(ನವದೆಹಲಿಯಲ್ಲಿ ಅಕ್ಟೋಬರ್ 6-8, 2018ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿ ಅಂಗೀಕರಿಸಿದ್ದು)
17ನೇ ಸಾರ್ವತ್ರಿಕ ಚುನಾವಣೆಗಳ ಸಂದರ್ಭ
೨೦೧೪ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ವಂತ ಬಹುಮತದಿಂದ ಚುನಾಯಿತಗೊಂಡ ಬಿಜೆಪಿ ಕೇಂದ್ರ ಸರಕಾರದ ಹತೋಟಿ ಹೊಂದಿದೆ. ನರೇಂದ್ರ ಮೋದಿ ನೇತೃತ್ವದ ಈ ಬಿಜೆಪಿ ಸರಕಾರ ಒಂದು ಪೂರ್ಣ ಅವಧಿಯನ್ನು ಪೂರೈಸಿದ ನಂತರ ೧೭ನೇ ಲೋಕಸಭಾ ಚುನಾವಣೆಗಳು ನಡೆಯಲಿವೆ. ಮೋದಿ ಸರಕಾರ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ವಿದೇಶಾಂಗ ಧೋರಣೆಯ ಕ್ಷೇತ್ರಗಳಲ್ಲಿ ಅನುಸರಿಸಿರುವ ಧೋರಣೆಗಳು ಬಿಜೆಪಿ ಸರಕಾರದ ಮುಂದುವರಿಕೆ ಜನತೆಯ ಜೀವನೋಪಾಯಕ್ಕೆ ಮತ್ತು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಎಷ್ಟೊಂದು ಹಾನಿಕಾರಕ ಎಂಬುದನ್ನು ತೀಕ್ಷ್ಣ ರೀತಿಯಲ್ಲಿ ಪ್ರದರ್ಶಿಸಿವೆ.
ಈ ಮೋದಿ ಸರಕಾರದ ಅಡಿಯಲ್ಲಿ, ಆರೆಸ್ಸೆಸ್ ವ್ಯವಸ್ಥಿತವಾಗಿ ಪ್ರಭುತ್ವದ ಅಂಗಗಳಲ್ಲಿ ತಳವೂರಿಕೊಳ್ಳುತ್ತಿದೆ ಮತ್ತು ದೇಶಾದ್ಯಂತ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿದೆ. ಪ್ರಭುತ್ವ ಅಧಿಕಾರದ ಮೇಲೆ ಆರೆಸ್ಸೆಸ್ನ ಕ್ರೋಡೀಕರಣ ಅದಕ್ಕೆ ತನ್ನ ಫ್ಯಾಸಿಸ್ಟ್ ಮಾದರಿ ಹಿಂದುತ್ವ ಅಜೆಂಡಾವನ್ನು ಮುಂದೊತ್ತಲು ಅನುವು ಮಾಡಿ ಕೊಡುತ್ತಿದೆ.
ಮೋದಿ ಸರಕಾರ ಭಾರತೀಯ ಜನತೆ ಮತ್ತು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಯ ಮೇಲೆ ನಾಲ್ಕು ಅಲಗುಗಳ ಒಂದು ದುಷ್ಟ ದಾಳಿಯನ್ನು ಹರಿಯ ಬಿಟ್ಟಿದೆ. ಅದು ನವ-ಉದಾರವಾದ ಧೋರಣೆಗಳನ್ನು ಆಕ್ರಾಮಕವಾಗಿ ಅನುಸರಿಸಿದೆ; ಕೋಮುವಾದಿ ಧ್ರುವೀಕರಣವನ್ನು ದುಷ್ಟತನದಿಂದ ತೀಕ್ಷ್ಣಗೊಳಿಸಿದೆ, ದಲಿತರು ಮತ್ತು ಮುಸ್ಲಿಮರ ಮೇಲೆ ಹೆಚ್ಚೆಚ್ಚು ದಾಳಿಗಳು ಇದರ ಹೆಗ್ಗುರುತು; ನಮ್ಮ ಸಂಸದೀಯ ಪ್ರಜಾಪ್ರಭುತ್ವ ಮತ್ತು ಶಿಕ್ಷಣ ವ್ಯವಸ್ಥೆಯ ವಿವಿಧ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಶಿಥಿಲಗೊಳಿಸುತ್ತ ಹೆಚ್ಚೆಚ್ಚು ಮಟ್ಟದ ಸರ್ವಾಧಿಕಾರಶಾಹಿಯ ಪ್ರದರ್ಶನ ಮಾಡಿದೆ; ಮತ್ತು ಅದು ಭಾರತವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಾಮ್ರಾಜ್ಯಶಾಹಿಯ ಒಂದು ಅಡಿಯಾಳು ಆಯಕಟ್ಟಿನ ಮಿತ್ರನ ಮಟ್ಟಕ್ಕೆ ಇಳಿಸಿದೆ.
ಮೋದಿ ಸರಕಾರ ನಮ್ಮ ಆರ್ಥಿಕ ಸಾರ್ವಭೌಮತೆಯನ್ನು ದುರ್ಬಲಗೊಳಿಸಿರುವ ಮತ್ತು ನಮ್ಮ ಬಹುಪಾಲು ಜನತೆಯ ಮೇಲೆ ಅಭೂತಪೂರ್ವ ಹೊರೆಗಳನ್ನು ಹೇರಿರುವ ಶ್ರೀಮಂತ-ಪರ, ಸಾಮ್ರಾಜ್ಯಶಾಹಿ-ಪರ, ನವ-ಉದಾರವಾದಿ ಧೋರಣೆಗಳನ್ನು ಆಕ್ರಾಮಕ ರೀತಿಯಲ್ಲಿ ಅನುಸರಿಸಿದೆ. ಈ ಮೋದಿ ಸರಕಾರ ತನಗೆ ದೊರೆತ ಜನಾದೇಶಕ್ಕೆ ವಿಶ್ವಾಸಘಾತ ಬಗೆದಿದೆ ಮತ್ತು ಸಾರ್ವಜನಿಕ ವಲಯದ ಆಸ್ತಿಗಳನ್ನು ಖಾಸಗೀಕರಿಸಿದೆ ಹಾಗೂ ಅವನ್ನು ಭಾರತೀಯ ಮತ್ತು ವಿದೇಶಿ ದೊಡ್ಡ ವ್ಯಾಪಾರಸ್ಥರಿಗೆ ವಹಿಸಿಕೊಡುತ್ತಿದೆ. ಈ ಪ್ರಕ್ರಿಯೆಯಲ್ಲಿ, ಅದು ಎರಡು ಭಾರತದ ವಿಭಜನೆಯನ್ನು ಗಟ್ಟಿಗೊಳಿಸಿದೆ, ಮತ್ತು ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗ ಕಂದರವನ್ನು ವಿಪರೀತವಾಗಿ ಹೆಚ್ಚಿಸಿದೆ- ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ.
ಉನ್ನತ ಮೌಲ್ಯಗಳ ನೋಟುಗಳನ್ನು ಅನಾಣ್ಯೀಕರಿಸಿರುವುದು ಕೋಟ್ಯಂತರ ಜನಗಳ ಜೀವನೋಪಾಯವನ್ನು ಧ್ವಂಸಗೊಳಿಸಿದೆ, ಆ ಮೂಲಕ ನಗದು ವ್ಯವಹಾರಗಳ ಮೇಲೆ ಬದುಕುಳಿದವರನ್ನು ನಿರುದ್ಯೋಗಿಗಳಾಗಿಸಿದೆ ಮತ್ತು ದೇಶದ ಅನೌಪಚಾರಿಕ ವಲಯವನ್ನು ಸುಮಾರಾಗಿ ಹಾಳುಗೆಡವಿಯೇ ಬಿಟ್ಟಿದೆ. ಜಿಎಸ್ಟಿಯನ್ನು ಜಾರಿಗೊಳಿಸುತ್ತಿರುವ ರೀತಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್ಎಂಇ) ಉದ್ದಿಮೆಗಳ ಬೆನ್ನೆಲುಬನ್ನು ಮುರಿದಿದೆ-ಈ ವಲಯ ಕೃಷಿಯ ನಂತರ ಅತಿ ದೊಡ್ಡ ಉದ್ಯೋಗದಾತ. ಜನಗಳಿಗೆ ನೀಡಿರುವ ಎಲ್ಲ ಆಶ್ವಾಸನೆಗಳಲ್ಲಿ ವಿಶ್ವಾಸಘಾತ ಬಗೆಯಲಾಗಿದೆ. ಜನಗಳ ಜೀವನೋಪಾಯಗಳ ಮೇಲೆ ಇಂತಹ ದುಷ್ಟ ದಾಳಿಗಳನ್ನು ನಡೆಸಿರುವುದಲ್ಲದೆ, ಈ ಮೋದಿ ಸರಕಾರ, ಚಮಚಾ ಬಂಡವಾಳಶಾಹಿಯ ಅತ್ಯಂತ ಕೆಟ್ಟ ರೂಪದಲ್ಲಿ ತೊಡಗಿಕೊಂಡಿದೆ.
ಆತಂಕಕಾರಿಯಾಗಿ ಏರುತ್ತಿರುವ ಸಾಲ ಸುಸ್ತಿಗಳು ನಮ್ಮ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಗಳನ್ನು ಕುಂಠಿತಗೊಳಿಸಿವೆ. ನಮ್ಮ ಸಾರ್ವಜನಿಕ ಹಣಗಳನ್ನು ಲೂಟಿ ಮಾಡಿದವರು ನಮ್ಮ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಡಲಾಗಿದೆ, ಅವರು ಶಿಕ್ಷೆ ಮತ್ತು ಸಾಲ ಮರುಪಾವತಿ ಈ ಎರಡರಿಂದಲೂ ಪಾರಾಗಿದ್ದಾರೆ. ಆರ್ಥಿಕ ಪ್ರಾಜೆಕ್ಟ್ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆಯ್ದ ಕಾರ್ಪೊರೇಟ್ಗಳಿಗೆ ಉದ್ಧಟತನದಿಂದ ಅನುಕೂಲ ಮಾಡಿಕೊಡಲಾಗುತ್ತಿದೆ. ಫ್ರಾನ್ಸ್ನೊಂದಿಗೆ ರಫೆಲ್ ಜೆಟ್ ವಿಮಾನ ವ್ಯವಹಾರ ಒಂದು ಮಹಾ ಹಗರಣವಾಗುತ್ತಿದೆ ಮತ್ತು ಭ್ರಷ್ಟಾಚಾರ ಮತ್ತು ಲಂಪಟತನದ ಯಾವ ಸಂದರ್ಭದಲ್ಲೂ ಮೋದಿ ಸರಕಾರ ಅವನ್ನು ತಡೆಯಲು ಅಥವ ಅಪರಾಧಿಗಳ ದಂಡನೆಗೆ ಮುಂದಾಗಿಲ್ಲ. ತದ್ವಿರುದ್ಧವಾಗಿ, ಮೋದಿ ಸರಕಾರ ಅವರಿಗೆ ಕೃಪಾಪೋಷಣೆ ನೀಡುತ್ತಿರುವಂತೆ ಕಾಣುತ್ತದೆ.
ಈ ಆರ್ಥಿಕ ಪ್ರಹಾರ, ಅತಿ ಶ್ರೀಮಂತರನ್ನು ಬಿಟ್ಟು, ಭಾರತೀಯ ಸಮಾಜದ ಯಾವ ವಿಭಾಗವನ್ನೂ ತಟ್ಟದೆ ಇಲ್ಲ. ಬೆನ್ನು ಮುರಿಯುವ ಬೆಲೆಯೇರಿಕೆ ನಮ್ಮ ಜನಗಳ ಬಹಳಷ್ಟು ವಿಭಾಗಗಳ ಜೀವನೋಪಾಯಗಳನ್ನು ಕುಂಠಿತಗೊಳಿಸಿದೆ. ನಿರ್ದಿಷ್ಟವಾಗಿ ಪೆಟ್ರೋಲಿಯಂ ಉತ್ಪನ್ನಗಳ ಅಸಹನೀಯ ಬೆಲೆಯೇರಿಕೆ ದೇಶದಲ್ಲಿ ಬಹುಪಾಲು ಕುಟುಂಬಗಳ ಬದುಕುಗಳನ್ನು ಶೋಚನೀಯಗೊಳಿಸಿದೆ. ನಿರುದ್ಯೋಗ ಬೆಳೆಯುತ್ತಿದೆ, ಮತ್ತು ಉದ್ಯೋಹೀನ ಯುವಜನಗಳು ಬೀದಿಗಳಲ್ಲಿದ್ದಾರೆ.
