-ಸೀತಾರಾಮ್ ಯೆಚುರಿ
ಸಿಪಿಐ(ಎಂ)ನ 22ನೇ ಮಹಾಧಿವೇಶನದ ಸಂದರ್ಭದಲ್ಲಿ ಭಾರತೀಯ ಆಳುವ ವರ್ಗಗಳು ಮತ್ತು ಕಾರ್ಪೊರೇಟ್ ಮಾಧ್ಯಮಗಳು ಸಿಪಿಐ(ಎಂ) ಈಗ ಒಡೆದ ಮನೆ ಎಂದು ಬಿಂಬಿಸಲು ಮಿತಿಮೀರಿ ಪ್ರಯತ್ನಿಸಿದವು. ಆದರೆ, ಸಿಪಿಐ(ಎಂ) ಈ ಮಹಾಧಿವೇಶನದಿಂದ ಹಿಂದೆಂದಿಗಿಂತಲೂ ಹೆಚ್ಚು ಏಕೀಕೃತವಾಗಿ ಪ್ರಸಕ್ತ ಸವಾಲುಗಳನ್ನು ಎದುರಿಸುವ ಮತ್ತು ಸೋಲಿಸುವ ದೃಢನಿರ್ಧಾರದೊಂದಿಗೆ ಹೊಮ್ಮಿ ಬಂದಿದೆ. ಮುಂಬರುವ ದಿನಗಳಲ್ಲಿ ಸಿಪಿಐ(ಎಂ)ನ್ನು ಇನ್ನಷ್ಟು ಬಲಗೊಳಿಸಬೇಕು, ಎಡ ಐಕ್ಯತೆಯನ್ನು ಕ್ರೋಡೀಕರಿಸಬೇಕು , ಎಡ ಮತ್ತು ಜನತಾಂತ್ರಿಕ ಶಕ್ತಿಗಳ ಐಕ್ಯತೆಯನ್ನು ಬೆಸೆಯಬೇಕು ಹಾಗೂ ಒಂದು ಧೋರಣಾ ಪರ್ಯಾಯವನ್ನು ಮುಂದಿಡಬೇಕು. ಇದು ಬಲಿಷ್ಟ ರೀತಿಯಲ್ಲಿ ಜನಗಳನ್ನು ಅಣಿನೆರೆಸಲು ಮತ್ತು ಹೋರಾಟಗಳನ್ನು ತೀಕ್ಷ್ಣಗೊಳಿಸಲು ಆಧಾರವಾಗಬೇಕು ಎಂದು ೨೨ನೇ ಸಿಪಿಐ(ಎಂ) ಮಹಾಧಿವೇಶನ ಕರೆ ನೀಡಿದೆ.
ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) 22ನೇ ಮಹಾಧಿವೇಶನ ಹೈದರಾಬಾದಿನಲ್ಲಿ ತನ್ನ ಮುಂದಿದ್ದ ಅಜೆಂಡಾವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮುಕ್ತಾಯಗೊಂಡಿದೆ. ಮಹಾಧಿವೇಶನ ಕೊನೆಗೊಂಡಿದ್ದನ್ನು ಸೂಚಿಸಿದ ಬೃಹತ್ ರ್ಯಾಲಿಯಲ್ಲಿ ಐಕ್ಯತೆ ಮತ್ತು ದೃಢನಿರ್ಧಾರದ ಹುರುಪು ಪುಷ್ಕಳವಾಗಿ ತುಂಬಿ ಹರಿಯಿತು. ಲಕ್ಷಾತರ ಜನರು ಇದರಲ್ಲಿ ಭಾಗವಹಿಸಿದ್ದರು.
