ಪಶ್ಚಿಮ ಬಂಗಾಲ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಹಾಡಹಗಲೇ ಪ್ರಜಾಪ್ರಭುತ್ವದ ಹತ್ಯೆ ನಡೆಯುತ್ತಿದೆ. ಮಾನವ ಹಕ್ಕುಗಳು ಮತ್ತು ರಾಜಕೀಯ ಸ್ವಾತಂತ್ರ್ಯದ ಮೇಲೆ ತೀವ್ರ ಒತ್ತಡಗಳು ಬೀಳುತ್ತಿವೆ. ಇದು ದೇಶದೆಲ್ಲೆಡೆಗಳಲ್ಲೂ ಹೆಚು ಹೆಚ್ಚಾಗಿ ಕಾಣಲಾರಂಭಿಸಿದೆ. ಉದಾಹರಣೆಗೆ, ದಲಿತರ ಪ್ರತಿಭಟನೆಗಳ ರಾಕ್ಷಸೀ ದಮನ, ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರ ವಿರುದ್ಧ ಕರಾಳ ಕಾಯ್ದೆಗಳ ಬಳಕೆ. ಆದರೆ, ಇದು ದೇಶದಲ್ಲಿ ಎಡಶಕ್ತಿಗಳ ಶಕ್ತಿಯುತ ನೆಲೆಗಳಾದ ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ತೀಕ್ಷ್ಣ ರೀತಿಯಲ್ಲಿ ಎದ್ದು ಕಾಣುತ್ತಿದೆ. ಹಿಂಸಾಚಾರ ಮತ್ತು ಭಯೋತ್ಪಾದನೆಯ ರಾಜಕೀಯವನ್ನು ತ್ರಿಪುರಾದ ಬಿಜೆಪಿ-ಐಪಿಎಫ್ಟಿ ಸರಕಾರ ಮತ್ತು ಪಶ್ಚಿಮ ಬಂಗಾಲದ ಟಿಎಂಸಿ ಸರಕಾರ ಮುಂದುವರೆಸುತ್ತಿವೆ.
ಇದರ ವಿರುದ್ಧ ಜುಲೈ 24ರಂದು ರಾಷ್ಟ್ರೀಯ ಪ್ರತಿಭಟನೆ ನಡೆಸಲು ಎಡಪಕ್ಷಗಳು ನಿರ್ಧರಿಸಿವೆ.
ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಗಳ ನಂತರ ನಾಲ್ವರು ಸಂಗಾತಿಗಳ ಕೊಲೆಯಾಗಿದೆ, 100 ಮಹಿಳೆಯರೂ ಸೇರಿದಂತೆ 1000 ಎಡಪಕ್ಷಗಳ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಸುಮಾರು 750 ಸಿಪಿಐ(ಎಂ) ಮತ್ತು ಎಡಪಕ್ಷಗಳ ಕಚೇರಿಗಳನ್ನು ಸುಟ್ಟು ಹಾಕಲಾಗಿದೆ, ದಾಳಿ ಮಾಡಲಾಗಿದೆ ಅಥವ ವಶಪಡಿಸಿಕೊಳ್ಳಲಾಗಿದೆ. ಸಾಮೂಹಿಕ ಸಂಘಟನೆಗಳ ಸರಿಸುಮಾರು 200 ಕಚೇರಿಗಳ ಮೇಲೆ ದಾಳಿಗಳು ನಡೆದಿವೆ, ಮತ್ತು ಸುಮಾರು ೧೫೦ ಕಚೇರಿಗಳನ್ನು ಬಲವಂತದಿಂದ ಆಕ್ರಮಿಸಿಕೊಳ್ಳಲಾಗಿದೆ. ಎಡ ಪಕ್ಷಗಳ ಹಿತೈಷಿಗಳ 2100 ಮನೆಗಳಿಗೆ ನುಗ್ಗಿ ಲೂಟಿ ಮಾಡಲಾಗಿದೆ.
