ತ್ರಿಪುರಾದಲ್ಲಿ ಆರೆಸ್ಸೆಸ್‌ನಿಂದ ಮುಂದುವರೆಯುತ್ತಿರುವ ಹಿಂಸಾಚಾರ/ಭಯೋತ್ಪಾದನೆ

ತ್ರಿಪುರಾದಲ್ಲಿ ಮಕ್ಕಳನ್ನು ಕದಿಯುವವರು ಎಂಬ ಹೆಸರಿನಲ್ಲಿ ಆರೆಸ್ಸೆಸ್/ಬಿಜೆಪಿ ಕೊಲೆಗಡುಕ ಹಲ್ಲೆಗಳನ್ನು ಹರಿಯಬಿಟ್ಟಿವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಜೂನ್ ೨೬ರಂದು ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಒಬ್ಬ ೧೧ ವರ್ಷದ ವಿದ್ಯಾರ್ಥಿಯನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ.

ಬಿಜೆಪಿ ರಾಜ್ಯ ಸರಕಾರದ ಒಬ್ಬ ಮಂತ್ರಿ ಈ ಬಾಲಕನ ಎರಡೂ ಮೂತ್ರಪಿಂಡಗಳನ್ನು ಕಾನೂನುಬಾಹಿರ ಮಾನವಾಂಗ ವ್ಯಾಪಾರಕ್ಕಾಗಿ ತೆಗೆಯಲಾಗಿದೆ ಎಂದು ಆಪಾದಿಸಿದರು. ಇದು ಭಯ-ಗಾಬರಿಯನ್ನು ಹರಡಿತು. ಆದರೆ ರಾಜ್ಯದ ಪೋಲೀಸ್ ಮಹಾ ನಿರ್ದೇಶಕರು(ಡಿಜಿಪಿ) ಮರಣೋತ್ತರ ಪರೀಕ್ಷೆಯ ಪ್ರಕಾರ ಎರಡೂ ಮೂತ್ರಪಿಂಡಗಳು ದೇಹದಲ್ಲಿ ಇದ್ದವು ಎಂದು ಹೇಳಿದ್ದಾರೆ.

ಜೂನ್ ೨೮ರಂದು ತ್ರಿಪುರಾದಲ್ಲಿ ಕಳೆದ ಹತ್ತು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಮೂವರು ಮುಸ್ಲಿಂ ಬೀದಿ ಬದಿ ವ್ಯಾಪಾರಿಗಳ ಮೇಲೆ ಅವರು ಮಕ್ಕಳನ್ನು ಕದಿಯುವವರು ಎಂದು ಹಲ್ಲೆ ಮಾಡಲಾಯಿತು. ಅವರಲ್ಲಿ ಒಬ್ಬರು ಕೊಲೆಯಾದರು, ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡು ಅವರನ್ನು ಅಸ್ಪತ್ರೆಗೆ ಸೇರಿಸಲಾಯಿತು.

ಆನಂತರ ಸಿಪಿಐ(ಎಂ) ಮೇಲೆ ಹಿಂಸಾಚಾರ ಪ್ರಚೋದಿಸುತ್ತಿದ್ದಾರೆಂಬ ಸುಳ್ಳು ಆರೋಪ ಹಾಕಿ ಗುರುಯಿಡಲಾಗುತ್ತಿದೆ. ಅ ಪ್ರದೇಶದಲ್ಲಿ ಸಿಪಿಐ(ಎಂ) ಕಾರ್ಯಕರ್ತರ ಮನೆಗಳು ಮತ್ತು ಕಚೇರಿಗಳ ಮೇಲೆ ಹಲ್ಲೆ ಮಾಡಲಾಗಿದೆ, ಸಿಪಿಐ(ಎಂ) ದೈನಿಕ ಪತ್ರಿಕೆಯ ಒಬ್ಬ ವರದಿಗಾರರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ.

ಇದುವರೆಗೆ ನಾಲ್ಕು ಅಮಾಯಕ ಜೀವಗಳು ಕಳೆದುಹೋಗಿವೆ. ಬಿಜೆಪಿ ರಾಜ್ಯ ಸರಕಾರ ೪೮ ಗಂಟೆಗಳ ಕಾಲ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ತಡೆಯಿತು, ಹಿಂಸಾಚಾರದ ಹಲ್ಲೆಗಳ ಮಾಹಿತಿ ಜನಗಳಿಗೆ ತಲುಪದಂತೆ ಮಾಡಲು ಅದು ಈ ಕ್ರಮಕ್ಕೆ ಇಳಿಯಿತು.

ಇಂತಹ ಹಲ್ಲೆಗಳನ್ನು ತೀವ್ರಗೊಳಿಸಲಾಗುವುದು ಎಂಬ ಭೀತಿ ಹೆಚ್ಚುತ್ತಿದೆ. ಅಮಾಯಕ ಜನಗಳನ್ನು ರಕ್ಷಿಸುವುದು ಮತ್ತು ಅಪರಾಧಿಗಳನ್ನು ಶಿಕ್ಷಿಸುವುದು, ಆಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿ ಹಿಡಿಯುವುದು ರಾಜ್ಯ ಸರಕಾರದ ಸಂವಿಧಾನಿಕ ಜವಾಬ್ದಾರಿ.

ಇದರ ಬದಲು ಬಿಜೆಪಿ ರಾಜ್ಯ ಸರಕಾರ ಈ ಖಾಸಗಿ ಸೇನೆಗಳಿಗೆ ಪೋಷಣೆ ನೀಡುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯರೊ ಇದನ್ನು ಬಲವಾಗಿ ಖಂಡಿಸಿದೆ ಮತ್ತು ದೇಶಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸಬೇಕು ಮತ್ತು ಆರೆಸ್ಸೆಸ್-ಬಿಜೆಪಿಯ ದುಷ್ಟ ಹುನ್ನಾರಗಳನ್ನು ಬಯಲಿಗೆಳೆಯಬೇಕು ಎಂದು ಪಕ್ಷದ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *