ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಒಂದು ಜನಜಂಗುಳಿ ಪೊಲಿಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಎಂಬವರನ್ನು ಅಮಾನುಷವಾಗಿ ಕೊಂದಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಈ ಪೋಲಿಸ್ ಅಧಿಕಾರಿಯೊಂದಿಗೆ ಒಬ್ಬ ಅಮಾಯಕ ದಾರಿಹೋಕನನ್ನೂ ಗುಂಡಿಟ್ಟು ಕೊಲ್ಲಲಾಯಿತು ಎಂದು ವರದಿಯಾಗಿದೆ.
ಈ ಜನಜಂಗುಳಿಯ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದದ್ದು ಗೋವಧೆ ನಡೆದಿದೆ ಎಂಬ ನೆಪದಲ್ಲಿ. ಸಿಯಾನ ಪ್ರದೇಶದ ಒಂದು ಹಳ್ಳಿಯಲ್ಲಿ ಹಸುವಿನ ದೇಹಗಳು ಕಂಡು ಬಂದವು ಎಂಬ ಸಂದೇಹಾತ್ಮಕ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಕೋಮುವಾದಿ ಸೆಳೆತಗಳನ್ನು ಉದ್ರೇಕಿಸುವ ವಿಶ್ವ ಹಿಂದು ಪರಿಷದ್ ಮತ್ತಿತರ ಹಿಂದುತ್ವ ಪಡೆಗಳ ವಿಧಾನಗಳಿಗೆ ಅನುಗುಣವಾಗಿಯೇ ಇದೆ.
ಮುಂಬರುವ ಲೋಕಸಭಾ ಚುನಾವಣೆಗಳ ದೃಷ್ಟಿಯಿಂದ ಇಂತಹ ಘಟನೆಗಳನ್ನು ಯೋಜಿಸಲಾಗುತ್ತಿದೆ. ಮುಖ್ಯಮಂತ್ರಿ ಆದಿತ್ಯನಾಥರ ಉದ್ರೇಕಕಾರಿ ಭಾಷಣಗಳೂ ಇಂತಹ ಜನಜಂಗುಳಿಗಳು ಯಾವುದೇ ದಂಡನೆಯ ಭಯವಿಲ್ಲದೆ ವರ್ತಿಸುವಂತಹ ವಾತಾವರಣವನ್ನು ಸೃಷ್ಟಿಸಿವೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಈ ಅಪರಾಧ ಎಸಗಿರುವವವರ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳಬೇಕು ಮತ್ತು ಕೋಮುವಾದಿ ಘಟನೆಗಳು ನಡೆಯದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.