ಮೇಘಾಲಯ ಹೈಕೋರ್ಟಿನ ನ್ಯಾಯಮೂರ್ತಿ ಸುದೀಪ್ ರಂಜನ್ ಸೆನ್ ರವರು ಇತ್ತೀಚಿನ ಒಂದು ತೀರ್ಪಿನ ಸ್ವರೂಪದಲ್ಲಿ ಉಚ್ಚರಿಸಿರುವುದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ನಿಸ್ಸಂಗಿದ್ಧ ಪದಗಳಲ್ಲಿ ಖಂಡಿಸಿದೆ.
ಇದು ನಮ್ಮ ಸಂವಿಧಾನದ ಮೂಲರಚನೆಗೆ ವಿರುದ್ಧವಾದದ್ದು ಎಂದು ಅದು ಹೇಳಿದೆ. ಜಾತ್ಯತೀತತೆ ನಮ್ಮ ಸಂವಿಧಾನದ ಮೂಲಭೂತ ಲಕ್ಷಣಗಳಲ್ಲಿ ಒಂದು ಎಂದು ಈ ಹಿಂದೆ ಸುಪ್ರಿಂ ಕೋರ್ಟ್ ಒಂದು ತೀರ್ಪು ನೀಡಿದೆ.
ನ್ಯಾಯಮೂರ್ತಿ ಸೆನ್ ಆರೆಸ್ಸೆಸ್ನ ಹಿಂದೂರಾಷ್ಟ್ರ ಸಿದ್ಧಾಂತಕ್ಕೆ ಹೋಲುವ ತನ್ನ ರಾಜಕೀಯ ನಂಬಿಕೆಯನ್ನು ಬಿಂಬಿಸಿದ್ದಾರೆ. ದೇಶವಿಭಜನೆ ಕುರಿತಂತೆ ತನ್ನ ಭಂಡ ಕೋಮುವಾದಿ ಅಭಿಪ್ರಾಯವನ್ನು ತೂರಿಸಿ ಮತ್ತು ನಾಗರಿಕತ್ವ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಯ ಮೇಲೆ ರಾಜಕೀಯ ಹೇಳಿಕೆಯನ್ನು ಕೊಟ್ಟು ಅವರು ಸಂಸತ್ತಿನ ಸರ್ವೋಚ್ಚ ಪಾತ್ರ ಮತ್ತು ನ್ಯಾಯಾಂಗದ ಸ್ವಾತಂತ್ರ್ಯ ಎರಡನ್ನೂ ಶಿಥಿಲಗೊಳಿಸಿದ್ದಾರೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಇಂತಹ ಅಭಿಪ್ರಾಯಗಳು ಈಶಾನ್ಯ ಭಾಗದಲ್ಲಿ ಜನಗಳ ನಡುವೆ ವೈಷಮ್ಯವನ್ನು ಮತ್ತಷ್ಟು ಉದ್ರೇಕಿಸಲು ನೆರವಾಗುತ್ತವೆ ಎಂದು ಖೇದ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಸೆನ್ ಒಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಕಳಕೊಂಡಿದ್ದಾರೆ ಎಂದು ಅಭಿಪ್ರಾಯ ಪಡುತ್ತ ಅದು ಅವರನ್ನು ಆ ಹುದ್ದೆಯಿಂದ ತೆಗೆಯಲು ಒಂದು ಮಹಾಭಿಯೋಗ ನಿಲುವಳಿಯನ್ನು ತರುವ ಬಗ್ಗೆ ಪರಿಶೀಲಿಸಲು ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದೆ.
ಈ ನಡುವೆ, ನ್ಯಾಯಮೂರ್ತಿ ಸೆನ್ ಅವರನ್ನು ನ್ಯಾಯಾಂಗದ ನಿರ್ವಹಣೆಯಿಂದ ದೂರವಿಡಬೇಕು ಎಂದು ಭಾರತದ ಸರ್ವೋಚ್ಚ ನ್ಯಾಯಾಧೀಶರಿಗೆ ಸಿಪಿಐ(ಎಂ) ಮನವಿ ಮಾಡಿದೆ.