ಬ್ರಿಟನ್ನಿನ ಒಂದು ಕಂಪನಿ, ಕೇಂಬ್ರಿಜ್ ಅನಾಲಿಟಿಕ್ಸ್ ಮತದಾರರ ಮೇಲೆ ಪ್ರಭಾವ ಬೀರಲಿಕ್ಕಾಗಿ ಫೇಸ್‍ಬುಕ್ ಮಾಹಿತಿಯನ್ನು ದೊರಕಿಸಿಕೊಂಡು ಬಳಸುತ್ತಿದೆ ಎಂಬುದು ಬಯಲಿಗೆ ಬಂದಿದೆ. ಇದು ದುಡ್ಡಿರುವ ಮತ್ತು ಬೃಹತ್‍ಮಾಹಿತಿಗಳನ್ನು ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬಳಸಬಲ್ಲ ಪಕ್ಷಗಳಿಂದ ಪ್ರಜಾಪ್ರಭುತ್ವ ಅಪಾಯಕ್ಕೀಡಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಕೃತ್ಯದ ಒಂದು ಭಾರತೀಯ ಕೊಂಡಿಯೂ ಇದೆ, ಕೇಂಬ್ರಿಜ್ ಅನಾಲಿಟಿಕ್ಸ್ ನೊಂದಿಗೆ ಸಹಕಾರ ಇರುವ ಒಂದು ಕಂಪನಿ ಭಾರತದಲ್ಲಿ ಇಂತಹ ಕಾರ್ಯಾಚರಣೆ ನಡೆಸುತ್ತಿದೆ ಎಂಬುದೂ ಪ್ರಕಟಗೊಂಡಿದೆ.
ಮಾಹಿತಿ ತಂತ್ರಜ್ಞಾನ ಮಂತ್ರಿ ರವಿಶಂಕರ್ ಪ್ರಸಾದ್ ಫೇಸ್‍ಬುಕ್‍ನಲ್ಲಿನ ಮಾಹಿತಿ ಭಂಗದ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ಸರಕಾರ ನಾಗರಿಕರ ಖಾಸಗಿತನ ಮತ್ತು ಮಾಹಿತಿರಕ್ಷಣೆಗೆ ಒಂದು ಕಾನೂನಾತ್ಮಕ ರಚನೆಯನ್ನು ನಿರ್ಮಿಸದಿರುವಾಗ ಇದು ಕೇವಲ ಬೂಟಾಟಿಕೆಯಾಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಇಂತಹ ಒಂದು ಕಾಯ್ದೆಯೇ ಇಲ್ಲದಿರುವಾಗ ಗೂಗಲ್, ಫೇಸ್‍ಬುಕ್‍ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ನಮ್ಮ ಮಾಹಿತಿಗಳ ದುರುಪಯೋಗವಾಗದಂತೆ ರಕ್ಷಿಸುವ ಬಾಧ್ಯತೆಯೇನೂ ಇರುವುದಿಲ್ಲ ಎಂಬ ಸಂಗತಿಯತ್ತ ಅದು ಗಮನ ಸೆಳೆದಿದೆ.
ಚುನಾವಣಾ ಆಯೋಗ ಗೂಗಲ್‍ನೊಂದಿಗೆ ಕೈಜೋಡಿಸುವ ಯೋಚನೆಯಲ್ಲಿದೆ ಮತ್ತು ತನ್ನ ಸಂದೇಶಗಳಿಗೆ ಫೇಸ್‍ಬುಕ್‍ನ್ನು ಬಳಸುತ್ತಿದೆ ಎಂಬುದು ಆತಂಕಕಾರಿ. ಇದು ಬೇರೆ ಉದ್ದೇಶಗಳಿಗೆ, ಈ ಮಾಹಿತಿಗಳನ್ನು ಬಳಸಿಕೊಳ್ಲಲು, ಹಣಬಲ ಇರುವ ಪಕ್ಷಗಳು ಮತ್ತು ವ್ಯಕ್ತಿಗಳು ಚುನಾವಣೆಗಳಲ್ಲಿ ಪ್ರಭಾವ ಬೀರಲಿಕ್ಕಾಗಿ ಹೊರಗುತ್ತಿಗೆ ನೀಡಲು ಕೂಡ ನೆರವಾಗುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.
ಸಂಬಂಧಪಟ್ಟ ಕಂಪನಿಗಳು ಭಾರತದಲ್ಲಿ ಇಂತಹ ಕಾರ್ಯಾಚರಣೆಗಳನ್ನು ಹೇಗೆ ನಡೆಸಿವೆ, ಅವು ತಮ್ಮ ಗಿರಾಕಿಗಳಿಗೆ ಯಾವ ಸೇವೆಗಳನ್ನು ಸಲ್ಲಿಸಿವೆ ಎಂಬುದರ ಒಂದು ತನಿಖೆ ನಡೆಯಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ನಾಗರಿಕರ ಖಾಸಗಿತನ ಮತ್ತು ಮಾಹಿತಿಗಳ ರಕ್ಷಿಸಲು ಅಗತ್ಯ ಕಾನೂನು ಕ್ರಮಗಳನ್ನು ಸರಕಾರ ತಕ್ಷಣವೇ ರೂಪಿಸಬೇಕು ಎಂದು ಆಗ್ರಹಿಸಿದೆ.