ಜನ-ವಿರೋಧಿ, ಪ್ರಜಾಪ್ರಭುತ್ವ-ವಿರೋದಿ ಸ್ವರೂಪವನ್ನು ಬಯಲಿಗೆಳೆಯಲು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ
ತ್ರಿಪುರಾದಲ್ಲಿ ಆರೆಸ್ಸೆಸ್/ಬಿಜೆಪಿ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ವಿಜಯದ ನಂತರದಲ್ಲಿ ರಾಜ್ಯಾದ್ಯಂತ ಅಭೂತಪೂರ್ವ ಹಿಂಸಾಚಾರವನ್ನು ಹರಿಯಬಿಟ್ಟಿವೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಅದನ್ನು ಬಲವಾಗಿ ಖಂಡಿಸಿದೆ.
ಸಿಪಿಐ(ಎಂ) ಮತ್ತು ಎಡಪಕ್ಷಗಳ ಕಚೆರಿಗಳು ಮತ್ತು ಕಾರ್ಯಕರ್ತರ ಮೇಲೆ ಗುರಿಯಿಟ್ಟು ಮಾರಣಾಂತಿಕ ಹಲ್ಲೆಗಳನ್ನು ಮಾಡಲಾಗುತ್ತಿದೆ. ಲೆನಿನ್ ಪ್ರತಿಮೆಯ ಧ್ವಂಸ ಆರೆಸ್ಸೆಸ್ನ್ ಉನ್ಮತ್ತ ಕಮ್ಯುನಿಸ್ಟ್-ವಿರೋಧಿ, ಪ್ರಜಾಪ್ರಭುತ್ವ-ವಿರೋಧಿ ಫ್ಯಾಸಿಸ್ಟ್ ತೆರನ ಸ್ವರೂಪದ ಪ್ರತೀಕವಾಗಿದೆ ಎಂದು ಅದು ಹೇಳಿದೆ.
ಮಾರ್ಚ್ 6ರಂದು ಸಿಪಿಐ(ಎಂ) ಮತ್ತು ಎಡಪಕ್ಷಗಳ ಸಂಸತ್ ಸದಸ್ಯರ ನಿಯೋಗವೊಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಇಂತಹ ಹಲ್ಲೆಗಳ ಪ್ರಮುಖ ಘಟನೆಗಳ ವಿವರ ನೀಡುವ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ.
ಈ ದಾಳಿಗಳು ಆರೆಸ್ಸೆಸ್/ಬಿಜೆಪಿ ತಮ್ಮ ಪ್ರಜಾಪ್ರಭುತ್ವವ-ವಿರೋಧಿ ಅಜೆಂಡಾವನ್ನು ಜಾರಿಗೆ ತರಲು ಮುಖ್ಯವಾಗಿ ರಾಜಕೀಯ ಹಿಂಸಾಚಾರವನ್ನೇ ಸಾಧನವಾಗಿ ಬಳಸುತ್ತವೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟವಾಗಿ ತೋರಿಸುತ್ತಿವೆ.
ತ್ರಿಪುರಾದ ಸಿಪಿಐ(ಎಂ), ಎಡರಂಗ ಮತ್ತು ಅಲ್ಲಿನ ಶಾಂತಿಪ್ರಿಯ ಜನತೆ ಮತ್ತು ಈ ದಾಳಿಗಳನ್ನು ಎದುರಿಸುತ್ತಿರುವ ಸಂಗಾತಿಗಳೊಂದಿಗೆ ಸೌಹಾರ್ದ ವ್ಯಕ್ತಪಡಿಸಲು ದೇಶಾದ್ಯಂತ ಸಿಪಿಐ(ಎಂ) ಘಟಕಗಳು ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಿ ಆರೆಸ್ಸೆಸ್/ಬಿಜೆಪಿಯಲ್ಲಿ ಅಂತರ್ಗತವಾಗಿರುವ ಅದರ ಪ್ರಜಾಪ್ರಭುತ್ವ-ವಿರೋಧಿ, ಜನ-ವಿರೋಧಿ ಸ್ವರೂಪವನ್ನು ಮತ್ತು ಚಟುವಟಿಕೆಗಳನ್ನು ಬಯಲಿಗೆಳೆಯಬೇಕು ಎಂದು ಪೊಲಿಟ್ಬ್ಯುರೊ ಕರೆ ನೀಡಿದೆ.
