ಸಿಪಿಐ(ಎಂ) 22ನೇ ಮಹಾಧಿವೇಶನದ ಮೂರನೇ ದಿನದ ಪತ್ರಿಕಾ ಹೇಳಿಕೆ:
ಸಿಪಿಐ(ಎಂ)ನ 22ನೇ ಮಹಾಧಿವೇಶನ ಎಪ್ರಿಲ್ 20ರ ಸಂಜೆ ಪ್ರಧಾನ ರಾಜಕೀಯ ನಿರ್ಣಯವನ್ನು ಚಾಲನಾ ಸಮಿತಿ ಸೂಚಿಸಿದ ಈ ಕೆಳಗಿನ ತಿದ್ದುಪಡಿಯೊಂದಿಗೆ, ಪ್ರತಿನಿಧಿಗಳ ಪ್ರಚಂಡ ಅನುಮೋದನೆಯೊಂದಿಗೆ ಅಂಗೀಕರಿಸಿತು.
ತಿದ್ದುಪಡಿ:
ಕರಡು ರಾಜಕೀಯ ನಿರ್ಣಯದ ಈ ಕೆಳಗಿನ ಪರಿಚ್ಛೇದ 2.90ನ್ನು ಕೈಬಿಡುವುದು:
“ನಮ್ಮ ಕಾರ್ಯತಂತ್ರಾತ್ಮಕ ನಿಲುವು ಸಂಸತ್ತಿನಲ್ಲಿ ಸಹಮತವಿರುವ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ಕಾಂಗ್ರೆಸ್ ಮತ್ತಿತರ ಜಾತ್ಯತೀತ ಪಕ್ಷಗಳೊಂದಿಗೆ ಸಹಕರಿಸುವುದು ಆಗಿರಬೇಕು. ಸಂಸತ್ತಿನ ಹೊರಗೆ ಕೋಮುವಾದಿ ಬೆದರಿಕೆಯ ವಿರುದ್ಧ ಜನಗಳನ್ನು ವಿಶಾಲವಾಗಿ ಅಣಿನೆರೆಸಲು ಎಲ್ಲ ವಿರೋಧಿ ಜಾತ್ಯತೀತ ಶಕ್ತಿಗಳೊಂದಿಗೆ ನಾವು ಸಹಕರಿಸಬೇಕು. ಎಲ್ಲ ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಜಂಟಿ ಕಾರ್ಯಾಚರಣೆಗಳನ್ನು ಕಾಂಗ್ರೆಸ್ ಮತ್ತಿತರ ಬೂಜ್ವಾ ಪಕ್ಷಗಳನ್ನು ಅನುಸರಿಸುವ ಜನ ಸಮೂಹಗಳನ್ನು ಸೆಳೆಯಬಹುದಾದ ರೀತಿಯಲ್ಲಿ ನಾವು ಪೋಷಿಸಬೇಕು.”
ರಾಜಕೀಯ ನಿಲುವು
ಪರಿಚ್ಚೇದ 2.115 (2) ರಲ್ಲಿ ಎರಡನೇ ವಾಕ್ಯ
“ಆದರೆ ಇದನ್ನು ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಿಕೆ ಅಥವ ಚುನಾವಣಾ ಮೈತ್ರಿಯಿಲ್ಲದೆ ಮಾಡಬೇಕು” ಎಂಬುದನ್ನು ತೆಗೆಯುವುದು.
ಹೊಸ ಉಪಅಂಶ(3)ನ್ನು ಸೇರಿಸುವುದು:
“ಆದರೆ ಇದನ್ನು ಕಾಂಗ್ರೆಸ್ ಪಕ್ಷದೊಂದಿಗೆ ಒಂದು ರಾಜಕೀಯ ಮೈತ್ರಿಯಿಲ್ಲದೆ ಮಾಡಬೇಕು”
ಹೊಸ ಉಪಅಂಶ(4)ನ್ನು ಸೇರಿಸುವುದು:
“ಆದರೆ ಸಂಸತ್ತಿನಲ್ಲಿ ಸಹಮತವಿರುವ ಪ್ರಶ್ನೆಗಳ ಮೇಲೆ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ವಿರೋಧ ಪಕ್ಷಗಳೊಂದಿಗೆ ಹೊಂದಿಕೆ ಇರಬಹುದು. ಸಂಸತ್ತಿನ ಹೊರಗೆ ಕೋಮುವಾದದ ವಿರುದ್ಧ ಜನಗಳನ್ನು ವಿಶಾಲವಾಗಿ ಅಣಿನೆರೆಸಲು ಎಲ್ಲ ವಿರೋಧಿ ಜಾತ್ಯತೀತ ಶಕ್ತಿಗಳೊಂದಿಗೆ ನಾವು ಸಹಕರಿಸಬೇಕು. ಎಲ್ಲ ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಜಂಟಿ ಕಾರ್ಯಾಚರಣೆಗಳನ್ನು ಕಾಂಗ್ರೆಸ್ ಮತ್ತಿತರ ಬೂಜ್ವಾ ಪಕ್ಷಗಳನ್ನು ಅನುಸರಿಸುವ ಜನ ಸಮೂಹಗಳನ್ನು ಸೆಳೆಯಬಹುದಾದ ರೀತಿಯಲ್ಲಿ ನಾವು ಪೋಷಿಸಬೇಕು.”
ಸೀತಾರಾಮ್ ಯೆಚುರಿ, ಪಕ್ಷದ ಪ್ರಧಾನ ಕಾರ್ಯದರ್ಶಿ, ತನ್ನ ಮಧ್ಯಪ್ರವೇಶದಲ್ಲಿ, ಪಕ್ಷದ ಐಕ್ಯತೆಗೆ ಕರೆ ನೀಡಿದರು. “ನಾವು ಸಿಪಿಐ(ಎಂ) ಬಗ್ಗೆ ಹೆಮ್ಮೆ ಪಡುತ್ತೇವೆ. ಇಂದು ಭಾರತದಲ್ಲಿ ತನ್ನ ಭವಿಷ್ಯದ ದಿಕ್ಕನ್ನು ನಿರ್ಧರಿಸಲು ಇಂತಹ ಒಂದು ಜನತಾಂತ್ರಿಕ ಕ್ರಮವನ್ನು ಕೈಗೊಳ್ಳಬಲ್ಲ ಏಕೈಕ ಪಕ್ಷವಾಗಿದೆ. ನಮ್ಮ ಪ್ರಧಾನ ಹೋರಾಟ ಬಿಜೆಪಿ/ಆರೆಸ್ಸೆಸ್ ವಿರುದ್ಧ ಮತ್ತು ಈ ಸರಕಾರವನ್ನು ಸೋಲಿಸಲು ಎಂಬುದರ ಬಗ್ಗೆ ನಮಗೆಲ್ಲರಿಗೂ ಸಹಮತವಿದೆ. ಈ ಮಹಾಧಿವೇಶನದ ನಂತರ ನಾವು ಒಂದು ಏಕೀಕೃತ ರೀತಿಯಲ್ಲಿ ರಾಜಕೀಯ ನಿರ್ಣಯದ ಮಾರ್ಗದರ್ಶನದಲ್ಲಿ ಈ ಹೋರಾಟವನ್ನು ದೇಶದಾದ್ಯಂತ ನಮ್ಮ ವಿಶಾಲ ಜನಸಮೂಹಗಳನ್ನು ಅಣಿನೆರೆಸಲು ಒಯ್ಯುತ್ತೇವೆ. ಪಕ್ಷವನ್ನು, ನಮ್ಮ ಐಕ್ಯತೆಯನ್ನು ಮತ್ತು ಈ ಸರಕಾರವನ್ನು ಸೋಲಿಸುವ ನಮ್ಮ ಹೋರಾಟವನ್ನು ಬಲಪಡಿಸಬೇಕು ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದರು.
