ನವಂಬರ್ ೧೬ರಂದು ಶಬರಿಮಲೆ ಯಾತ್ರೆಯ ಪ್ರಸಕ್ತ ಅವಧಿ ಆರಂಭವಾದಂದಿನಿಂದ ಕೇರಳದಲ್ಲಿನ ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಕಾರ್ಯಕರ್ತರನ್ನು ಅಲ್ಲಿಗೆ ಕಳಿಸುವ ಚಟುವಟಿಕೆಗಳನ್ನು ಸಂಘಟಿಸುತ್ತಿವೆ. ದೇವಸ್ಥಾನದ ಆವರಣವನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅಲ್ಲಿ ಕಾನೂನು-ವ್ಯವಸ್ಥೆಯ ಸಮಸ್ಯೆ ಸೃಷ್ಟಿಸುವುದು ಅವರ ಉದ್ದೇಶ.
ಅವರ ಈ ದುಷ್ಟ ಆಶಯದ ಸಾಕ್ಷಿ ಇದೀಗ ಬೆಳಕಿಗೆ ಬಂದಿದೆ. ಬಿಜೆಪಿಯ ಕಣ್ಣೂರು ಜಿಲ್ಲಾ ಸಮಿತಿಯ ನವಂಬರ್ ೧೪ರ ಸುತ್ತೋಲೆ ಇದನ್ನು ಬಯಲಿಗೆ ತಂದಿದೆ. ಜಿಲ್ಲೆಯ ನಾಲ್ಕು ಸ್ಥಳಗಳಿಂದ ೨೦೦ ತರಬೇತಿ ಪಡೆದ ಸ್ವಯಂಸೇವಕರನ್ನು ಡಿಸೆಂಬರ್ ೧೩ರಂದು ಶಬರಿಮಲೆ ದೇವಸ್ಥಾನಕ್ಕೆ ಕಳಿಸಬೇಕು ಎಂದು ಹೇಳಿರುವ ಈ ಸುತ್ತೋಲೆಯಲ್ಲಿ ಈ ಸ್ವಯಂಸೇವಕರು ತಮ್ಮ ಕೈಚೀಲಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಒಯ್ಯಬೇಕು ಎಂದೂ ನಿರ್ದೇಶನ ನೀಡಲಾಗಿದೆ. ಇದು ಒಂದು ದುಷ್ಟ ಕುತಂತ್ರ ಎಂದು ಇದನ್ನು ಖಂಡಿಸುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಕೇಂದ್ರದಲ್ಲಿ ಆಳುವ ಪಕ್ಷದ ಒಂದು ಘಟಕ ದೇಸ್ಥಾನಕ್ಕೆ ಅಗತ್ಯ ಸಾಧನ-ಸರಂಜಾಮುಗಳೊಂದಿಗೆ ತರಬೇತಿ ಹೊಂದಿರುವ ಕಾರ್ಯಕರ್ತರನ್ನು ಕಳಿಸುವ ಯೋಜನೆ ಹಾಕುತ್ತಿರುವುದು ಒಂದು ಗಂಬೀರ ಸಂಗತಿ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಇದು ಶಬರಿಮಲೆ ದೇವಸ್ಥಾನದಲ್ಲಿ ಯಾತ್ರೆಯನ್ನು ಕದಡಲು ಮಾಡಿರುವ ಯೋಜಿತ ಪ್ರಯತ್ನ ಎಂದು ಬಲವಾಗಿ ಖಂಡಿಸುತ್ತ, ದೇವಸ್ಥಾನ ಪಾವಿತ್ರ್ಯವನ್ನು ಕದಡುವ ಹೀನಕೃತ್ಯ ಎಸಗುವ ಇಂತಹ ಪ್ರಯತ್ನದ ಬಗ್ಗೆ ಜಾಗರೂಕರಾಗಿರಬೇಕು ಎಂದು ಜನತೆಗೆ ಕರೆ ನೀಡಿದೆ.