ಸರಿಯಾದ ಸಮಯದಲ್ಲಿ ಸುಪ್ರಿಂ ಕೋರ್ಟ್ ಮಧ್ಯಪ್ರವೇಶದಿಂದಾಗಿ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಗಳನ್ನು ಸಿಪಿಐ(ಎಂ) ಸ್ವಾಗತಿಸಿದೆ. ಯಡಿಯೂರಪ್ಪನವರು ರಾಜೀನಾಮೆ ನೀಡಬೇಕಾದ ಬಲವಂತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಇಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ವಿಧಿ-ವಿಧಾನಗಳನ್ನು ಬುಡಮೇಲು ಮಾಡುವ ಆಟ ಸಾಗಲಿಲ್ಲ. ಬಿಜೆಪಿ-ಆರೆಸ್ಸೆಸ್ ಮುಖಂಡರಿಗೆ ಕಪಾಳಮೋಕ್ಷ ವಾಗಿದ ಎಂದು ಅದು ವರ್ಣಿಸಿದೆ.
“ಆರೆಸ್ಸೆಸ್-ಬಿಜೆಪಿ ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವವನ್ನು ಅಪಹರಿಸಲು ಮಾಡಿದ ಪ್ರಯತ್ನ ಸೋತಿದೆ. ಈ ಆರೆಸ್ಸೆಸ್-ಬಿಜೆಪಿ ಸರಕಾರವನ್ನು ಅಧಿಕಾರದಿಂದ ಹೊರದಬ್ಬುವುದು ಈಗಿನ ಅತ್ಯುನ್ನತ ಆದ್ಯತೆ” ಎಂದು ಕಣ್ಣೂರಿನಲ್ಲಿ ಇ.ಕೆ.ನಾಯನಾರ್ ಅಕಾಡೆಮಿಯನ್ನು ಉದ್ಘಾಟಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಹೇಳಿದ್ದಾರೆ.
ಈ ಮೊದಲು ಕರ್ನಾಟಕದ ಮೇ 19ರ ಬೆಳವಣಿಗೆಗಳ ಬಗ್ಗೆ ಟ್ವೀಟ್ಗಳಲ್ಲಿ ಅವರು ಹೀಗೆ ಹೇಳಿದ್ದಾರೆ:
-
ಮೋದಿಯವರ ನೋಟುರದ್ದತಿ 1000ರೂ.ಗಳ ನೋಟುಗಳನ್ನು ಒಯ್ದು 2000ರೂ. ನೋಟುಗಳನ್ನು ತಂದಿತು. ಬಿಜೆಪಿಗೆ ‘ಈಸ್ ಆಫ್ ಬಿಸಿನೆಸ್’( ವ್ಯಾಪಾರದಲ್ಲಿ ಸುಗಮತೆ) ಎಂದರೆ ತಮ್ಮ ಪಕ್ಷಕ್ಕೆ ಎಂಎಲ್ಎ ಗಳನ್ನು ಖರೀದಿಸುವುದು.
-
ಜನಾರ್ಧನ ರೆಡ್ಡಿಯವರು ಒಬ್ಬ ಶಾಸಕನಿಗೆ “ಯಾವ ಹುದ್ದೆ ಬೇಕೋ ಅದು ನಿಮ್ಮದಾಗುತ್ತೆ” ಎಂದಿರುವ ಆಡಿಯೋ ಇದೆಯಂತೆ. ನೋಟುರದ್ಧತಿ ಕಪ್ಪು ಹಣವನ್ನು ಕೊಂದಿದೆ ಎಂದು ಮೋದಿ ಎದೆ ತಟ್ಟಿಕೊಂಡಿದ್ದರು. ಹಾಗಿದ್ದರೆ ಈ ಹಣ ಎಲ್ಲಿಂದ ಬಂತು? ಇದು ಸ್ಪಷ್ಟವಾಗಿ ಹಣಕಾಸು ಮತ್ತು ರಾಜಕೀಯ ಭ್ರಷ್ಟಾಚಾರದ ಪ್ರಕರಣ, ಇದರ ಎಳೆಗಳು ನೇರವಾಗಿ ಮೋದಿ-ಷಾ ದ್ವಯರ ಮೂಲಕ್ಕೇ ಹೋಗುತ್ತವೆ.