ಮಾರ್ಚ್ 5ರ ಸಂಜೆ 4 ರವರೆಗೆ
514 ಮಂದಿಯನ್ನು ವೈಯಕ್ತಿಕ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ,
1539 ಮನೆಗಳ ಮೇಲೆ ದಾಳಿಯಾಗಿದೆ, 196 ಮನೆಗಳನ್ನು ಸುಟ್ಟಿದ್ದಾರೆ.
134 ಪಕ್ಷದ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ,
64ನ್ನು ಧ್ವಂಸ ಮಾಡಲಾಗಿದೆ,
208 ಪಕ್ಷದ ಕಚೇರಿಗಳ ಮೇಲೆ ಕಬ್ಜಾ ಮಾಡಿದ್ದಾರೆ.
38 ಸಾಮೂಹಿಕ ಸಂಘಟನೆಗಳ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.
90 ಸಾಮೂಹಿಕ ಸಂಘಟನೆಗಳ ಕಚೇರಿಗಳನ್ನು ಕಬ್ಜಾ ಮಾಡಿದ್ದಾರೆ.
ಇವುಗಳ ವಿವರವಾದ ಪಟ್ಟಿಯನ್ನು ಲಗತ್ತಿಸಿ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರೂ, ಸಂಸತ್ ಸದಸ್ಯರೂ ಆಗಿರುವ ಮಹಮ್ಮದ್ ಸಲೀಂ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದ ಒಕ್ಕಣಿಕೆ ಹೀಗಿದೆ:
“ಸಿಪಿಐ(ಎಂ) ಪೊಲಿಟ್ಬ್ಯುರೊ ತ್ರಿಪುರಾ ವಿಧಾನ ಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದ ನಂತರ ಬಿಜೆಪಿಯ ಗೂಂಡಾಗಳು ಭಯೋತ್ಪಾದನೆಯ ರಾಜ್ಯಭಾರವನ್ನು, ರಾಜ್ಯಾದ್ಯಂತ ಸಿಪಿಐ(ಎಂ) ಸದಸ್ಯರು ಮತ್ತು ಬೆಂಬಲಿಗರ ಮೇಲೆ, ಅವರ ಮನೆಗಳ ಮೇಲೆ , ಪಕ್ಷದ ಕಚೇರಿಗಳು ಮತ್ತು ಸಾಮೂಹಿಕ ಸಂಘಟನೆಗಳ ಕಚೇರಿಗಳ ಮೇಲೆ ಸರ್ವಮುಖ ದಾಳಿಗಳನ್ನು ಹರಿಯ ಬಿಟ್ಟಿದ್ದಾರೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತದೆ.
514 ವ್ಯಕ್ತಿಗಳು ಗಾಯಗೊಂಡಿದ್ದಾರೆ, 1539 ಮನೆಗಳ ಮೇಲೆ ದಾಳಿಗಳು ನಡೆದಿವೆ, 196 ಮನೆಗಳನ್ನು ಬೆಂಕಿಗೆ ಆಹುತಿ ಮಾಡಲಾಗಿದೆ, 134 ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆದಿದೆ ಮತ್ತು 208 ಪಕ್ಷದ ಕಚೇರಿಗಳನ್ನು ಕಬ್ಜಾ ಮಾಡಿದ್ದಾರೆ. ಹಲವು ಸಾಮೂಹಿಕ ಸಂಘಟನೆಗಳ ಕಚೇರಿಗಳ ಮೇಲೂ ದಾಳಿ ನಡೆದಿದೆ ಮತ್ತು ಕಬ್ಜಾಗಳಾಗಿವೆ. ದಾಳಿಗಳು ಮುಂದುವರೆಯುತ್ತಿವೆ.
ಸಿಪಿಐ(ಎಂ) ತ್ರಿಪುರಾ ರಾಜ್ಯ ಸಮಿತಿ ಮಾರ್ಚ್ 5ರ ಸಂಜೆ 4 ಗಂಟೆ ವರೆಗೆ ನಡೆದ ಘಟನೆಗಳ ಮಾಹಿತಿ ನೀಡಿದೆ. ಅದು ಜತೆಗಿದೆ.
ನೀವು ತಕ್ಷಣ ಮಧ್ಯಪ್ರವೇಶಿಸಿ ಈ ದಾಳಿಗಳನ್ನು ಮತ್ತು ಹಿಂಸಾಚಾರವನ್ನು ನಿಲ್ಲಿಸಬೇಕು ಮತ್ತು ಪರಿಸ್ಥಿತಿ ಹದಗೆಡುವ ಮೊದಲು ಶಾಂತಿ ಮತ್ತು ಸಾಮಾನ್ಯ ಪರಿಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ನಾವು ಕೋರುತ್ತೇವೆ.”