ಸಿಪಿಐ(ಎಂ) ಪೊಲಿಟ್ಬ್ಯುರೊ ಕರ್ನಾಟಕದಲ್ಲಿನ ಬೆಳವಣಿಗೆಗಳನ್ನು ಸ್ವಾಗತಿಸುತ್ತ ಬಿಜೆಪಿ/ಆರೆಸ್ಸೆಸ್ ನ ಕುದುರೆ ವ್ಯಾಪಾರದ ಮೂಲಕ ಒಂದು ಬಹುಮತವನ್ನು ಹೆಣೆಯುವ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದೆ. ಬಿಜೆಪಿ ಚುನಾವಣೆಗಳಲ್ಲಿ ಸೋತ ನಂತರವೂ ಸರಕಾರಗಳನ್ನು ರಚಿಸುವುದನ್ನು ಚಾಳಿಯಾಗಿ ಮಾಡಿಕೊಂಡಿದೆ. ಗೋವ, ಮಣಿಪುರ, ಮೇಘಾಲಯದಲ್ಲಿ ಇದನ್ನು ಮಾಡಿದರು.
ಬಿಹಾರದಲ್ಲಿ ಜನಾದೇಶವನ್ನು ವಂಚಿಸಿ ಸರಕಾರದ ಒಳಹೊಕ್ಕರು. ಕರ್ನಾಟಕದಲ್ಲಿ ಅದು ಗಳಿಸಿದ್ದು 36.2% ಮತಗಳು. ಈಗ ಅಧಿಕಾರವಹಿಸಿಕೊಳ್ಳುತ್ತಿರುವ ಪಕ್ಷಗಳು ಒಟ್ಟಾಗಿ 56.6% ಮತ ಗಳಿಸಿವೆ ಎಂದು ಮೇ 21ರಂದು ದಿಲ್ಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಪೊಲಿಟ್ಬ್ಯುರೊ ಗಮನಿಸಿದೆ. ಇದು ಪಕ್ಷದ 22ನೇ ಮಹಾಧಿವೇಶನದಲ್ಲಿ ಆರಿಸಲ್ಪಟ್ಟ ಪೊಲಿಟ್ಬ್ಯುರೊದ ಮೊದಲ ಸಭೆಯಾಗಿತ್ತು.
ಬೆಂಗಳೂರಿನಲ್ಲಿ ಮೇ 23ರ ಪ್ರತಿಜ್ಞಾ-ಸ್ವೀಕಾರ ಸಮಾರಂಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಮತ್ತು ಇನ್ನೊಬ್ಬ ಪೊಲಿಟ್ಬ್ಯುರೊ ಸದಸ್ಯರು ಮತ್ತು ಕೇರಳದ ಮುಖ್ಯಮಂತ್ರಿಗಳೂ ಆಗಿರುವ ಪಿಣರಾಯಿ ವಿಜಯನ್ ಭಾಗವಹಿಸುತ್ತಿದ್ದಾರೆ.
ಜನಗಳ ಮೇಲೆ ಅಸಹನೀಯ ಆರ್ಥಿಕ ಹೊರೆಗಳು
ಈ ಬಿಜೆಪಿ ಸರಕಾರ ಅನುಸರಿಸುತ್ತಿರುವ ಧೋರಣೆಗಳಿಂದಾಗಿ ನಮ್ಮ ಬಹುಪಾಲು ಜನಗಳ ಜೀವನೋಪಾಯಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಇರುವ ಬಗ್ಗೆ ಪೊಲಿಟ್ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಇದುವರೆಗಿನ ಅತ್ಯುನ್ನತ ಮಟ್ಟವನ್ನು ತಲುಪಿವೆ. ಗ್ರಾಮೀಣ ಸಂಕಟ ಉಲ್ಬಣಗೊಳ್ಳುತ್ತಲೇ ಇದೆ. ಗ್ರಾಮೀಣ ಆರ್ಥಿಕ ಪರಿಸ್ಥಿತಿ ಸರಕಾರದ ಕಳೆದ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಂಡಿರದಷ್ಟು ವಿನಾಶಕಾರಿಯಾಗಿದೆ. ಗ್ರಾಮೀಣ ಕೂಲಿ ಬೆಳವಣಿಗೆ ದರ ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕನಿಷ್ಟಕ್ಕಿಳಿದಿದೆ. ಅಡುಗೆ ಅನಿಲದ ಅಗತ್ಯವುಳ್ಳವರಿಗೆ ಸಬ್ಸಿಡಿಗಳನ್ನು ಕೊಡಲಾಗುತ್ತಿದೆ ಎಂದು ಜಾಹೀರಾತುಗಳಲ್ಲಿ ಹೇಳಿಕೊಳ್ಳುತ್ತಿದ್ದರೂ ಅನಿಲ ಸಿಲಿಂಡರಿನ ಬೆಲೆ ಗಮನಾರ್ಹವಾಗಿ ಏರುತ್ತ ಬಂದಿದೆ.
