ರಫಾಲ್ ವಿಮಾನ ಕುರಿತ ಸುಪ್ರಿಂ ಕೋರ್ಟ್ ತೀರ್ಪು ಗಂಭೀರ ಪ್ರಶ್ನೆಗಳನ್ನು ಎತ್ತಿದೆ-ಸಿಪಿಐ(ಎಂ) ಕೇಂದ್ರ ಸಮಿತಿ
ಸರಕಾರ ಮತ್ತು ಸಿಎಜಿ ನಡುವೆ ರಫಾಲ್ ಯುದ್ಧವಿಮಾನದ ಬೆಲೆಯನ್ನು ಕುರಿತಂತೆ ನಡೆದಿದೆಯೆನ್ನಲಾದ ಸಂವಹನದಿಂದಾಗಿ ತಾನು ಈ ಪ್ರಶ್ನೆಯನ್ನು ಪ್ರವೇಶಿಸುವುದಿಲ್ಲ ಎಂದು ಸುಪ್ರಿಂ ಕೋರ್ಟ್ ತನ್ನ ನಿರಾಕರಣೆಗೆ ಕಾರಣ ಕೊಟ್ಟಿದೆ. ಈ ಪ್ರಶ್ನೆಯ ಮೇಲೆ ಸಿಎಜಿ ಒಂದು ವರದಿಯನ್ನು “ಪ್ರಕಟಿಸಿದೆ”, ಇದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಪರೀಕ್ಷಿಸಿದೆ, ಮತ್ತು ಅವರ “ವರದಿ”ಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದು ಸುಪ್ರಿಂಕೋರ್ಟಿನ ತೀರ್ಪು ಹೇಳುತ್ತದೆ. ಸಂವಿಧಾನ ವಿಧಿಸಿರುವಂತೆ ಸಂಸತ್ತಿನಲ್ಲಿ ಸಿಎಜಿ ವರದಿಯನ್ನು ಮಂಡಿಸಿಯೂ ಇಲ್ಲ, ಮತ್ತು ಪಿಎಸಿ ಅದನ್ನು ಪರೀಕ್ಷಿಸಲೂ ಆಗಿಲ್ಲ ಎಂಬುದು ಸ್ಫಟಿಕದಷ್ಟು ಸ್ಪಷ್ಟ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ಆದ್ದರಿಂದ, ಸರ್ವೋಚ್ಚ ನ್ಯಾಯಾಲಯಕ್ಕೆ ಇಂತಹ ಮಾಹಿತಿಯನ್ನು ಒದಗಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ ಎಂದು ಅದು ಹೇಳಿದೆ.
ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಖಜಾನೆಯಿಂದ ಅಗಾಧ ಖರ್ಚನ್ನು ಒಳಗೊಂಡಿರುವ ರಫಾಲ್ ವ್ಯವಹಾರದ ತನಿಖೆಯನ್ನು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ನಡೆಸುವ ಅಗತ್ಯವಿದೆ ಎಂದು ಪುನರುಚ್ಚರಿಸಿರುವ ಸಿಪಿಐ(ಎಂ) ಕೇಂದ್ರಸಮಿತಿ ಈ ಹಗರಣದ ಹಿಂದಿರುವ ಸತ್ಯವನ್ನು ಹೊರಗೆಳೆಯಲು ಇದೊಂದೇ ದಾರಿ ಎಂದು ಹೇಳಿದೆ.