ಪ್ರತಿಭಟನಾಕಾರರ ಮೇಲೆ ಬಿಜೆಪಿ ಸರಕಾರಗಳ ಗೋಳೀಬಾರ್‌ಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡನೆ
ವಿವಿಧ ದಲಿತ ಸಂಘಟನೆಗಳು ನೀಡಿದ ‘ಭಾರತ್ ಬಂದ್’ ಕರೆಗೆ ಪಂಜಾಬ್, ರಾಜಸ್ತಾನ, ಮಧ್ಯಪ್ರದೇಶ, ಬಿಹಾರ, ಝಾರ್ಖಂಡ್, ಒಡಿಶಾ ಮತ್ತು ಉತ್ತರಪ್ರದೇಶದಲ್ಲಿ ವ್ಯಾಪಕ ಸ್ಪಂದನೆ ದೊರೆತಿದೆ. ಇದು ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಬುಡಕಟ್ಟುಗಳ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಸುಪ್ರಿಂ ಕೋರ್ಟ್ ತೀರ್ಪಿನ ವಿರುದ್ಧ ಉಂಟಾಗಿರುವ ಆಕ್ರೋಶವನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದ ಗ್ವಾಲಿಯರ್, ಭಿಂಡ್ ಮತ್ತು ಮೊರೆನಾದಲ್ಲಿ ನಾಲ್ವರ ಸಾವಿಗೆ ಕಾರಣವಾಗಿರುವ ಅಮಾನುಷ ಪೋಲೀಸ್ ಗೋಳೀಬಾರನ್ನು ಪೊಲಿಟ್‌ಬ್ಯುರೊ ಖಂಡಿಸಿದೆ. ಇತರ ಹಲವು ಸ್ಥಳಗಳಲ್ಲಿ ಪೋಲೀಸರು ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿದ್ದಾರೆ. ರಾಜಸ್ತಾನದ ಆಳ್ವರ್‌ನಲ್ಲಿಯೂ ಒಬ್ಬನ ಸಾವುಂಟಾಗಿದೆ.
ಇಂತಹ ಒಂದು ಸನ್ನಿವೇಶ ಮೋದಿ ಸರಕಾರ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವುದರ ವಿರುದ್ಧ ಒಂದು ಪರಿಣಾಮಕಾರಿ ವಾದವನ್ನು ಮಂಡಿಸುವಲ್ಲಿ ವಿಫಲವಾಗಿರುವುದರಿಂದಾಗಿ ಉಂಟಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ, ಸರಕಾರದ ವಕೀಲರು ಸುಪ್ರಿಂ ಕೋರ್ಟಿನಲ್ಲಿ ಮರುವಿಮರ್ಶೆ ಅರ್ಜಿಯಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಬೇಕಾಗಿದೆ ಎಂದು ಹೇಳಿದೆ.