ಕೋಟ್ಯಂತರ ಬಡಜನರ ಸಾರ್ವತ್ರಿಕ ಹಕ್ಕುಗಳ ನಿರಾಕರಣೆ: ಸಿಪಿಐ(ಎಂ) ಪೊಲಿಟ್ಬ್ಯುರೊ
ಆಧಾರ್ ಯಾವುದೇ ಕಲ್ಯಾಣ ಯೋಜನೆಗೆ ಕಡ್ಡಾಯವಾಗಬಾರದು ಎಂಬುದು ಸದಾ ಸಿಪಿಐ(ಎಂ) ತಳೆದಿರುವ ನಿಲುವು. ವಾಸ್ತವ ಸಂಗತಿಯೆಂದರೆ, ಲಕ್ಷಾಂತರ ಬಡಜನರಿಗೆ ಆಧಾರ್-ಪ್ರಮಾಣೀಕರಣ ಇಲ್ಲ ಎಂಬ ಹೆಸರಿನಲ್ಲಿ ಸಾರ್ವತ್ರಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಇದು ತಮ್ಮ ಅಸ್ತಿತ್ವವೇ ಕಲ್ಯಾಣ ಯೋಜನೆಗಳ ಲಭ್ಯತೆಯ ಮೇಲೆ ಅವಲಂಬಿಸಿರುವ ಕೋಟ್ಯಂತರ ಬಡಜನರನ್ನು ಅಪಾಯಕ್ಕೀಡು ಮಾಡುತ್ತದೆ. ದುರದೃಷ್ಟವಶಾತ್ ಸುಪ್ರಿಂ ಕೊರ್ಟಿನ ಬಹುಮತದ ತೀರ್ಪು ಆಧಾರ್ಅನ್ನು ಕಡ್ಡಾಯವಾಗಿ ಉಳಿಸಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖೇದ ವ್ಯಕ್ತಪಡಿಸಿದೆ.
ಸುಪ್ರಿಂ ಕೋರ್ಟ್ ರಕ್ಷಣಾ ಕ್ರಮಗಳು ಎಂದು ಹೇಳಿರುವಂತವುಗಳು ಪರಿಣಾಮಕಾರಿಯಲ್ಲ ಎಂಬುದು ಸಾಬೀತಾಗುತ್ತದೆ ಎಂದಿರುವ ಪೊಲಿಟ್ಬ್ಯುರೊ ಆಧಾರ್ ಕಡ್ಡಾಯವಲ್ಲ ಎಂದು ಸ್ಪಷ್ಟಗೊಳಿಸಿದರೆ ಮಾತ್ರವೇ ಬಡ ಮತ್ತು ಅಂಚಿಗೆ ತಳ್ಳಲ್ಪಟ್ಟಿರುವ ವಿಭಾಗಗಳಿಗೆ ಸೌಲಭ್ಯಗಳು ತಲುಪಲು ಸಾಧ್ಯ ಎನ್ನುತ್ತ ಸಿಪಿಐ(ಎಂ) ಈ ನಿಟ್ಟಿನಲ್ಲಿ ತನ್ನ ಹೋರಾಟವನ್ನು ಮುಂದುವರೆಸುತ್ತದೆ ಎಂದಿದೆ.
ಸರ್ವೋಚ್ಚ ನ್ಯಾಯಾಲಯವು ಖಾಸಗಿ ಕಂಪನಿಗಳು ಆಧಾರ್ ಮಾಹಿತಿಗಳನ್ನು ಪಡೆಯುವಂತಿಲ್ಲ, ಮತ್ತು ಬ್ಯಾಂಕ್ ಖಾತೆಗಳು, ಮೊಬೈಲ್ ಸಂಪರ್ಕಗಳು, ಶೈಕ್ಷಣಿಕ ಸಂಸ್ಥೆಗಳಿಗೆ, ಪರೀಕ್ಷೆಗಳಿಗೆ ಪ್ರವೇಶಕ್ಕೆ ಆಧಾರ್ ಬೇಕಾಗಿಲ್ಲ ಎಂದೂ ತೀರ್ಪಿನಲ್ಲಿ ಹೇಳಿದೆ. ಇದು ಖಾಸಗಿತ್ವದ ಹಕ್ಕಿಗೆ ಸ್ವಲ್ಪ ಮಟ್ಟಿನ ರಕ್ಷಣೆ ನೀಡಿದರೂ, ಒಂದು ದೊಡ್ಡ ಸಮಸ್ಯೆಯೆಂದರೆ, ಈ ಕೇಂದ್ರ ಸರಕಾರ ಹಲವು ಸರಕಾರೀ ಜವಾಬ್ದಾರಿಗಳನ್ನು ಖಾಸಗೀಕರಿಸಿದೆ ಮತ್ತು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ನೀಡಿದೆ. ಇಂತಹ ಕಂಪನಿಗಳಿಗೆ ಆಧಾರ್ ಮಾಹಿತಿಗಳು ಲಭ್ಯವಿರುತ್ತವೆ. ಇದು ಸರ್ವೋಚ್ಚ ನ್ಯಾಯಾಲಯವೇ ಒಂದು ಮೂಲಭೂತ ಹಕ್ಕು ಎಂದಿರುವ ಖಾಸಗಿತ್ವದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಗಮನ ಸೆಳೆದಿದೆ.
ನ್ಯಾಯಮೂರ್ತಿ ಚಂದ್ರಚೂಡ್ ತನ್ನ ಅಲ್ಪಮತದ ತೀರ್ಪಿನಲ್ಲಿ ಆಧಾರ್ ಶಾಸನವನ್ನು ಒಂದು ಹಣದ ಮಸೂದೆಯಾಗಿ ಪಾಸು ಮಾಡಿಸಿರುವುದು ಸಂವಿಧಾನಕ್ಕೆ ಮಾಡಿರುವ ಒಂದು ಮೋಸ ಎಂದು ಹೇಳಿರುವುದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಸ್ವಾಗತಿಸಿದೆ.