ದೇಶದ ಆರ್ಥಿಕತೆಗೆ ನೋಟುರದ್ಧತಿ ಮತ್ತು ಜಿಎಸ್ಟಿಯ ದ್ವಿಮುಖ ದಾಳಿಯಿಂದ ಚೇತರಿಸಿಕೊಳ್ಳಲು ಇನ್ನೂ ಆಗಿಲ್ಲ. ಆದರೆ ಅದೇ ವೇಳೆಯಲ್ಲಿ, ಈ ಬಿಜೆಪಿ ಸರಕಾರ ತನ್ನ ಚಮಚಾ ಕಾರ್ಪೊರೇಟ್ ಗಳು ಮರುಪಾವತಿ ಮಾಡದ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುತ್ತಲೇ ಇದೆ. ಈ ಕಾರ್ಪೊರೇಟ್ಗಳು ಬ್ಯಾಂಕುಗಳಿಂದ ತಗೊಂಡಿರುವ 11 ಲಕ್ಷ ಕೋಟಿ ರೂ.ಗಳಿಗೂ ಮೀರಿದ ಸಾಲಗಳನ್ನು ಹಿಂದಿರುಗಿಸಲು ನಿರಾಕರಿಸುತ್ತಿವೆ ಎಂದು ವಿಶ್ಲೇಷಿಸಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಜನಗಳ ಜೀವನಾಧಾರಗಳ ಮೇಲಿನ ನಿರಂತರ ದಾಳಿಗಳ ವಿರುದ್ಧ ಜನಗಳನ್ನು ಅಣಿನೆರೆಸಬೇಕು ಮತ್ತು ಪ್ರತಿಭಟನೆಗಳನ್ನು ಸಂಘಟಿಸಬೇಕು ಎಂದು ತನ್ನೆಲ್ಲ ಘಟಕಗಳಿಗೆ ಕರೆ ನೀಡಿದೆ.
ತ್ರಿಪುರಾದಲ್ಲಿ ದಾಳಿಗಳು ನಿಲ್ಲದ ಸಾಗಿವೆ
ತ್ರಿಪುರಾದಲ್ಲಿ ಬಿಜೆಪಿ/ಆರೆಸ್ಸೆಸ್ ಅಧಿಕಾರ ವಹಿಸಿಕೊಂಡಂದಿನಿಂದ ಸತತವಾಗಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಮೇಲೆ ದಾಳಿಗಳನ್ನು ನಡೆಸುತ್ತಿದೆ ಎಂದು ಗಮನಿಸಿದ ಪೊಲಿಟ್ಬ್ಯುರೊ ಈ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದೆ. ಈ ಅವಧಿಯಲ್ಲಿ ಇಬ್ಬರು ಸಂಗಾತಿಗಳ ಹತ್ಯೆಯಾಗಿದೆ, ಸುಮಾರು 50 ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಿದ್ದಾರೆ, ಅಲ್ಲದೆ ಪಕ್ಷದ ಮತ್ತು ಸಾಮೂಹಿಕ ಸಂಘಟನೆಗಳ ಕಚೇರಿಗಳಿಂದ ಎಬ್ಬಿಸುವುದು/ ಬಲವಂತವಾಗಿ ಆಕ್ರಮಿಸಿಕೊಳ್ಳುವುದು ನಡೆಯುತ್ತಿದೆ. ಈ ನಿರಂತರ ದಾಳಿಗಳಿಂದಾಗಿ ಸುಮಾರು 500 ಸಂಗಾತಿಗಳು ಪಕ್ಷದ ಕಚೇರಿಗಳಲ್ಲಿ ನಿರ್ಮಿಸಿರುವ ಕ್ಯಾಂಪ್ಗಳಿಗೆ ತಮ್ಮ ವಾಸವನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ ಕೊಳ್ಳಬೇಕಾಗಿ ಬಂದಿದೆ.