-
ರಾಜಕೀಯ ಮತ್ತು ಸಂವಿಧಾನಿಕ ನೈತಿಕತೆ ಮೋದಿಯವರಿಂದ ನಿರೀಕ್ಷಿಸಲಾಗದ ಒಂದು ಸಂಗತಿ. ಅವರು ಪ್ರತಿಯೊಂದು ಭಾರತೀಯ ಸಂಸ್ಥೆಯನ್ನು ಧ್ವಂಸ ಮಾಡಲು ಕಟಿಬದ್ಧರಾಗಿರಬಹುದು, ಆದರೆ ಅವರಿಗೆ ದೇಶದೆಲ್ಲೆಡೆ ಎಲ್ಲ ಪ್ರಗತಿಶೀಲ ಶಕ್ತಿಗಳಿಂದ ಭೀಷಣ ಪ್ರತಿರೋಧ ಎದುರಾಗುತ್ತದೆ.
-
ಬಿಜೆಪಿಯ ಭ್ರಷ್ಡ ಮತ್ತು ಕ್ರಿಮಿನಲ್ ಹೂಟಗಳನ್ನು ಸೋಲಿಸಲಾಗಿದೆ. ಬಿಜೆಪಿ ಗೆ ಒಂದು ಸರಕಾರವನ್ನು ರಚಿಸಲು ಆಹ್ವಾನ ನೀಡುವ ರಾಜ್ಯಪಾಲರ ನಿರ್ಧಾರ ದುರ್ಬುದ್ಧಿಯಿಂದ ಕೂಡಿತ್ತು, ಮತ್ತು ಸಂವಿಧಾನ ಕೊಡಮಾಡಿರುವ ಅಧಿಕಾರಕ್ಕೆವಿರುದ್ಧವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ.
-
ಕರ್ನಾಟಕದ ರಾಜ್ಯಪಾಲರಲ್ಲಿ ಏನಾದರೂ ನಾಚಿಕೆ ಉಳಿದಿದ್ದರೆ ಅವರೂ ರಾಜೀನಾಮೆ ಸಲ್ಲಿಸಬೇಕು. ಬೆಂಗಳೂರಿನಲ್ಲಿ ಕೂತು ಭ್ರಷ್ಟ ವ್ಯವಹಾರಗಳಿಗೆ ಸೌಕರ್ಯ, ಅವಕಾಶ ಕಲ್ಪಿಸುತ್ತಿದ್ದ ಕೇಂದ್ರ ಮಂತ್ರಿಗಳೂ ದಂಡನಾರ್ಹರೇ.
-
ಜನಾದೇಶವನ್ನು ಬುಡಮೇಲು ಮಾಡಲು ಕಪ್ಪು ಹಣ ಮತ್ತು ಭ್ರಷ್ಟ ಕ್ರಿಮಿನಲ್ ಗಳನ್ನು ಬಳಸಿಕೊಂಡು ಮಾಡಿರುವ ಎಲ್ಲ ಪ್ರಜಾಪ್ರಭುತ್ವ ಸಂಸ್ಥೆಗಳ ದುರುಪಯೋಗ ಮತ್ತು ಎಲ್ಲ ಸಂವಿಧಾನಿಕ ವಿಧಿ-ವಿಧಾನಗಳ ಉಲ್ಲಂಘನೆಗಳನ್ನು ಮರೆಯಲಾಗದು. ಇದು ಕರ್ನಾಟಕದ ಆಚೆಗೂ ಹೋಗುವಂತದ್ದು.