ಸಾಲ ಹೊರೆಗಳಿಂದ ನರಳುತ್ತಿರುವ ರೈತರು ಈಗಲೂ ಹತಾಶರಾಗಿ ಆತ್ಮಹತ್ಯೆಗಿಳಿಯುತ್ತಿದ್ದಾರೆ. ದೇಶದ ವಿಭಿನ್ನ ಭಾಗಗಳಲ್ಲಿ ರೈತಾಪಿ ಜನಗಳು ಸಮರಧೀರ ಹೋರಾಟಗಳಲ್ಲಿ ತೊಡಗಿದ್ದಾರೆ. ಅದೇ ರೀತಿಯಲ್ಲಿ ಕಾರ್ಮಿಕ ವರ್ಗ ನವ-ಉದಾರವಾದಿ ಧೋರಣೆಗಳ ವಿರುದ್ಧ, ಸಾರ್ವಜನಿಕ ವಲಯದ ಲಂಗುಗಾಮಿಲ್ಲದ ಖಾಸಗೀಕರಣದ ವಿರುದ್ಧ ಮತ್ತು ಸತತವಾಗಿ ಹದಗೆಡುತ್ತಿರುವ ಕಾರ್ಮಿಕರ ಬದುಕಿನ ಪರಿಸ್ಥಿತಿಗಳ ವಿರುದ್ಧ ಹೋರಾಟಗಳಲ್ಲಿದೆ. ಕಾರ್ಮಿಕರು, ರೈತರು ಮತ್ತು ಕೃಷಿಕೂಲಿಕಾರರು ಬಲಿಷ್ಟ ಪ್ರತಿಭಟನಾ ಚಳುವಳಿಗಳಲ್ಲಿ ಒಂದುಗೂಡುತ್ತಿದ್ದಾರೆ.
ಮಹಿಳೆಯರ ಮೇಲಿನ ಪ್ರಹಾರಗಳ ಪ್ರಮಾಣ ಏರುತ್ತಿವೆ. ನಮ್ಮ ಸಮಾಜದ ದಿಗಿಲುಂಟುಮಾಡುವ ಅಮಾನವೀಕರಣ ಭೀಕರವಾಗಿ ಬೆಳೆಯುತ್ತಿರುವ ಮಕ್ಕಳ ಮೇಲಿನ ಬಲಾತ್ಕಾರಗಳು ಮತ್ತು ಹತ್ಯೆಗಳಲ್ಲಿ ಕಾಣಬರುತ್ತಿದೆ. ಬಡವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸಲ್ಲಬೇಕಾದವುಗಳು ಮತ್ತು ನೆರವುಧನ ಪಡೆದಿರುವ ಆಹಾರವನ್ನು ವಂಚಿಸಲಾಗುತ್ತಿದೆ. ಮನರೇಗದಂತಹ ಕಲ್ಯಾಣ ಯೋಜನೆಗಳಿಗೆ ಸರಕಾರದಿಂದ ಕೊಡಬೇಕಾದ ಮೊತ್ತಗಳು ಸಿಗದಂತೆ ಮಾಡಲಾಗುತ್ತಿದೆ, ಆ ಮೂಲಕ ಗ್ರಾಮೀಣ ನಿರುದ್ಯೋಗಿಗಳಿಗೆ ಅವರ ಕಾನೂನು ಹಕ್ಕನ್ನು ನಿರಾಕರಿಸಲಾಗುತ್ತಿದೆ. ಕೋಟ್ಯಂತರ ಆದಿವಾಸಿಗಳಿಗೆ ಅರಣ್ಯ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ತಮ್ಮ ಭೂಮಿಯ ಕಾನೂನಾತ್ಮಕ ಸ್ವಾಧೀನ ಇನ್ನೂ ಸಿಕ್ಕಿಲ್ಲ.
ಗೋರಕ್ಷಕರು, ಅಥವ ನೈತಿಕ ಪೋಲೀಸ್ಗಿರಿಯ ಹೆಸರಲ್ಲಿ ಖಾಸಗಿ ಸೇನೆಗಳಿಗೆ ಪ್ರಭುತ್ವದ ಕೃಪಾಪೋಷಣೆ ಮುಗ್ಧ ದಲಿತರು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ದ್ವೇಷ ಪ್ರಚಾರದಿಂದಾಗಿ ಜನಜಂಗುಳಿ ಬಡಿದು ಸಾಯಿಸುವ ಭಯಾನಕ ಘಟನೆಗಳು ಸಂಭವಿಸುವಂತಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕೋಮುಗ್ರಸ್ತಗೊಳಿಸಲಾಗುತ್ತಿದೆ. ಎಲ್ಲ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ನೆಲೆಗೊಳಿಸಲಾಗುತ್ತಿದೆ. ಭಾರತದ ಸಮ್ಮಿಶ್ರ ಇತಿಹಾಸದ ಅಧ್ಯಯನದ ಸ್ಥಾನವನ್ನು ಹಿಂದೂ ಪುರಾಣಗಳು ಆಕ್ರಮಿಸಿಕೊಳ್ಳುತ್ತಿವೆ ಮತ್ತು ಭಾರತೀಯ ತತ್ವಶಾಸ್ತ್ರದ ಶ್ರೀಮಂತ ಪರಂಪರೆಗಳ ಸ್ಥಾನವನ್ನು ಹಿಂದೂ ಧರ್ಮಶಾಸ್ತ್ರಕ್ಕೆ ಕೊಡಲಾಗುತ್ತಿದೆ.
ಒಕ್ಕೂಟ ತತ್ವ ಮತ್ತು ಚುನಾಯಿತ ಸರಕಾರಗಳ ಹಕ್ಕುಗಳು ತೀವ್ರ ಪ್ರಹಾರಕ್ಕೆ ಒಳಗಾಗಿವೆ. ಮೋದಿ ಸರಕಾರದ ಅಡಿಯಲ್ಲಿ, ಕೇಂದ್ರ-ರಾಜ್ಯ ಸಂಬಂಧಗಳು ತೀಕ್ಷ್ಣ ರೀತಿಯಲ್ಲಿ ಹದಗೆಟ್ಟಿವೆ. ಜಿಎಸ್ಟಿಯ ಜಾರಿಯೊಂದಿಗೆ ರಾಜ್ಯಗಳ ಹಣಕಾಸು ಹಕ್ಕುಗಳ ನಿರಾಕರಣೆಯಾಗಿದೆ. ರಾಜ್ಯ ಸರಕಾರಗಳು ತಾವು ನೀಡಿದ ಆಶ್ವಾಸನೆಗಳ ಜಾರಿಗೆ ಸಂಪನ್ಮೂಲಗಳನ್ನು ಎತ್ತುವ ಅವಕಾಶಗನ್ನು ಕಳೆದುಕೊಳ್ಳುತ್ತಿರುವುದರ ಫಲಿತಾಂಶವಾಗಿ ರಾಜ್ಯಗಳ ಸಂಪನ್ಮೂಲಗಳ ಹಿಂಡಿಕೆ ತೀವ್ರಗೊಂಡಿದೆ. ಇದರಿಂದಾಗಿ ಚುನಾಯಿತ ರಾಜ್ಯಸರಕಾರಗಳು ತಮ್ಮ ಜನಾದೇಶಗಳನ್ನು ಜಾರಿಗೆ ತರದಂತೆ ವಂಚಿಸಲಾಗುತ್ತಿದೆ.
ಸ್ವಾತಂತ್ರ್ಯದ ನಂತರ ಇದುವರೆಗೆ ಬೇರಾವ ಸರಕಾರವೂ ಈ ಮೋದಿ ಸರಕಾರದಷ್ಟು ಭಾರತವನ್ನು ಅಮೆರಿಕನ್ ಸಾಮ್ರಾಜ್ಯಶಾಹಿಯ ಜಾಗತಿಕ ಸಾಮರಿಕ ಹಿತಗಳ ಬಾಲಂಗೋಚಿಯಾಗುವ ಮಟ್ಟಕ್ಕೆ ಇಳಿಸಿರಲಿಲ್ಲ. ಭಾರತದ ಖ್ಯಾತಿವೆತ್ತ ಸ್ವತಂತ್ರ ಮತ್ತು ಅಲಿಪ್ತ ವಿದೇಶಾಂಗ ಧೋರಣೆಯನ್ನು ತೊರೆಯಲಾಗಿದೆ. ಎಲ್ಲ ನೆರೆ ದೇಶಗಳೊಂದಿಗೆ ಭಾರತದ ಸಂಬಂಧಗಳು ಹದಗೆಟ್ಟಿವೆ.
೨೦೧೪ರಿಂದೀಚೆಗೆ, ಆರೆಸ್ಸೆಸ್-ಬಿಜೆಪಿ ನಿರ್ದಿಷ್ಟವಾಗಿ ಸಿಪಿಐ(ಎಂ) ಮತ್ತು ಎಡಪಂಥದ ಮೇಲೆ ಗುರಿಯಿಟ್ಟಿವೆ. ಪಶ್ಚಿಮ ಬಂಗಾಲ, ಕೇರಳ ಮತ್ತು ತ್ರಿಪುರಾದಲ್ಲಿ ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಹಲ್ಲೆಗಳು ವಿಪರೀತವಾಗಿ ಹೆಚ್ಚಿವೆ. ತ್ರ್ರಿಪುರಾದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗಳನ್ನನುಸರಿಸಿ, ಆರೆಸ್ಸೆಸ್-ಬಿಜೆಪಿ ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಹತ್ಯಾಕಾರಿ ಪ್ರಹಾರಗಳನ್ನು ವಿಪರೀತಗೊಳಿಸಿವೆ, ಸಿಪಿಐ(ಎಂ) ಕಚೇರಿಗಳನ್ನು ಮತ್ತು ಅದರ ಸಹಯೋಗಿ ಸಾಮೂಹಿಕ ಸಂಘಟನೆಗಳ ಕಚೇರಿಗಳನ್ನು ಧ್ವಂಸ ಮಾಡಿವೆ. ಪ್ರತಿಪಕ್ಷಗಳ ಅಭ್ಯರ್ಥಿಗಳನ್ನು, ನಿರ್ದಿಷ್ಟವಾಗಿ ಸಿಪಿಐ(ಎಂ) ಅಭ್ಯರ್ಥಿಗಳನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಾಮಪತ್ರಗಳನ್ನು ಕೂಡ ಸಲ್ಲಿಸದಂತೆ ಹಿಂಸಾತ್ಮಕವಾಗಿ ತಡೆಯಲಾಗಿದೆ. ಸಿಪಿಐ(ಎಂ)ನ್ನು ಆರೆಸ್ಸೆಸ್-ಬಿಜೆಪಿ ತಮ್ಮ ಪ್ರಧಾನ ಸೈದ್ಧಾಂತಿಕ ಶತ್ರುವಾಗಿ ಮತ್ತು ಕೋಮುವಾದಿ ಶಕ್ತಿಗಳಿಗೆ ಎಡೆಬಿಡದ ಮತ್ತು ಅತ್ಯಂತ ದೃಢವಾದ ವಿರೋಧಿ ಶಕ್ತಿಯಾಗಿ ಕಾಣುತ್ತಿವೆ.