ಎಡ ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆಗಳು ಮಾತ್ರವೇ ಅಲ್ಲ, ಪಕ್ಷದ ಮತ್ತು ಇತರ ಎಡಪಂಥೀಯರ ಕಾರ್ಯಕ್ರಮಗಳು, ಸಮಾರಂಭಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಮೇದಿನಾಚರಣೆಯನ್ನೂ ರಾಜ್ಯದ ಹಲವು ಭಾಗಗಳಲ್ಲಿ ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸಲಾಗಿದೆ. ಪಕ್ಷ ನಡೆಸುತ್ತಿರುವ ದಿನಪತ್ರಿಕೆ ‘ದೇಶೇರ್ ಕಥಾ’ ಕೂಡ ದಾಳಿಗೆ ಗುರಿಯಾಗಿದೆ. ಅದನ್ನು ಸಾಗಿಸುವವರು ಮತ್ತು ಚಂದಾದಾರರನ್ನು ಬೆದರಿಸಲಾಗುತ್ತಿದೆ.
ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿಯೂ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಪ್ರಧಾನರು, ಅಧ್ಯಕ್ಷರು ಮತ್ತು ಸದಸ್ಯರು ರಾಜೀನಾಮೆ ನೀಡುವಂತೆ , ಇಲ್ಲವೇ ಬಿಜೆಪಿ ಸೇರುವಂತೆ ಬಲವಂತ ಹೇರಲಾಗುತ್ತಿದೆ.
ಇದರಲ್ಲಿ ರಾಜ್ಯ ಆಢಳಿತವನ್ನೂ ಶಾಮೀಲು ಮಾಡಲಾಗಿದೆ. ದೂರು ಸಲ್ಲಿಸಲು ಪೋಲೀಸ್ ಠಾಣೆಗಳಿಗೆ ಹೋದಾಗ ಠಾಣೆಯ ಒಳಗೂ ಪಕ್ಷದ ಮುಖಂಡರ ಮೇಲೆ ಹಲ್ಲೆ ನಡೆದಿರುವುದು ಇದನ್ನು ಹೊರಗೆಡವಿದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಪಶ್ಚಿಮ ಬಂಗಾಲದಲ್ಲಿ ಪ್ರಜಾಪ್ರಭುತ್ವದ ನಾಶ
ಪಶ್ಚಿಮ ಬಂಗಾಲದಲ್ಲಿನ ಪರಿಸ್ಥಿತಿ ಆಕ್ರೋಶಕಾರಿಯಲ್ಲದೇ ಬೇರೇನೂ ಅಲ್ಲ ಎಂದು ಪೊಲಿಟ್ಬ್ಯುರೊ ವಿಶ್ಲೇಷಿಸಿದೆ. ಅಲ್ಲಿ ಇತ್ತೀಚಿನ ಪಂಚಾಯತು ಚುನಾವಣೆಗಳು, ಸರ್ವಾಧಿಕಾರಶಾಹಿ ದಾಳಿಗಳು ಎಂತಹ ಅಧೋಗತಿಗೆ ಇಳಿಯಬಹುದು ಎಂಬುದನ್ನು ಬಯಲಿಗೆ ತಂದಿವೆ. ಇದರಲ್ಲಿ ಮೊತ್ತಮೊದಲ ಬಾರಿಗೆ, ಚುನಾವಣೆಯಲ್ಲಿ ಮೋಸ ಮತಗಣನೆಯ ಕೇಂದ್ರಗಳನ್ನೂ ಬಹಿರಂಗವಾಗಿಯೇ ಬಲವಂತವಾಗಿ ವಶಪಡಿಸಿಕೊಳ್ಳುವುದು, ಅಂತಿಮ ಫಲಿತಾಂಶದಲ್ಲಿ ಮತಗಣನೆಯ ಪ್ರಕ್ರಿಯೆಯಲ್ಲಿ ಸೋತವರಿಗೂ ಗೆದ್ದಿದ್ದಾರೆಂಬ ಪ್ರಮಾಣ ಪತ್ರ ನೀಡುವುದರ ವರೆಗೂ ಹೋಗಿದೆ. ಮತದಾನ-ಪೂರ್ವದಿಂದ ಮತದಾನದ ನಂತರದ ವರೆಗೆ 40 ಜನ ಪ್ರಾಣ ಕಳಕೊಂಡಿದ್ದಾರೆ. ಪ್ರತಿಭಟಿಸುವವರು,. ಅದರಲ್ಲೂ ಚುನಾವಣಾ ಸಿಬ್ಬಂದಿಯನ್ನು ಗುರಿ ಮಾಡಿ ಸುಳ್ಳು ಕೇಸುಗಳನ್ನು ಹಾಕಲಾಗಿದೆ.
