ಮಾನವ ಹಾಗೂ ನಾಗರೀಕ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿರುವ ಕಾರ್ಯಕರ್ತರು ಮತ್ತು ಎಡ ಚಿಂತಕ ಬುದ್ದಿಜೀವಿಗಳ ಮನೆಗಳ ಮೇಲೆ ನಿನ್ನೆ ದೇಶದಾದ್ಯಂತ ಪೋಲೀಸರು ದಾಳಿ ನಡೆಸಿ ಬಂಧಿಸಿದ ಕ್ರಮಗಳನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ದ ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ.
ಈ ಧಾಳಿಗಳನ್ನು ಮುಖ್ಯವಾಗಿ ಮುಂಬೈ, ದೆಹಲಿ, ರಾಂಚಿ, ಗೋವಾ, ಹೈದರಾಬಾದ್ಗಳಲ್ಲಿ ನಡೆಸಿ, ಪ್ರಮುಖರಾದ ಸುಧಾ ಭಾರದ್ವಜ, ವರವರರಾವ್, ಗೌತಮ್ ಮುಂತಾದವರನ್ನು ಬಂಧಿಸಲಾಗಿದೆ. ಅದೇ ರೀತಿ, ಈ ಧಾಳಿಗಳ ಮೂಲಕ ಅವರ ಲ್ಯಾಪ್ಟ್ಯಾಪ್, ಮೊಬೈಲ್, ಪತ್ರಿಕೆಗಳು ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಹಲವರನ್ನು ಬಂಧಿಸಲು ಕ್ರಮವಹಿಸಲಾಗುತ್ತಿದೆ.
ಇದು ಭೀಮಾ ಕೊರೆಗಾಂವ್ನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ನಂತರ ಮಹಾರಾಷ್ಠ್ರದ ಪೋಲೀಸರು ಕೇಂದ್ರದ ಏಜೆನ್ಸಿಗಳ ಸಹಾಯದ ಮೂಲಕ ದಲಿತ ಹಕ್ಕುಗಳಿಗಾಗಿ ಸಕ್ರಿಯವಾಗಿರುವವರ ಹಾಗೂ ಈ ಸಂಬಂಧಿ ಕೇಸುಗಳನ್ನು ನಿರ್ವಹಿಸುತ್ತಿರುವ ವಕೀಲರುಗಳ ಮೇಲೆ ನಡೆಸಲಾಗುವ ದೌರ್ಜನ್ಯಗಳ ಮುಂದುವರಿಕೆಯ ಭಾಗವಾಗಿದೆ. ಇವರ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಹಲವು ಕರಾಳ ಕಾಯ್ದೆಗಳಡಿ ಮೊಕದ್ದಮೆ ಹೂಡಿ ಕ್ರಮವಹಿಸಲಾಗುತ್ತಿದೆ.
ಇವೆವು ಜನ ವಿರೊಧಿ ಹಾಗೂ ಪ್ರಜಾಸತ್ತಾತ್ಮಕ ವಿರೋಧಿ ಕೃತ್ಯಗಳಾಗಿವೆ. ಕೂಡಲೇ ಬಂಧಿಸಿದ ಈ ಎಲ್ಲಾ ಪ್ರಮುಖರನ್ನ್ಲು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ಹೂಡಲಾಗಿರುವ ಎಲ್ಲಾ ಸುಳ್ಳು ಮೊಕದ್ದಮೆಗಳನ್ನು ವಾಪಾಸು ಪಡೆಯಬೇಕೆಂದು ಕೇಂದ್ರ ಹಾಗೂ ಮಹಾರಾಷ್ಠ್ರ ಸರಕಾರಗಳನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ರಾಜ್ಯಸಮಿತಿ ಒತ್ತಾಯಿಸುತ್ತದೆ.