ಫೆಬ್ರುವರಿ 8ರಂದು ತ್ರಿಪುರಾದಲ್ಲಿ ಚುನಾವಣಾ ಸಭೆಯಲ್ಲಿ ಮಾತಾಡುತ್ತ ದೇಶದ ಪ್ರಧಾನ ಮಂತ್ರಿಗಳು ಬೆಲೆಬಾಳುವ ಮಣಿಗಳನ್ನು ಧರಿಸಿದರೆ ಒಳ್ಳೆಯದಾಗುತ್ತದೆ ಎಂಬ ಜ್ಯೋತಿಷಿಗಳ ಮೂಢನಂಬಿಕೆಯನ್ನು ಪುನರುಚ್ಚರಿಸುತ್ತ “ತ್ರಿಪುರಾದ ಜನತೆ 20ವರ್ಷಗಳಿಂದ ತಪ್ಪು ಮಾಣಿಕ್ಯವನ್ನು ಧರಿಸಿದ್ದಾರೆ, ಇದು ಅವರಿಗೆ ಅಪಾರ ಕಷ್ಟಗಳನ್ನು ತಂದಿದೆ. ಅದನ್ನು ತಿರಸ್ಕರಿಸಿ, ನಾವು ನಿಮಗೆ ವಜ್ರವನ್ನು ಕೊಡುತ್ತೇವೆ” ಎಂದರು. ಎಡರಂಗ ಸರಕಾರದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಬಗೆಗಿನ ವ್ಯಂಗ್ಯವಾಡುವ ಟೀಕೆ ಇದಾಗಿತ್ತು.
ಇದಕ್ಕೆ ಉತ್ತರಿಸುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಚುನಾವಣಾ ಪ್ರಚಾರ ಸಭೆಯಲ್ಲಿ “ಈ ಹೀರಾಗಳು ಯಾರು ಎಂದು ತ್ರಿಪುರಾದ ಜನತೆ ನೋಡಿದ್ದಾರೆ, ಅವರು ವೇದಿಕೆಯ ಮೇಲೆ ಮೋದಿಯವರ ಪಕ್ಕದಲ್ಲೇ ಇದ್ದರು” ಎಂದರು. ಪ್ರತ್ಯೇಕತಾವಾದಿ ಐಪಿಎಫ್ಟಿಯ ಮುಖಂಡರು ಅವರ ಪಕ್ಕದಲ್ಲಿದ್ದವರು. ಉಗ್ರಗಾಮಿ ಗುಂಪುಗಳ ಜತೆಗೆ ಕೈಜೋಡಿಸಿರುವವರು, ಕ್ರಿಮಿನಲ್ ಕೇಸುಗಳನ್ನು ಹೊತ್ತವರು ಮತ್ತು ಪಕ್ಷಾಂತರಿಗಳನ್ನು ‘ಹೀರಾ’ಗಳು (ವಜ್ರಗಳು) ಎಂದು ಬೃಂದಾ ಅವರು ವರ್ಣಿಸಿದಾಗ ನೆರೆದಿದ್ದ ಸಾವಿರಾರು ಮಂದಿ ಹರ್ಷೋದ್ಗಾರ ಮಾಡಿದರು.
ಅಂಕೆ-ಸಂಖ್ಯೆಗಳೊಂದಿಗೆ ಪ್ರಧಾನಿಗಳ ಸುಳ್ಳುಗಳನ್ನು ಬಯಲಿಗೆಳೆಯುತ್ತ “ಅವರು ದೇಶದ ಪ್ರಧಾನ ಮಂತ್ರಿಯಾಗಿ ಮಾತಾಡಲಿಲ್ಲ, ಭಾರತೀಯ ಜಗಡಾ(ಜಗಳ) ಪಾರ್ಟಿಯ ಮುಖಂಡರಾಗಿ ಮಾತಾಡಿದ್ದಾರೆ, ಸುಳ್ಳುಗಳು ಮತ್ತು ಮಾಣಿಕ್ ಸರ್ಕಾರ್ ಬಗ್ಗೆ ಬೈಗುಳದ ಮಾತುಗಳು ತ್ರಿಪುರಾದಲ್ಲಿ ಅವರಿಗೆ ಮತಗಳನ್ನು ತಂದು ಕೋಡುವುದಿಲ್ಲ ಎಂದು ಗೇಲಿ ಮಾಡಿದರು. ದಿಲ್ಲಿಯಿಂದ ಬರುವ ಬಿಜೆಪಿ ಮುಖಂಡರಿಗೆ ರಾಜ್ಯದಲ್ಲಿ ಎಡರಂಗ ಸರಕಾರದ ಅಡಿಯಲ್ಲಿ ಆಗಿರುವ ಅಭಿವೃದ್ಧಿಯನ್ನು ಕಾಣಲು ತ್ರಿಪುರದ ಜನತೆ ಕನ್ನಡಕಗಳನ್ನು ಕೊಡಬೇಕು ಎಂದು ಮನವಿ ಮಾಡಿದರು.
ಇನ್ನೊಬ್ಬ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಸುಭಾಷಿಣಿ ಅಲಿ ಮಾತಾಡುತ್ತ ಪ್ರಾಚೀನ ಕಾಲದಲ್ಲಿ ಹೀರಾ(ವಜ್ರ)ಗಳನ್ನು ಆತ್ಮಹತ್ಯೆಗೆ ಜನ ಬಳಸುತ್ತಿದ್ದರು ಎಂಬುದನ್ನು ಮೋದಿಯವರು ಮರೆತಂತಿದೆ ಎಂದರು. ಎಲ್ಲ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಮೋದಿಯವರಿಗೆ ನೆನಪಿಸಿದರು. ತ್ರಿಪುರಾದ ಮತದಾರರು ಈ ಹೀರಾಗಳನ್ನು ತಿರಸ್ಕರಿಸುತ್ತಾರೆ ಎಂದರು. ತ್ರಿಪುರಾದಲ್ಲಿ ಮೋದಿಯವರು ಉದ್ಯೋಗ ಕೊಡುವುದಾಗಿ ಹೇಳುತ್ತಾರೆ, ದಿಲ್ಲಿಯಲ್ಲಿ ಪಕೋಡಾ ಮಾರಲು ಹೇಳುತ್ತಾರೆ ಎಂದೂ ಅವರು ಲೇವಡಿ ಮಾಡಿದರು. ಯುವಜನರಿಗೆ ಉದ್ಯೋ ಗ ಕೊಡಲು ನೀವೇನು ಮಾಡಿದ್ದೀರಿ ಎಂದು ತ್ರಿಪುರಾದ ಮತದಾರರು ಅವರನ್ನು ಕೇಳಬೇಕು ಎಂದು ಸುಭಾಷಿಣಿ ಅಲಿ ಹೇಳಿದರು.