ಮಕ್ಕಾ ಮಸೀದಿ ಸ್ಫೋಟದ ತೀರ್ಪು: ನ್ಯಾಯದ ಮತ್ತೊಂದು ಅಪಹಾಸ್ಯ

ಸಿಪಿಐ(ಎಂ)ನ 22ನೇ ಮಹಾಧಿವೇಶನ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ವಿಶೇಷ ನ್ಯಾಯಾಲಯ ಎಪ್ರಿಲ್‍ 16 ರಂದು ಮಕ್ಕಾ ಮಸೀದಿ ಬಾಂಬ್‍ ಸ್ಫೋಟದ ಕೇಸಿನಲ್ಲಿ ಬಂಧಿತರಾದ ಎಲ್ಲರನ್ನೂ ಖುಲಾಸೆಗೊಳಿಸಿರುವುದರ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದೆ. ಅಪರಾಧಗಳ ತನಿಖೆ ಮತ್ತು ವಿಚಾರಣೆಗಳ ಹೊಣೆಯಿರುವ ಕೇಂದ್ರೀಯ ಸಂಸ್ಥೆಗಳು ಹಿಂದುತ್ವ ಶಕ್ತಿಗಳ ಪರವಾಗಿ ಪಕ್ಷಪಾತ ನಡೆಸುತ್ತಿರುವುದು ಹೆಚ್ಚುತ್ತಿದೆ ಎಂದು ಅದು ಆಳವಾದ ಆತಂಕವನ್ನು ವ್ಯಕ್ತಪಡಿಸಿದೆ.

ಮೇ 18, 2007ರಂದು ಹೈದರಾಬಾದಿನ ಮಕ್ಕಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಒಂಭತ್ತು ಜನ ಕೊಲ್ಲಲ್ಪಟ್ಟರು, 58 ಮಂದಿ ಗಾಯಗೊಂಡರು. ನಂತರ ನಡೆದ ಪ್ರತಿಭಟನೆಗಳಲ್ಲಿ ಇನ್ನೂ ಐದು ಮಂದಿಯನ್ನು ಪೋಲೀಸರು ಗುಂಡಿಕ್ಕಿ ಸಾಯಿಸಿದರು. ಅವರೆಲ್ಲ ಮುಸ್ಲಿಮರು ಎಂದು ಮಹಾಧಿವೇಶನ ಅಂಗೀಕರಿಸಿದ ಒಂದು ನಿರ್ಣಯ ಹೇಳಿದೆ.

ತೆಲಂಗಾಣದ ಪ್ರತಿನಿಧಿ ಟಿ.ಜ್ಯೋತಿ ಇದನ್ನು ಮಂಡಿಸಿದರು ಮತ್ತು ಪೊಲಿಟ್‍ಬ್ಯುರೊ ಸದಸ್ಯ ಮಹಮ್ಮದ್‍ ಸಲೀಂ ಇದನ್ನು ಬೆಂಬಲಿಸಿದರು.

“ಸಾಕ್ಷ್ಯಗಳ ಅಭಾವ”ದ ಆಧಾರದಲ್ಲಿ ಖುಲಾಸೆಯಾಗಿದೆ ಎಂದು ತೀರ್ಪು ಹೇಳಿದೆ. ನಭಕಿಶೋರ್ ಸರ್ಕಾರ್ ಯಾನೆ ಸ್ವಾಮಿ ಅಸೀಮಾನಂದ ಮತ್ತು ಇತರ ನಾಲ್ಕು ಮಂದಿ ಎಲ್ಲರೂ ಸಂಘ ಪರಿವಾರದೊಂದಿಗೆ ಸಂಬಂಧ ಇರುವವರು. ಅವರನ್ನು ಕೂಡಲೇ ಬಿಡುಗಡೆ ಮಾಡಲಾಗಿದೆ. ಅಸೀಮಾನಂದ ಸಮ್‍ಝೌತಾ ಎಕ್ಸ್ ಪ್ರೆಸ್ ಮತ್ತು ಅಜ್ಮೇರ್ ದರ್ಗಾ ಬಾಂಬ್‍ ಸ್ಫೋಟ ಕೇಸುಗಳಲ್ಲಿಯೂ ಒಬ್ಬ ಆಪಾದಿತ. ಮಾಲೆಗಾಂವ್‍ ಸ್ಫೋಟದ ಆರೋಪಿಗಳನ್ನು ಖುಲಾಸೆಗೊಳಿಸಿದಾಗಲೂ ಇಂತಹುದೇ ಅನ್ಯಾಯ ನಡೆದಿದೆ.

ಆರೋಪಿಗಳೆಲ್ಲ ಖುಲಾಸೆಯಾಗುತ್ತಿದ್ದರೆ, ಈ ಭೀಕರ ಕೊಲೆಗಳನ್ನು ನಡೆಸಿರುವವರಾದರೂ ಯಾರು ಎಂದು 22ನೇ ಮಹಾಧಿವೇಶನ ಪ್ರಶ್ನಿಸಿದೆ.
ಭಯೋತ್ಪಾದನೆ ಮತ್ತು ಬಾಂಬ್‍ ಸ್ಫೋಟಗಳ ವಿವಿಧ ಮೊಕದ್ದಮೆಗಳಲ್ಲಿ ಸಂಘ ಪರಿವಾರಕ್ಕೆ  ನಿಷ್ಟರಾಗಿರುವ ಆರೋಪಿಗಳು ಖುಲಾಸೆಗೊಳ್ಳುತ್ತಿರುವುದರಲ್ಲಿ ಒಂದು ನಿದಿಷ್ಟ ವಿಧಾನ ಇದೆ ಎಂದು ಸಿಪಿಐ(ಎಂ) ಮಹಾಧಿವೇಶನ ಗಮನಿಸಿದೆ.

ಈ ತೀರ್ಪಿನೊಂದಿಗೆ ಈಗ ಎಲ್ಲ ಆರೋಪಿಗಳೂ “ಸಾಕ್ಷ್ಯಗಳ ಅಭಾವ” ದಿಂದ ಮತ್ತು ಸಾಕ್ಷಿಗಳು ತಿರುಗಿ ಬಿದ್ದುದರಿಂದ ಖುಲಾಸೆಗೊಂಡಿದ್ದಾರೆ. ಮಕ್ಕಾ ಮಸೀದಿ ಮೊಕದ್ದಮೆಯಲ್ಲಿ ಕನಿಷ್ಟ 64 ಸಾಕ್ಷಿಗಳು ತಿರುಗಿ ಬಿದ್ದು ತಮ್ಮ ಸಾಕ್ಷ್ಯವನ್ನು ಬದಲಿಸಿದರು. ಆರಿಸಿ-ಆರಿಸಿ ನ್ಯಾಯ ನೀಡುವುದು ಖಂಡನಾರ್ಹ ಮಾತ್ರವೇ ಅಲ್ಲ, ಅದು  ಎಲ್ಲ ರೀತಿಯ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಹೋರಾಟಕ್ಕೆ ನಮ್ಮ ಬದ್ಧತೆಯನ್ನು ಅಪಹಾಸ್ಯಕ್ಕೆ ಈಡು ಮಾಡುತ್ತದೆ ಎಂದು ಸಿಪಿಐ(ಎಂ)ನ 22ನೇ ಮಹಾಧಿವೇಶನ ಅಂಗೀಕರಿಸಿದ  ಈ ನಿರ್ಣಯ ಹೇಳಿದೆ.

ತನ್ನ ತೀರ್ಪನ್ನು ನೀಡಿದ ಕೂಡಲೇ ನ್ಯಾಯಾಧೀಶ ಕೆ. ರವೀಂದ್ರ ರೆಡ್ಡಿ ಯವರು ರಾಜೀನಾಮೆ ಪ್ರಕಟಿಸಿರುವುದು ಆಗಲೇ ಪ್ರಶ್ನಾರ್ಹವಾಗಿರುವ ತೀರ್ಪಿನ ವಿಷಯದಲ್ಲಿ ಹೊಸ ಪ್ರಶ್ನೆಗಳನ್ನು ಸೇರಿಸಿದೆ ಎಂದೂ ಮಹಾಧಿವೇಶನದ  ನಿರ್ಣಯ ಅಭಿಪ್ರಾಯ ಪಟ್ಟಿದೆ.

ದೇಶದಲ್ಲಿ ಹೆಚ್ಚೆಚ್ಚು ಧ್ರುವೀಕರಣ ನಡೆಯುತ್ತಿರುವ ಸನ್ನಿವೇಶದಲ್ಲಿ ಈ ಹೀನ, ಭಯೋತ್ಪಾದಕ ಕೃತ್ಯಗಳನ್ನು ಎಸಗುವವರನ್ನು ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಸಂಘ ಪರಿವಾರ ಮತ್ತು ಅದರ ಸಿದ್ಧಾಂತಕ್ಕೆ ನಿಷ್ಠೆ ಘೋಷಿಸುವವರು ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುತ್ತಾರೆ ಎಂಬ ಭಾವನೆ ಹಲವು ವಲಯಗಳಲ್ಲಿ ಬೆಳೆಯುತ್ತಿದೆ. ಇದನ್ನು ನಿವಾರಿಸಬೇಕಾಗಿದೆ ಎಂದಿರುವ ಸಿಪಿಐ(ಎಂ) 22ನೇ ಮಹಾಧಿವೇಶನ  ಈ ತೀರ್ಪಿನ ವಿರುದ್ಧ ಎನ್‍ಐಎ ಒಂದು ಮನವಿ ಸಲ್ಲಿಸಬೇಕು ಮತ್ತು ಜನತೆ ನ್ಯಾಯದ ಅಪಹಾಸ್ಯದ  ಇತ್ತೀಚಿನ ಘಟನೆಗೆ ಪ್ರತಿಭಟನೆ ವ್ಯಕ್ತಪಡಿಸಬೇಕು ಎಂದು ಮಹಾಧಿವೇಶನದ  ನಿರ್ಣಯ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *