ಕೇರಳದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎಂಟು ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಅಪಾರ ಹಾನಿಗಳನ್ನು ಉಂಟು ಮಾಡಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಗಂಭೀರ ಆತಂಕವನ್ನು ವ್ಯಕ್ತಪಡಿಸಿದೆ.
ಸುಮಾರು 6000ಮಂದಿ ಮನ ಕಳಕೊಂಡಿದ್ದಾರೆ, 29 ಜನ ಸತ್ತಿದ್ದಾರೆ. ಹಲವೆಡೆಗಳಲ್ಲಿ ರಸ್ತೆಗಳು, ಮನೆಗಳಿಗೆ ಭಾರೀ ಹಾನಿಯುಂಟಾಗಿದೆ. ಹಾನಿಗಳ ಪ್ರಮಾಣವನ್ನು ಇನ್ನೂ ಅಂದಾಜು ಮಾಡಲಾಗಿಲ್ಲ. ಆದರೆ ಅದು ಸಾವಿರಾರು ಕೋಟಿ ರೂ.ಗಳಷ್ಟಾಗಬಹುದೆಂದು ಸ್ಪಷ್ಟವಾಗಿದೆ.
ರಾಜ್ಯ ಸರಕಾರ ಜನಗಳ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿಗೆ ಸಾಧ್ಯವಾದುದೆಲ್ಲವನ್ನೂ ಮಾಡುತ್ತಿದೆ. ಕೇಂದ್ರ ಸರಕಾರ ತುರ್ತಾಗಿ ಎಲ್ಲ ಅಗತ್ಯ ನೆರವುಗಳನ್ನು ಒದಗಿಸಬೇಕು ಎಂದು ಪೊಲಿಟ್ಬ್ಯುರೊ ಆಗ್ರಹಿಸಿದೆ.
ವಿವಿಧ ಸಂಘಟನೆಗಳು ಮತ್ತು ಜನಗಳು ಈಗಾಗಲೇ ಒಟ್ಟಾಗಿ ರಕ್ಷಣೆ ಮತ್ತು ಪರಿಹಾರ ಕೆಲಸಗಳಿಗೆ ಇಳಿದಿದ್ದಾರೆ. ಇವುಗಳಲ್ಲಿ ಅರ್ಪಣಾ ಭಾವದಿಂದ ಕೈಜೊಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಪಕ್ಷದ ಎಲ್ಲ ಸದಸ್ಯರು ಮತ್ತು ಹಿತೈಷಿಗಳಿಗೆ ಕರೆ ನೀಡಿದೆ.