ಪಕ್ಷದ ಸದಸ್ಯರ ಅಂಗಡಿಗಳು, ಕೋಳಿಸಾಕಣೆ/ ಮೀನುಗಾರಿಕೆಯಂತಹ ಇತರ ಚಟುವಟಿಕೆಗಳ ಸ್ಥಳಗಳನ್ನೂ ಲೂಟಿ ಮಾಡಲಾಗಿದೆ. ರಬ್ಬರ್ ತೋಟಗಳನ್ನು ಸುಟ್ಟು ಹಾಕಲಾಗಿದೆ. ಇಂತ ಅವ್ಯಾಹತ ದಾಳಿಗಳಿಂದಾಗಿ ಸುಮಾರು ೫೦೦ ಸಂಗಾತಿಗಳು ತಮ್ಮ ಮನೆಗಳನ್ನು ಬಿಟ್ಟು ಬಂದು ಸದ್ಯಕ್ಕೆ ಪಕ್ಷದ ವಿವಿಧ ಕಚೆರಿಗಳಲ್ಲಿ ತಾತ್ಕಾಲಿಕ ಕ್ಯಾಂಪುಗಳಲ್ಲಿ ಆಶ್ರಯ ಪಡೆದಿದ್ದಾರೆ.
ಎಡಪಕ್ಷಗಳ ಕಾರ್ಯಕರ್ತರ ಮೇಲೆ ದೈಹಿಕವಾಗಿ ಗುರಿಯಿಡುವುದಲ್ಲದೆ, ಎಡಪಕ್ಷಗಳು ನಡೆಸುವ ಕಾರ್ಯಕ್ರಮಗಳು ಮತ್ತು ಸಮಾgಂಭಗಳ ಮೇಲೂ ದಾಳಿಗಳು ನಡೆಯುತ್ತಿವೆ. ಮೇದಿನದ ಆಚರಣೆಗಳನ್ನು ರಾಜ್ಯದ ಹಲವೆಡೆಗಳಲ್ಲಿ ಅಸ್ತವ್ಯಸ್ತಗೊಳಿಸಲು ಪ್ರಯತ್ನಗಳು ನಡೆದಿವೆ. ಕಾರ್ಲ್ಸ್ ಮಾರ್ಕ್ಸ್ ದ್ವಿಶತಾಬ್ದಿಯಂತಹ ಸಮಾರಂಭಗಳ ಮೇಲೂ ದಾಳಿಗಳು ನಡೆದಿವೆ. ಪ್ರಗತಿಪರ ದೈನಿಕ ’ದೇಶೇರ್ ಕಥಾ’ದ ಮೇಲೆ ಗುರಿ ಇಡಲಾಗಿದೆ. ಅದನ್ನು ಒಯ್ಯುವ ಸಾಗಾಣಿಕೆದಾರರು ಮತ್ತು ಚಂದಾದಾರರನ್ನೂ ಬೆದರಿಸಲಾಗುತ್ತಿದೆ.
ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿಯೂ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಪ್ರಧಾನರುಗಳು ಮತ್ತು ಅಧ್ಯಕ್ಷರುಗಳು ಒಂದೋ ರಾಜೀನಾಮೆ ನೀಡಬೇಕು, ಇಲ್ಲವೇ ಬಿಜೆಪಿ ಸೇರಬೇಕು ಎಂದು ಬಲವಂತ ಮಾಡಲಾಗುತ್ತಿದೆ.
ರಾಜ್ಯ ಆಡಳಿತವೂ ಇದರಲ್ಲಿ ಶಾಮೀಲಾಗಿರುವುದು ಪ್ರಕಟಗೊಂಡಿದೆ, ದೂರು ದಾಖಲಿಸಲು ಹೋಗಿರುವ ಪಕ್ಷದ ಮುಖಂಡರ ಮೇಲೆ ಪೋಲಿಸ್ ಠಾಣೆಗಳಲ್ಲೇ ದಾಳಿ ಮಾಡಲಾಗುತ್ತಿದೆ.
ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಆಡಳಿತ ಎಡರಂಗದ ವಿರುದ್ಧ ನಿರ್ದೇಶಿಸಿರುವ ಭಯೋತ್ಪಾದಕ ಮತ್ತು ಪ್ಯಾಸಿಸ್ಟ್ ಮಾದರಿ ದಾಳಿಗಳನ್ನು ಮುಂದುವರೆಸುತ್ತಿದೆ.. ೨೦೧೬ರ ವಿಧಾನಸಭಾ ಚುನಾವಣೆಗಳ ನಂತರ ಟಿಎಂಸಿ ಎಡಪಕ್ಷಗಳ ಮೇಲೆ, ವಿಶೇಷವಾಗಿ ಸಿಪಿಐ(ಎಂ) ಮತ್ತು ಎಡಪಕ್ಷಗಳು ಈಗಲೂ ತಮ್ಮ ಸಾಮೂಹಿಕ ನೆಲೆಗಳನ್ನು ಉಳಿಸಿಕೊಂಡಿರುವ ಪ್ರದೇಶಗಳಲ್ಲಿ ವ್ಯಾಪಕ ದಾಳಿಗಳನ್ನು ಹರಿಯ ಬಿಟ್ಟಿದೆ.
