ರೈತ-ಕಾರ್ಮಿಕರ ಚಳುವಳಿಗಳಿಗೆ ಸಿಪಿಐ(ಎಂ) ಬೆಂಬಲ

ಆಗಸ್ಟ್ 9, 2018ರಂದು ರೈತ-ಕಾರ್ಮಿಕರ ಜೈಲ್ ಭರೋ ಚಳುವಳಿಗೆ ಪಕ್ಷದ ಬೆಂಬಲವನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಪುನರುಚ್ಚರಿಸಿದೆ. ರೈತ ಸಂಘಟನೆಗಳು ಶ್ರಮಜೀವಿ ರೈತರು ಮತ್ತು ಕೃಷಿ ಕೂಲಿಕಾರರು ಎಲ್ಲ ರೀತಿಗಳ ಸಾಲಗಳ ಬಾಧೆಗಳಿಂದ ಸಂಪೂರ್ಣ ವಿಮೋಚನೆ ಬೇಕೆಂದು ಆಗ್ರಹಿಸುತ್ತಿವೆ, ಎಲ್ಲ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟಿನಷ್ಟು ಕನಿಷ್ಟ ಬೆಂಬಲ ಬೆಲೆಗಳಿಗೆ ಕಾನೂನಿನ ಗ್ಯಾರಂಟಿ ಬೇಕು, ಭೂಮಿ ತಕ್ಷಣವೇ ಅದನ್ನು ಉಳುವವರ ಹೆಸರಿಗೆ ಆಗಬೇಕು, ಅರಣ್ಯ ಹಕ್ಕುಗಳ ಕಾಯ್ದೆಯ ಜಾರಿ ಆಗಬೇಕು, ಎಲ್ಲ ಕೃಷಿ ಕೂಲಿಕಾರರು, ಬಡ ಮತ್ತು ಮಧ್ಯಮ ರೈತರಿಗೆ  ೫೦೦೦ರೂ.ಗಳ ಕನಿಷ್ಟ ಮಾಸಿಕ ಪೆನ್ಶನ್ ಸಿಗಬೇಕು ಮತ್ತು ಒಂದು ಸಮಗ್ರ ಬೆಳೆ ವಿಮಾ ಯೋಜನೆ ಬೇಕು ಎಂಬುದು ರೈತ-ಕಾರ್ಮಿಕರ ಇತರ ಬೇಡಿಕೆಗಳು.

ರೈತರು, ಕಾರ್ಮಿಕರು ಮತ್ತು ಕೃಷಿ ಕೂಲಿಕಾರರು ಜಂಟಿಯಾಗಿ ಸಪ್ಟಂಬರ್ 4, 2018ರಂದು ನವದೆಹಲಿಯಲ್ಲಿ ನಡೆಸಲಿರುವ ಬೃಹತ್ ಪ್ರತಿಭಟನೆಗೂ  ಸಿಪಿಐ(ಎಂ) ಪೊಲಿಟ್‌ಬ್ಯುರೊ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಈ ಪ್ರತಿಭಟನೆ ಕೋಟ್ಯಂತರ ಕಾರ್ಮಿಕರ, ರೈತರ, ಕೃಷಿ ಕೂಲಿಕಾರರ, ಕೈಕಸಬುದಾರರ ಮತ್ತು ಇತರ ಶ್ರಮಜೀವಿ ವಿಭಾಗಗಳ ಜನಗಳ ಪ್ರಶ್ನೆಗಳನ್ನ ಎತ್ತಿ ತೋರುತ್ತ ಉದ್ಯೋಗಾವಕಾಶ ನಿರ್ಮಾಣ, ಉತ್ತಮ ಕೆಲಸದ ಪರಿಸ್ಥಿತಿಗಳು, ಉತ್ತಮ ಬದುಕು ಮತ್ತು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯದ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಆಗಸ್ಟ್ 3 ಮತ್ತು 4ರಂದು  ದಿಲ್ಲಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಪೊಲಿಟ್‌ಬ್ಯುರೊ ದೇಶದ ಇತರ ಆಗು-ಹೋಗುಗಳ ವಿಮರ್ಶೆಗಳನ್ನೂ ಮಾಡಿದೆ.

