ತ್ರಿಪುರಾದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಉಂಟಾಗಿರುವ ಪರಿಸ್ಥಿತಿಯಲ್ಲಿ ಮಾನವೀಯ ಪರಿಹಾರಕ್ಕೆ ಹಣ ಸಂಗ್ರಹವೂ ದಾಳಿಗೊಳಗಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯರೊ ಬಲವಾಗಿ ಖಂಡಿಸಿದೆ.
ತ್ರಿಪುರಾ ರಾಜ್ಯ ಸಮಿತಿ ನೆರೆಪೀಡಿತ ಕೇರಳದಲ್ಲಿ ಪರಿಹಾರ ಕೆಲಸಗಳಿಗಾಗಿ ಜನಗಳಿಂದ ನಿಧಿ ಸಂಗ್ರಹದಲ್ಲಿ ತೊಡಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆತಿದೆ.
ಆದರೆ ಆಗಸ್ಟ್ 27ರಂದು ಅಗರ್ತಲಾದ ಮಹಾರಾಜ್ಗಂಜ್ ಬಝಾರ್, ಖೊವಾಯ್ ಪಟ್ಟಣ ಮತ್ತು ಬೆಲೊನಿಯ ಪಟ್ಟಣದಲ್ಲಿ ಬಿಜೆಪಿ ಮಂದಿ ಸಿಪಿಐ(ಎಂ) ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ನಿಧಿ ಸಂಗ್ರಹ ಮಾಡಬಾರದು ಎಂದು ದೈಹಿಕವಾಗಿ ತಡೆದರು. ಪೊಲೀಸರ ಸಮ್ಮುಖವೇ ಬಿಜೆಪಿ ಮಂದಿ ಪರಿಹಾರ ನಿಧಿ ಸಂಗ್ರಹಕ್ಕೆ ನೇತೃತ್ವ ನೀಡುತ್ತಿದ್ದ ಶಾಸಕರಾದ ಬಾದಲ್ ಚೌಧುರಿ ಮತ್ತು ಸುಧನ್ ದಾಸ್ ಮತ್ತು ಮಾಜಿ ಶಾಸಕ ಬಾಸುದೇಬ್ ಮಜುಂದಾರ್ ಮತ್ತಿತರ ಮುಖಂಡರನ್ನು ತಡೆದರು.
ಖೊವಾಯ್ ಪಟ್ಟಣದಲ್ಲಿ ನಿಧಿ ಸಂಗ್ರಹ ತಂಡ ನೇತೃತ್ವವನ್ನು ಕಾರ್ಯದರ್ಶಿ ಪದ್ಮ ದೇಬ್ಬರ್ಮ ಮತ್ತು ಶಾಸಕ ನಿರ್ಮಲ್ ಬಿಸ್ವಾಸ್ ವಹಿಸಿದ್ದರು. ಅವರನ್ನು ನಿಧಿ ಸಂಹ್ರಹಿಸದಂತೆ ತಡೆದುದು ಮಾತ್ರವಲ್ಲ, ಅವರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಲಾಯಿತು.
ಇವು ಪ್ರಜಾಪ್ರಭುತ್ವ-ವಿರೋಧಿ ಮತ್ತು ಸಮಾಜ-ವಿರೋಧಿ ಚಟುವಟಿಕೆಗಳು ಎಂದು ಬಲವಾಗಿ ಖಂಡಿಸಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ರಾಜ್ಯ ಸರಕಾರ ತಕ್ಷಣವೇ ಪ್ರತಿಪಕ್ಷಗಳು ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.