ಶುಜಾತ್ ಬುಖಾರಿ: ಒಬ್ಬ ನಿರ್ಭೀತ ಮತ್ತು ಸ್ವತಂತ್ರ ಪತ್ರಕರ್ತ

ಹಿರಿಯ ಪತ್ರಕರ್ತ ಮತ್ತು ‘ರೈಸಿಂಗ್‍ ಕಾಶ್ಮೀರ್’ನ ಮುಖ್ಯ ಸಂಪಾದಕ ಶುಜಾತ್ ಬುಖಾರಿಯವರ ಹತ್ಯೆ ಒಂದು ಹೇಡಿತನದ ಕೃತ್ಯ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ. ಇದೊಂದು ಗುರಿಯಿಟ್ಟ, ಯೋಜಿತ ಕೊಲೆ. ಈ ಹಿಂದೆ ಅವರ ಜೀವತೆಗೆಯುವ ಪ್ರಯತ್ನ ನಡೆದಿದ್ದು, ಅದರಿಂದ ಪಾರಾಗಿದ್ದರು, ಅವರಿಗೆ ಭದ್ರತೆ ಒದಗಿಸಲಾಗಿತ್ತು. ದುರಂತವೆಂದರೆ, ಅವರ  ಇಬ್ಬರು ಭದ್ರತಾ ರಕ್ಷಕರ ಮೇಲೂ ಗುಂಡು ಹಾರಿಸಲಾಗಿತ್ತು. ನಂತರ ಅವರಿಬ್ಬರೂ ಅದಕ್ಕೆ ಬಲಿಯಾಗಿದ್ದಾರೆ.

ಹಂತಕರು ಯಾರೆಂದು ಇನ್ನೂ ಗುರುತಿಸಲಾಗಿಲ್ಲ. ಆದರೂ, ಈದ್‍ನ ಹಿಂದಿನ ದಿನ, ಇಡೀ ಕಣಿವೆ ಹಬ್ಬವನ್ನು ಆಚರಿಸಲು ಸಿದ್ಧಗೊಳ್ಳುತ್ತಿದ್ದಾಗ  ಈ ಹೀನ ಕೃತ್ಯ ಎಸಗಿರುವವರಿಗೆ ಧರ್ಮ, ಮಾನವೀಯತೆ ಅಥವ ಶಾಂತಿಯನ್ನು ಮತ್ತೆ ನೆಲೆಗೊಳಿಸುವ ಬಗ್ಗೆ ಯಾವುದೇ  ಗೌರವ ಇಲ್ಲೆಂಬುದು ಸ್ಪಷ್ಟ ಎಂದು ಅಭಿಪ್ರಾಯ ಪಟ್ಟಿರುವ ಪೊಲಿಟ್‍ಬ್ಯುರೊ ಆ ಹಂತಕರನ್ನು ಗುರುತಿಸಬೇಕು, ಮತ್ತು ಅವರ ವಿರುದ್ಧ ಬಲವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.

ಶುಜಾತ್ ಒಬ್ಬ ನಿರ್ಭೀತ ಮತ್ತು ಸ್ವತಂತ್ರ ಪತ್ರಕರ್ತ. ಯಾವುದೇ ಕಡೆಯಿಂದಲೂ ಒತ್ತಡಕ್ಕೆ ಮಣಿಯಲು ನಿರಾಕರಿಸಿದವರು. ಆತನದ್ದು ಒಂದು ವಿವೇಕದ ದನಿ, ತಮ್ಮ  ಬರವಣಿಗೆಗಳಿಂದಾಗಿ ಅವರು ಗೌರವಾರ್ಹರಾಗಿದ್ದವರು. ಅವರನ್ನು ಸಾಯಿಸಿರುವುದು ಸ್ವತಂತ್ರ ಪತ್ರಕರ್ತರು ಜಮ್ಮು ಮತ್ತು ಕಾಶ್ಮೀರದಲ್ಲಿ ಎಂತಹ ಕಠಿಣ ಪರಿಸ್ತಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎತ್ತಿ ತೋರಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತನ್ನ ಶ್ರದ್ಧಾಂಜಲಿ ಅರ್ಪಿಸುತ್ತ ಶುಜಾತ್‍ರವರ ಕುಟುಂಬಕ್ಕೆ ಮತ್ತು ಸಹಯೋಗಿಗಳಿಗೆ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ.