ದೌರ್ಜನ್ಯ ತಡೆ ಕಾಯ್ದೆ: 9ನೇ ಶೆಡ್ಯೂಲಿಗೆ  ಸೇರಿಸಿ ರಕ್ಷಿಸಬೇಕು

ಕೇಂದ್ರ ಸಂಪುಟ ಬಹಳ ವಿಳಂಬದ ನಂತರ ಪರಿಶಿಷ್ಟ ಜಾತಿ/ಬುಡಕಟ್ಟು ದೌರ್ಜನ್ಯ ತಡೆ ಕಾಯ್ದೆ(ಪಿಒಎ)ಯನ್ನು ದುರ್ಬಲಗೊಳಿಸಿರುವ ಸುಪ್ರಿಂ ಕೊರ್ಟ್ ತೀರ್ಪನ್ನು ರದ್ದುಗೊಳಿಸುವಂತಹ ಒಂದು ಮಸೂದೆಯನ್ನು ಮಂಜೂರು ಮಾಡಿದೆ. ದೊಡ್ಡ ಪ್ರಮಾಣದ ಪ್ರತಿಭಟನಾ ಕಾರ್ಯಾಚರಣೆಗಳ ಒತ್ತಡದಿಂದ ಕೊನೆಗೂ ಈ ನಿರ್ಧಾರಕ್ಕೆ ಸಂಪುಟ ಬಂದಿದೆ ಎಂದು ಗಮನಿಸಿದ ಪೊಲಿಟ್‌ಬ್ಯುರೊ, ಆದರೆ ಇಷ್ಟೇ ಸಾಲದು ಎಂದಿದೆ. ಮುಂದೆಯೂ ಈ ಕಾಯ್ದೆಯನ್ನು ತಪ್ಪು ವ್ಯಾಖ್ಯಾನಗಳಿಂದ ಮತ್ತು ದುರ್ಬಲಗೊಳಿಸುವ ಪ್ರಯತ್ನಗಳಿಂದ ರಕ್ಷಿಸಲು ಅದನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲಿನ ವ್ಯಾಪ್ತಿಗೆ ತರುವುದು ಅತ್ಯಗತ್ಯ ಎಂದು ಹೇಳಿದೆ.

ವಿವಿಧ ಸಂಘಟನೆಗಳು ಈ ಪ್ರಶ್ನೆಯ ಮೇಲೆ ಎತ್ತಿರುವ ಬೇಡಿಕೆಗಳಿಗೆ ಮತ್ತು ಎಪ್ರಿಲ್ 2ರ ಬಂದ್‌ಗೆ ಸಂಬಧಿಸಿದಂತೆ ಬಂಧಿಸಿರುವ ಎಲ್ಲರನ್ನೂ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ಯಪಡಿಸಿರುವ ಪೊಲಿಟ್‌ಬ್ಯುರೊ ಆ ಬಂದ್‌ನ ದಿನ ದಲಿತರ ಮೇಲೆ ಹಿಂಸಾಚಾರ ನಡೆಸಿದವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದೆ.

ಯಾವುದೇ ಭಾರತೀಯರಿಗೆ ಪೌರತ್ವವನ್ನು ನಿರಾಕರಿಸಬಾರದು

ಪೊಲಿಟ್‌ಬ್ಯುರೊ ಅಸ್ಸಾಂನಲ್ಲಿ ಕರಡು ರಾಷ್ಟ್ರೀಯ ಪೌರತ್ವ ಪಟ್ಟಿ (ಎನ್‌ಆರ್‌ಸಿ)ಯನ್ನು ಪ್ರಕಟಿಸಿರುವುದರಿಂದ ಉಂಟಾಗಿರುವ ಸನ್ನಿವೆಶದ ಪರಿಶೀಲನೆ ನಡೆಸಿತು. ಈ ಪಟ್ಟಿಯಲ್ಲಿ ಹೆಸರು ಸೇರಿಸಿರದ ೪೦ ಲಕ್ಷ ಜನಗಳು ಕಾನೂನುಬಾಹಿರ ವಲಸಿಗರು ಎಂದು ಬಿಜೆಪಿ ಅಧ್ಯಕ್ಷರು ತಪ್ಪು ದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ ಎಂದು ಪೊಲಿಟ್‌ಬ್ಯುರೊ ಖಂಡಿಸಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಈಗಾಗಲೇ ಕಿರುಕುಳಕ್ಕೆ ಒಳಗಾಗಿರುವ ಜನಗಳ ಭಯ ಮತ್ತು ಆತಂಕಗಳ:ನ್ನು ಹೆಚ್ಚಿಸುತ್ತವೆ ಎಂದು ಅದು ಅಭಿಪ್ರಾಯ ಪಟ್ಟಿದೆ.

ಬಹಳ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು, ಅವರು ಪಂಚಾಯತು ಪ್ರಮಾಣ ಪತ್ರಗಳನ್ನು, ರೇಶನ್ ಕಾರ್ಡ್‌ಗಳನ್ನು, ಮತ್ತು ಇತರ ಬೆಂಬಲದ ದಸ್ತಾವೆಜುಗಳನ್ನು ಸಲ್ಲಿಸಿದ್ದರೂ ಈ ಪಟ್ಟಿಯಲ್ಲಿ ಸೇರಿಸಿಲ್ಲ ಎಂಬುದು ಸ್ವಯಂವೇದ್ಯ. ವಿಚಿತ್ರವೆಂದರೆ, ಒಂದೇ ಕುಟುಂಬದಲ್ಲಿ ಕೆಲವರನ್ನು ಸೇರಿಸಲಾಗಿದೆ, ಇನ್ನು ಕೆಲವರನ್ನು ಕೈಬಿಡಲಾಗಿದೆ.

ಹೀಗೆ ಹೆಸರು ಸೇರಿಸದಿರುವುದನ್ನು ಕುರಿತ ಎಲ್ಲ ದೂರುಗಳನ್ನು ಆಮೂಲಾಗ್ರವಾಗಿ ಮತ್ತು ಗಂಭೀರವಾಗಿ ಪರೀಕ್ಷಿಸಬೇಕು ಎಂದು ಪೊಲಿಟ್‌ಬ್ಯುರೊ ಮತ್ತೆ ಒತ್ತಿ ಹೇಳಿದೆ. ಜನಗಳು ತಮ್ಮ ದೂರುಗಳನ್ನು ಸಲ್ಲಿಸಲು ಸಾಧ್ಯವಾಗುವಂತೆ ದಾವೆಗಳನ್ನು ಸಲ್ಲಿಸುವ ಸಮಯ ಮಿತಿಯನ್ನು ವಿಸ್ತರಿಸಬೇಕು. ಆಗ ಮಾತ್ರವೇ ಅಂತಿಮ ಎನ್‌ಆರ್‌ಸಿ ಯನ್ನು ಪ್ರಕಟಿಸಬೇಕು. ಯಾವುದೇ ಭಾರತೀಯರಿಗೆ ಪೌರತ್ವದ ನಿರಾಕರಣೆಯಾಗದಂತೆ ಖಾತ್ರಿಗೊಳಿಸಬೇಕು ಎಂದು ಪೊಲಿಟ್‌ಬ್ಯುರೊ ಹೇಳಿದೆ.

ತುರ್ತಾಗಿ ಚುನಾವಣಾ ಸುಧಾರಣೆಗಳನ್ನು ಕೈಗೊಳ್ಳಬೇಕು

ಚುನಾವಣಾ ಸುಧಾರಣೆಗಳ ತುರ್ತನ್ನು ಒತ್ತಿ ಹೇಳಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬೇಕು ಎಂಬ ಬಿಜೆಪಿ ಸರಕಾರದ ಪ್ರಸ್ತಾವವನ್ನು ಅದು ಪಕ್ಕಾ  ಪ್ರಜಾಪ್ರಭುತ್ವ-ವಿರೋಧಿ ಸೂಚನೆ ಎನ್ನುತ್ತ  ತಿರಸ್ಕರಿಸಿದೆ.

ಇಂತಹ ಆಳವಾದ ಚುನಾವಣಾ ಸಉಧಾರಣೆಗಳು ಸಮಗ್ರವಾಗಿರಬೇಕು, ಚುನಾವಣಾ ನಿಧಿ ನೀಡಿಕೆ, ಭ್ರಷ್ಟಾಚಾರ, ಕಾರ್ಪೊರೇಟ್ ಹತೋಟಿ, ಆನುಪಾತಿಕ ಪ್ರಾತಿನಿಧ್ಯ, ಚುನಾವಣಾ ಸಂಸ್ಥೆಗಳ ನಿಷ್ಪಕ್ಷಪಾತಿ ಮತ್ತು ಸ್ವತಂತ್ರ ಸ್ವರೂಪ, ಮಾಧ್ಯಮಗಳ ಪಾತ್ರ ಇತ್ಯಾದಿ ಎಲ್ಲ ಆತಂಕಗಳನ್ನು ಗಮನಕ್ಕೆ ತಗೊಳ್ಳಬೇಕು. ಈ ಬಹು ಆಳವಾದ ಕ್ರಮಗಳು ಮುಂಬರುವ ಲೋಕಸಭಾ ಚುನಾವಣೆಗಳ ಮೊದಲು ಜಾರಿಗೆ ಬರಬೇಕು ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಈ ಸಂದರ್ಭದಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು, ವಿದೇಶಿ ಕಂಪನಿಗಳ ಭಾರತೀಯ ಅಂಗ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನಿಧಿ ನೀಡಲು ದಾರಿ ಮಾಡಿಕೊಟ್ಟಿರುವ, ಹಣಕಾಸು ಮಸೂದೆಯ ಮೂಲಕ ತಂದಿರುವ,  ವಿದೇಶಿ ವಂತಿಗೆ ನಿಯಂತ್ರಣ ಕಾಯ್ದೆಯ ತಿದ್ದುಪಡಿಯನ್ನು ಮತ್ತು ರಾಜಕೀಯ ವಂತಿಗೆಗಳ ಮೇಲಿನ ಮಿತಿಯನ್ನು ತೆಗೆಯುವ ಕಂಪನಿ ಕಾಯ್ದೆಯ ತಿದ್ದುಪಡಿಯನ್ನು ಕೂಡ ಹಿಂದಕ್ಕೆ ಪಡೆಯಬೇಕು ಎಂದು ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಈ ಪ್ರಶ್ನೆಗಳು ಬಾಧಿಸುವ ಎಲ್ಲರೊಡನೆ ಸಮಾಲೋಚನೆ ನಡೆಸಿ ರಾಷ್ಟ್ರೀಯ ಮತ್ತು ರಾಜ್ಯಮಟ್ಟಗಳಲ್ಲಿ ಇಂತಹ ಪಕ್ಷಗಳ ಒಂದು ಸಭೆಯನ್ನು ಈ ಅಜೆಂಡಾದ ಮೇಲೆ ನಡೆಸಲಾಗುತ್ತದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಕರಡು ಹೆಚ್‌ಇಸಿಐ ಮಸೂದೆ ಪ್ರತಿಗಾಮಿಯಾಗಿದೆ

ಪ್ರಸ್ತಾವಿತ ಭಾರತದ ಉನ್ನತ ಶಿಕ್ಷಣ ಆಯೋಗ(ಹೆಚ್‌ಇಸಿಐ)ಕ್ಕೆ ಒಂದು ವಿಶಾಲ ಪ್ರತಿರೋಧವನ್ನು ಕಟ್ಟಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಶಿಕ್ಷಣತಜ್ಞರು, ಬುದ್ಧಿಜೀವಿಗಳು, ಶಿಕ್ಷಕ ಸಮುದಾಯ, ವಿದ್ಯಾರ್ಥಿಗಳು ಮತ್ತು ಈ ಬಗ್ಗೆ ಕಾಳಜಿಯಿರುವ ಎಲ್ಲ ವ್ಯಕ್ತಿಗಳಿಗೆ ಮತ್ತು ಸಂಘಟನೆಗಳಿಗೆ ಕರೆ ನೀಡಿದೆ.

