ಕೋಮು ಧ್ರುವೀಕರಣಕ್ಕಾಗಿ ಈ ‘ರಾಮರಾಜ್ಯ ರಥಯಾತ್ರೆ’

ಸಿಪಿಐ(ಎಂ) ಪೊಲಿಟ್‍ಬ್ಯುರೊ ಆತಂಕ : ಆರೆಸ್ಸೆಸ್‍-ಬಿಜೆಪಿಗೆ ಕೋಮುವಾದಿ ಹಿಂದುತ್ವ ವೋಟ್‍ಬ್ಯಾಂಕ್‍ ನ್ನು ಬಲಪಡಿವ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ಜಾತ್ಯತೀತ, ಶಾಂತಿಪ್ರಿಯ ಶಕ್ತಿಗಳಿಗೆ ಕರೆ

ಫೆಬ್ರುವರಿ 13ರಂದು ಉತ್ತರಪ್ರದೇಶದ ಅಯೋಧ್ಯೆಯಿಂದ ‘ರಾಮರಾಜ್ಯ ರಥಯಾತ್ರೆ’ ಆರಂಭವಾಗಿದೆ. ಆರೆಸ್ಸೆಸ್‍ಗೆ ಸೇರಿದ ವಿಹೆಚ್‍ಪಿಯ ಪ್ರಧಾನ ಕಾರ್ಯದರ್ಶಿ ಫರೀದಾಬಾದ್‍ನ ಬಿಜೆಪಿ ಸಂಸತ್ ಸದಸ್ಯರು ,ಅಯೋಧ್ಯೆಯ ಬಿಜೆಪಿ ಮೇಯರ್‍ ಮತ್ತು ಇತರ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಇದನ್ನು  ಉದ್ಘಾಟಿಸಿದ್ದಾರೆ. ಈ ರಥಯಾತ್ರೆಯ ದುಷ್ಪರಿಣಾಮಗಳ ಬಗ್ಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಳವಾದ ಆತಂಕ ವ್ಯಕ್ತಪಡಿಸಿದೆ.

‘ರಾಮಾಯಣ’ದಲ್ಲಿ ಹೇಳಿರುವ ಶ್ರೀಲಂಕೆಗೆ ರಾಮನ ಪಯಣದ ದಾರಿಯಲ್ಲಿ ಈ ರಥಯಾತ್ರೆ ಸಾಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರ ಮುಖ್ಯ ಗುರಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ(ಸುಪ್ರಿಂ ಕೋರ್ಟ್‍ ಈ ಕುರಿತ ಅರ್ಜಿಗಳ ವಿಚಾರಣೆಯನ್ನು ಇನ್ನೂ ನಡೆಸುತ್ತಿದ್ದರೂ) ರಾಮದೇವಸ್ಥಾನವನ್ನು ಕಟ್ಟುವ ಪ್ರತಿಜ್ಞೆಯನ್ನು ಜನಗಳು ಕೈಗೊಳ್ಳುವಂತೆ ಮಾಡುವುದು, ‘ರಾಮರಾಜ್ಯ’ದ ಮರುಸ್ಥಾಪನೆ, ಶಾಲಾಪಠ್ಯಕ್ರಮದಲ್ಲಿ ‘ರಾಮಾಯಣ’ದ ಬೋಧನೆಯನ್ನು ಸೇರಿಸುವುದು ಮತ್ತು ಭಾನುವಾರದ ಬದಲು ಗುರುವಾರವನ್ನು ವಾರದ ರಜಾದಿನವಾಗಿ ‘ರಾಷ್ಟ್ರೀಯ ಹಿಂದೂ ದಿನ’ದ ಆಚರಣೆ ಎಂದು ಸಾರಲಾಗಿದೆ.

ಈ ಯಾತ್ರೆಯ ದಾರಿ ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಮಧ್ಯಪ್ರದೇಶ ಮತ್ತು  ಮಹಾರಾಷ್ಟ್ರ ಮೂಲಕ ಹಾದು, ವಿಧಾನಸಭಾ ಚುನಾವಣೆಗಳು ನಡೆಯಲಿರುವ ಕರ್ನಾಟಕದಲ್ಲಿ ಸುಮಾರು 15 ದಿನಗಳ ಕಾಲ ಸಂಚರಿಸಿ, ಕೇರಳದ ಮೂಲಕ ತಮಿಳುನಾಡಿನಲ್ಲಿ ರಾಮೇಶ್ವರಂ ತಲುಪಲಿದೆಯಂತೆ.

ಈ ಯಾತ್ರೆ ಕಿಚ್ಚು ಹಚ್ಚುವ ಸಾಧ್ಯತೆಯನ್ನು ಹೊಂದಿದ್ದು ಆರೆಸ್ಸೆಸ್‍-ಬಿಜೆಪಿಗೆ ಕೋಮುವಾದಿ ಹಿಂದುತ್ವ ವೋಟ್‍ಬ್ಯಾಂಕ್‍ ನ್ನು ಬಲಪಡಿವುದಕ್ಕಾಗಿ ಕೋಮುಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಅಪಾಯವನ್ನು ತುಂಬಿಕೊಂಡಿದೆ. ಕೋಮುಗಲಭೆಗಳನ್ನು, ಹಿಂಸಾಚಾರವನ್ನು ಮತ್ತು ವಿನಾಶಲೀಲೆಯನ್ನು ಹರಿಯ ಬಿಡುವ ಗಂಭೀರ ಅಪಾಯಗಳಿವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಎಚ್ಚರಿಸಿದೆ.

ಕೇಂದ್ರ ಸರಕಾರ ಮತ್ತು ರಾಜ್ಯಸರಕಾರಗಳು ಕೋಮುಸಾಂತಿಯನ್ನು ಕದಡದಂತೆ, ಮತ್ತು ಜೀವನ ಮತ್ತು ಸ್ವಾತಂತ್ರ್ಯದ ವೈಯಕ್ತಿಕ ಹಕ್ಕಿನ ಉಲ್ಲಂಘನೆಯಾಗದಂತೆ  ಕಾನೂನು ಮತ್ತು ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆರೆಸ್ಸೆಸ್‍/ಬಿಜೆಪಿಯ ಕೋಮುವಾದಿ ಅಣಿನೆರಿಕೆಯ ದುಷ್ಟ ತಂತ್ರಗಳನ್ನು ಬಯಲಿಗೆಳೆಯಬೇಕು ಎಂದು ಎಲ್ಲ ಜಾತ್ಯತೀತ ಹಾಗೂ ಶಾಂತಿಪ್ರಿಯ ಶಕ್ತಿಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *