ತ್ರಿಪುರಾ ಎಡರಂಗ ನಿರ್ಧಾರ: ಚರಿಲಂ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ

ತ್ರಿಪುರಾ ವಿಧಾನಸಭೆಗೆ ಫೆಬ್ರುವರಿ 18ರಂದು ನಡೆದ ಚುನಾವಣೆಗಳಲ್ಲಿ ಚರಿಲಂ ಮೀಸಲು ಕ್ಷೇತ್ರದಲ್ಲಿ ಸಿಪಿಐ(ಎಂ) ಅಭ್ಯರ್ಥಿಯ ನಿಧನದಿಂದಾಗಿ ಮತದಾನವನ್ನು ಮುಂದೂಡಲಾಗಿತ್ತು. ಅದನ್ನು ಮಾರ್ಚ್ 12ರಂದು ನಡೆಸಲಾಗುವುದೆಂದು ಚುನಾವಣಾ ಆಯೋಗ ಪ್ರಕಟಿಸಿತು.

ಆದರೆ ಫಲಿತಾಂಶ ಬಂದಂದಿನಿಂದ ಈ ಕ್ಷೇತ್ರದಲ್ಲಿ ಬಿಜೆಪಿ-ಐಪಿಎಫ್‍ಟಿಯಿಂದ ಎಡಪಕ್ಷಗಳ ಕಚೇರಿಗಳು ಮತ್ತು ಕಾರ್ಯಕರ್ತರ ಮೇಲೆ ವಿಪರೀತ ಹಿಂಸಾಚಾರ ನಡೆಯುತ್ತಲೇ ಇರುವುದರಿಂದ ಮತದಾನವನ್ನು ಮುಂದೂಡಬೇಕು ಎಂದು ತ್ರಿಪುರಾ ಎಡರಂಗ ವಿನಂತಿಸಿಕೊಂಡಿತ್ತು.

ಮಾರ್ಚ್ 8ರಂದು ತ್ರಿಪುರಾದ  ಮುಖ್ಯ ಚುನಾಣಾ ಅಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ-ಐಪಿಎಫ್‍ಟಿ ನಡೆಸುತ್ತಿರುವ ದಾಂಧಲೆಗಳ ವಿವರವಾದ ಪಟ್ಟಿಯನ್ನು ನೀಡಲಾಗಿತ್ತು. ಆ ವೇಳೆಗೆ ಸಿಪಿಐ(ಎಂ) ಮತ್ತು ಆರ್‍ಎಸ್‍ಪಿಯ 11 ಕಚೇರಿಗಳನ್ನು ಧ್ವಂಸ ಪಡಿಸಲಾಗಿತ್ತು. ಈ ಕ್ಸೇತ್ರದಲ್ಲಿರುವ ತ್ರಿಪುರಾ ಮೋಟಾರ್ ಶ್ರಮಿಕ್‍ ಯೂನಿಯನ್‍ನ  ಎರಡು ಕಚೇರಿಗಳನ್ನು ಅವರು ಬಲವಂತದಿಂದ ಆಕ್ರಮಿಸಿಕೊಂಡಿದ್ದಾರೆ. 58 ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳ ಮುಖಂಡರ ಬಿಜೆಪಿ-ಐಪಿಎಫ್‍ಟಿ ಗೂಂಡಾಗಳು  ಲೂಟಿ ಮಾಡಿದ್ದರು. ಈ 58 ಮುಖಂಡರ ಹೆಸರುಗಳನ್ನು ಮತ್ತು ದೈಹಿಕವಾಗಿ ಆಕ್ರಮಣಕ್ಕೆ ಒಳಗಾಗಿ ಗಾಯಗೊಂಡಿರುವ 19 ಮಂದಿಯ ಹೆಸರುಗಳನ್ನೂ ಈ ಮನವಿ ಪತ್ರದಲ್ಲಿ ಪಟ್ಟಿ ಮಾಡಲಾಗಿತ್ತು.

ಮಾರ್ಚ್  9ರಂದು ನವದೆಹಲಿಯಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ಎಂ.ಎ.ಬೇಬಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರನ್ನು ಭೇಟಿಯಾಗಿ ತ್ರಿಪುರಾ ಎಡರಂಗದ  ಮನವಿಯನ್ನು ಕೊಟ್ಟು ಅಲ್ಲಿ ಮತದಾನವನ್ನು ಅಲ್ಲಿ ಶಾಂತಿ ಮತ್ತು ಸಾಮಾನ್ಯ ಸ್ಥಿತಿ ನೆಲೆಸುವ ವರೆಗೆ ಮುಂದೂಡಬೇಕು ಎಂದು ಕೋರಿದರು. ಸಂಗತಿಗಳನ್ನು ತಿಳಿದುಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ  ಮುಖ್ಯ ಚುನಾವಣಾ ಆಯುಕ್ತರು ಆಶ್ವಾಸನೆ ನೀಡಿದರು.

ಆದರೆ ಮಾರ್ಚ್‍ 10ರ ಸಂಜೆ ಚುನಾವಣಾ  ಪ್ರಚಾರದ ವೇಳೆ ಮುಗಿಯುತ್ತ ಬರುತ್ತಿದ್ದರೂ  ಈ ಕುರಿತು ನಿರ್ಣಯ ಪ್ರಕಟವಾಗಲಿಲ್ಲ. ಬಿಜೆಪಿ-ಐಪಿಎಫ್‍ಟಿ ದಾಂಧಲೆಗಳು ಕಡಿಮೆಯಾಗುವ ಬದಲು ಇನ್ನಷ್ಟು ಹೆಚ್ಚಿವೆ. ಬಹಳಷ್ಟು ಎಡಪಕ್ಷಗಳ ಕಾರ್ಯಕರ್ತರು ತಮ್ಮ ಊರುಗಳಿಗೆ ಬರದಂತೆ ಮಾಡಲಾಗಿದೆ. ಸಿಪಿಐ(ಎಂ) ಅಭ್ಯರ್ಥಿ ಈ ಕ್ಷೇತ್ರದ ನಿವಾಸಿಯೇ ಅವರೂ ಚುನಾವಣಾ ಪ್ರಚಾರವನ್ನೇ ನಡೆಸದಂತಾಗಿದೆ. ಎಲ್ಲ ಸಿಪಿಐ(ಎಂ) ಬೂತ್‍ ಕಚೇರಿಗಳನ್ನು ನಾಶಪಡಿಸಲಾಗಿದೆ.

ಇಂತಹ ಸನ್ನಿವೇಶದಲ್ಲಿ ಚುನಾವಣೆ ಎಂಬುದು ಕೇವಲ ಒಂದು ತಮಾಷೆಯಾಗುತ್ತಿದೆ. ಆದ್ದರಿಂದ ಎಡರಂಗ ಈ ಚುನಾವಣೆಯಿಂದ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಲು ನಿರಧರಿಸಿದೆ ಎಂದು  ಮಾರ್ಚ್ 10ರಂದು ತ್ರಿಪುರಾದ ಮುಖ್ಯ ಚುನಾವಣಾ ಅಧಿಕಾರಿಗೆ ತಿಳಿಸುವ ಪತ್ರವನ್ನು ಸಲ್ಲಿಸಲಾಗಿದೆ. ಈ ಪತ್ರದಲ್ಲೂ ಮಾರ್ಚ್ 8ರ ನಂತರ ಹಿಂಸಾಚಾರಗಳ ಪಟ್ಟಿಯನ್ನು ಕೊಡಲಾಗಿದೆ.

Leave a Reply

Your email address will not be published. Required fields are marked *