ಪ್ರಕಾಶ ಕಾರಟ್ ರಾಜಕೀಯ ನಿರ್ಣಯದ ಮೇಲೆ ಚರ್ಚೆಯ ಸಾರಾಂಶವನ್ನು ಕೊಡುತ್ತ ಹೀಗಂದರು: “ಮಹಾಧಿವೇಶನದ ಮುಂದೆ ಎರಡು ಅಭಿಪ್ರಾಯಗಳನ್ನು ಇಟ್ಟಿರುವುದು ಅಭೂತಪೂರ್ವ ಸಂಗತಿ. ಇದೊಂದು ರಾಜಕೀಯ ಪ್ರಶ್ನೆ, ಇದನ್ನು ಪಕ್ಷದ ಅತ್ಯುನ್ನತ ಸಂಸ್ಥೆಯಾದ ಪಕ್ಷದ ಮಹಾಧಿವೇಶನ ನಿರ್ಧರಿಸಬೇಕು ಎಂದು ಕೇಂದ್ರ ಸಮಿತಿ ಹೀಗೆ ಮಾಡಲು ನಿರ್ಧರಿಸಿತು. ಅದರಿಂದಾಗಿಯೇ ಕಾಮ್ರೇಡ್ ಸೀತಾರಾಮ್ ಯೆಚುರಿ ಕೇಂದ್ರ ಸಮಿತಿಯ ಅಲ್ಪಮತದ ಅಭಿಪ್ರಾಯವನ್ನು ಮಂಡಿಸಿದರು.
“ಇದು ಕೆಲವು ಪ್ರತಿನಿಧಿಗಳು ಹೇಳಿರುವಂತೆ ‘ಹೊಂದಿಕೆ ಮತ್ತು ಮೈತ್ರಿ’ ಮುಂತಾದ ಕೆಲವು ಪದಗಳ ಪ್ರಶ್ನೆ ಅಲ್ಲ. ಇದು ಬಿಜೆಪಿ/ಆರೆಸ್ಸೆಸ್ ವಿರುದ್ಧ ಹೋರಾಡುವ, ಅವರು ಸೋಲುವಂತೆ ಮಾಡುವ ಅತ್ಯುತ್ತಮ ನಿಲುವನ್ನು ಕುರಿತಾದ್ದು. ದೊಡ್ಡ ಸಂಖ್ಯೆಯಲ್ಲಿ ಸಂಗಾತಿಗಳು ಈ ಮಹಾಧಿವೇಶನದಿಂದ ಐಕ್ಯತೆಯ ಸಂದೇಶದೊಂದಿಗೆ ನಾವು ಹಿಂದಿರುಗುವಂತೆ ಈ ಪ್ರಶ್ನೆಯನ್ನು ಪರಿಹರಿಸಬೇಕು ಎಂದು ಮುಖಂಡತ್ವವನ್ನು ಕೇಳಿದ್ದಾರೆ.
“ನಾವು ಸಂಗಾತಿಗಳ ಈ ಹುರುಪನ್ನು ಗಮನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿದ್ದೇವೆ. ರಾಜಕೀಯ ನಿಲುವು ಕುರಿತಂತೆ ಹೇಳುವುದಾದರೆ, ಕಾಂಗ್ರೆಸಿನೊಂದಿಗೆ ಯಾವುದೇ ರಾಜಕೀಯ ಮೈತ್ರಿಗೆ ಅವಕಾಶವಿಲ್ಲ. ಭಾರತೀಯ ಆಳುವ ವರ್ಗಗಳ ಪ್ರಧಾನ ಪಕ್ಷದ ಜೊತೆಗೆ ಇಂತಹ ಒಂದು ಮೈತ್ರಿ ಆಳುವ ವರ್ಗಗಳಿಗೆ ಒಂದು ಧೋರಣೆಯ ಪರ್ಯಾಯಕ್ಕೆ ಜನತೆಯ ಐಕ್ಯತೆಯನ್ನು ಕಟ್ಟುವ ನಮ್ಮ ಹೋರಾಟವನ್ನು ದುರ್ಬಲಗೊಳಿಸುತ್ತದೆ. ಈ ನಿಲುವಿನ ಆಧಾರದಲ್ಲಿಯೇ ಭವಿಷ್ಯದ ಚುನಾವಣಾ ಕಾರ್ಯತಂತ್ರಗಳನ್ನು ನಿರ್ಧರಿಸಲಾಗುವುದು.
