ಸರಕಾರಗಳನ್ನು ನಡೆಸುವ ಶಕ್ತಿಗಳೇ ಕೋಮುದಳ್ಳುರಿ ಹರಡಿಸುತ್ತಿರುವಾಗ, ಶಾಂತಿಪ್ರಿಯ ಜನರೇ ಈ ಸವಾಲನ್ನು ಎದುರಿಸಬೇಕಾಗಿದೆ-ಸಿಪಿಐ(ಎಂ)ಕೇಂದ್ರಸಮಿತಿ
ಪಶ್ಚಿಮ ಬಂಗಾಲದಲ್ಲಿ ಆರೆಸ್ಸೆಸ್ ನೇತೃತ್ವದ ಸಂಘಟನೆಗಳು ಮತ್ತು ಬಿಜೆಪಿ ರಾಮನವಮಿಯನ್ನು ಹಿಂಸಾತ್ಮಕವಾಗಿ ಆಚರಿಸಲು ಪ್ರಯತ್ನಿಸಿವೆ. ಇದರಿಂದಾಗಿ ಕೆಲವು ಭಾಗಗಳಲ್ಲಿ ಕೋಮು ಗಲಭೆಗಳು ಆರಂಭವಾಗಿವೆ. ಪುರುಲಿಯಾದ ಅರ್ಷ ಮತ್ತು ಉತ್ತರ 24 ಪರಗಣಾದ ಕಕ್ಕಿನಾಡದಲ್ಲಿ ಕೋಮು ಗಲಭೆಗಳು ಆರಂಭವಾಗಿ ನಂತರ ಪಶ್ಚಿಮ ಬರ್ದ್ವಾನ್ ಜಿಲ್ಲೆಯ ಅಸನ್ಸೋಲ್ ಮತ್ತು ರಾಣೀಗಂಜ್ಗೆ ಹರಡಿವೆ.
ಇಲ್ಲಿ ಪ್ರತಿಯೊಂದು ಕಡೆಯೂ ಸಶಸ್ತ್ರ ರಾಮನವಮಿ ಮೆರವಣಿಗೆಗಳು ಉದ್ವೇಗ, ಲಂಗುಲಗಾಮಿಲ್ಲದ ಹಿಂಸಾಚಾರ, ಲೂಟಿ, ಅಗ್ನಿಸ್ಪರ್ಶಗಳ ಸರಣಿಯನ್ನು ಹರಿಯ ಬಿಟ್ಟಿವೆ. ಇದುವರೆಗೆ ಅಧಿಕೃತವಾಗಿ ನಾಲ್ಕು ಸಾವುಗಳು ಸಂಭವಿಸಿವೆ. ರಾಣೀಗಂಜ್£ಲ್ಲಿ ಸಶಸ್ತ್ರ ಹಿಂಸಾಚಾರದಲ್ಲಿ ಪೋಲೀಸ್ ಸಿಬ್ಬಂದಿಯೊಬ್ಬರ ಕೈ ಗೆ ವಿಪರೀತ ಏಟಾಗಿದೆ. ಕೋಮುಸೌಹಾರ್ದ ಮತ್ತು ಗಲಭೆ-ಮುಕ್ತ ಪರಿಸರದ ದಾಖಲೆ ಹೊಂದಿರುವ ಪಶ್ಚಿಮ ಬಂಗಾಲಕ್ಕೆ ಈಗ ದೋಷ ತಟ್ಟಿದೆ ಎಂಬುದು ಸ್ಪಷ್ಟ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಖೇದ ವ್ಯಕ್ತಪಡಿಸಿದೆ.