ಎನ್‌ಡಿಎ-೨ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಮತ್ತೆ-ಮತ್ತೆ ಸಾರ್ವಜನಿಕ ನಿಧಿಯಿಂದ ನಡೆಯುವ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಮೇಲೆ ಗುರಿಯಿಟ್ಟಿದೆ. ಸಾರ್ವಜನಿಕ ನಿಧಿಯಿಂದ ನಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಖರ್ಚಿನ ಒಂದು ಭಾಗವನ್ನು ತಮ್ಮ ಆಂತರಿಕ ಮೂಲಗಳಿಂದ ಮತ್ತು ಸಾಲಗಳಿಂದ ಉತ್ಪಾದಿಸಬೇಕು ಎಂದು ಹೇಳುತ್ತ ಬರುತ್ತಿದೆ, ಎಂ.ಫಿಲ್. ಮತ್ತು ಪಿಹೆಚ್‌ಡಿ ಸಂಶೋಧನಾ ಕಾರ್ಯಕ್ರಮಗಳಿಗೆ ಸೀಟುಗಳನ್ನು ಮತ್ತು ಫೆಲೋಶಿಪ್‌ಗಳನ್ನು ತೀವ್ರವಾಗಿ ಕಡಿತ ಮಾಡುತ್ತಿದೆ, ಎಸ್‌ಸಿ/ಎಸ್‌ಟಿ ಮೀಸಲಾತಿಗಳನ್ನು ಮತ್ತಷ್ಟು ಕಡಿತಗೊಳಿಸುತ್ತಿದೆ , ಹಾಗೂ ಖಾಯಂ ನೇಮಕಾತಿಯ ಬದಲು ಬೋಧಕ ಹುದ್ದೆಗಳಿಗೂ, ಆಡಳಿತ ಹುದ್ದೆಗಳಿಗೂ ಅಲ್ಪಾವಧಿಯ ಕಾಂಟ್ರಾಕ್ಟ್ ಉದ್ಯೋಗಗಳನ್ನು ಪ್ರೋತ್ಸಾಹಿಸುತ್ತಿದೆ.

ಉನ್ನತ ಶಿಕ್ಷಣದ ಸುಧಾರಣೆಗೆ ಎನ್‌ಡಿಎ-೨ ಸರಕಾರದ ಅಡಿಯಲ್ಲಿ ಮಾರ್ಗದರ್ಶಕವಾಗಿರುವುದು ಖಾಸಗೀಕರಣ ಮತ್ತು ಸಾಮಾಜಿಕ ಬಹಿಷ್ಕರಣದ ಅವಳಿ ಕಾಳಜಿಗಳು. ಇವು ಸ್ವತಂತ್ರ ಭಾರತದಲ್ಲಿ ಉನ್ನತ ಶಿಕ್ಷಣದ ಬುನಾದಿಗಳನ್ನು ಧ್ವಂಸ ಮಾಡುತ್ತಿವೆ ಮತ್ತು ದಶಕಗಳ ಕಾಲ ಅದು ಜನಸಾಮಾನ್ಯರನ್ನು ಕಲಿಕೆ, ಉದ್ಯೋಗಗಳು ಮತ್ತು ಸಾಮಾಜಿಕ ವಿಶ್ವಾಸದೊಂದಿಗೆ ಸಬಲೀಕರಿಸುವಲ್ಲಿ ವಹಿಸಿದ ಹಿತಕರ ಪಾತ್ರಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಇವೆರಡೂ ಭಾರತದ ಉನ್ನತ ಶಿಕ್ಷಣ ಆಯೋಗ(ಯುಜಿಸಿ ಕಾಯ್ದೆ, ೧೯೫೬ ರದ್ಧತಿ) ಮಸೂದೆ, ೨೦೧೮ರಲ್ಲಿ ಬಲವಾಗಿ ಬಿಂಬಿತವಾಗಿವೆ ಎಂದು ಪೊಲಿಟ್‌ಬ್ಯುರೊ ವಿಶ್ಲೇಷಿಸಿದೆ.

