ದೇಶದ ಐಕ್ಯತೆಯನ್ನು ನಾಶ ಮಾಡಲು ಹೊರಟಿರುವ ಶಕ್ತಿಗಳನ್ನು ಪೋಷಿಸುವುದನ್ನು ನಿಲ್ಲಿಸಬೇಕು
ಅಯೋಧ್ಯಾ ವಿವಾದದ ಮೊಕದ್ದಮೆಯನ್ನು ಮುಂದೆ ಕೈಗೆತ್ತಿಕೊಳ್ಳುವ ಸುಪ್ರಿಂ ಕೋರ್ಟ್ ನಿರ್ಧಾರದ ಸುತ್ತ ಬೆಳೆಯುತ್ತಿರುವ ಸನ್ನಿವೇಶ ಬಹಳ ಆತಂಕಕಾರಿಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಹೇಳಿದೆ.
ಬಿಜೆಪಿ-ಆರೆಸ್ಸೆಸ್ ಮುಖಂಡರು ಮತ್ತು ಬಿಜೆಪಿ ಸರಕಾರದ ಕೇಂದ್ರ ಮಂತ್ರಿಗಳು 1992ರ ಪರಿಸ್ಥಿತಿಯನ್ನು ಸೃಷ್ಟಿಸುವ ಬೆದರಿಕೆ ಹಾಕುತ್ತಾರೆ. ಬಾಬ್ರಿ ಮಸೀದಿಯ ಧ್ವಂಸ ಮತ್ತು ಅದನ್ನನುಸರಿಸಿ ದೇಶಾದ್ಯಂತ ರಕ್ತಪಾತದ ಜಾಡು ಮತ್ತು ಕೋಮುಗಲಭೆಗಳಿಗೆ ಕಾರಣವಾದ ಪರಿಸ್ಥಿತಿಯದು.
1994ರ ಸುಪ್ರಿಂ ಕೋರ್ಟ್ ತೀರ್ಪು ಬಾಬ್ರಿ ಮಸೀದಿ ಧ್ವಂಸವನ್ನು ಒಂದು ‘ರಾಷ್ಟ್ರೀಯ ನಾಚಿಕೆಗೇಡಿನ’ ಸಂಗತಿ ಎಂದು ವರ್ಣಿಸಿತ್ತು, “ಧ್ವಂಸ ಮಾಡಿರುವುದು ಕೇವಲ ಒಂದು ಪ್ರಾಚೀನ ಕಟ್ಟಡವನ್ನಲ್ಲ, ಬದಲಿಗೆ ಬಹುಸಂಖ್ಯಾತರು ನ್ಯಾಯಯುತವಾಗಿ, ವರ್ತಿಸುವ ಸಮಭಾವ ಹೊಂದಿರುವವರು ಎಂದು ಅಲ್ಪಸಂಖ್ಯಾತರಲ್ಲಿದ್ದ ವಿಶ್ವಾಸವನ್ನು ಧ್ವಂಸ ಮಾಡಿದೆ. ಅದು ಕಾನೂನಿನ ಆಳ್ವಿಕೆ ಮತ್ತು ಸಂವಿಧಾನಿಕ ಪ್ರಕ್ರಿಯೆಯಲ್ಲಿ ಅವರ ವಿಶ್ವಾಸವನ್ನು ಅಲುಗಾಡಿಸಿದೆ” ಎಂದು ಅದು ಹೇಳಿತ್ತು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ನೆನಪಿಸಿದೆ.
ತಾನು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರುತ್ತೇನೆ ಎಂದು ಬಿಜೆಪಿ ಅಧಿಕೃತವಾಗಿ ಹೇಳಿತ್ತು. ಆದರೆ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಂತೆ ಅದೀಗ ತಿಪ್ಪರಲಾಗದಲ್ಲಿ ತೊಡಗಿಕೊಂಡಿದೆ. ಆರೆಸ್ಸೆಸ್ ನೇತೃತ್ವದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಒಂದು ಹೊಸ ಕಾನೂನನ್ನು ತರಬೇಕು ಎಂಬ ಆಗ್ರಹದೊಂದಿಗೆ ಗದ್ದಲ . ಉಂಟು ಮಾಡಲಾಗುತ್ತಿದೆ. ಇದು ನ್ಯಾಯಾಂಗ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಪ್ರಯತ್ನ ಎಂದೇ ಹೇಳಬೇಕಾಗುತ್ತದೆ, ಇದು ಸಂವಿಧಾನಬಾಹಿರ, ಅದರಿಂದಾಗಿ ಕಾನೂನುಬಾಹಿರ ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಹೇಳಿದೆ.
ಅಯೋಧ್ಯಾ ವಿವಾದದ ಮೇಲೆ ಭಾವೋನ್ಮಾದವನ್ನು ಬಡಿದೆಬ್ಬಿಸಿ ಮತ್ತು ದೇವಸ್ಥಾನದ ನಿರ್ಮಾಣದ ಬೇಡಿಕೆಯನ್ನು ಎತ್ತುವ ಮೂಲಕ ಆರೆಸ್ಸೆಸ್/ಬಿಜೆಪಿ ದೇಶದಲ್ಲಿ ಕೋಮುಧ್ರುವೀಕರಣವನ್ನು ಇನ್ನಷ್ಟು ತೀಕ್ಷ್ಣ ಗೊಳಿಸಲು ಪ್ರಯತ್ನಿಸುತ್ತಿವೆ, ಇದು ಭೀಕರ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ಎಚ್ಚರಿಸಿರುವ ಸಿಪಿಐ(ಎಂ) ಪೊಲಿಟ್ಬ್ಯುತರೊ ಚುನಾವಣೆಗಳಿಗೆ ಸಿದ್ಧತೆಯಾಗಿ ಹಿಂದುತ್ವವ ಕೋಮುವಾದಿ ಮತಬ್ಯಾಂಕನ್ನು ಕ್ರೋಡೀಕರಿಸುವ ಪ್ರಯತ್ನವು ಮೋದಿ ಸರಕಾರದ ಸರ್ವತೋಮುಖ ವಿಫಲತೆಯಿಂದ ಜನಗಳ ಗಮನವನ್ನು ಬೇರೆಡೆಗೆ ಸೆಳೆಯುತ್ತದಲ್ಲದೆ, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಗಂಭೀರ ಅಪಾಯವನ್ನು ಒಡ್ಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.
ಬಿಜೆಪಿ ಕೇಂದ್ರ ಸರಕಾರ ನಮ್ಮ ದೇಶದ ಸಾಮಾಜಿಕ ಹಂದರದ ಐಕ್ಯತೆಯನ್ನು ನಾಶ ಮಾಡಲು ಹೊರಟಿರುವ ಇಂತಹ ಶಕ್ತಿಗಳನ್ನು ಪೋಷಿಸುವುದನ್ನು ನಿಲ್ಲಿಸಬೇಕು ಮತ್ತು ಉತ್ತರಪ್ರದೇಶದಲ್ಲಿ ಬಿಜೆಪಿ ರಾಜ್ಯ ಸರಕಾರ ಕಾನೂನು ಮತ್ತು ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ತನ್ನ ಜವಾಬ್ದಾರಿಗಳನ್ನು ವಿಧೇಯವಾಗಿ ನಿಭಾಯಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಕರೆ ನೀಡಿದೆ.