ಪ್ರಧಾನ ಕಾರ್ಯಭಾರ
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಬರುವ ೧೭ನೇ ಲೋಕಸಭಾ ಚುನಾವಣೆಗಳಲ್ಲಿ ಮತ್ತು ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸುವುದು ಸಿಪಿಐ(ಎಂ) ಮತ್ತು ಎಡ ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳ ಮುಂದಿರುವ ಪ್ರಮುಖ ಕಾರ್ಯಭಾರವಾಗಿದೆ. ಅದರ ಪ್ರಕಾರ ಸಿಪಿಐ(ಎಂ) ಸಾರ್ವತ್ರಿಕ ಚುನಾವಣೆಗಳ ನಂತರ ಒಂದು ಜಾತ್ಯತೀತ ಸರಕಾರ ರಚನೆಯಾಗುವಂತೆ ಮಾಡಲು ಕೆಲಸ ಮಾಡುತ್ತದೆ. ಭಾರತೀಯ ಸಂವಿಧಾನದಲ್ಲಿ ನಿರೂಪಿಸಿರುವ ನೀತಿಗಳ ಆಧಾರದಲ್ಲಿ ಭಾರತ ಪ್ರಗತಿ ಹೊಂದುವಂತಾಗಲು ಮತ್ತು ಜಾತ್ಯತೀತ ಪ್ರಜಾಪ್ರಭುತ್ವವನ್ನು, ಆರ್ಥಿಕ ಸಾರ್ವಭೌಮತೆಯನ್ನು ಹಾಗೂ ಸ್ವಾಯತ್ತತೆಯನ್ನು, ಒಕ್ಕೂಟ ತತ್ವವನ್ನು ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವತ್ತ ಮುನ್ನಡೆಯಲು, ಜನತಾ ಹೋರಾಟಗಳ ಮೂಲಕ ಬಿಜೆಪಿಯನ್ನು ಸೋಲಿಸುವುದು ಅತ್ಯಗತ್ಯವಾಗಿದೆ.
ಚುನಾವಣಾ ಕಾರ್ಯತಂತ್ರಗಳು
ಪಕ್ಷವು ಅಂಗೀಕರಿಸಿದ ಚುನಾವಣಾ ಕಾರ್ಯತಂತ್ರಗಳು ಪಕ್ಷದ ೨೨ನೇ ಮಹಾಧಿವೇಶನದ ರಾಜಕೀಯ ನಿರ್ಣಯದಲ್ಲಿ ಹಾಕಿಕೊಟ್ಟ ರಾಜಕೀಯ ಮಾರ್ಗವನ್ನು ಅಳವಡಿಸಿಕೊಳ್ಳಬೇಕಾಗಿದೆ. ಅದು ಹೀಗಿದೆ:
- ಮೋದಿ ಸರಕಾರದ ಸುಮಾರು ನಾಲ್ಕು ವರ್ಷಗಳ ಆಳ್ವಿಕೆಯ ಅನುಭವದ ಹಿನ್ನೆಲೆಯಲ್ಲಿ ಹಿಂದುತ್ವ ಕೋಮುವಾದಿ ಪಡೆಗಳನ್ನು ಏಕಾಂಗಿಯಾಗಿಸಲು ಮತ್ತು ಜನ-ವಿರೋಧಿ ಆರ್ಥಿಕ ಧೋರಣೆಗಳನ್ನು ಹಿಮ್ಮೆಟ್ಟಿಸಲು ಬಿಜೆಪಿಯನ್ನು ಸೋಲಿಸುವುದು ಅತ್ಯಗತ್ಯ.
- ಆದ್ದರಿಂದ ಎಲ್ಲ ಜಾತ್ಯತೀತ ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಅಣಿನೆರೆಸಿ ಬಿಜೆಪಿ ಮತ್ತು ಅದರ ಮಿತ್ರರನ್ನು ಸೋಲಿಸುವುದು ಮುಖ್ಯ ಕರ್ತವ್ಯವಾಗುತ್ತದೆ.
- ಆದರೆ ಇದನ್ನು ಕಾಂಗ್ರೆಸಿನೊಂದಿಗೆ ರಾಜಕೀಯ ಮೈತ್ರಿ ಇಲ್ಲದೆ ಮಾಡಬೇಕು.
- ಆದರೆ ಸಂಸತ್ತಿನಲ್ಲಿ ಒಪ್ಪಿತ ವಿಷಯಗಳ ಮೇಲೆ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳೊಂದಿಗೆ ಒಂದು ತಿಳುವಳಿಕೆ ಇರಬಹುದು. ಸಂಸತ್ತಿನ ಹೊರಗೆ, ನಾವು ಕೋಮುವಾದದ ವಿರುದ್ಧ ಜನಗಳ ಒಂದು ವ್ಯಾಪಕ ಅಣಿನೆರಿಕೆಗೆ ಎಲ್ಲ ಜಾತ್ಯತೀತ ಪ್ರತಿಪಕ್ಷಗಳೊಂದಿಗೆ ಸಹಕರಿಸಬೇಕು. ನಾವು ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಜಂಟಿ ಕಾರ್ಯಾಚರಣೆಗಳನ್ನು ಅದು ಕಾಂಗ್ರೆಸ್ ಮತ್ತು ಇತರ ಬೂಜ್ವಾ ಪಕ್ಷಗಳನ್ನು ಅನುಸರಿಸುವ ಜನಸಮೂಹಗಳನ್ನು ಆಕರ್ಷಿಸಬಲ್ಲ ರೀತಿಯಲ್ಲಿ ಪೋಷಿಸಬೇಕು.
- ಪಕ್ಷ ಕೇಂದ್ರದಲ್ಲಿನ ಬಿಜೆಪಿ ಸರಕಾರ ಮತ್ತು ಪ್ರಾದೇಶಿಕ ಪಕ್ಷಗಳು ನಡೆಸುವ ರಾಜ್ಯಸರಕಾರಗಳು ಸೇರಿದಂತೆ ವಿವಿಧ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ನವ-ಉದಾರವಾದಿ ಧೋರಣೆಗಳ ವಿರುದ್ಧ ಹೋರಾಡುತ್ತದೆ. ಜನಗಳ ಜೀವನಾಧಾರಗಳ ಪ್ರಶ್ನೆಗಳ ಮೇಲೆ ಮತ್ತು ಆರ್ಥಿಕ ಧೋರಣೆಗಳ ಪ್ರಹಾರಗಳ ವಿರುದ್ಧ ಕಾರ್ಯಾಚರಣೆಗಳನ್ನು ಬೆಳೆಸಲು ಶ್ರಮಿಸುತ್ತದೆ.