ಜೂನ್ 2016 ದಿಂದೀಚೆಗೆ 31 ಸಿಪಿಐ(ಎಂ) ಸದಸ್ಯರು ಮತ್ತು ಬೆಂಬಲಿಗರನ್ನು ಟಿಎಂಸಿ ಗೂಂಡಾಗಳು ಕೊಂದಿದ್ದಾರೆ. ಇನ್ನೊಂದು ನಡೆಯೆಂದರೆ, ಎಡರಂಗ ಬಹುಮತದಲ್ಲಿರುವ ಪಂಚಾಯತು ಸಮಿತಿಗಳು, ಗ್ರಾಮ ಪಂಚಾಯತುಗಳು ಮತ್ತು ನಗರಸಭೆಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು. ಸಾವಿರಾರು ಮಂದಿ ಬೆದರಿಕೆಗಳು ಮತ್ತು ದಾಳಿಗಳಿಂದಾಗಿ ತಮ್ಮ ಮನೆಗಳನ್ನು ಬಿಟ್ಟು ಹೋಗಬೇಕಾಗಿ ಬಂದಿದೆ.
೨೦೧೮ ಪಂಚಾಯತು ಚುನಾವಣೆಗಳಲ್ಲಿ ಚುನಾವಣಾ ಪೂರ್ವ ಮೋಸಗಳನ್ನು ಎಸಗಲಾಗಿದೆ, ಎಡರಂಗ ಮತ್ತು ಇತರ ಪ್ರತಿಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ತಡೆಯಲು ವ್ಯಾಪಕ ದಾಳಿ, ಹಿಂಸಾಚಾರಗಳನ್ನು ನಡೆಸಲಾಗಿದೆ. ಪಂಚಾಯತು ಚುನಾವಣೆಗಳಿಗೆ ಸಂಬಂಧಿಸಿದ ಹಿಂಸಾಚಾರಗಳಲ್ಲಿ ಎಡಪಕ್ಷಗಳ ಹನ್ನೊಂದಕ್ಕೂ ಹೆಚ್ಚು ಕಾರ್ಯಕರ್ತರು ಪ್ರಾಣ ಕಳಕೊಂಡಿದ್ದಾರೆ. ಅಪಹರಣ ಮತ್ತು ಬೆಂಕಿ ಹಚ್ಚುವುದು ಸರಾಗವಾಗಿ ನಡೆಯುತ್ತಿವೆ.
ಪೋಲಿಸ್ ಆಡಳಿತ ಸಂಪುರ್ಣವಾಗಿ ಟಿಎಂಸಿ ಗೂಂಡಾಗಳೊಂದಿಗೆ ಕೈ ಜೋಡಿಸಿದೆ. ಹಿಂಸಾಚಾರದ ಪ್ರಮಾಣವನ್ನು ನೋಡಿದರೆ ಟಿಎಂಸಿ ನೇತೃತ್ವದ ಆಡಳಿತದ ಇಂತಹ ಸಕ್ತಿಯ ಪಾತ್ರದಿಂದಾಗಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ ಅಸಾಧ್ಯ ಎಂಬುದು ಅತ್ಯಂತ ಸ್ಪಷ್ಟವಾಗಿದೆ. ಟಿಎಂಸಿ 48650 ಗ್ರಾಮ ಪಂಚಾಯತು ಸ್ಥಾನಗಳಲ್ಲಿ 16,814ನ್ನು ಮತ್ತು 9217 ಪಂಚಾಯತು ಸಮಿತಿ ಸ್ಥಾನಗಳಲ್ಲಿ 3059ನ್ನು ಸ್ಪರ್ಧೆಯಿಲ್ಲದೆ ವಶಪಡಿಸಿಕೊಂಡಿದೆ. ಅಲ್ಲದೆ 825 ಜಿಲ್ಲಾ ಪರಿಷದ್ ಸೀಟುಗಳಲ್ಲಿ 203ರಲ್ಲಿ ಮಮತಾ ಬ್ಯಾನರ್ಜಿ ಪಕ್ಷದ ಅಭ್ಯರ್ಥಿಗಳು ವಿಜೇತರು ಎಂದು ಘೋಷಿಸಲಾಗಿದೆ.
ಟಿಎಂಸಿ ಮತಗಣನೆ ಏಜೆಂಟರು ಅಂಗೀಕರಿಸಿದ ತಂತ್ರಗಳು ಹಿಂದೆಂದೂ ಕಂಡು ಕೇಳಿರದಂತವುಗಳು. ಎಡರಂಗದ ಅಭ್ಯರ್ಥಿಗಳ ಚಿಹ್ನೆಗಳ ಮೇಲೆ ಗುರುತು ಹಾಕಿದ್ದ ಮತಪತ್ರಗಳನ್ನು ತೆಗೆದು ಅಷ್ಟೇ ಪ್ರಮಾಣದಲ್ಲಿ ಟಿಎಂಸಿ ಗುರುತಿನ ಮತಪತ್ರಗಳನ್ನು ಇಡಲಾಯಿತು.
ಈ ಕುರಿತ ಕೇಸಿನ ವಿಚಾರಣೆ ಸುಪ್ರಿಂ ಕೋರ್ಟಿನಲ್ಲಿ ಮುಂದುವರೆಯುತ್ತಿದ್ದು, ನ್ಯಾಯಾಲಯ ಇತ್ತೀಚೆಗೆ ಪಶ್ಚಿಮ ಬಂಗಾಲದಲ್ಲಿ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಬುಡಮಟ್ಟದ ಪ್ರಜಾಪ್ರಭುತ್ವ ಕೆಲಸ ಮಾಡುತ್ತಿಲ್ಲ ಎಂದು ಗಮನಿಸಿದೆ.
ಈ ದಾಳಿಗಳು ಜನಗಳ ಜೀವನಾಧಾರಗಳು ಮತ್ತು ಕಷ್ಟಪಟ್ಟು ಗಳಿಸಿದ ಹಕ್ಕುಗಳ ಮೇಲಿನ ದಾಳಿಗಳ ಒಂದು ಭಾಗ. ಬಾಂಗೊರ್ನಲ್ಲಿ ಭೂಮಿಯ ಬಲವಂತದ ಸ್ವಾಧೀನದ ವಿರುದ್ಧ ಹೋರಾಟದಲ್ಲಿ ಪೋಲಿಸ್ ಗೋಲೀಬಾರಿನಲ್ಲಿ ಮತ್ತು ಟಿಎಂಸಿ ಗೂಂಡಾಗಳಿಂದ ಹಲವಾರು ಕಾರ್ಯಕರ್ತರ ಹತ್ಯೆಗಳಾಗಿವೆ. ಒಬ್ಬ ಉನ್ನತ ಮುಖಂಡ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿಯಲ್ಲಿ ಬಂಧನದಲ್ಲಿದ್ದಾನೆ.
ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಈ ಹಾಡುಹಗಲೇ ನಡೆಯುತ್ತಿರುವ ಕೊಲೆಗನ್ನು ಎಡಪಕ್ಷಗಳು ಬಲವಾಗಿ ಖಂಡಿಸಿವೆ. ಮತ್ತು ದೇಶಾದ್ಯಂತ ಈ ಬರ್ಬರತೆಯನ್ನು ಖಂಡಿಸುವ ಮತ್ತು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ರಕ್ಷಣೆಗೆ ಜನಗಳನ್ನು ಅಣಿನೆರೆಸುವ ಪ್ರತಿಭಟನಾ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಎಂದು ತಮ್ಮೆಲ್ಲ ಘಟಕಗಳಿಗೆ ಅವು ಕರೆ ನೀಡಿವೆ. ನಮ್ಮ ಸಂವಿಧಾನ, ಜನಗಳ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ಇಂತಹ ಫ್ಯಾಸಿಸ್ಟ್ ಮಾದರಿ ದಾಳಿಗಳನ್ನು ಸೋಲಿಸಲು ಮುಂದೆ ಬರಬೇಕು ಎಂದು ಭಾರತೀಯ ಜನತೆಗೆ ಎಡಪಕ್ಷಗಳು ಕರೆ ನೀಡಿವೆ.