22ನೇ ಮಹಾಧಿವೇಶನ ತೀವ್ರಗೊಂಡ ಜನತಾ ಹೋರಾಟಗಳ ಮೂಲಕ ಭಾರತೀಯ ಆಳುವ ವರ್ಗಗಳಿಗೆ ಒಂದು ಧೋರಣಾ ಪರ್ಯಾಯವನ್ನು ಮುಂದಿಡುವ ಸಿಪಿಐ(ಎಂ)ನ ದೃಢನಿರ್ಧಾರವನ್ನು ದ್ವಿಗುಣಗೊಳಿಸಿದೆ. ಪ್ರಸಕ್ತ ಬಿಜೆಪಿ ಕೇಂದ್ರ ಸರಕಾರದ ಆಡಳಿತ ಸೂತ್ರಗಳು ಫ್ಯಾಸಿಸ್ಟ್ ಮಾದರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹತೋಟಿಯಲ್ಲಿದ್ದು, ಅದು ಜನತೆಯ ಜೀವನಾಧಾರಗಳ ಮೇಲೆ ಬಹುಮುಖೀ ಹೊಡೆತಗಳನ್ನು ಹಾಕುತ್ತಿದೆ, ಮತ್ತು ಅದರೊಂದಿಗೇ ನಮ್ಮ ಶ್ರೀಮಂತ ಬಹುತ್ವಮಯ ಸಾಮಾಜಿಕ ಹಂದರದ ಐಕ್ಯತೆ ಮತ್ತು ಸಮಗ್ರತೆಯನ್ನು ಹಾಳುಗೆಡಹುವ ಬೆದರಿಕೆಯನ್ನು ಒಡ್ಡಿದೆ.
ನಾವು ಎದುರಿಸುತ್ತಿರುವ ಬಹುಮುಖೀ ಸವಾಲುಗಳಲ್ಲಿ ನಾಲ್ಕು ಸವಾಲುಗಳನ್ನು, ಜನಗಳ ಜೀವಾನಾಧಾರಗಳ ಹಿತದೃಷ್ಟಿಯಿಂದ ಮತ್ತು ಭಾರತೀಯ ಗಣತಂತ್ರವನ್ನು ಕಾಪಾಡಿಕೊಳ್ಳಲು ಮತ್ತು ಬಲಪಡಿಸಲು ತುರ್ತಾಗಿ ಎದುರಿಸಬೇಕಾಗಿದೆ, ಸೋಲಿಸಬೇಕಾಗಿದೆ. ನವ-ಉದಾರವಾದಿ ಧೋರಣೆಗಳ ಪ್ರಹಾರಗಳು ಅಭೂತಪೂರ್ವ ಆಯಾಮಗಳನ್ನು ಪಡೆದಿವೆ. ತೀಕ್ಷ್ಣಗೊಳ್ಳುತ್ತಿರುವ ಕೋಮುವಾದಿ ಧ್ರುವೀಕರಣ ನಮ್ಮ ಸಾಮಾಜಿಕ ಹಂದರದ ಐಕ್ಯತೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಚಿಂದಿಗೊಳಿಸುತ್ತಿದೆ. ಸಂಸದೀಯ ಪ್ರಜಾಪ್ರಭುತ್ವದ ಮತ್ತು ಸಾಂವಿಧಾನಿಕ ಅಧಿಕಾರಗಳ ಸಂಸ್ಥೆಗಳ ವಿರುದ್ಧ ನಡೆಸಿರುವ ಪ್ರಹಾರಗಳು ಒಂದು ಪ್ರಜಾಪ್ರಭುತ್ವ-ವಿರೋಧಿ ದಾಳಿಯನ್ನು ಹರಿಯಬಿಟ್ಟಿವೆ.. ಭಾರತವನ್ನು ಅಮೆರಿಕನ್ ಸಾಮ್ರಾಜ್ಯಶಾಹಿಯ ಒಂದು ಕಿರಿಯ ಪಾಲುದಾರ ಮತ್ತು ಒಂದು ಅಡಿಯಾಳು ಮಿತ್ರನ ಮಟ್ಟಕ್ಕೆ ಇಳಿಸಲಾಗಿದೆ. ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಕೈಬಿಡಲಾಗಿದೆ. ಭಾರತ-ಅಮೆರಿಕಾ-ಇಸ್ರೇಲ್ ಕೂಟವೊಂದು ಜಾಗತಿಕ ವ್ಯವಹಾರಗಳಲ್ಲಿ ಮೂಡಿಬಂದಿದೆ.
