ಜಮ್ಮು ವಿನ ಕಠುವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಒಂದು ಗಂಡಸರ ಪಡೆ ಕೂಡಹಾಕಿ, ಸ್ಮೃತಿ ತಪ್ಪಿಸಿ, ಅತ್ಯಾಚಾರ ನಡೆಸಿ ಕೊಂದು ಹಾಕಿರುವ ಭಯಾನಕ ಪ್ರಕರಣ ದೇಶದಲ್ಲಿ ಭಾರೀ ಆಕ್ರೋಶವನ್ನುಂಟು ಮಾಡಿದೆ. ಈ ಹೀನ ಕೃತ್ಯದ ಕೋಮುವಾದೀಕರಣ, ಬಂಧಿತರಾದ ಆರೋಪಿಗಳ ರಕ್ಷಣೆಯ ಪ್ರಯತ್ನ, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಸರಕಾರದ ಬಿಜೆಪಿಯ ಇಬ್ಬರು ಮಂತ್ರಿಗಳಿರುವುದು ಅದಕ್ಕಿಂತಲೂ ಆಘಾತಕಾರಿ ಮತ್ತು ಆತಂಕವುಂಟು ಮಾಡುವ ಸಂಗತಿ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ಸ್ಥಳೀಯ ಬಾರ್ ಅಸೋಸಿಯೇಷನ್ ವಕೀಲರುಗಳು ನ್ಯಾಯಾಲಯದಲ್ಲಿ ಈ ಕೇಸನ್ನು ಸಲ್ಲಿಸದಂತೆ ತಡೆದಿರುವುದು ಇನ್ನೊಂದು ಆಕ್ರೋಶಕಾರಿ ಕೃತ್ಯ ಎಂದು ಅದು ಹೇಳಿದೆ.
ಆ ಇಬ್ಬರು ಮಂತ್ರಿಗಳು ಈಗ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಇದು ಸಾಲದು. ನ್ಯಾಯ ನೀಡಿಕೆಯಲ್ಲಿ ತಡೆ ಒಡ್ಡಿದ್ದಾರೆಂದು ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಅದೇ ರೀತಿ, ಬಾರ್ ಅಸೋಸಿಯೇಷನ್ನ ಪದಾಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯರೊ ಹೇಳಿದೆ.
ಉತ್ತರಪ್ರದೇಶದ ಆದಿತ್ಯನಾಥ ಸರಕಾರ ಒಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರದ ಆರೋಪವಿರುವ ಆಳುವ ಪಕ್ಷದ ಉನ್ನಾವ್ ಶಾಸಕ, ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿ ಕುಖ್ಯಾತಿಗೆ ಪಾತ್ರವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ಅಲ್ಲದೆ ಈ ಹುಡುಗಿಯ ತಂದೆಯನ್ನು ಸುಳ್ಳು ಆರೋಪಗಳ ಮೇಲೆ ಬಂಧಿಸಿ ಪೋಲೀಸ್ ಕಸ್ಟಡಿಯಲ್ಲಿ ಆತನ ಸಾವು ಉಂಟಾಗಿರುವ ರೀತಿ ರಾಜ್ಯ ಆಢಳಿತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ.
ಶಾಸಕನ ಸೋದರ ಮತ್ತು ಆತನ ಚೇಲಾಗಳ ಕೃತ್ಯದಿಂದಾಗಿ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ಅತ್ಯಾಚಾರದ ಆರೋಪಿ ಶಾಸಕನನ್ನು ಅಲಹಾಬಾದ್ ಹೈಕೋರ್ಟ್ ಆಡಳಿತ ಕಟು ಟೀಕೆ ಮಾಡಿ, ಆತನನ್ನು ಬಂಧಿಸಬೇಕು ಎಂದು ಆದೇಶ ನೀಡಿದ ಮೇಲೆಯೇ ವಶಕ್ಕೆ ತಗೊಳ್ಳಲಾಗಿದೆ ಎಂಬ ಸಂಗತಿಯತ್ತ ಪೊಲಿಟ್ ಬ್ಯುರೊ ಗಮನ ಸೆಳೆದಿದೆ.
ಈ ಶಾಸಕನಿಗೆ ರಕ್ಷಣೆ ಕೊಡುತ್ತ ಬಂದ ಆದಿತ್ಯನಾಥ ಸರಕಾರಕ್ಕೆ ಈ ಮೊದಲು ಸಪ್ಟಂಬರ್ 2013ರ ಮುಝಪ್ಪರ್ನಗರ ಗಲಭೆಗಳಲ್ಲಿ ಕೊಲೆ ಮತ್ತು ಇತರ ಗಂಭೀರ ಅಪರಾಧಗಳ ಆರೋಪಗಳಿರುವ 131 ಕೇಸುಗಳನ್ನು ಹಿಂತೆಗೆದುಕೊಳ್ಳುವಲ್ಲಿಯು ಯಾವುದೇ ಅಳುಕು ಉಂಟಾಗಿರಲಿಲ್ಲ. ಈ ಮೂಲಕ ಬಿಜೆಪಿ ಸರಕಾರ ಯಾವುದೇ ಹಿಂಜರಿಕೆಯಿಲ್ಲದೆ ಅಪರಾಧ ಮಾಡಬಹುದು ಎಂಬ ಸಂಕೇತ ನೀಡಿದಂತಾಗಿದೆ ಎಂದು ಟೀಕಿಸಿರುವ ಪೊಲಿಟ್ಬ್ಯುರೊ ಉನ್ನಾವ್ ಅಪರಾಧ ಕ್ರಿಮಿನಲ್ ಅಪರಾಧಗಳನ್ನು ಮಾಡುವವರಿಗೆ ರಕ್ಷಣೆ ನೀಡುತ್ತಿರುವುದರ ಒಂದು ನೇರ ಪರಿಣಾಮ ಎಂದು ಹೇಳಿದೆ.