ದೇಶದ ಹಲವೆಡೆಗಳಿಂದ ‘ಮಕ್ಕಳನ್ನು ಕದಿಯುವವರು’ ಎಂಬ ಹೆಸರಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವರದಿಗಳು ಬರುತ್ತಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೋ ಗಂಭೀರ ಆತಂಕ ವ್ಯಕ್ತಪಡಿಸಿದೆ.
ಬಿಜೆಪಿಯ ಕೇಂದ್ರ ಸರಕಾರ ಮತ್ತು ರಾಜ್ಯಸರಕಾರಗಳು ಸಂವಿಧಾನ ವಿಧಿಸಿರುವಂತೆ ಕಾನೂನು ಮತ್ತು ಸುವ್ಯವಸ್ಥೆಯ ಮಟ್ಟವನ್ನು ಕಾಯ್ದುಕೊಳ್ಳುತ್ತಿಲ್ಲ ಎಂಬುದು ಸ್ಪಷ್ಟ. ಇದೇ ದೇಶಾದ್ಯಂತ ದ್ವೇಷದ ವಾತಾವರಣವನ್ನು, ಹಿಂಸಾಚಾರವನ್ನು ಹರಡಿಸುವ ಹಾಗೂ ಸಾಮೂಹಿಕ ಸನ್ನಿಯನ್ನು ಬಡಿದೆಬ್ಬಿಸುವ ಖಾಸಗಿ ಸೇನೆಗಳಿಗೆ ಪ್ರೋತ್ಸಾಹ ಹಾಗೂ ಪೋಷಣೆಯನ್ನು ಕೊಡುತ್ತಿದೆ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದಿರುವ ಆಘಾತಕಾರಿ ಘಟನೆ ಬಿಜೆಪಿ ಸರಕಾರಗಳ ಅಡಿಯಲ್ಲಿ ನಮ್ಮ ಸಮಾಜ ಎಷ್ಟೊಂದು ಪ್ರಮಾಣದಲ್ಲಿ ಮಾನವೀಯತೆಯನ್ನು ಕಳಕೊಳ್ಳುತ್ತಿದೆ ಎಂಬುದನ್ನು ಪ್ರದರ್ಶಿಸಿದೆ ಎಂದು ಪೊಲಿಟ್ಬ್ಯುರೊ ಖೇದ ವ್ಯಕ್ತಪಡಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಪರಾಧಿಗಳನ್ನು ಶಿಕ್ಷಿಸಿ ಈ ರೀತಿಯ ಕಾನೂನುಹೀನತೆ ಮತ್ತು ಅರಾಜಕತೆಯ ಬೆಳವಣಿಗೆಯನ್ನು ಕೊನೆಗೊಳಿಸುವಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.