ಅವರ ರಕ್ಷಣೆಯ ಕರ್ತವ್ಯವನ್ನು ನೇರವೇರಿಸುತ್ತಿದ್ದಾಗ ಹತರಾಗಿರುವ ಅವರ ಇಬ್ಬರು  ಭದ್ರತಾ ಗಾರ್ಡ್‍ಗಳ ಕುಟುಂಬಗಳಿಗೂ ಸಿಪಿಐ(ಎಂ) ಪೊಲಿಟ್‍ಬ್ಯರೊ ಹಾರ್ದಿಕ ಸಂತಾಪಗಳನ್ನು  ವ್ಯಕ್ತಪಡಿಸಿದೆ.

ವಿವೇಕ ಮತ್ತು ತರ್ಕಬದ್ಧತೆಯದು ನಿಜವಾದ ದನಿ ಕಳೆದು ಹೋಗಿದೆ- ತರಿಗಾಮಿ

ಶುಜಾತ್‍ ಸಾವು ಪತ್ರಕರ್ತರ ಬಳಗಕ್ಕೆ ಮಾತ್ರವೇ ಆಗಿರುವ ನಷ್ಟವಲ್ಲ, ಒಂದು ವಿವೇಕಯುತ  ಮತ್ತು ತರ್ಕಬದ್ಧತೆಯ ನಿಜವಾದ ದನಿಯೂ ಕಳೆದು ಹೋಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಶಾಸಕ ಮತ್ತು ಸಿಪಿಐ(ಎಂ)ನ ಹಿರಿಯ ಮುಖಂಡ ಮಹಮ್ಮದ್‍ ಯುಸುಪ್‍ ತರಿಗಾಮಿ ವರ್ಣಿಸಿದ್ದಾರೆ.

ಅತ್ಯಂತ ವೃತ್ತಿಪರರೂ ಆಗಿದ್ದ ಸೈಯದ್ ಸುಜಾತ್ ‍ಬುಖಾರಿ ಯವರ ಸಾವು ಪ್ರಜಾಪ್ರಭುತ್ವವ ಹಂದರಕ್ಕೂ ಆಗಿರುವ ಒಂದು ದೊಡ್ಡ ನಷ್ಟ, ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಷ್ಟೇ ಅಲ್ಲ, ವಿವೇಕ ಮತ್ತು ವಿಚಾರಪರತೆಯ ಮೇಲಾಗಿರುವ ದಾಳಿಯೂ ಹೌದು, ಈ ಅಮಾನುಷ ಹತ್ಯೆಯನ್ನು ಖಂಡಿಸಲು ಪದಗಳೇ ಸಾಲದು.

ಪತ್ರಿಕಾ ಸ್ವಾತಂತ್ರ್ಯ ಖಂಡಿತವಾಗಿಯೂ ಇಳಿಮುಖವಾಗುತ್ತಿದೆ, ಒಂದು ಅಭಿಪ್ರಾಯ ಹೊಂದಿರುವುದು, ಅದು ಕೂಡ ಪ್ರಭಾವೀ ರಾಜಕೀಯ ಕಥನಕ್ಕೆ ಹೊಂದಿಕೊಳ್ಳದ ಅಭಿಪ್ರಾಯವನ್ನು ಹೊಂದಿರುವುದು ಎಂದರೆ ಅಪಾಯದ ನೆರಳಲ್ಲಿ ಇದ್ದಂತೆಯೇ ಎಂದು ಹೇಳಿರುವ ತರಿಗಾಮಿ ಪತ್ರಕರ್ತರನ್ನು ಕೊಲ್ಲುವುದರಿಂದ ಯಾರ ಉದ್ದೇಶವೂ ಈಡೇರದು, ಬದಲಾಗಿ, ಬಿಕ್ಕಟ್ಟು ಇನ್ನಷ್ಟು ಹೆಚ್ಚುತ್ತದೆ ಎಂದಿದ್ದಾರೆ.

ಅವರು ಶುಜಾತ್‍ ಅವರ ದುಃಖತಪ್ತ ಕುಂಬಕ್ಕೆ, ಅದರಲ್ಲೂ ಅವರ ತಂದೆ-ತಾಯಿ, ಪತ್ನಿ ಮತ್ತು ಮಕ್ಕಳಿಗೆ ತಮ್ಮ ಹಾರ್ದಿಕ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *