ಕೇಂದ್ರ ಸರಕಾರ ತ್ರಿವಳಿ ತಲಾಖ್ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಿರುವುದರ ಹಿಂದಿರುವುದು ಮುಸ್ಲಿಂ ಮಹಿಳೆಯರ ಕಲ್ಯಾಣದ ಬದಲು ಬೇರೆಯೇ ಪರಿಗಣನೆ, ಇದರ ಅಗತ್ಯವಿರಲಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಯಲ್ಲಿದೆ. ಅದರ ಮೇಲೆ ಪೂರ್ಣ ಪ್ರಮಾಣದ ಚರ್ಚೆಯಾಗಬೇಕಿದೆ. ಒಂದು ಆಯ್ಕೆ ಸಮಿತಿಗೆ ಅದನ್ನು ಒಪ್ಪಿಸಬೇಕೇ ಎಂಬ ಚರ್ಚೆಯೂ ನಡೆಯುತ್ತಿದೆ. ಈಗ ಹೊರಡಿಸಿರುವ ಸುಗ್ರೀವಾಜ್ಷೆ ಸಂಸತ್ತನ್ನು ಬದಿಗೆ ತಳ್ಳುವ ಒಂದು ಪ್ರಜಾಪ್ರಭುತ್ವ-ವಿರೋಧಿ ಹೆಜ್ಜೆ ಎಂದು ಪೊಲಿಟ್‌ಬ್ಯುರೊ ಟೀಕಿಸಿದೆ.
ಈಗಾಗಲೇ ಸುಪ್ರಿಂ ಕೋರ್ಟ್ ತೀರ್ಪು ವಿವಾಹ ವಿಚ್ಛೇದನದ ತ್ರಿವಳಿ ತಲಾಖ್ ವಿಧಾನ ಕಾನೂನುಬಾಹಿರ ಎಂದು ಘೋಷಿಸಿದೆ. ಈ ಶಾಸನ ಒಂದು ಸಿವಿಲ್ ತಪ್ಪನ್ನು ಕ್ರಿಮಿನಲ್ ಅಪರಾಧವಾಗಿ ಮಾಡಿ ಗರಿಷ್ಟ ಮೂರು ವರ್ಷಗಳ ಶಿಕ್ಷೆ ಕೊಡಬೇಕೆಂದು ಹೇಳುತ್ತದೆ. ಇದು ತಪ್ಪಾಗಿ ಪರಿಕಲ್ಪಿಸಿರುವ ಒಂದು ಕ್ರಮವಾಗಿದ್ದು, ಸಂತ್ರಸ್ತ ಮಹಿಳೆಯರ ಹಿತಗಳಿಗೆ ನೆರವಾಗುವಂತದ್ದಲ್ಲ ಎಂದಿರುವ ಸಿಪಿಐ(ಎಂ), ಈ ಮಸೂದೆಯಲ್ಲಿ ಇನ್ನಿತರ ದೋಷಗಳೂ ಇವೆ ಎಂದಿದೆ.
ಇದು ಆಳುವ ಪಕ್ಷದ ರಾಜಕೀಯ ಹಿತ ಈಡೇರಿಸಲಿಕ್ಕಾಗಿ ರೂಪಿಸಿರುವಂತದ್ದು. ಇದನ್ನು ಒಪ್ಪಲು ಸಾಧ್ಯವಿಲ್ಲ ಎನ್ನುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ, ಸಂಸತ್ತು ಈ ವಿಷಯದಲ್ಲಿ ಒಂದು ಪರಿಷ್ಕೃತ ಶಾಸನವನ್ನು ಅಂಗೀಕರಿಸಬೇಕು ಎಂದಿದೆ.