ಸ್ವಾಮಿ ಅಗ್ನಿವೇಶ್‌ರವರ ಮೇಲೆ ಝಾರ್ಖಂಡ್‌ನ ಪಕುರ್‌ನಲ್ಲಿ ಅಮಾನುಷ ಹಲ್ಲೆ ನಡೆದಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ತಪ್ಪಿತಸ್ಥರು ಬಿಜೆಪಿ ಯುವ ಮೋರ್ಚಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಈಗ ಸಾಮಾನ್ಯ ಸಂಗತಿಯಾಗಿರುವಂತೆ ಬಿಜೆಪಿ ರಾಜ್ಯ ಸರಕಾರ ಅವರೊಂದಿಗೆ ಅತ್ಯಂತ ಮೃದುವಾಗಿ ವರ್ತಿಸುತ್ತದೆ ಎಂದೇ ನಿರೀಕ್ಷಿಸಬಹುದು ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಸ್ವಾಮಿ ಅಗ್ನಿವೇಶರಿಗೆ ಸರಿಯಾದ ಮತ್ತು ಸೂಕ್ತ ಮಟ್ಟದ ವೈದ್ಯಕೀಯ ಗಮನ ಒದಗಿಸಬೇಕು ಮತ್ತು ಅಪರಾಧಿಗಳನ್ನು ತಕ್ಷಣವೇ ಶಿಕ್ಷಿಸಬೇಕು ಎಂದು ಆಗ್ರಹಿಸಿದೆ.
ಸ್ವಾಮಿ ಅಗ್ನಿವೇಶ್‌ರ ಮೇಲೆ ಈ ಹಲ್ಲೆ, ದೇಶದ ಸರ್ವೊಚ್ಚ ನ್ಯಾಯಾಲಯ ಜನಜಂಗುಳಿಯ ಹಿಂಸಾಚಾರದ ಬಗ್ಗೆ ತೀವ್ರ ದೋಷಾರೋಪಣೆ ಮಾಡಿದ್ದರೂ ನಡೆದಿದೆ. ದೊಂಬಿ ಮಾಡಿ ಹೊಡೆದು ಸಾಯಿಸುವುದರ ಬಗ್ಗೆ ಸುಪ್ರಿಂ ಕೋರ್ಟಿನ ವೀಕ್ಷಣೆಗಳು ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ಕೇಂದ್ರ ಸರಕಾರಕ್ಕೆ ಹಿಡಿದ ಕನ್ನಡಿಯಾಗಿದೆ, ಇವರ ಕಣ್ಣೆದುರೇ ಈ ಅಪರಾಧಗಳು ನಡೆಯುತ್ತಿವೆ, ಮತ್ತು ಖಾಸಗಿ ಸೇನೆಗಳದ್ದೇ ರಾಜ್ಯಭಾರ ನಡೆಯಲು ಅವಕಾಶ ನೀಡಲಾಗಿದೆ. ಅಪರಾಧಿಗಳನ್ನು ಗುರುತಿಸಿದರೂ ಅವರಿಗೆ ಶಿಕ್ಷೆಯಾಗುವುದಿಲ್ಲ ಎಂಬುದು ಅವರಿಗೆ ಆರೆಸ್ಸೆಸ್/ಬಿಜೆಪಿಯ ಕೃಪಾಪೋಷಣೆಯ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ಜಾತ್ಯತೀತ ಹಂದರವನ್ನು ರಕ್ಷಿಸಲು ಮತ್ತು ದೊಂಬಿ-ಆಳ್ವಿಕೆಯನ್ನು ತಡೆಯುವಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪ್ರಭುತ್ವದ ಕರ್ತವ್ಯ ಎಂದಿರುವ ಸುಪ್ರಿಂ ಕೋರ್ಟಿನ ತೀರ್ಪನ್ನು ಅನುಸರಿಸಿ ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸುವ ಒಂದು ಸಮಗ್ರವಾದ ಕಾನೂನನ್ನು ತರಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.