ್ಥೆ. ಅದರಿಂದ ಮಾಹಿತಿಯನ್ನು ಈ ಸರಕಾರ ಮರೆಮಾಚುತ್ತಿರುವುದಾದರೂ ಏಕೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಪ್ರಶ್ನಿಸಿದೆ.
ರಾಷ್ಟ್ರದ ಖಜಾನೆಯ ಮೇಲೆ ಒಂದು ಅಗಾಧ ಮತ್ತು ಅಸಮರ್ಥನೀಯ ಹೊರೆಯನ್ನು ಸೃಷ್ಟಿಸಿರುವುದಷ್ಟೇ ಅಲ್ಲ, ನಮ್ಮ ರಕ್ಷಣಾ ವಲಯಕ್ಕೂ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ತೊಡಗಿರುವ ಸಾರ್ವಜನಿಕ ವಲಯದ ಘಟಕಗಳಿಗೂ ಗಂಭೀರ ದುಷ್ಪರಿಣಾಮ ತರುವಂತದ್ದು ಎಂದು ಟೀಕಿಸಲ್ಪಟ್ಟಿರುವ ಒಂದು ವ್ಯವಹಾರದ ಬಗ್ಗೆ ಸಂಸತ್ತಿಗೆ ಮಾಹಿತಿ ನಿರಾಕರಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸರಕಾರ ಪಾರದರ್ಶಕತೆ ಮತ್ತು ಋಜುತ್ವದ ದೃಷ್ಟಿಯಿಂದ ಈ ಒಪ್ಪಂದ ಕುರಿತಾದ ಎಲ್ಲ ವಿವರಗಳನ್ನು ಸಂಸತ್ತಿಗೆ ಮತ್ತು ಜನತೆಗೆ ಬಹಿರಂಗ ಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.