ಕಳೆದ ವರ್ಷವೇ, ಮೊದಲ ಬಾರಿಗೆ ಖಡ್ಗಗಳು, ತ್ರಿಶೂಲಗಳು, ಮಚ್ಚುಗಳನ್ನು ರಾಮನವಮಿ ಆಚರಣೆಗಳಲ್ಲಿ ಪ್ರದರ್ಶಿಸಲಾಗಿತ್ತು. ಚಿಕ್ಕ ವಯಸ್ಸಿನ ಮಕ್ಕಳ ಕೈಗಳಲ್ಲೂ ಈ ಅಸ್ತ್ರಗಳಿದ್ದವು. ಈ ವರ್ಷ, ಒಂದು ರಿಯಾಯ್ತಿ ಕ್ರಮವಾಗಿ ರಾಜ್ಯ ಸರಕಾರ ಮೆರವಣಿಗೆಗಳಲ್ಲಿ ಶಸ್ತ್ರಾಸ್ತ್ರ ಪ್ರದರ್ಶನಕ್ಕೆ ಅವಕಾಶ ಕೊಟ್ಟಿತ್ತು. ಅಷ್ಟೆ ಅಲ್ಲ, ಸ್ಪರ್ಧಾತ್ಮಕ ಕೋಮುವಾದದ ಹುರುಪಿನಲ್ಲಿ ಟಿಎಂಸಿ ಪಕ್ಷದ ಮತ್ತು ಆಡಳಿತದ ಸಹಕಾರ ಇನ್ನಷ್ಟು ಬಹಿರಂಗ ಸ್ವರೂಪ ಪಡೆಯಿತು. ಆಳುವ ಪಕ್ಷವೇ ಈ ಆಚರಣೆಗಳಲ್ಲಿ ಭಾಗವಹಿಸಲು ಕರೆ ನೀಡಿತು, ಹಲವೆಡೆಗಳಲ್ಲಿ ಟಿಎಂಸಿ ಮತ್ತು ಆರೆಸ್ಸೆಸ್-ಬಿಜೆಪಿ ಮುಖಂಡರು ಜಂಟಿಯಾಗಿಯೇ ಭಾಗವಹಿಸಿದರು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ಇದು ದೇಶದ ಇತರೆಡೆಗಳಲ್ಲಿ ಹಿಂದುತ್ವ ಶಕ್ತಿಗಳು ಮುಂಚೂಣಿಯಲ್ಲಿದ್ದು ನಡೆಸಿರುವ ಕೋಮುವಾದಿ ಧ್ರುವೀಕರಣದ ದುಷ್ಟ ಪ್ರಯತ್ನಗಳ ಭಾಗವೇ ಆಗಿದೆ, ಟಿಎಂಸಿಯಿಂದ ಕೋಮುವಾದಿ ಶಕ್ತಿಗಳ ತುಷ್ಟ್ಟೀಕರಣ ಮತ್ತು ರಾಜ್ಯ ಆಢಳಿತದ ಅಸಮರ್ಥತೆ ಈ ಶಕ್ತಿಗಳ ಮಾರಣಾಂತಿಕ ಪ್ರಹಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಸಾಮಾನ್ಯ ಪರಿಸ್ಥಿತಿ ಮತ್ತು ಶಾಂತಿಯನ್ನು ಮತ್ತೆ ನೆಲೆಗೊಳಿಸಲು ರಾಜ್ಯಸರಕಾರ ಸೂಕ್ತ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಈ ಕೊಲೆಗಡುಕ ಪ್ರಚಾರವನ್ನು ದೃಢವಾಗಿ ವಿರೋಧಿಸಬೇಕು ಎಂದು ಶಾಂತಿಪ್ರಿಯ ಜನವಿಭಾಗಗಳಿಗೆ ಸಿಪಿಐ(ಎಂ) ಮನವಿ ಮಾಡಿದೆ.
ಇತರ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳು ಕೂಡ ಬೀದಿಗಿಳಿದು ಶಾಂತಿ ಮತ್ತು ಸಾಮರಸ್ಯದ ಕಾಳಜಿಯನ್ನು ವ್ಯಕ್ತಗೊಳಿಸಬೇಕು ಎಂದೂ ಅದು ಮನವಿ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ನಡೆಸುವ ಶಕ್ತಿಗಳೇ ಈ ಕೋಮುದಳ್ಳುರಿ ಹರಡಿಸಲು ಸಕ್ರಿಯವಾಗಿ ಕಾಣಿಕೆ ನೀಡುತ್ತಿರುವಾಗ ಶಾಂತಿ, ಐಕ್ಯತೆ ಮತ್ತು ಸೋದರತ್ವವನ್ನು ಬಯಸುವ ಜನಗಳೇ ತಾವಾಗಿ ಈ ಸವಾಲನ್ನು ಸಾಮೂಹಿಕವಾಗಿ ಎದುರಿಸಲು ಮುಂದೆ ಬರಬೇಕಾಗಿದೆ ಎಂದು ಸಿಪಿಐ(ಎಂ) ಕೇಂದ್ರಸಮಿತಿ ಆಶಿಸಿದೆ.