ಎಂಎನ್‌ಸಿಗಳನ್ನು ಸಂತುಷ್ಟ ಪಡಿಸಲು ಎನ್‌ಎಂಸಿ ಮಸೂದೆ

ಮೋದಿ ಸರಕಾರದ ಪ್ರಸ್ತಾವಿತ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಮಸೂದೆ ನಾವು ವೈದ್ಯಕೀಯ ಶಿಕ್ಷಣ, ವಿಜ್ಞಾನ, ಸಂಶೋಧನೆ ಮತ್ತು ಆರೋಗ್ಯುಪಾಲನೆ ವ್ಯವಸ್ಥೆಯಲ್ಲಿ ಮಾಡಿರುವ ಅಲ್ಪ-ಸ್ವಲ್ಪ ಸಾಧನೆಗಳ ಮೇಲೂ ನಡೆಸಿರುವ ವ್ಯವಸ್ಥಿತ ದಾಳಿಯಾಗಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ. ಭಾರತೀಯ ವೈದ್ಯಕೀಯ ವ್ಯಂಡಳಿ(ಎಂಸಿಐ)ಯನ್ನು ಸುಧಾರಿಸುವ ಮತ್ತು ಬಲಪಡಿಸುವ ಬದಲು, ಅದರ ಸ್ಥಾನದಲ್ಲಿ ನಮ್ಮ ಸಂವಿಧಾನದ ಒಕ್ಕೂಟ ರಚನೆಯನ್ನು ನಿರಾಕರಿಸುವ ಒಂದು ಅಧಿಕಾರಶಾಹಿ ಸಂಘಟನೆಯನ್ನು ತಂದಿಡಲಾಗುತ್ತಿದೆ.

ದೈತ್ಯ ಬಹುರಾಷ್ಟ್ರೀಯ ಕಂಪನಿಗಳನ್ನು ಸಂತುಷ್ಟಗೊಳಿಸುವ, ಆರೋಗ್ಯ ವ್ಯವಸ್ಥೆಯ ಕಾರ್ಪೊರೇಟೀಕರಣದ ಮತ್ತು ಭಿನ್ನಮತದ ದನಿಗಳನ್ನು ಅಡಗಿಸುವ ಭರದಲ್ಲಿ ಎಲ್ಲಕ್ಕಿಂತ ಮಹತ್ವದ ರೋಗಿಯನ್ನು ಉಪೇಕ್ಷಿಸಲಾಗುತ್ತಿದೆ. ಇದು ಕ್ರಿಮಿನಲ್ ಉಪೇಕ್ಷೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ವರ್ಣಿಸಿದೆ. ಇದರಿಂದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯಪಾಲನೆಯ ವ್ಯವಸ್ಥೆ ಇವೆರಡೂ ಬಹಳ ವೆಚ್ಚದಾಯಕವಾಗುತ್ತವೆ. ಇವೆರಡೂ ಬಡವರು, ಹಿಂದುಳಿದವರು ಮತ್ತು ನಮ್ಮ ಜಸಂಖ್ಯೆಯ ಅಂಚಿಗೆ ತಳ್ಳಲ್ಪಟ್ಟವರ ಅಳವಿಗೆ ನಿಲುಕದ್ದಾಗುತ್ತವೆ.

ವೈದ್ಯ ಸಮುದಾಯ ಈಗಾಗಲೇ ಸರಕಾರದ ಈ ವಿನಾಶಕಾರಿ ನಡೆಯ ವಿರುದ್ಧ ಶಸ್ತ್ರ ಎತ್ತಿದ್ದಾರೆ. ಸಿಪಿಐ(ಎಂ) ಪೊಲಿಟ್‌ಬ್ಯುರೊ ಇವರಿಗೆ ಸೌಹಾರ್ದ ವ್ಯಕ್ತಪಡಿಸಿದೆ ಮತ್ತು ನಮ್ಮ ಸಮಾಜದ ಪ್ರತಿಯೊಂದು ವಿಭಾಗವೂ ಈ ಕರಾಳ ಮಸೂದೆಯನ್ನು ವಿರೋಧಿಸಬೇಕು ಎಂದು ಕರೆ ನೀಡಿದೆ.