ಈ ಸವಾಲುಗಳನ್ನು ಎಡ ಮತ್ತು ಜನತಾಂತ್ರಿಕ ಧೋರಣಾ ಪರ್ಯಾಯದೊಂದಿಗೆ ಎದುರಿಸಬೇಕಾಗಿದೆ. ಈ ಪರ್ಯಾಯದ ರೂಪುರೇಷೆ ಮಹಾಧಿವೇಶನ ಅಂಗೀಕರಿಸಿರುವ ರಾಜಕೀಯ ನಿರ್ಣಯದಲ್ಲಿ ಇದೆ. ಈ ಪರ್ಯಾಯದ ಆಧಾರದಲ್ಲಿ ಭಾರತೀಯ ಜನತೆಯ ನಡುವೆ ವರ್ಗಶಕ್ತಿಗಳ ಬಲಾಬಲವನ್ನು ನಮ್ಮ ಪರವಾಗಿ ಬದಲಿಸುವ ಪ್ರಯತ್ನಗಳು ಸಿಪಿಐ(ಎಂ) ತನ್ನನ್ನು ಮತ್ತು ರಾಜಕೀಯ ಮಧ್ಯಪ್ರವೇಶದ ತನ್ನ ಸಾಮಥ್ಯಗಳನ್ನು ಬಲಪಡಿಸುವುದರ ಮೇಲೆ ನಿಂತಿವೆ. ಈ ಬಲದ ಮೇಲೆ ದೇಶದಲ್ಲಿ ಎಡಶಕ್ತಿಗಳ ಐಕ್ಯತೆಯನ್ನು, ಕ್ರೋಡೀಕರಣವನ್ನು ಜನಗಳ ಹೋರಾಟಗಳನ್ನು ತೀವ್ರಗೊಳಿಸುವ ಮೂಲಕ ಕಟ್ಟಬೇಕಾಗಿದೆ.
ಅಲ್ಲದೆ, ಎಡ ಮತ್ತು ಜನತಾಂತ್ರಿಕ ಶಕ್ತಿಗಳ ಐಕ್ಯತೆಯನ್ನು, ಈಗ ವಿವಿಧ ಬಾವುಟಗಳ ಅಡಿಯಲ್ಲಿರುವ ಜನತಾ ಆಂದೋಲನಗಳ ವಿವಿಧ ತೊರೆಗಳನ್ನು ಒಂದು ಬಲಿಷ್ಟ ಎಡ ಮತ್ತು ಜನತಾಂತ್ರಿಕ ಶಕ್ತಿಗಳ ರಂಗದೊಳಕ್ಕೆ ಸೆಳೆಯುವ ಮೂಲಕ ಕಟ್ಟಬೇಕಾಗಿದೆ. ಜನತಾ ಹೋರಾಟಗಳನ್ನು ತೀಕ್ಷ್ಣಗೊಳಿಸುವ ಮೂಲಕ ಮಾತ್ರವೇ ಒಂದು ಧೋರಣಾ ಪರ್ಯಾಯದಿಂದ ಈ ಆರೆಸ್ಸೆಸ್-ಬಿಜೆಪಿಯ ಪ್ರಸಕ್ತ ದಾಳಿಯನ್ನು ಎದುರಿಸಲು ಮತ್ತು ಸೋಲಿಸಲು ಸಾಧ್ಯ.
ಐಕ್ಯತೆಯ ಮಹಾಧಿವೇಶನ
ಪ್ರಸಕ್ತ ಬಿಜೆಪಿ ಕೇಂದ್ರ ಸರಕಾರಕ್ಕೆ ಮತ್ತು ಪ್ರಧಾನ ಮಂತ್ರಿ ಮೋದಿಯವರಿಗೆ ಅತ್ಯಂತ ಜೋರಾಗಿ ನೆರವಾಗುವ, ಪ್ರೋತ್ಸಾಹಿಸುವ ಭಾರತೀಯ ಆಳುವ ವರ್ಗಗಳು ಮತ್ತು ಕಾರ್ಪೊರೇಟ್ ಮಾಧ್ಯಮಗಳು ಸಿಪಿಐ(ಎಂ) ಈಗ ಒಡೆದ ಮನೆ ಎಂದು ಬಿಂಬಿಸಲು ಮಿತಿಮೀರಿ ಪ್ರಯತ್ನಿಸಿದವು. ಆದರೆ, ಅಂತಿಮವಾಗಿ ಸಿಪಿಐ(ಎಂ) ಈ ಮಹಾಧಿವೇಶನದಿಂದ ಹಿಂದೆಂದಿಗಿಂತಲೂ ಹೆಚ್ಚು ಏಕೀಕೃತವಾಗಿ ಪ್ರಸಕ್ತ ಸವಾಲುಗಳನ್ನು ಎದುರಿಸುವ ಮತ್ತು ಸೋಲಿಸುವ ದೃಢನಿರ್ಧಾರದೊಂದಿಗೆ ಹೊಮ್ಮಿ ಬಂದಿದೆ.
ಇದು, ಸಿಪಿಐ(ಎಂ) ಭಾರತದಲ್ಲಿ ಚೈತನ್ಯಪೂರ್ಣ ಆಂತರಿಕ ಜನತಂತ್ರವನ್ನು ಆಚರಿಸುವ ಏಕೈಕ ರಾಜಕೀಯ ಪಕ್ಷ, ಇದು ಅದರ ಆಂತರಿಕ ಶಕ್ತಿಯನ್ನು ಗಟ್ಟಿಗೊಳಿಸಿದೆ ಎಂಬುದನ್ನು ಮತ್ತೊಮ್ಮೆ ಘಂಟಾಘೋಷವಾಗಿ ಸಾಬೀತುಪಡಿಸಿದೆ.
ಕರಡು ರಾಜಕೀಯ ನಿರ್ಣಯದ ಮೇಲೆ ತೀವ್ರ ಚರ್ಚೆಯ ನಂತರ, ಮಹಾಧಿವೇಶನದ ಚಾಲನಾ ಸಮಿತಿ ಕರಡಿಗೆ ಸೂಚಿಸಿದ ಈ ಕೆಳಗಿನ ತಿದ್ದುಪಡಿಯನ್ನು ಪ್ರಚಂಡ ಅನುಮೋದನೆಯೊಂದಿಗೆ ಅಂಗೀಕರಿಸಿತು:
ಬಿಜೆಪಿ ಮತ್ತು ಅದರ ಮಿತ್ರರನ್ನು ಎಲ್ಲ ಜಾತ್ಯತೀತ ಮತ್ತು ಜನವಾದಿ ಶಕ್ತಿಗಳನ್ನು ಅಣಿನೆರೆಸುವ ಮೂಲಕ ಸೋಲಿಸುವುದು ಮುಖ್ಯ ಕಾರ್ಯಭಾರ. ಆದರೆ ಇದನ್ನು ಕಾಂಗ್ರೆಸ್ ಪಕ್ಷದೊಂದಿಗೆ ಒಂದು ರಾಜಕೀಯ ಮೈತ್ರಿಯಿಲ್ಲದೆ ಮಾಡಬೇಕು.
ಆದರೂ, ಸಂಸತ್ತಿನಲ್ಲಿ ಸಹಮತವಿರುವ ಪ್ರಶ್ನೆಗಳ ಮೇಲೆ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ವಿರೋಧ ಪಕ್ಷಗಳೊಂದಿಗೆ ಹೊಂದಿಕೆ ಇರಬಹುದು. ಸಂಸತ್ತಿನ ಹೊರಗೆ ಕೋಮುವಾದದ ವಿರುದ್ಧ ಜನಗಳನ್ನು ವಿಶಾಲವಾಗಿ ಅಣಿನೆರೆಸಲು ಎಲ್ಲ ವಿರೋಧಿ ಜಾತ್ಯತೀತ ಶಕ್ತಿಗಳೊಂದಿಗೆ ನಾವು ಸಹಕರಿಸಬೇಕು. ಎಲ್ಲ ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಜಂಟಿ ಕಾರ್ಯಾಚರಣೆಗಳನ್ನು ಕಾಂಗ್ರೆಸ್ ಮತ್ತಿತರ ಬೂಜ್ವಾ ಪಕ್ಷಗಳನ್ನು ಅನುಸರಿಸುವ ಜನ ಸಮೂಹಗಳನ್ನು ಸೆಳೆಯಬಹುದಾದ ರೀತಿಯಲ್ಲಿ ನಾವು ಪೋಷಿಸಬೇಕು.
