ಈ ವರ್ಷ ಡಿಸೆಂಬರ್ ೬ ಕ್ಕೆ ಬಾಭ್ರಿ ಮಸೀದಿಯನ್ನು ಧ್ವಂಸ ಮಾಡಿ 26 ವರ್ಷಗಳಾಗುತ್ತವೆ. ಪ್ರಸಕ್ತ ಸನ್ನಿವೇಶದಲ್ಲಿ ಈ ದಿನವನ್ನು ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ರಕ್ಷಣಾರ್ಥ ಆಚರಿಸುವುದು ಅಗತ್ಯವಾಗಿದೆ ಎಂದು ದೇಶದ ಆರು ಎಡಪಕ್ಷಗಳು, ಸಿಪಿಐ(ಎಂ), ಸಿಪಿಐ, ಫಾರ್ವರ್ಡ್ ಬ್ಲಾಕ್, ಆರ್ಎಸ್ಪಿ, ಸಿಪಿಐ(ಎಂಎಲ್)-ಲಿಬರೇಷನ್ ಮತ್ತು ಎಸ್ಯುಸಿಐ(ಸಿ) ಹೇಳಿವೆ.
ಆರೆಸ್ಸೆಸ್ ನೇತೃತ್ವದ ಗುಂಪು-ಸಂಘಟನೆಗಳು ಕೇಂದ್ರ ಸರಕಾರ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ, ಸುಪ್ರಿಂ ಕೋರ್ಟನ್ನು ಬದಿಗೆ ತಳ್ಳಿ, ರಾಮ ಮಂದಿರ ಕಟ್ಟಲು ಅನುವು ಮಾಡಿಕೊಡಲು ಒಂದು ಶಾಸನವನ್ನು/ ಸುಗ್ರೀವಾಜ್ಞೆಯನ್ನು ತರಬೇಕು ಎಂದು ಆಗ್ರಹಿಸುವ ಪ್ರಚಾರಾಂದೋಲನವನ್ನು ಆರಂಭಿಸಿವೆ.
ಈ ಪ್ರಚಾರಾಂದೋಲನವನ್ನು ಸಂಘ ಪಡೆಗಳ ಕೋಮುವಾದಿ ಅಜೆಂಡಾಕ್ಕೆ ನೆರವಾಗಲು ಮತ್ತು ಭಾರತೀಯ ಸಂವಿಧಾನದಲ್ಲಿನ ಜಾತ್ಯತೀತತೆಗೆ ಸಂಬಂಧಪಟ್ಟ ಅಂಶಗಳನ್ನು ನಿರರ್ಥಕಗೊಳಸಲು ರೂಪಿಸಲಾಗಿದೆ. ಇದು ಅಯೋಧ್ಯಾ ವಿವಾದ ಕುರಿತಂತೆ ನ್ಯಾಯಾಂಗ ತೀರ್ಪನ್ನು ಬುಡಮೇಲು ಮಾಡುವ ಪ್ರಯತ್ನ ಎಂದು ಈ ಎಡಪಕ್ಷಗಳು ಇದನ್ನು ಬಲವಾಗಿ ವಿರೋಧಿಸಿವೆ. ನಂಬಿಕೆಯ ಹೆಸರಲ್ಲಿ ಸಂವಿಧಾನದ ಅಂಶಗಳನ್ನು ಬುಡಮೇಲು ಮಾಡಲು ಬಿಡಲಾಗದು ಎಂದು ಅವು ಹೇಳಿವೆ.
ಡಾ.ಬಿ.ಆರ್.ಅಂಬೇಡ್ಕರ್ ನಿಧನರಾದ ದಿನವೂ ಆಗಿರುವ ಡಿಸೆಂಬರ್ ೬ ನ್ನು ಸಂವಿಧಾನ ಮತ್ತು ಜಾತ್ಯತೀತತೆ ರಕ್ಷಣಾ ದಿನವಾಗಿ ಆಚರಿಸಬೇಕು, ಈ ನಿಟ್ಟಿನಲ್ಲಿ ಜನಗಳನ್ನು ಅಣಿನೆರೆಸಬೇಕು ಎಂದು ಈ ಆರು ಎಡಪಕ್ಷಗಳು ತಮ್ಮ ಎಲ್ಲ ಘಟಕಗಳಿಗೆ ಕರೆ ನೀಡಿವೆ.