“ಹೊಂದಿಕೆ ಎಂಬ ಪದದ ಬಗ್ಗೆ ಹೇಳುವುದಾದರೆ, ನಾವು ಕಾಂಗ್ರೆಸಿನೊಂದಿಗೆ ಆ ಹೊಂದಿಕೆಯ ವ್ಯಾಪ್ತಿಯನ್ನು ನಿರೂಪಿಸಿದ್ದೇವೆ. ಸಂಸತ್ತಿನ ಒಳಗೆ ನಮಗೆ ಒಪ್ಪಿತ ಪ್ರಶ್ನೆಗಳ ಮೇಲೆ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ವಿರೋಧ ಪಕ್ಷಗಳೊಂದಿಗೆ ಹೊಂದಿಕೆ ಇರುತ್ತದೆ. ಕೋಮುವಾದದ ವಿರುದ್ಧ ಎಲ್ಲ ಜನತಾಂತ್ರಿಕ ಮತ್ತು ಜಾತ್ಯತೀತ ಶಕ್ತಿಗಳ ಒಂದು ವಿಶಾಲ ಅಣಿನೆರಿಕೆ ಬೇಕಾಗಿದೆ ಎಂಬ ವಿಶಾಖಪಟ್ಟಣ ಮಹಾಧಿವೇಶನದ ನಿರ್ಣಯವನ್ನು ನಾವು ಮುಂದೊಯ್ಯುತ್ತೇವೆ.”
ಅವರು ಪಕ್ಷಕ್ಕೆ (1) ಬಿಜೆಪಿಯ ಸರ್ವಾಧಿಕಾರಶಾಹಿ ಕೋಮುವಾದಿ ಆಳ್ವಿಕೆಯನ್ನು ಸೋಲಿಸಲು ಹೋರಾಟ ನಡೆಸಬೇಕು, (2) ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಮಾಜವಾದದ ಹೋರಾಟವನ್ನು ಮುನ್ನಡೆಸಲು ಒಂದು ಬಲಿಷ್ಟ ಸಿಪಿಐ(ಎಂ)ನ್ನು ಕಟ್ಟಬೇಕು, (3) ಒಂದು ಎಡ ಮತ್ತು ಜನತಾಂತ್ರಿಕ ಪರ್ಯಾಯವನ್ನು ನಿರ್ಮಿಸಲು ಒಂದು ಬಲಿಷ್ಟ ಎಡ ಮತ್ತು ಜನತಾಂತ್ರಿಕ ರಂಗವನ್ನು ಬೆಸೆಯಬೇಕು ಎಂದು ಕರೆ ನೀಡಿದರು.
ಒಟ್ಟು 47 ಪ್ರತಿನಿಧಿಗಳು ನಿರ್ಣಯದ ಮೇಲೆ ಮಾತಾಡಿದರು. ಈ ಕಲಾಪಗಳಲ್ಲಿ ಪ್ರತಿನಿಧಿಗಳು ಸುಮಾರು 373 ತಿದ್ದುಪಡಿಗಳನ್ನು ಮಂಡಿಸಿದರು. ಅವುಗಳಲ್ಲಿ 37 ತಿದ್ದುಪಡಿಗಳನ್ನು ಅಂಗೀಕರಿಸಲಾಗಿದೆ.