ಬಂಗಾಲ ಮತ್ತು ತ್ರಿಪುರಾದಲ್ಲಿ ಹಲ್ಲೆಗಳು ಮುಂದುವರೆಯುತ್ತಿವೆ

ತ್ರಿಪುರಾ ಮತ್ತು ಪಶ್ಚಿಮಬಂಗಾಲದಲ್ಲಿ ಪಕ್ಷ ಮತ್ತು ಎಡಪಂಥದ ಮೇಲೆ ಹಲ್ಲೆಗಳು ಮುಂದುವರೆಯುತ್ತಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡಿಸಿದೆ. ತ್ರಿಪುರಾದಲ್ಲಿ ಆರೆಸ್ಸೆಸ್/ಬಿಜೆಪಿ ಪಕ್ಷದ ಕಚೇರಿಗಳು ಮತ್ತು ಕಾರ್ಯಕರ್ತರ ಮೇಲೆ ಗುರಿಯಿಡುವದನ್ನು ಅವ್ಯಾಹತವಾಗಿ ಮುಂದುವರೆಸುತ್ತಿವೆ. ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಗೂಂಡಾಗಳು ಮತ್ತು ರಾಜ್ಯ ಆಡಳಿತದ ಹಲ್ಲೆಗಳು ನಿಲ್ಲದೆ ಸಾಗಿವೆ.

ಸಾಯಬಡಿಯುವ ಜನಜಂಗುಳಿ-ಆಳುವವರ ಪೋಷಣೆ

ವಿವಿಧ ರಾಜ್ಯಗಳಿಂದ ವರದಿಯಾಗುತ್ತಿರುವ ಜನಜಂಗುಳಿ ಸಾಯಬಡಿಯುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪೊಲಿಟ್‌ಬ್ಯುರೊ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಸುಪ್ರಿಂ ಕೋರ್ಟಿನ ಟಿಪ್ಪಣಿಗಳು ಪ್ರಧಾನ ಮಂತ್ರಿಗಳ ಮತ್ತು ಬಿಜೆಪಿ ಕೇಂದ್ರ ಸರಕಾರದ ಮುಖಕ್ಕೆ ಕನ್ನಡಿ ಹಿಡಿದಿವೆ. ಇವರ ಕಣ್ಗಾವಲಿನಲ್ಲಿ ಇಂತಹ ಅಪರಾಧಗಳು ನಡೆಯುತ್ತಿವೆ ಮತ್ತು ಕಾವಲುಕೋರ ಗುಂಪುಗಳೇ ರಾಜ್ಯಭಾರ ನಡೆಸಲು ಬಿಡಲಾಗುತ್ತಿದೆ.

ಹಲವು ಬಿಜೆಪಿ ಮುಖಂಡರು ಇಂತಹ ಕ್ರಿಮಿನಲ್‌ಗಳನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದಾರೆ. ಅಪರಾಧಿಗಳನ್ನು ಗುರುತಿಸಿದಾಗಲೂ ಅವರಿಗೆ ಶಿಕ್ಷೆಯಾಗುತ್ತಿಲ್ಲ ಎಂಬುದೇ ಆರೆಸ್ಸೆಸ್/ಬಿಜೆಪಿ ಅವರಿಗೆ ನೀಡುತ್ತಿರುವ ಕೃಪಾಪೋಷಣೆಯ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದಿರುವ ಪೊಲಿಟ್‌ಬ್ಯುರೊ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಒಂದು ಸಮಗ್ರ ಕಾನೂನನ್ನು ಪ್ರಸಕ್ತ ಸಂಸತ್ ಅಧಿವೇಶನಲ್ಲಿಯೇ ತರಬೇಕು ಎಂಬ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ.