- ಎಲ್ಲ ಹಂತಗಳಲ್ಲಿ ಸಾಮೂಹಿಕ ಚಳುವಳಿಗಳಿಗೆ ಮತ್ತು ಐಕ್ಯ ಹೋರಾಟಗಳಿಗೆ ಜಂಟಿ ವೇದಿಕೆಗಳನ್ನು ಕಟ್ಟಬೇಕು. ಜನ-ವಿರೋಧಿ ಧೋರಣೆಗಳ ವಿರುದ್ಧ ಪ್ರತಿರೋಧವನ್ನು ತೀವ್ರಗೊಳಿಸಬೇಕು. ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಐಕ್ಯ ಕಾರ್ಯಾಚರಣೆಗಳು ಬಂಡವಾಳಶಾಹಿ ಪಕ್ಷಗಳನ್ನು ಹಿಂಬಾಲಿಸುವ ಜನಸಮೂಹಗಳನ್ನು ಸೆಳೆದುಕೊಳ್ಳಲು ಪ್ರಯತ್ನಿಸಬೇಕು.
- ಸರಕಾರದ ಒಳಗೂ ಮತ್ತು ಹೊರಗೂ ಇರುವ ಹಿಂದುತ್ವ ಶಕ್ತಿಗಳು ಗಂಭೀರ ಬೆದರಿಕೆಯನ್ನು ಒಡ್ಡಿರುವ ಸಂದರ್ಭದಲ್ಲಿ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ಸಾಧ್ಯವಾದಷ್ಟು ವಿಶಾಲವಾದ ವೇದಿಕೆಗಳನ್ನು ಕಟ್ಟುವುದು ಅಗತ್ಯವಾಗಿದೆ. ಬುಡಮಟ್ದದಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಜನಗಳ ಐಕ್ಯತೆಯನ್ನು ಕಟ್ಟಲು ಒತ್ತು ನೀಡಬೇಕು. ಇವನ್ನು ರಾಜಕೀಯ ಅಥವ ಚುನಾವಣಾ ಮೈತ್ರಿಗಳಾಗಿ ಕಾಣಬಾರದು. ಇದೇ ರೀತಿಯಲ್ಲಿ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಸರ್ವಾಧಿಕಾರಶಾಹಿ ದಾಳಿಗಳ ವಿರುದ್ಧ ವಿಶಾಲ ಐಕ್ಯತೆಯನ್ನು ಬೆಸೆಯಬೇಕು.
- ಪಕ್ಷದ ಸ್ವತಂತ್ರ ಶಕ್ತಿಯನ್ನು ಬೆಳೆಸಲು ಮತ್ತು ಕಟ್ಟಲು ಪಕ್ಷವು ಆದ್ಯತೆಯನ್ನು ಕೊಡುತ್ತದೆ. ಅದು ಎಡ ಐಕ್ಯತೆಯನ್ನು ವಿಶಾಲಗೊಳಿಸಲು ಮತ್ತು ಬಲಪಡಿಸಲು ಕೆಲಸ ಮಾಡುತ್ತದೆ.
- ಐಕ್ಯ ಹೋರಾಟಗಳು ಮತ್ತು ಜಂಟಿ ಚಳುವಳಿಗಳ ಮೂಲಕ ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಂದು ಮೂರ್ತ ಕಾರ್ಯಕ್ರಮದ ಮೇಲೆ ಒಟ್ಟಿಗೆ ತರಬೇಕು. ಇದರ ಮೂಲಕ ಎಡ ಮತ್ತು ಪ್ರಜಾಪ್ರಭುತ್ವ ರಂಗ ಮೂಡಿ ಬರಬೇಕು. ರಾಜ್ಯಗಳಲ್ಲಿ ಒಂದು ಮೂರ್ತ ಕಾರ್ಯಕ್ರಮದ ಸುತ್ತ ಒಂದು ವೇದಿಕೆಯನ್ನು ರಚಿಸಲು ವಿವಿಧ ಎಡ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಅಣಿನೆರೆಸಬೇಕು. ರಾಷ್ಟ್ರೀಯ ಮಟ್ಟದಲ್ಲಿ, ನಮ್ಮ ಪ್ರಚಾರಾಂದೋಲನಗಳಲ್ಲಿ ಎಡ ಮತ್ತು ಪ್ರಜಾಪ್ರಭುತ್ವವಾದಿ ಪರ್ಯಾಯವನ್ನು ಮುಂದಿಡಬೇಕು ಹಾಗು ಎಡ ಮತ್ತು ಪ್ರಜಾಪ್ರಭುತ್ವವ ರಂಗದಲ್ಲಿ ಒಂದು ಸ್ಥಾನ ಪಡೆಯಬಹುದಾದ ಶಕ್ತಿಗಳನ್ನೆಲ್ಲ ಅಣಿನೆರೆಸಬೇಕು.
- ಪಕ್ಷದ ಮೇಲೆ ಹೇಳಿದ ರಾಜಕೀಯ ನಿಲುವಿನ ಆಧಾರದಲ್ಲಿ ಬಿಜೆಪಿ-ವಿರೋಧಿ ಮತಗಳು ಗರಿ? ಪ್ರಮಾಣದಲ್ಲಿ ಬರಲು ಸೂಕ್ತವಾದ ಚುನಾವಣಾ ತಂತ್ರಗಳನ್ನು ಅಂಗೀಕರಿಸಬೇಕು.
ಲೋಕಸಭಾ ಚುನಾವಣೆಗೆ ಚುನಾವಣಾ ಕಾರ್ಯತಂತ್ರವನ್ನು ಈ ಮೇಲಿನ ರಾಜಕೀಯ ಲೈನಿನ ಆಧಾರದಲ್ಲಿ ರೂಪೀಕರಿಸಲಾಗಿದೆ.