ಈಗ ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಮತ್ತೆ ತಂದಿರುವವರಿಗೆ ಸೌಹಾರ್ದವನ್ನು ವ್ಯಕ್ತಪಡಿಸುವಂತೆ ಕಾಣುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು, ಆರಂಭದಲ್ಲಿ, ಮೊದಲ ಸುತ್ತುಗಳ ಚಿತ್ರಗಳ ಧಾರದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯಥಿಯನ್ನು ಅಭಿನಂದಿಸಿದ್ದು ಒಂದು ವ್ಯಂಗ್ಯವೇ ಸರಿ.
ಈ ಮುಖ್ಯಮಂತ್ರಿಯ ಅಡಿಯಲ್ಲಿ, ಪಶ್ಚಿಮ ಬಂಗಾಲದಲ್ಲಿ ಆಳುವ ಪಕ್ಷ, ರಾಜ್ಯ ಆಡಳಿತ ಮತ್ತು ರಾಜ್ಯ ಚುನಾವಣಾ ಆಯೋಗದ ನಡುವೆ ಇರುವ ವ್ಯತ್ಯಾಸಗಳನ್ನೆಲ್ಲ ಸಂಪೂರ್ಣ ಅಳಿಸಿ ಹಾಕಿ, ಆಮೂಲಕ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಟಿಪ್ಪಣಿ ಮಾಡಿದೆ.
ಅಸ್ಸಾಂ-ಈಶಾನ್ಯದಲ್ಲಿ ಅಸಂವಿಧಾನಿಕ ಕೃತ್ಯ
ಅಸ್ಸಾಂ ಮತ್ತು ದೇಶದ ಇತರ ಈಶಾನ್ಯ ಪ್ರದೇಶದಲ್ಲಿನ ಬೆಳವಣಿಗೆಗಳ ಬಗ್ಗೆ ಪೊಲಿಟ್ಬ್ಯುರೊ ಗಂಭಿರ ಆತಂಕವನ್ನು ವ್ಯಕ್ತಪಡಿಸಿದೆ. ಅಪಾರ ವೈವಿಧ್ಯತೆಗಳ ಈ ಪ್ರದೇಶದಲ್ಲಿ ಜನಗಳ ನಡುವಿನ ಸೂಕ್ಷ್ಮ ಐಕ್ಯತೆಯ ಮೇಲೆ ಓಂದು ಅಧಿಕ ಹೊಡೆತ ಬಂದಿದೆ. ಇದಕ್ಕೆ ಕಾರಣ ನಾಗರಿಕತ್ವ ಕಾಯ್ದೆಯನ್ನು ಧಾರ್ಮಿಕ ಸಾಮೀಪ್ಯದ ಆಧಾರದಲ್ಲಿ ತಿದ್ದುಪಡಿ ಮಾಡುವ ಕೇಂದ್ರ ಸರಕಾರದ ಪ್ರಯತ್ನಗಳು. ನಾಗರಿಕರ ರಾಷ್ಟ್ರೀಯ ದಾಖಲೆ (ಎನ್.ಆರ್.ಸಿ)ಯನ್ನು ಮತ್ತು ಸಂದೇಹಾಸ್ಪದ ಮತದಾರರ ವಿಧವನ್ನು ಸಮಕಾಲಿಕಗೊಳಿಸುವ ಪ್ರಕ್ರಿಯೆಯಲ್ಲಿ ಅಸಂಪೂರ್ಣ ಮತ್ತು ಉದ್ದೇಪೂರ್ವಕವಾದ ಪಕ್ಷಪಾತದಿಂದಾಗಿ ಭಾಷಾ ಅಲ್ಪಸಂಖ್ಯಾತರ ಮೇಲೆ ತೀವ್ರ ಒತ್ತಡ ಬಿದ್ದಿದೆ.
ವಿವಿಧ ಧರ್ಮಗಳು, ಭಾಷೆಗಳು ಮತ್ತು ಜನಾಂಗಗಳಿಗೆ ಸೇರಿದ ಜನಗಳ ಐಕ್ಯತೆ ಇಲ್ಲಿ ಎಲ್ಲಕ್ಕಿಂತ ಮುಖ್ಯವಾದ ಗುರಿಯಾಗಬೇಕು. ಇದರ ಬದಲು ಬಿಜೆಪಿ/ಆರೆಸ್ಸೆಸ್ ಚುನಾವಣಾ ಪ್ರಯೋಜನಕ್ಕಾಗಿ ಭಾವನಾತ್ಮಕ ಪ್ರಶ್ನೆಗಳಲ್ಲಿ ಆಟವಾಡುತ್ತಿರುವುದು ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಅಸ್ಸಾಂ ಒಪ್ಪಂದಕ್ಕೆ ಕಟ್ಟುನಿಟ್ಟಾಗಿ ಬದ್ಧವಾಗಿರಬೇಕು ಮತ್ತು ಅದರಿಂದ ಸಾಧಿಸಿರುವುದನ್ನು ಕ್ರೋಡೀಕರಿಸಬೇಕು ಎಂಬ ಪಕ್ಷದ ಅಭಿಪ್ರಾಯವನ್ನು ಪುನರುಚ್ಚರಿಸಿದೆ.
ಪ್ರಸ್ತಾವಿತ ನಾಗರಿಕತ್ವ(ತಿದ್ದುಪಡಿ) ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ, ಜನಗಳ ನಾಗರಿಕತ್ವವನ್ನು ಅವರ ಧಾರ್ಮಿಕ ನೆಲೆಯಲ್ಲಿ ನಿರ್ಧರಿಸುವ ಯಾವುದೇ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಸಿಪಿಐ(ಎಂ) ವಿರೋಧಿಸುತ್ತದೆ, ಏಕೆಂದರೆ ಇದು ಸಂಪೂರ್ಣವಾಗಿ ಅಸಂವಿಧಾನಿಕ ಎಂದು ಅದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರ-ಪರಿಸ್ಥಿತಿ ಹದಗೆಡಲು ಬಿಡಬಾರದು
ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಮತ್ತು ಕಾಶ್ಮೀರ ಕಣಿವೆಯಲ್ಲಿ ಜನಗಳ ನಡುವೆ ಪರಕೀಯ ಭಾವ ಸಂಪೂರ್ಣವಾಗಿ ಉಂಟಾಗಿರುವ ಬಗ್ಗೆ ಪೊಲಿಟ್ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ಪ್ರಧಾನ ಮಂತ್ರಿಗಳು ರಮಝಾನ್ ತಿಂಗಳಲ್ಲಿ ಒಂದು ಕದನ ವಿರಾಮವನ್ನು ಪ್ರಕಟಿಸಿದ್ದರೂ, ಅದರೊಂದಿಗೆ ವಿಧಿಸಿರುವ ಶರತ್ತುಗಳೇ ಈ ಕದನವಿರಾಮ ಮುರಿದು ಬೀಳಲು ಕಾರಣವಾಗಬಹದು ಎಂದು ಹೇಳಿದೆ.
ಈ ಹಿಂದೆ ಕೇಂದ್ರ ಸರಕಾರ ವಿಶ್ವಾಸ ಕುದುರಿಸುವ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸಲಾಗುವುದು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೂ ಸಂವಾದದ ಮೂಲಕ ಒಂದು ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಆಶ್ವಾಸನೆ ನೀಡಿತ್ತು. ಇದನ್ನು ಜಾರಿಗೆ ತರಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ. ಹತೋಟಿ ರೇಖೆಯ ಗುಂಟ ಒಂದು ಪರಸ್ಪರ ಒಪ್ಪಿತ ಕದನವಿರಾಮದ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲುವಂತೆ ಕೇಂದ್ರ ಸರಕಾರ ಪಾಕಿಸ್ತಾನದೊಡನೆ ಮಾತುಕತೆಗಳನ್ನು ಆರಂಭಿಸಬೇಕು. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಮತ್ತಷ್ಟು ಹದಗೆಡಲು ಬಿಡಬಾರದು ಎಂದು ಅದು ಆಗ್ರಹ ಪಡಿಸಿದೆ.
ಜೆಎನ್ಯು ಮೇಲೆ ಮತ್ತೊಂದು ದಾಳಿ
ಬಿಜೆಪಿ ಸರಕಾರ ಭಾರತೀಯ ಇತಿಹಾಸದ ಅಧ್ಯಯನದ ಬದಲು ಹಿಂದೂ ಪುರಾಣಗಳ ಅಧ್ಯಯನವನ್ನು ತರುವ ತನ್ನ ಸೈದ್ಧಾಂತಿಕ ಯೋಜನೆಯೊಂದಿಗೆ ದೇಶದಲ್ಲಿನ ಉನ್ನತ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಮೇಲೆ ದಾಳಿಗಳನ್ನು ಮುಂದುವರೆಸುತ್ತಿದೆ. ಈಗ ಕೇಂದ್ರೀಯ ವಿಶ್ವದ್ಯಾಲಯದ ಪಠ್ಯಕ್ರಮವನ್ನು ಕೋಮುವಾದಗ್ರಸ್ತಗೊಳಿಸುವ ಪ್ರಯತ್ನಗಳು ನಡೆದಿವೆ. ಜೆಎನ್ಯು ಅಕಡೆಮಿಕ್ ಕೌನ್ಸಿಲ್ ವ್ಯಾಪಕ ವಿರೋಧದ ನಡುವೆಯೂ “ಇಸ್ಲಾಮೀ ಭಯೋತ್ಪಾದನೆ’ ಎಂಬದು ಕೋರ್ಸನ್ನು ಆರಂಭಿಸಬೇಕೆಂಬ ಪ್ರಸ್ತಾವ ಮುಂದಿಟ್ಟಿದೆ.
ಇದು ದೇಶದ ಕ್ಯತೆ ಮತ್ತು ಸಮಗ್ರತೆಗೆ ಭಾರೀ ಧಕ್ಕೆ ಉಂಟುಮಾಡುವಂತದ್ದು. ಇಂತಹ ಕೋರ್ಸನ್ನೇನಾದರೂ ಆರಂಭಿಸಬೇಕಾಗಿದ್ದರೆ ಅದು ‘ಧಾರ್ಮಿಕ ಮೂಲಭೂತವಾದ’ ಎಂಬುದರ ಮೇಲೆ ಇರಬೇಕೇ ಹೊರತು, ನಿರ್ದಿಷ್ಟವಾಗಿ ಯಾವುದೇ ಒಂದು ದರ್ಮವನ್ನು ಗುರಿಯಿಟ್ಟು ಮಾಡಬಾರದು ಎಂಬುದು ವ್ಯಾಪಕವಾಗಿ ಇರುವ ಅಭಿಪ್ರಾಯ. ಆದ್ದರಿಂದ ಜೆನ್ಯು ಅಕಡೆಮಿಕ್ ಕೌನ್ಸಿಲ್ನ ಪ್ರಸ್ತಾವವನ್ನು ತಕ್ಷಣವೇ ಹಿಂತೆಗೆದಕೊಳ್ಳಬೇಕು ಎಂದು ಪೊಲಿಟ್ಬ್ಯುರೊ ಆಗ್ರಹಿಸಿದೆ.
ಹೊಣೆಗಳ-ಕೆಲಸಗಳ ವಿಭಜನೆ
22ನೇ ಮಹಾಧಿವೇಶನದ ನಂತರ ರಚನೆಗೊಂಡ ಪೊಲಿಟ್ಬ್ಯುರೊ ಮತ್ತು ಕೇಂದ್ರ ಸಮಿತಿಯ ಸದಸ್ಯರ ಹೊಣೆಗಳು ಮತ್ತು ಕೆಲಸದ ಹಂಚಿಕೆಯ ಬಗ್ಗೆ ಸಭೆ ಚರ್ಚಿಸಿತು. ಈ ಕುರಿತ ಪ್ರಸ್ತಾವಗಳನ್ನು ಜೂನ್ 22ರಿಂದ 24 ರ ವರೆಗೆ ನಡೆಯಲಿರುವ ಕೇಂದ್ರಸಮಿತಿಯ ಸಭೆಯ ಮುಂದೆ ಮಂಡಿಸಿ ಅಂತಿಮಗೊಳಿಸಲಾಗುವುದು ಎಂದು ಪೊಲಿಟ್ಬ್ಯುರೊ ಹೇಳಿದೆ.