ಬಿಜೆಪಿ ಐಟಿ ತಂಡದ ಮುಖ್ಯಸ್ಥ ಅಮಿತ್ ಮಾಲವೀಯ ಮೇ 18ರಂದು ತ್ರಿಪುರಾದ ಹಾಲಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್(ಹೌದು, ಎರಡು ತಿಂಗಳಲ್ಲೇ ಏಳು ಆಭಾಸಕಾರೀ ಹೇಳಿಕೆಗಳ “ಖ್ಯಾತಿ’ಯ ವ್ಯಕ್ತಿ!) ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಫೋಟೋ ಹಾಕಿ ಹೀಗೆ ಟ್ವೀಟ್ ಮಾಡಿದ್ದಾರೆ.
“ಇದು ತ್ರಿಪುರಾದ ಮೊದಲ ನೆರೆ ಖಂಡಿತ ಆಗಿರಲಿಕ್ಕಿಲ್ಲ. ಆದರೆ ಒಂದು ರಾಜ್ಯದ ಮುಖ್ಯಮಂತ್ರಿ ನೆರೆ ಪರಿಹಾರದ ಕೆಲಸದ ಉಸ್ತುವಾರಿ ಮಾಡಲು ಹೋಗಿರುವುದು ಖಂಡಿತ ಇದು ಮೊದಲ ಬಾರಿ. ಮಾಧ್ಯಮಗಳು ಇದನ್ನು ವರದಿ ಮಾಡುವುದಿಲ್ಲ. ಏಕೆಂದರೆ ಅದು ಅವರ ಕಣ್ಮಣಿ , ಅಧಿಕಾರದಿಂದ ಹೊರಹಾಕಲ್ಪಟ್ಟ ಮಾಣಿಕ್ ಸರ್ಕಾರ್ ಎಷ್ಟು ಕಳಪೆ ಎಂದು ತೋರಿಸುತ್ತದೆ.”
ಮೇಲೆ ಪಕ್ಕದಲ್ಲಿರುವ ಸಿಪಿಐ(ಎಂ)ನ ಸಪ್ಟಂಬರ್ 4, 2017 ರ ಟ್ವೀಟ್ನಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ರಾತ್ರಿಯ ವೇಳೆಯಲ್ಲೂ ಸುರಿವ ಮಳೆಯ ನಡುವೆಯೇ ನೆರ ಪರಿಹಾರ ಕಾರ್ಯದ ನಿರೀಕ್ಷಣೆ ಮಾಡುತ್ತಿರುವ ಎರಡು ಫೋಟೋಗಳನ್ನು ಕಾಣಬಹುದು. ಟ್ವೀಟ್ ಹೀಗಿದೆ:
“ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೆರೆ ಪರಿಹಾರ ಕಾಯಾಚರಣೆಗಳ ಉಸ್ತುವಾರಿಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ತ್ರಿಪುರಾದ ಜನತೆಗಾಗಿ ಹಗಲಿರುಳು ಕೆಲಸ” ಮಾಲವೀಯ ತಮ್ಮ ಯುವ ಮುಖ್ಯಮಂತ್ರಿಗಳ ಆಭಾಸಗಳನ್ನು ತೊಳೆಯಲು ಬೇರೇನಾದರೂ ಉದಾಹರಣೆ ಹುಡುಕಬೇಕು.
ಹಾಗೆ ನೋಡಿದರೆ ಅಮಿತ್ ಮಾಲವಿಯ ತಮ್ಮದೇ ಕಣ್ಮಣಿ ಮುಖ್ಯಮಂತ್ರಿಗಳನ್ನೂ ನಿರ್ಲಕ್ಷಿಸಿದ್ದಾರೆ. ಈ ಕೆಳಗಿನದ್ದು ಆಗಸ್ಟ್ 21, 2016ರ ಫೋಟೋ- ಮಧ್ಯಪ್ರದೇಶದ ಮುಖ್ಯಮಂತ್ರಿ(ವ್ಯಾಪಂ ‘ಖ್ಯಾತಿ’ಯ) ಶಿವರಾಜ್ ಸಿಂಗ್ ಚೌಹಾಣ್ ರವರ ನೆರೆಪೀಡಿತ ಪ್ರದೇಶಗಳ ಭೇಟಿಯದ್ದು.
ಇದೂ ಮಾಹಿತಿ ಪರಿಣಿತರ ಮಾಹಿತಿಹೀನತೆಯ ಮತ್ತೊಂದು ಉದಾಹರಣೆಯೋ ಅಥವ ಈ ಫೋಟೋ ಪ್ರದರ್ಶಿಸುತ್ತಿರುವ ಆಭಾಸವೇ ಕಾರಣವೋ ಗೊತ್ತಿಲ್ಲ.
ಏನೇ ಅಗಲಿ, ಕಳೆದ ನಾಲ್ಕ ವರ್ಷಗಳಿಂದ ಆಭಾಸಕಾರೀ ಹೇಳಿಕೆಗಳನ್ನು ಕೊಟ್ಟೂ ಅರಗಿಸಿಕೊಂಡಿರುವ ‘ಪ್ರಧಾನ ಸೇವಕರು’ ಹಾಕಿಕೊಡುತ್ತಿರುವ ಪರಂಪರೆ ಮುಂದುವರೆಯಬೇಕು ತಾನೇ?