ಆರೆಸ್ಸೆಸ್/ಬಿಜೆಪಿ ಸರಕಾರವನ್ನು ಪದಚ್ಯುತಗೊಳಿಸುವ ಗುರಿಸಾಧನೆಗೆ ಸಿಪಿಐ(ಎಂ)ನ ೨೨ನೇ ಮಹಾಧಿವೇಶನ ಪಕ್ಷದ ಮೇಲಿನ ರಾಜಕೀಯ ನಿಲುವಿನ ಆಧಾರದಲ್ಲಿ ಬಿಜೆಪಿ-ವಿರೋಧಿ ಮತಗಳನ್ನು ಗರಿಷ್ಟಗೊಳಿಸುವ ಸೂಕ್ತ ಚುನಾವಣಾ ತಂತ್ರಗಳನ್ನು ಅಂಗೀಕರಿಸಬೇಕು ಎಂದು ನಿರ್ಧರಿಸಿದೆ.
ಪಕ್ಷದ ಐಕ್ಯತೆ, ಕಾಮ್ರೇಡ್ ಹೊ ಚಿ ಮಿನ್ಹ್ ಸದಾ ನಮಗೆ ಬೋಧಿಸಿದಂತೆ, ಕಮ್ಯುನಿಸ್ಟರಿಗೆ ಶೋಷಣೆಯನ್ನು ಕೊನೆಗೊಳಿಸಲು ಮತ್ತು ಮಾನವ ವಿಮೋಚನೆಯನ್ನು ತರಲು ಇರುವ ಏಕೈಕ ಅಸ್ತ್ರದ ಶಕ್ತಿ. ಪಕ್ಷದ ಐಕ್ಯತೆಯನ್ನು ನಮ್ಮ ಕಣ್ಣಗುಡ್ಡೆಯಂತೆ ಕಾಪಾಡಿಕೊಳ್ಳಬೇಕಾದ ಮತ್ತು ಬಲಪಡಿಸಬೇಕಾದ ಅಗತ್ಯವನ್ನು ಕಾಮ್ರೇಡ್ ಹೊ ಸದಾ ಒತ್ತಿ ಹೇಳುತ್ತಿದ್ದರು.
ರಾಜಕೀಯ-ಸಂಘಟನಾತ್ಮಕ ವರದಿ
ರಾಜಕೀಯ ನಿರ್ಣಯವನ್ನು ಅಂಗೀಕರಿಸುವುದಲ್ಲದೆ, ೨೨ನೇ ಮಹಾಧಿವೇಶನ ರಾಜಕೀಯ -ಸಂಘಟನಾತ್ಮಕ ವರದಿಯನ್ನು ಕೂಡ ಚರ್ಚಿಸಿತು ಮತ್ತು ಅಂಗೀಕರಿಸಿತು.
ರಾಜಕೀಯ -ಸಂಘಟನಾತ್ಮಕ ವರದಿ ಡಿಸೆಂಬರ್೨೦೧೫ರಲ್ಲಿ ಕೊಲ್ಕತಾದಲ್ಲಿ ನಡೆದ ಸಿಪಿಐ(ಎಂ)ನ ಸಂಘಟನಾ ಪ್ಲೀನಂನಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳ ಜಾರಿಯ ಒಂದು ವಿಮರ್ಶೆಯನ್ನು ಕೈಗೊಂಡಿತು.