ಸ್ವತಂತ್ರ ಮಾಧ್ಯಮಗಳ ಮೇಲೆ ಹಲ್ಲೆಗಳು

ಮಾಧ್ಯಮಗಳನ್ನು ಹೆದರಿಸುವುದು ಹೆಚ್ಚಾಗುತ್ತಿರುವುದರ ಬಗ್ಗೆ ಪೊಲಿಟ್‌ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ಬಿಜೆಪಿ ಆಳ್ವಿಕೆಯ ಕಳೆದ ನಾಲ್ಕು ವರ್ಷಗಳಲ್ಲಿ ಮುಖ್ಯಧಾರೆಯ ಬಹಳಷ್ಟು ಮಾಧ್ಯಮಗಳು ತಲೆಬಾಗುವಂತೆ ಬಲವಂತ ಮಾಡಲಾಗಿದೆ. ಸರಕಾರದ ಬಗ್ಗೆ ವಿಮರ್ಶಾತ್ಮಕವಾಗಿ ಮಾತಾಡುವ ಅಥವ ಅದರ ವಿವಿಧ ದುಷ್ಕೃತ್ಯಗಳನ್ನು ಬಯಲಿಗೆಳೆಯುವ ಧೈರ್ಯ ತೋರಿಸಿದವರೆಲ್ಲರ ಬಾಯಿ ಮುಚ್ಚಿಸಲಾಗಿದೆ. ಸರಕಾರದ ಬಗ್ಗೆ ವಿಮರ್ಶೆ ಮಾಡುವ ಟಿವಿ ಕಾರ್ಯಕ್ರಮಗಳನ್ನು ಜನ ನೋಡಲಾಗದಂತೆ ಬ್ಲಾಕ್ ಮಾಡಲಾಗುತ್ತಿದೆ ಎಂಬ ವರದಿಗಳಿವೆ. ವಿಮರ್ಶೆಗಳ ಬಗ್ಗೆ ಇಂತಹ ಅಸಹಿಷ್ಣುತೆ ಮತ್ತು ಮಾಧ್ಯಮಗಳಿಗೆ ಬಹಿರಂಗ ಬೆದರಿಕೆಗಳು ಪ್ರಜಾಪ್ರಭುತ್ವಕ್ಕೆ ಕೆಡಕುಂಟು ಮಾಡುತ್ತವೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಪಿಣರಾಯಿ ವಿಜಯನ್ ಮೇಲೆ ವಿಫಲ ಹಲ್ಲೆ

ನವದೆಹಲಿಯ ಕೇರಳ ಸದನದ ಆವರಣದೊಳಗೆ ಪಿಐ(ಎಂ) ಪೊಲಿಟ್‌ಬ್ಯುರೊ ಸದಸ್ಯರು ಹಾಗೂ ಕೇರಳದ ಮುಖ್ಯಮಂತ್ರಿಗಳೂ ಆಗಿರುವ ಪಿಣರಾಯಿ ವಿಜಯನ್ ಮೇಲೆ ಹಲ್ಲೆ ನಡೆಸುವ ಪ್ರಯತ್ನವನ್ನು ಪೊಲಿಟ್‌ಬ್ಯುರೊ ಖಂಡಿಸಿದೆ. ಇಂತಹ ಒಂದು ಘಟನೆ ಹೇಗೆ ನಡೆದಿದೆ ಎಂಬುದರ ತನಿಖೆ ನಡೆಸಬೇಕು ಎಂದು ಅದು ಹೇಳಿದೆ.

ಪಾಕಿಸ್ತಾನದೊಂದಿಗೆ ಮಾತುಕತೆ

ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಲಿರುವವರು ಭಾರತದೊಡನೆ ಕಾಶ್ಮೀರ ಪ್ರಶ್ನೆಯೂ ಸೇರಿದಂತೆ ಮಾತುಕತೆ ನಡೆಸುವ ಆಶಯವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಭಾರತ ಸರಕಾರ ತನ್ನ ಸ್ಪಂದನೆಯ ಬಗ್ಗೆ ತಿಳಿಯಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *