ಇತ್ತೀಚೆಗೆ ಪೂರ್ಣಗೊಂಡ ಚುನಾವಣೆಗಳಲ್ಲಿ ಅಧಿಕೃತವಾಗಿ ಘೋಷಿಸಿದ ಫಲಿತಾಂಶಗಳು ಬಿಜೆಪಿಗೆ ಪೂರ್ಣ ಬಹುಮತ ಇಲ್ಲ ಎಂದು ತೋರಿಸಿರುವಾಗ ಅದಕ್ಕೆ ನಗ್ನ “ಕುದುರೆ ವ್ಯಾಪಾರ”ದಲ್ಲಿ ತೊಡಗಲು ಮತ್ತು ಹಣಬಲದಿಂದ ಬಹುಮತವನ್ನು ಜಮಾಯಿಸಲು ಕಾಲಾವಕಾಶ ನೀಡಲಾಗುತ್ತಿದೆ ಎಂದು ಅದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ.
ಪ್ರಸಕ್ತ ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಿಸಿರುವ ರಾಜ್ಯಪಾಲರುಗಳು, ಈ ಹಿಂದೆ ವಿಧಾನಸಭೆಯಲ್ಲಿ ಪಕ್ಷಗಳು ಮಾಡಿಕೊಂಡ ಚುನಾವಣೋತ್ತರ ಏರ್ಪಾಡಿನ ಆಧಾರದಲ್ಲಿ ಸರಕಾರದ ಪ್ರತಿಜ್ಞೆ ಸ್ವೀಕಾರ ಮಾಡಿಸುವ ಸೂತ್ರವನ್ನು ಅನುಸರಿಸಿದ್ದಾರೆ ಎಂದು ಸಿಪಿಐ(ಎಂ) ನೆನಪಿಸಿದೆ.
ಗೋವಾ ವಿಧಾನಸಭೆಗೆ ಮಾರ್ಚ್ 2017ರಲ್ಲಿ ನಡೆದ ಚುನಾವಣೆಗಳಲ್ಲಿ ೪೦ ಸದಸ್ಯರಿರುವ ಸದನದಲ್ಲಿ ಕಾಂಗ್ರೆಸ್ಗೆ 17 ಸ್ಥಾನಗಳು ಸಿಕ್ಕಿದ್ದರೆ, ಬಿಜೆಪಿಗೆ 13 ಸ್ಥಾನಗಳು ಸಿಕ್ಕಿದವು. ಆದರೆ ಬಿಜೆಪಿಯನ್ನು ಅದು ಇತರ ಪಕ್ಷಗಳೊಂದಿಗೆ ಚುನಾವಣೆಯ ನಂತರ ಮೈತ್ರಿ ಮಾಡಿಕೊಂಡಾಗ ಸರಕಾರ ರಚಿಸಲು ಆಮಂತ್ರಿಸಲಾಯಿತು.
ಅದೇ ರೀತಿಯಲ್ಲಿ, ೬೦ ಸದಸ್ಯರರುವ ಮಣಿಪುರ ವಿಧಾನ ಸಭೆಗೆ ೨೦೧೭ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ೨೮ರಲ್ಲಿ ಗೆದ್ದಿತ್ತು. ಬಿಜೆಪಿ ೨೧ ಸೀಟುಗಳನ್ನು ಗೆದ್ದಿತ್ತು. ಆದರೆ ಬಿಜೆಪಿ ಮಾಡಿಕೊಂಡ ಚುನಾವಣೋತ್ತರ ಏರ್ಪಾಡಿನ ಆಧಾರದಲ್ಲಿ ಅದನ್ನು ಸರಕಾರ ರಚಿಸಲು ಆಹ್ವಾನಿಸಲಾಯಿತು.
ಮಾರ್ಚ್ ೨೦೧೮ರಲ್ಲಿ ಮೇಘಾಲಯ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ 60ರಲ್ಲಿ 21 ಪಡೆದಿತ್ತು, ಬಿಜೆಪಿ ಪಡೆದದ್ದು ೨ ಮಾತ್ರ. ಆದರೂ, ರಾಜ್ಯಪಾಲರು ಬಿಜೆಪಿಯನ್ನೇ ಒಂದು ಚುನಾವಣಾ ನಂತರದ ಏರ್ಪಾಡು ಬಹುಮತವನ್ನು ತೋರಿಸಿದೆ ಎಂಬ ಆಧಾರದಲ್ಲಿ ಸರಕಾರ ರಚಿಸಲು ಆಹ್ವಾನಿಸಿದರು.
ಕರ್ನಾಟಕದ ಪ್ರಸಕ್ತ ಉದಾಹರಣೆಯಲ್ಲಿ, ಕಾಂಗ್ರೆಸ್-ಜನತಾದಳ (ಜಾತ್ಯತೀತ) ಮೈತ್ರಿಕೂಟ ೨೨೨ ಚುನಾಯಿತ ಶಾಸಕರಿರುವ ವಿಧಾನಸಭೆಯಲ್ಲಿ ಒಂದು ಸ್ಪಷ್ಟ ಬಹುಮತ ಪಡೆದಿದೆ. ಆದ್ದರಿಂದ ಮೇಲೆ ಹೇಳಿದ ರಾಜ್ಯ ಚುನಾವಣೆಗಳಲ್ಲಿ ಮಾಡಿದಂತೆ ಚುನಾವಣಾ ನಂತರದ ಮೈತ್ರಿಕೂಟ ಮುಖ್ಯಮಂತ್ರಿಯಾಗಿ ಸೂಚಿಸುವವರು ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ಅವರಿಗೆ ತಕ್ಷಣವೇ ಸುಪ್ರಿಂ ಕೊರ್ಟ್ ತೀರ್ಪುಗಳ ಪ್ರಕಾರ ಸದನದಲ್ಲಿ ಬಹುಮತ ಸಾಬೀತುಪಡಿಸಲು ಹೇಳಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ಇದರಲ್ಲಿ ವಿಳಂಬ ಮಾಡುವುದೆಂದರೆ, ರಾಜ್ಯಪಾಲರ ಸಂವಿಧಾನಿಕ ಹುದ್ದೆಯನ್ನು ನಗ್ನ ಕುದುರೆ ವ್ಯಾಪಾರಕ್ಕೆ ಸಮಯ ಖರೀದಿಸಲು ದುರುಪಯೋಗ ಪಡಿಸಲಾಗುತ್ತಿದೆ ಎಂದೇ ಅರ್ಥವಾಗುತ್ತದೆ, ಇದು ಪ್ರಜಾಪ್ರಭುತ್ವ-ವಿರೋಧಿ ಎಂಬುದು ಸುಸ್ಪಷ್ಟ ಎಂದು ಒತ್ತಿ ಹೇಳಿದೆ.