ಪಕ್ಷ ಪಶ್ಚಿಮ ಬಂಗಾಲದಲ್ಲಿ ಮತ್ತು ಇತ್ತೀಚೆಗೆ ತ್ರಿಪುರಾದಲ್ಲಿ ಹಿನ್ನಡೆಗಳ ನಂತರ ಒಂದು ಕಷ್ಟಕರ ಸನ್ನಿವೇಶವನ್ನು ಎದುರಿಸುತ್ತಿದೆ ಎಂಬ ಸಂಗತಿಯನ್ನು ವರದಿ ಎತ್ತಿ ತೋರಿತು. ಆರೆಸ್ಸೆಸ್/ಬಿಜೆಪಿ ನೇತೃತ್ವದ ಪ್ರತ್ರಿಕ್ರಿಯಾವಾದಿ ಶಕ್ತಿಗಳು ಪಕ್ಷದ ವಿರುದ್ಧ ದಾಳಿಗಳನ್ನು ಕೇಂದ್ರೀಕರಿಸುತ್ತಿವೆ. ಈ ಸವಾಲನ್ನು ಜನಸಮೂಹಗಳೊಂದಿಗೆ ಪಕ್ಷದ ಜೀವಂತ ಸಂಪರ್ಕಗಳನ್ನು ಬಲಪಡಿಸುವ, ಉತ್ತಮ ಗುಣಮಟ್ಟದ ಪಕ್ಷದ ಸದಸ್ಯರೊಂದಿಗೆ ಸಂಘಟನೆಯನ್ನು ಸುವ್ಯವಸ್ಥಿತಗೊಳಿಸುವ ಮತ್ತು ದೇಶಾದ್ಯಂತ ಒಂದು ಬಲಿಷ್ಟ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವ ಮೂಲಕ ಮಾತ್ರವೇ ಎದುರಿಸಲು ಸಾಧ್ಯ.
ಈ ಗುರಿಗಳನ್ನು ಈಡೇರಿಸಿಕೊಳ್ಳುವುದು ಈ ಆರೆಸ್ಸೆಸ್/ಬಿಜೆಪಿ ಸರಕಾರವನ್ನು ಸೋಲಿಸಲಿಕ್ಕಾಗಿ ಜನಗಳ ಹೋರಾಟಗಳನ್ನು ಯಶಸ್ವಿಯಾಗಿ ಹರಿಯಬಿಡಲು ಅತ್ಯಂತ ಅಗತ್ಯ.
ಇತ್ತೀಚಿನ ಅವಧಿಯಲ್ಲಿ ಸಾಮೂಹಿಕ ಹೋರಾಟಗಳ ಮತ್ತು ಐಕ್ಯ ಚಳುವಳಿಗಳ ಉಬ್ಬರ ಕಾಣಬರುತ್ತಿದೆ. ಇವುಗಳಲ್ಲಿ ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳು ಒಂದು ಸಕ್ರಿಯ ಪಾತ್ರವನ್ನು ವಹಿಸಿವೆ. ನಾವು ಇದನ್ನು ವರ್ಗ ಮತ್ತು ಸಾಮೂಹಿಕ ಹೋರಾಟಗಳನ್ನು ತೀವ್ರಗೊಳಿಸುವ ಮತ್ತು ವಿಸ್ತಾರಗೊಳಿಸುವ ಮೂಲಕ ಮುಂದೊಯ್ಯಬೇಕು. ಇದು ಒಂದು ಎಡ ಮತ್ತು ಜನತಾಂತ್ರಿಕ ಐಕ್ಯತೆಯನ್ನು ಬೆಸೆಯಲು ನಮಗೆ ಸಾಧ್ಯವಾಗಿಸುತ್ತದೆ.
ಕೊಲ್ಕತಾ ಪ್ಲೀನಂ ಹಾಕಿಕೊಟ್ಟ ಕಾರ್ಯಭಾರಗಳನ್ನು ಪೂರ್ಣವಾಗಿ ಜಾರಿಗೊಳಿಸಬೇಕು. ಮುಂದಿನ ಆರು ತಿಂಗಳಲ್ಲಿ ಎಲ್ಲ ರಾಜ್ಯಸಮಿತಿಗಳು ತಮ್ಮ ರಾಜ್ಯ ಪ್ಲೀನಂಗಳು ಹಾಕಿಕೊಟ್ಟ ಕಾರ್ಯಭಾರಗಳ ಜಾರಿಯ ಒಂದು ಆಮೂಲಾಗ್ರ ವಿಮರ್ಶೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ೨೨ನೇ ಮಹಾಧಿವೇಶನ ನಿರ್ಧರಿಸಿತು. ಈ ಆಧಾರದಲ್ಲಿ ಕೇಂದ್ರ ಸಮಿತಿ ಮತ್ತು ರಾಜ್ಯಸಮಿತಿಗಳು ಒಂದು ಸಮಯಬದ್ಧ ರೀತಿಯಲ್ಲಿ ಜಾರಿಗೊಳಿಸಬೇಕಾದ ಭವಿಷ್ಯದ ಕಾರ್ಯಭಾರಗಳನ್ನು ರೂಪಿಸಬೇಕು.
ಸಂಘಟನಾ ಪ್ಲೀನಂ ಹಾಕಿಕೊಟ್ಟ ಅಖಿಲ ಭಾರತ ಸಾಮೂಹಿಕ ನೆಲೆಯ ಒಂದು ಬಲಿಷ್ಟ ಸಿಪಿಐ(ಎಂ)ನ್ನು ಮತ್ತು ಒಂದು ಜನಸಮೂಹಗಳ ನಿಲುವಿನ ಒಂದು ಕ್ರಾಂತಿಕಾರಿ ಪಕ್ಷವನ್ನು ಕಟ್ಟುವ ಗುರಿಗಳನ್ನು ಈಡೇರಿಸುವುದು ಉದ್ದೇಶವಾಗಬೇಕಾಗಿದೆ.
ಜಪರ ಹೋರಾಟಗಳನ್ನು ತೀವ್ರಗೊಳಿಸಬೇಕು
ಕಳೆದ ಮೂರು ವರ್ಷಗಳಲ್ಲಿ ಜನಗಳ ಹೋರಾಟಗಳ ಬೆಳವಣಿಗೆ ಕಾಣ ಬಂದಿದೆ. ಕಾರ್ಮಿಕ ವರ್ಗ ಎರಡು ಅಖಿಲ ಭಾರತ ಕೈಗಾರಿಕಾ ಮುಷ್ಕರಗಳು ಮತ್ತು ಸಂಸತ್ತಿನ ಮುಂದೆ ಒಂದು ಮಹಾಧರಣಿಗೆ ಕರೆ ನೀಡಿತು. ಇವುಗಳಲ್ಲಿ ಲಕ್ಷಾಂತರ ಕಾರ್ಮಿಕರು ಭಾಗವಹಿಸಿದರು.
ರೈತಾಪಿಗಳು ಆಳಗೊಳ್ಳುತ್ತಿರುವ ಕರ್ಷಕ ಸಂಕಟದ ವಿರುದ್ಧ ಹೋರಾಟಗಳ ಸಮರಪಥದಲ್ಲಿದ್ದಾರೆ. ಇತ್ತೀಚೆಗೆ ಮುಂಬೈಗೆ ಒಂದು ಲಾಂಗ್ ಮಾರ್ಚ್ ಈ ಹೋರಾಟಗಳನ್ನು ಎತ್ತಿ ತೋರಿದೆ.
ಸಾಮಾಜಿಕವಾಗಿ ದಮನಕ್ಕೊಳಗಾಗಿರುವ ವಿಭಾಗಗಳು ಪ್ರತಿಭಟನೆಗಳು ಮತ್ತು ಬಂಡಾಯಗಳ ಮೂಲಕ ತಮ್ಮ ಹಕ್ಕುಗಳನ್ನು ಎತ್ತಿ ಹಿಡಿಯುತ್ತಿವೆ. ವಿಶೇಷವಾಗಿ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ನಡುವೆ ಇದು ನಡೆಯುತ್ತಿದ್ದು ಇವು ಎಡ ನೇತೃತ್ವದ ಚಳುವಳಿಗಳೊಂದಿಗೆ ಹೊಸ ಸಂಪರ್ಕಗಳನ್ನು ಬೆಸೆಯುತ್ತಿವೆ.
ಆರೆಸ್ಸೆಸ್/ಬಿಜೆಪಿ ಕೂಟ ದಲಿತರು ಮತ್ತು ಮುಸ್ಲಿಮರ ವಿರುದ್ಧ ಹರಿಯ ಬಿಟ್ಟಿರುವ ಕೊಲೆಗಡುಕ ದಾಳಿಗಳಿಗೆ ಈ ಬಲಗೂಡಿಸಿಕೊಂಡಿರುವ ಜನಪರ ಐಕ್ಯ ಅಣಿನೆರಿಕೆಗಳು ಸವಾಲು ಒಡ್ಡುತ್ತಿವೆ.
ಅಸಹಿಷ್ಣುತೆಯ ವಾತಾವರಣ ಹೆಚ್ಚುತ್ತಿರುವುದು ದಭೋಲ್ಕರ್, ಪನ್ಸರೆ, ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಕೊಲೆಗಳಲ್ಲಿ ಇದರ ವಿರುದ್ಧ ದೇಶಾದ್ಯಂತ ಬುದ್ಧಿಜೀವಿಗಳು ಮತ್ತು ಸದ್ಭಾವನೆಗಳ ಜನಗಳಲ್ಲಿ ವ್ಯಾಪಕ ಅಸಂತೃಪ್ತಿ ಮತ್ತು ಪ್ರತಿಭಟನೆ ಬಲಗೊಳ್ಳುತ್ತಿದೆ. ಜನಗಳು ಹೇಗೆ ಬದುಕಬೇಕು, ಹೇಗೆ ಮಿತ್ರರನ್ನು ಆರಿಸಿಕೊಳ್ಳಬೇಕು ಎಂದು ಆಜ್ಞಾಪಿಸುವ ಆರೆಸ್ಸೆಸ್/ಬಿಜೆಪಿ ಪ್ರಾಯೋಜಿತ ನೈತಿಕ ಪೋಲೀಸ್ಗಿರಿಯ ಶಕ್ತಿಗಳಿಗೆ ಬಲವಾದ ಪ್ರತಿರೋಧ ಬರುತ್ತಿದೆ. ಈ ಹೋರಾಟಗಳು ಮತ್ತು ಇತರ ಜನಪರ ಅಣಿನೆರಿಕೆಗಳನ್ನು ಇನ್ನಷ್ಟು ಕ್ರ್ರೋಡೀಕರಿಸಬೇಕು ಮತ್ತು ತೀವ್ರಗೊಳಿಸಬೇಕು.
ಸಿಪಿಐ(ಎಂ)ನ ೨೨ನೇ ಮಹಾಧಿವೇಶನ ಭಾರತ ಮತ್ತು ಇದರ ಜನತೆಯ ಮುಂದಿರುವ ಈ ಸವಾಲುಗಳನ್ನು ಎದುರಿಸಲು ಮತ್ತು ಸೋಲಿಸಲು ಏಕವ್ಯಕ್ತಿಯಂತೆ ಎದ್ದು ನಿಲ್ಲಬೇಕು ಎಂದು ಇಡೀ ಪಕ್ಷದ ಕಾರ್ಯಕರ್ತರುಗಳು, ಮುಖಂಡರಿಗೆ ಒಂದು ರಣಕಹಳೆಯನ್ನು ಮೊಳಗಿಸಿದೆ. ಮುಂಬರುವ ದಿನಗಳಲ್ಲಿ ಸಿಪಿಐ(ಎಂ)ನ್ನು ಇನ್ನಷ್ಟು ಬಲಗೊಳಿಸುವುದು, ಎಡ ಐಕ್ಯತೆಯನ್ನು ಕ್ರೋಡೀಕರಿಸುವುದು , ಎಡ ಮತ್ತು ಜನತಾಂತ್ರಿಕ ಶಕ್ತಿಗಳ ಐಕ್ಯತೆಯನ್ನು ಬೆಸೆಯುವುದು ಹಾಗೂ ಒಂದು ಧೋರಣಾ ಪರ್ಯಾಯವನ್ನು ಮುಂದಿಡುವುದು ಬಲಿಷ್ಟ ರೀತಿಯಲ್ಲಿ ಜನಗಳನ್ನು ಅಣಿನೆರೆಸಲು ಮತ್ತು ಹೋರಾಟಗಳನ್ನು ತೀಕ್ಷ್ಣಗೊಳಿಸಲು ಆಧಾರವಾಗಬೇಕು ಎಂದು ಕರೆ ನೀಡಿದೆ.