ಪತ್ರಿಕಾ ಹೇಳಿಕೆ : 18.05.2018
ಕರ್ನಾಟಕ ಸರಕಾರ ರಚನೆಗೆ ಅಗತ್ಯ ಸಂಖ್ಯಾ ಬಲ ಕನಿಷ್ಟ 112 ಬೇಕಿರುವಾಗ, 104 ಮಾತ್ರವೇ ಸಂಖ್ಯಾಬಲ ಹೊಂದಿರುವ ಮತ್ತು ಶೇ.36 ಮಾತ್ರ ಜನಮತಗಳಿಸಿದ ಬಿಜೆಪಿಗೆ, ಅದರ ಮುಖಂಡರಾದ ಶ್ರೀ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಟ್ಟ ರಾಜ್ಯಪಾಲ ಶ್ರೀ ವಜುಬಾಯಿ ವಾಲಾ ರವರ ವಿವೇಚನಾರಹಿತ ಕ್ರಮವನ್ನು ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸವಾದಿ) ಯ ಕರ್ನಾಟಕ ರಾಜ್ಯ ಸಮಿತಿಯು ಇದೊಂದು ಸಂವಿಧಾನ ಹಾಗೂ ಪ್ರಜಾಸತ್ತೆಯ ವಿರೋಧಿ ಕೃತ್ಯವಾಗಿದೆಯೆಂದು ಬಲವಾಗಿ ಖಂಡಿಸುತ್ತದೆ.
ಅಗತ್ಯ ಸಂಖ್ಯಾಬಲ ಮತ್ತು ಜನಮತ ಬಿಜೆಪಿ ಪರವಾಗಿಲ್ಲದಿದ್ದರೂ, ತನಗೆ ಸರಕಾರ ರಚಿಸಲು ರಾಜ್ಯದ ಜನತೆ ಜನಮತ ನೀಡಿದ್ದಾರೆಂದು, ಬಿಜೆಪಿ ಮುಖಂಡರು ರಾಜ್ಯದ ಜನತೆಯ ಮುಂದೆ ನಾಚಿಕೆಯಿಲ್ಲದೇ ಸುಳ್ಳು ಹೇಳುತ್ತಿರುವುದು ಖಂಡನಾರ್ಹವಾಗಿದೆ.
ಮಾತ್ರವಲ್ಲಾ, ಅದು ತನ್ನ ಆಧಿಕಾರ ದುರುಪಯೋಗ ಮಾಡುವ ಮೂಲಕ ಮತ್ತು ಪ್ರಜಾಸತ್ತೆಯನ್ನು ಗಾಳಿಗೆ ತೂರಿ ಕುದುರೆ ವ್ಯಾಪಾರವನ್ನು ಪ್ರಚೋಧಿಸುವ ಮೂಲಕ, ಸರಕಾರ ರಚಿಸಲು ಮುಂದಾದ ಈ ಕ್ರಮವು ಅದರ ಜನವಿರೋಧಿ ಅಧಿಕಾರ ದಾಹವನ್ನು ಎತ್ತಿ ತೋರಿದೆ.
ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ವಿಶ್ವಾಸವಿಟ್ಟು ಬಹುಮತ ನೀಡದೇ ಹೋದುದರಿಂದ ಅತಂತ್ರ ಪರಿಸ್ತಿತಿ ಉಂಟಾಯಿತು. ಈ ಅತಂತ್ರ ಪರಿಸ್ತಿತಿಯನ್ನು ನಿವಾರಿಸಲು ಮತ್ತು ಕೋಮುವಾದಿ ಹಾಗೂ ಸರ್ವಾದಿಕಾರಿ ಬಿಜೆಪಿಯನ್ನು ಅದಿಕಾರದಿಂದ ದೂರವಿಡಲು, ಕಾಂಗ್ರೆಸ್ ಪಕ್ಷವು ಬೇಷರತ್ ಆಗಿ, ಜಾತ್ಯಾತೀತ ಜನತಾದಳ ಪಕ್ಷಕ್ಕೆ ಬೆಂಬಲವನ್ನು ಘೋಷಿಸಿತು. ಜಾತ್ಯಾತೀತ ಜನತಾದಳ ಪಕ್ಷವು ಅದನ್ನು ಒಪ್ಪಿ, ಎರಡೂ ಪಕ್ಷಗಳ (ಕಾಂಗ್ರೆಸ್-78+ಜೆಡಿಎಸ್-38=116)ಶಾಸಕರ ಬಹುಮತದ ಬೆಂಬಲದೊಂದಿಗೆ ಜಾತ್ಯಾತೀತ ಜನತಾದಳ ಪಕ್ಷದ ಮುಖಂಡರಾದ ಶ್ರೀ ಕುಮಾರ ಸ್ವಾಮಿಯವರು ಸರಕಾರ ರಚಿಸಲು ರಾಜ್ಯಪಾಲರ ಅನುಮತಿ ಕೋರಿದ್ದು ಸಮರ್ಪಕವಾಗಿತ್ತು.
ಈ ಅತಂತ್ರ ಪರಿಸ್ತಿತಿಯನ್ನು ತಡೆಯಲು ಮತ್ತು ಜನತೆಯ ಮೇಲೆ ತಕ್ಷಣ ಮತ್ತೊಂದು ಚುನಾವಣೆಯನ್ನು ಹೇರುವುದನ್ನು ತಡೆಯಲು ಇದು ಅಗತ್ಯವಿತ್ತು. ಇದನ್ನು ಸಿಪಿಐ(ಎಂ) ಸ್ವಾಗತಿಸಿತ್ತು.
ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವೆಂಬ ಕಾರಣಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರೂ ಶ್ರೀ ಯಡಿಯೂರಪ್ಪನವರು ಬಹುಮತ ತನಗಿರುವುದನ್ನು ಹೇಳಲಾಗಲಿಲ್ಲ. ಬಹುಮತವಿಲ್ಲವೆಂಬ ಕಾರಣಕ್ಕೆ ನಿರಾಷೆಹೊಂದಿದ ಅವರು ಅಜ್ಞಾತ ಸ್ಥಳವನ್ನು ಸೇರಿದ್ದರು.
ಆದರೇ ರಾಜ್ಯಪಾಲರು ಪ್ರಮಾಣ ವಚನಕ್ಕೆ ಯಾರನ್ನು ಕರೆಯಬೇಕೆಂದು ನಿರ್ಧರಿಸಿ ಪ್ರಕಟಿಸುವ ಮುನ್ನವೇ, ದೆಹಲಿಯಿಂದ ಬಂದಿಳಿದ ಬಿಜೆಪಿಯ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳು ಪತ್ರಿಕಾ ಗೋಷ್ಠಿಗಳನ್ನು ನಡೆಸಿ ಮತ್ತು ಹೇಳಿಕೆಗಳನ್ನು ನೀಡುತ್ತಾ ಯಡೆಯೂರಪ್ಪನವರೇ 17.05.2018ರಂದು ಮದ್ಯಾಹ್ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು 16.05.2018 ರಂದು ಮದ್ಯಾಹ್ನ ಪ್ರಕಟಿಸುವ ಮೂಲಕ ರಾಜ್ಯಪಾಲರ ಮೇಲೆ ಬಹಿರಂಗವಾಗಿ ಒತ್ತಡ ಹೇರಿದರು. ಇದೆಲ್ಲವೂ ಪೂರ್ವಯೋಜಿತ ಸಂಚಾಗಿತ್ತು. ಈ ಎಲ್ಲವೂ ಪ್ರಜಾಸತ್ತೆಯನ್ನು ಗಾಳಿಗೆ ತೂರುವ ಮತ್ತು ಜನವಿರೋಧಿ ಅದಿಕಾರದಾಹದ, ಅದರ ಅದಿಕಾರ ದುರುಪಯೋಗವನ್ನು ಬಯಲು ಪಡಿಸಿತ್ತು.
ಇದೀಗ ಸಂವಿದಾನ ಬಾಹಿರ ಕೃತ್ಯದಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪನವರಿಗೆ ಯಾವುದೆ ರೀತಿಯಲ್ಲಿ ಬಹುಮತದ ಸಂಖ್ಯಾಬಲವಿಲ್ಲದಿದ್ದರೂ, ಸದನದಲ್ಲಿ ಬಹುಮತವನ್ನು ಸಾಬೀತು ಪಡಿಸಲು ರಾಜ್ಯಪಾಲರು 15 ದಿನಗಳ ಸಮಯಾವಕಾಶವನ್ನು ನೀಡಿರುವುದು ಬಹಳ ಸ್ಪಷ್ಟವಾಗಿ ಬಿಜೆಪಿ ಅಕ್ರಮಗಳ ಮೂಲಕ ಬಹುಮತ ಸಾಬೀತುಪಡಿಸಲು ಅವಕಾಶಗಳನ್ನು ಉಂಟು ಮಾಡಿದೆ. ಇಡೀ ದೇಶವೇ ನಾಚುವಂತೆ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇದು ಅನುವು ಮಾಡಿದೆ. ಈ ಮೂಲಕ ರಾಜ್ಯದ ಗಣಿ ಹಾಗೂ ಭೂಮಾಫಿಯಗಳು ಸಕ್ರಿಯಗೊಳ್ಳುವಂತಾಗಿದೆ. ಇದು ರಾಜ್ಯವನ್ನು ಮತ್ತೊಮ್ಮೆ ಅದೋಗತಿಯತ್ತ ತಳ್ಳುವ ಅಪಾಯವನ್ನು ತಂದಿದೆ.
ಆದ್ದರಿಂದ, ರಾಜ್ಯದ ಮತದಾರರು ಮತ್ತು ನಾಗರೀಕರು ಬಿಜೆಪಿಯ ಈ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಿಲುಮೆಗಳನ್ನು ಹಾಗೂ ಅದರ ಅಧಿಕಾರ ದಾಹವನ್ನು ಮತ್ತು ರಾಜ್ಯವನ್ನು ಅವನತಿಯತ್ತ ತಳ್ಳುವ ಭೂ-ಗಣಿ ಮಾಫಿಯಾಗಳ ಪರವಾದ ಅದರ ನಿಲುಮೆಗಳನ್ನು ಗಮನಿಸಿ, ತೀವ್ರವಾಗಿ ಪ್ರತಿಭಟಿಸಲು ಸಿಪಿಐ(ಎಂ) ಕರೆ ನೀಡುತ್ತದೆ.
ವಿಜೆಕೆ ನಾಯರ್ , ರಾಜ್ಯ ಮುಖಂಡರು
ಎಸ್. ವರಲಕ್ಷ್ಮಿ, ರಾಜ್ಯ ಮುಖಂಡರು
ಯು.ಬಸವರಾಜ, ರಾಜ್ಯ ಮುಖಂಡರು
ಜಿ.ವಿ. ಶ್ರೀರಾಮರೆಡ್ಡಿ, ರಾಜ್ಯ ಕಾರ್ಯದರ್ಶಿಗಳು