ಈ ಚುನಾವಣೆಗಳಲ್ಲಿ ಈಡೇರಿಸಬೇಕಾಗಿರುವ ಪ್ರಧಾನ ಕಾರ್ಯಭಾರ ಹೀಗಿದೆ:
-
ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು,
-
ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಹೆಚ್ಚಿಸಿಕೊಳ್ಳುವುದು ಮತ್ತು
-
ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತೀತ ಸರಕಾರ ರಚನೆಯಾಗುವಂತೆ ಮಾಡುವುದು.
ಬಿಜೆಪಿಯನ್ನು ಎದುರಿಸಲು ಒಂದು ಅಖಿಲ ಭಾರತ ಮೈತ್ರಿ ಸಾಧ್ಯವಿಲ್ಲ. ಆದ್ದರಿಂದ ಒಟ್ಟಾರೆ ಚುನಾವಣಾ ಕಾರ್ಯತಂತ್ರದ ಮಾರ್ಗದ ಆಧಾರದಲ್ಲಿ ರಾಜ್ಯವಾರು ಚುನಾವಣಾ ಕಾರ್ಯತಂತ್ರಗಳನ್ನು ನಾವು ರೂಪಿಸಬೇಕಾಗಿದೆ. ವಿವಿಧ ರಾಜ್ಯಗಳಲ್ಲಿ ನಾವು ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಅಣಿನರೆಸಬೇಕು, ಈ ಮೂಲಕ ಬಿಜೆಪಿ ಮತ್ತು ಅದರ ಮಿತ್ರರನ್ನು ಸೋಲಿಸಲು ಅತ್ಯಂತ ವ್ಯಾಪಕವಾದ ಶಕ್ತಿಗಳನ್ನು ಅಣಿನೆರೆಸಲು ಸಾಧ್ಯವಾಗಬೇಕು.
ನಾವು ಬಿಜೆಪಿ ಮೈತ್ರಿಕೂಟದ ಎದುರು ಹೋರಾಡುತ್ತಿರುವ ಕಾಂಗ್ರೆಸೇತರ ಜಾತ್ಯತೀತ-ಪ್ರಾದೇಶಿಕ ಪಕ್ಷಗಳ ಜತೆಗೆ ತಿಳುವಳಿಕೆಗೆ ಶ್ರಮಿಸಬೇಕು.
ರಾಜಕೀಯ ನಿರ್ಣಯ ನಾವು ಕಾಂಗ್ರೆಸಿನ ಆರ್ಥಿಕ ಧೋರಣೆಗಳನ್ನು ಮತ್ತು ಮೂಲ ನಿಲುವುಗಳನ್ನು ಯಾವ ನೆಲೆಗಳಲ್ಲಿ ವಿರೋಧಿಸುತ್ತೇವೆ ಎಂಬುದನ್ನು ನಿರೂಪಿಸಿದೆ. ಕಾಂಗ್ರೆsಸ್ ಪಕ್ಷದೊಂದಿಗೆ, ಸಂಸತ್ತಿನಲ್ಲಿ ಸಹಕಾರ ಮತ್ತು ವಿಶಾಲ ಕೋಮುವಾದ-ವಿರೋಧಿ ಅಣಿನೆರಿಕೆ ಮುಂತಾದ ಯಾವ ರೀತಿಯ ತಿಳುವಳಿಕೆ ಸಾಧ್ಯ ಎಂಬುದನ್ನು ರಾಜಕೀಯ ಲೈನ್ ನಿರ್ದಿಷ್ಟವಾಗಿ ಹಾಕಿ ಕೊಟ್ಟಿದೆ.
ನಮ್ಮ ರಾಜಕೀಯ ಲೈನ್ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ದೂರದ ಮಾರ್ಗವೇನಲ್ಲ ಎಂದು ರಾಜಕೀಯ ನಿರ್ಣಯ ಹೇಳಿದೆ. ಆದ್ದರಿಂದ ಪ್ರಧಾನ ಸ್ಪರ್ಧೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ರಾಜ್ಯಗಳಲ್ಲಿ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ, ನಾವು ಒಂದೋ ಎರಡೋ ಸ್ಥಾನಗಳಲ್ಲಷ್ಟೇ ಸ್ಪರ್ಧಿಸಬೇಕು ಮತ್ತು ಉಳಿದೆಡೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರಚಾರ ನಡೆಸಬೇಕು.
ತಮಿಳುನಾಡು ಮತ್ತು ಬಿಹಾರಿನಲ್ಲಿ ಬಿಜೆಪಿ ಮೈತ್ರಿಕೂಟದ ವಿರುದ್ಧ ಹೋರಾಟದ ಪ್ರಧಾನ ಶಕ್ತಿಗಳು ಡಿಎಂಕೆ ಮತ್ತು ಆರ್ಜೆಡಿಯಂತಹ ಪ್ರಾದೇಶಿಕ ಪಕ್ಷಗಳು. ಅವುಗಳು ಕಾಂಗ್ರೆಸಿನೊಂದಿಗೆ ತಿಳುವಳಿಕೆ ಮಾಡಿಕೊಂಡರೂ, ನಾವು ಅವುಗಳೊಂದಿಗೆ ತಿಳುವಳಿಕೆಗೆ ಬರಬಹುದು. ಇಂತಹ ಸನ್ನಿವೇಶದಲ್ಲಿ ನಾವು ಕಾಂಗ್ರೆಸಿನೊಂದಿಗೆ ಯಾವುದೇ ರಾಜ್ಯಮಟ್ಟದ ಮೈತ್ರಿಯನ್ನು ಬಿಂಬಿಸಲು ಹೋಗಬಾರದು.
ಉತ್ತರಪ್ರದೇಶದಲ್ಲಿ, ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಬಿಜೆಪಿ ವಿರುದ್ಧ ಪ್ರಧಾನ ಶಕ್ತಿಯಾಗಿರುವಲ್ಲಿ, ನಾವು ಸ್ಪರ್ಧಿಸಲು ಯಾವುದೇ ಸೀಟು ಪಡೆಯದಿದ್ದರೂ, ಎಸ್-ಬಿಎಸ್ಪಿ ಮೈತ್ರಿಕೂಟವನ್ನು ಬೆಂಬಲಿಸಬೇಕು ಮತ್ತು ಬಿಜೆಪಿಯನ್ನು ಸೋಲಿಸುವಂತೆ ಜನತೆಗೆ ಕರೆ ನೀಡಬೇಕು.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬಿಜೆಪಿ ಒಂದು ಪ್ರಧಾನ ಶಕ್ತಿಯಾಗಿಲ್ಲ. ಇಲ್ಲಿ ಆಳುವ ಪಕ್ಷಗಳಾದ ಟಿಆರ್ಎಸ್ ಮತ್ತು ಟಿಡಿಪಿಯೊಂದಿಗೆ ನಾವು ಯಾವುದೇ ತಿಳುವಳಿಕೆ ಹೊಂದಲು ಸಾಧ್ಯವಿಲ್ಲ. ನಾವು ಕೆಲವು ಇತರ ಸಣ್ಣ ಪಕ್ಷಗಳೊಂದಿಗೆ ತಿಳುವಳಿಎಗೆಗೆ ಬಂದು ಸೀಮಿತ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಪ್ರಯತ್ನಿಸಬಹುದು.
ಮಹಾರಾಷ್ಟ್ರದಲ್ಲಿ, ಪ್ರಧಾನ ಸ್ಪರ್ಧೆ ಇರುವುದು ಬಿಜೆಪಿ-ಶಿವಸೇನೆ ಮೈತ್ರಿಕೂಟ ಮತ್ತು ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟದ ನಡುವೆ.ನಾವು ಎನ್ಸಿಪಿಯೊಂದಿಗೆ ತಿಳುವಳಿಕೆಗೆ ಬರಬಹುದು ಮತ್ತು ಇತರ ಎಡ ಮತ್ತು ಪ್ರಜಾಪ್ರಭುತ್ವವಾದಿ ಪಕ್ಷಗಳಾದ ಪಿಡಬ್ಲ್ಯುಪಿ, ಸಮಾಜವಾದಿ ಪಾರ್ಟಿ, ರಾಜು ಶೆಟ್ಟಿಯ ಸ್ವಾಭಿಮಾನ ಪಾರ್ಟಿ, ಬಿಎಸ್ಪಿ ಮತ್ತಿತರ ಪಕ್ಷಗಳನ್ನು ಒಟ್ಟಿಗೆ ತರಲು ಪ್ರಯತ್ನಿಸಬಹುದು.
ಒಡಿಶಾದಲ್ಲಿ, ಪ್ರಧಾನ ಸ್ಪರ್ಧೆ ಬಿಜೆಡಿ ಮತ್ತು ಬಿಜೆಪಿಯ ನಡುವೆ ಇದ್ದು, ನಾವು ಕೇವಲ ಒಂದು ಸೀಟಿನಲ್ಲಿ ಸ್ಪರ್ಧಿಸಬೇಕು ಮತ್ತು ಸಾಮಾನ್ಯವಾಗಿ ಬಿಜೆಪಿಯನ್ನು ಸೋಲಿಸಲು ಪ್ರಚಾರ ಮಾಡಬೇಕು. ಅಸ್ಸಾಂನಲ್ಲಿಯೂ ಎಡ ಪಕ್ಷಗಳು ಒಂದಾಗಿ ಕೆಲವು ಸೀಟುಗಳಲ್ಲಿ ಸ್ಪರ್ಧಿಸಬಹುದು ಮತ್ತು ಬಿಜೆಪಿಯನ್ನು ಸೋಲಿಸಲು ಪ್ರಚಾರ ಮಾಡಬಹುದು.
ಈ ಮೇಲಿನ ರಾಜ್ಯಗಳಲ್ಲಿ ಇಂತಹ ಚುನಾವಣಾ ತಂತ್ರಗಳನ್ನು ಅಂಗೀಕರಿಸುವ ಮೂಲಕ ನಾವು ನಮ್ಮ ರಾಜಕೀಯ ಲೈನಿನ ಆಧಾರದಲ್ಲಿ ಬಿಜೆಪಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕಲೆ ಹಾಕುವಲ್ಲಿ ನಮ್ಮ ಕೊಡುಗೆ ನೀಡಬಹುದು.
ಪಶ್ಚಿಮ ಬಂಗಾಲ, ಕೇರಳ ಮತ್ತು ತ್ರಿಪುರಾದಲ್ಲಿ, ಎಡ ಶಕ್ತಿಗಳು ಒಂದು ಬಲವಾದ ನೆಲೆ ಹೊಂದಿರುವಲ್ಲಿ, ನಾವು ಪಶ್ಚಿಮ ಬಂಗಾಲ ಮತ್ತು ತ್ರಿಪುರಾ ಈ ಎರಡರಲ್ಲೂ ಭಾರೀ ಸವಾಲುಗಳ ವಿರುದ್ಧ ಹೋರಾಡುತ್ತಿದ್ದೇವೆ.
ಪಶ್ಚಿಮ ಬಂಗಾಲದಲ್ಲಿ, ನಾವು ಬಿಜೆಪಿ ಮತ್ತು ಟಿಎಂಸಿ ಇವೆರಡರ ವಿರುದ್ಧವೂ ಹೋರಾಡಬೇಕಾಗಿದೆ. ನಮ್ಮ ಗುರಿ ಬಿಜೆಪಿ-ವಿರೋಧಿ ಮತ್ತು ಟಿಎಂಸಿ-ವಿರೋಧಿ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕಲೆ ಹಾಕುವುದು ಅಗಿರುತ್ತದೆ.
ಕೇರಳದಲ್ಲಿ ಎಲ್ಡಿಎಫ್ ನೊಳಕ್ಕೆ ಸಣ್ಣ ಪಕ್ಷಗಳನ್ನು ಸೇರಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು.