ದೌರ್ಜನ್ಯ ತಡೆ ಕಾಯ್ದೆ: ಸುಗ್ರಿವಾಜ್ಞೆ ತರಲು ಕೇಂದ್ರ ಸರಕಾರದ ನಿರಾಕರಣೆ-
ಪರಿಶಿಷ್ಟ ಜಾತಿಗಳ/ಬುಡಕಟ್ಟುಗಳು ದೌರ್ಜನ್ಯ ತಡೆ ಕಾಯ್ದೆಯ ವಿಧಿಗಳನ್ನು ನಿಷ್ಪ್ರಯೋಜಕಗೊಳಿಸಿದ ಸುಪ್ರಿಂ ಕೋರ್ಟ್ ತೀರ್ಪಿನ ಪರಿಣಾಮಗಳನ್ನು ಇಲ್ಲವಾಗಿಸಲು ಒಂದು ಸುಗ್ರೀವಾಜ್ಞೆಯನ್ನು ಹೊರಡಿಸುವುದಿಲ್ಲ ಎಂದು ಕೇಂದ್ರ ಸರಕಾರ ಪ್ರಕಟಿಸಿದೆ. ಇದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ವಿರೋಧಿಸಿದೆ.
ಪರಿಸ್ಥಿತಿಯನ್ನು ಸರಿಪಡಿಸಲು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಒಂದು ಮಸೂದೆಯನ್ನು ಮಂಡಿಸುವ ಬಗ್ಗೆ ಯಾವುದೇ ಸಾರ್ವಜನಿಕ ಆಶ್ವಾಸನೆ ಕೊಡಲು ಕೇಂದ್ರ ಸರಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಇದು ಇನ್ನಷ್ಟು ಆಕ್ಷೇಪಣಾರ್ಹ ಸಂಗತಿ ಎಂದು ಅದು ಹೇಳಿದೆ. ಈ ಹಿಂದೆ ಅದು ಹಿಂದಿನ ಸ್ಥಿತಿಯನ್ನು ಮರುಸ್ಥಾಪಿಸುವ ಬಗ್ಗೆ ಆಶ್ವಾಸನೆ ನೀಡಿತ್ತು. ಈಗ ತನ್ನ ನಿಲುವನ್ನು ಸಂಪೂರ್ಣವಾಗಿ ಬದಲಿಸಿದೆ ಎಂದು ಪೊಲಿಟ್‌ಬ್ಯುರೊ ಟೀಕಿಸಿದೆ.
ಈಗಾಗಲೇ ಸುಪ್ರಿಂ ಕೋರ್ಟ್ ತೀರ್ಪು ಬಂದು ಎರಡೂವರೆ ತಿಂಗಳುಗಳಾಗಿವೆ. ಈಗಿರುವ ಕಾಯ್ದೆ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಯಾವುದೇ ಪರಿಹಾರ ಕೊಡುವಲ್ಲಿ ವಿಫಲವಾಗಿದೆ. ಈ ಸಮುದಾಯಗಳು ಹೀನ ಅತ್ಯಾಚಾರಗಳಿಗೆ ಒಳಗಾಗುತ್ತಲೇ ಇದ್ದಾರೆ. ಇದು ಎನ್‌ಡಿಎ ಸರಕಾರದ ಒರಟು ದಲಿತ-ವಿರೋಧಿ ನಿಲುವನ್ನು ಇನ್ನಷ್ಟು ಬಯಲಿಗೆ ತಂದಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ತಕ್ಷಣವೇ ಸುಪ್ರಿಂ ಕೋರ್ಟಿನ ತೀರ್ಪಿನ ಮೊದಲಿದ್ದ ಸ್ಥಿತಿ ನೆಲೆಗೊಳ್ಳುವಂತೆ ಮಾಡಲು ಹಾಗೂ ತಮ್ಮ ಸಂವಿಧಾನಿಕ ಹಕ್ಕುಗಳನ್ನು ಮನ್ನಿಸಲಾಗುತ್ತದೆ ಎಂಬ ವಿಶ್ವಾಸವನ್ನು ಈ ಸಮುದಾಯಗಳಲ್ಲಿ ಮೂಡಿಸಲು ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.