ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಸುಪ್ರಿಂ ಕೋರ್ಟ್ ಪೀಠದ ತೀರ್ಪು

ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಆದರ್ಶ್ ಗೋಯಲ್ ಇರುವ  ಸುಪ್ರಿಂ ಕೋರ್ಟಿನ ಪೀಠ ದೌರ್ಜನ್ಯ ತಡೆ ಕಾಯ್ದೆ(ಪಿಒಎ) ಕುರಿತಂತೆ ನೀಡಿರುವ ತೀರ್ಪು ಈ ಕಾಯ್ದೆಯ ಅಂಶಗಳನ್ನು ದುರ್ಬಲಗೊಳಿಸಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಈ ತೀರ್ಪು ಜಾತಿ ದಮನ, ದಲಿತರ ಮೇಲೆ ಪ್ರತಿನಿತ್ಯ ನಡೆಸುತ್ತಿರುವ ಕಿರುಕುಳ ಮತ್ತು ದೌರ್ಜನ್ಯಗಳ ಸಾಮಾಜಿಕ ವಾಸ್ತವತೆಯನ್ನು ಉಪೇಕ್ಷಿಸಿದೆ. ಈ ಕಾಯ್ದೆಯ ಅಡಿಯಲ್ಲಿ ನಿರೀಕ್ಷಣಾ ಜಾಮೀನು ನೀಡಲು ಇದ್ದ ನಿರ್ಬಂಧಗಳನ್ನು ತೆಗೆದು ಮತ್ತು ಒಬ್ಬ ಸಾರ್ವಜನಿಕ ಸೇವಕನ ವಿಚಾರಣೆಯನ್ನು ಮೇಲಧಿಕಾರಿಗಳ ಅನುಮತಿ ದೊರೆತ ಮೇಲಷ್ಟೇ ನಡೆಸಬಹುದು ಎಂಬ ಶರತ್ತು ಹೇರಿ ಆರೋಪಿಗಳ ಬಂಧನ ಮತ್ತು ವಿಚಾರಣೆ  ಸುಮಾರಾಗಿ ಅಸಾಧ್ಯವೇ ಆಗುವಂತೆ ಮಾಡಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಕಾಯ್ದೆಯನ್ನು ದುರ್ಬಲಗೊಳಿಸುವ ಈ ಅಂಶಗಳ ಬಗ್ಗೆ ಕೇಂದ್ರ ಸರಕಾರದ ವಕೀಲರು ಸರಿಯಾಗಿ ಸ್ಪಂದಿಸದಿರುವುದು ಮತ್ತು ಆಕ್ಷೇಪಗಳನ್ನು ಎತ್ತದಿರುವುದು ದುರದೃಷ್ಟಕರ ಎಂದಿರುವ ಪೊಲಿಟ್‌ಬ್ಯುರೊ ಈ ತೀರ್ಪು ಉಂಟು ಮಾಡಿರುವ ಅನಾಹುತಗಳನ್ನು ಸರಿಪಡಿಸಲು ಕೇಂದ್ರ ಸರಕಾರ ತಕ್ಷಣವೇ ಕ್ರಮಗಳನ್ನು ಕೈಗೊಳ್ಳದಿದ್ದರೆ, ಸಾಮಾಜಿಕ ಸಮಾನತೆ ಬಯಸದ ಶಕ್ತಿಗಳಿಗೆ ದಲಿತರ ವಿರುದ್ಧ ಇನ್ನಷ್ಟು ಹಿಂಸಾಚಾರ ನಡೆಸುವ ಭಂಡತನ ಬರುತ್ತದೆ ಎಂದು ಹೇಳಿದೆ.

ಸುಪ್ರಿಂ ಕೋರ್ಟ್ ಪೀಠದ ಪ್ರತಿಗಾಮಿ ತೀರ್ಪಿನ ವಿರುದ್ಧ ಮರು ವಿಮರ್ಶೆ ಅರ್ಜಿಯನ್ನು ತಕ್ಷಣವೇ ಹಾಕಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *