ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಸಂಪೂರ್ಣ ಬೆಂಬಲ – ಸಿಪಿಐ(ಎಂ) ಕೇಂದ್ರ ಸಮಿತಿ
ಡಿಸೆಂಬರ್ ೧೫ ಮತ್ತು ೧೬ರಂದು ಸಭೆ ಸೇರಿದ್ದ ಸಿಪಿಐ(ಎಂ) ಕೇಂದ್ರ ಸಮಿತಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಜನವರಿ ೮ ಮತ್ತು ೯ರ ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ.
ಕ್ಯಾಂಪಸ್ಗಳನ್ನು ಉಳಿಸಿ, ಶಿಕ್ಷಣವನ್ನು ಉಳಿಸಿ, ದೇಶವನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳು, ಅಧ್ಯಾಪಕರು, ವಿಶ್ವವಿದ್ಯಾಲಯಗಳ ನೌಕರರು ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಕೈಗೊಂಡಿರುವ ನಡೆಗೆ ಸಿಪಿಐ(ಎಂ)ನ ಬೆಂಬಲವನ್ನು ವ್ಯಕ್ತಪಡಿಸಿರುವ ಕೇಂದ್ರ ಸಮಿತಿ ಹೆಚ್ಚುತ್ತಿರುವ ನಿರುದ್ಯೋಗದ ಪ್ರಶ್ನೆಯ ಮೇಲೆ ಗಮನ ಕೇಂದ್ರೀಕರಿಸಿ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಕೃಷಿ ಸಂಕಟದ ವಿರುದ್ಧ ಹೋರಾಟಗಳನ್ನು ತೀವ್ರಗೊಳಿಸಲು ಕೂಡ ನಿರ್ಧರಿಸಿದೆ.
ಮಹಿಳೆಯರ ವಿರುದ್ಧ ಅಪರಾಧಗಳು ಏರುತ್ತಿದ್ದು, ಇದರ ವಿರುದ್ಧವೂ ದೇಶಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಬೇಕು ಎಂದೂ ಸಿಪಿಐ(ಎಂ) ಕೇಂದ್ರ ಸಮಿತಿ ನಿರ್ಧರಿಸಿದೆ. ಸಂಸತ್ತಿನ ಈ ಅಧಿವೇಶನದಲ್ಲಾದರೂ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸು ಮಾಡಬೇಕು ಎಂದು ಅದು ಮತ್ತೆ ಆಗ್ರಹಿಸಿದೆ. ದಲಿತರ ಮೇಲೆ ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮುಂದುವರೆಯುತ್ತಿರುವ ಅತ್ಯಾಚಾರಗಳ ವಿರುದ್ಧ ಎಲ್ಲ ರಾಜ್ಯಗಳಲ್ಲೂ ಪ್ರತಿಭಟನಾ ಕಾರ್ಯಾಚರಣೆಗಳನ್ನು ನಡೆಸಬೇಕು ಎಂದು ಅದು ನಿರ್ಧರಿಸಿದೆ.
ಚುನಾವಣಾ ಬಾಂಡುಗಳು ಮತ್ತು ಮೋದಿ ಸರಕಾರದ ಭ್ರಷ್ಟಾಚಾರದ ನಡುವೆ ನೇರ ಸಂಬಂಧ ಇರುವುದನ್ನು ದೇಶಾದ್ಯಂತ ಬಯಲಿಗೆಳೆಯುವ ಒಂದು ಪ್ರಚಾರಾಂದೋಲನವನ್ನು ನಡೆಸಬೇಕು ಎಂದು ಸಿಪಿಐ(ಎಂ)ನ ಕೇಂದ್ರ ಸಮಿತಿಯ ಈ ಸಭೆ ನಿರ್ಧರಿಸಿತು
ಲೋಕಸಭಾ ಚುನಾವಣೆಗಳಲ್ಲಿ ಕಾರ್ಯತಂತ್ರ:
೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಮುಂದಿನ ಪ್ರಧಾನ ಕಾರ್ಯಭಾರವೆಂದರೆ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು, ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಲೋಕಸಭೆಯಲ್ಲಿ ಹೆಚ್ಚಿಸುವುದು ಮತ್ತು ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತೀತ ಸರಕಾರ ರಚನೆಯಾಗುವಂತೆ ಮಾಡುವುದು ಎಂದು ಈ ಹಿಂದಿನ ಅಕ್ಟೋಬರ್ ೨೦೧೮ರ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಕೇಂದ್ರ ಸಮಿತಿ ಪುನರುಚ್ಚರಿಸಿದೆ. ಈ ಕಾರ್ಯತಂತ್ರಕ್ಕೆ ಅನುಗುಣವಾಗಿ ಸಿದ್ಧತೆಗಳನ್ನು ಮಾಡಬೇಕು ಎಂದು ಅದು ರಾಜ್ಯಸಮಿತಿಗಳಿಗೆ ಹೇಳಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಗಳು:
ಐದು ರಾಜ್ಯಗಳ ವಿಧಾನಸಭೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳ ಫಲಿತಾಂಶಗಳ ಒಂದು ಪ್ರಾಥಮಿಕ ವಿಶ್ಲೇಷಣೆಯನ್ನು ಕೇಂದ್ರ ಸಮಿತಿ ನಡೆಸಿತು.
ರಾಜಸ್ಥಾನದ ಶ್ರೀದುಂಗರ್ಗಡ್ ಮತ್ತು ಭದ್ರಾ ಕ್ಷೇತ್ರಗಳಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳ ವಿಜಯಕ್ಕೆ ಪಕ್ಷದ ರಾಜಸ್ಥಾನ ಘಟಕವನ್ನು ಕೇಂದ್ರ ಸಮಿತಿ ಅಭಿನಂದಿಸಿತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡ ವಿಧಾನಸಭಾ ಚುನಾವಣೆಗಳಲ್ಲಿಬಿಜೆಪಿಯ ಸೋಲು ಜನಗಳ ಮೇಲೆ ಅಸಹನೀಯ ಹೊರೆಗಳನ್ನು ಹೇರಿರುವ ಮೋದಿ ಸರಕಾರದ ಮತ್ತು ಬಿಜೆಪಿ ರಾಜ್ಯ ಸರಕಾರಗಳ ಧೋರಣೆಗಳ ವಿರುದ್ಧ ಜನಗಳ ಅಸಂತುಷ್ಟಿ ಮತ್ತು ಕ್ರೋಧದ ಒಂದು ಸ್ಪಷ್ಟ ಸಂಕೇತ ಎಂದು ಕೇಂದ್ರ ಸಮಿತಿ ಗಮನಿಸಿತು. ಚುನಾವಣೆಗಳಲ್ಲಿ ಬಿಜೆಪಿ ಅಜೇಯ ಎಂಬ ಎಂಬ ಮಿಥ್ಯೆಯನ್ನು ಈ ಫಲಿತಾಂಶಗಳು ಪುಡಿಗುಟ್ಟಿವೆ ಎಂದು ಅದು ವರ್ಣಿಸಿದೆ.
ಜನಗಳ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವ ಬದಲು ಬಿಜೆಪಿ ಸರಕಾರಗಳ ಧೋರಣೆಗಳು ಜನಗಳ ಸಂಕಟಗಳನ್ನು ಮತ್ತಷ್ಟು ಆಳಗೊಳಿಸಿವೆ ಮತ್ತು ಜನಗಳ ಗಮನವನ್ನು ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಉದ್ದೇಶದಿಂದ ಬೇರೆಡೆಗಳಿಗೆ ತಿರುಗಿಸಲು ಪ್ರಯತ್ನಿಸಿವೆ. ಮುಸ್ಲಿಮರು ಮತ್ತು ದಲಿತರ ಮೇಲೆ ಹಲ್ಲೆಗಳು ಮತ್ತು ಜನಗಳನ್ನು ವಿಭಜಿಸಲು ಪೋಷಿಸಿದ ದ್ವೇಷ ಮತ್ತು ಹಿಂಸಾಚಾರ ಕೂಡ ಅವರು ನಿರೀಕ್ಷಿಸಿದ ಮಟ್ಟದಲ್ಲಿ ಯಶ್ವಿಯಾಗಿಲ್ಲೆಂದು ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.
ತೆಲಂಗಾಣದಲ್ಲಿ, ಟಿಆರ್ಎಸ್ ಭಾರೀ ಜಯ ಗಳಿಸಿದೆ, ಬಿಜೆಪಿಯ ಸೀಟುಗಳ ಸಂಖ್ಯೆ ಇಳಿದಿದೆ. ಮಿಝೋರಾಂನಲ್ಲಿ ಎಂಎನ್ಎಫ್ ಒಂದು ನಿರ್ಣಾಯಕ ವಿಜಯ ಗಳಿಸಿ ಕಾಂಗ್ರೆಸ್ ಸರಕಾರವನ್ನು ಹೊರಹಾಕಿದೆ.
ಈ ಹಿಂದಿನ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ರಚನೆಗೊಂಡಿರುವ ಕಾಂಗ್ರೆಸ್ ಸರಕಾರಗಳು ಜನತೆಯ ತೀರ್ಪನ್ನು ಗೌರವಿಸಬೇಕು ಮತ್ತು ಜನಗಳ ಜೀವನಧಾರಗಳನ್ನು ಉತ್ತಮಪಡಿಸುವ ಮತ್ತು ಅವರ ಸಂಕಟಗಳನ್ನು ಕಡಿಮೆ ಮಾಡುವ ಉದ್ದೇಶದ ಧೋರಣೆಗಳನ್ನು ಅಂಗೀಕರಿಸಬೇಕು. ಬಿಜೆಪಿಯ ಕೋಮುವಾದಿ ಧ್ರುವೀಕರಣದ ಧೋರಣೆಗಳು ಜನಗಳ ಐಕ್ಯತೆಯನ್ನು ಮತ್ತು ದೇಶದ ಸಮಗ್ರತೆಯನ್ನು ಮತ್ತಷ್ಟು ಹಾಳುಗೆಡವದಂತೆ ನೋಡಿಕೊಳ್ಳಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಪಕ್ಷದ ಫಲಿತಾಂಶಗಳನ್ನು ಕೇಂದ್ರ ಸಮಿತಿ ಚರ್ಚಿಸಿತು. ರಜ್ಯಸಮಿತಿಗಳು ಒಮದು ವಿವರವಾದ ಪರಾಮರ್ಶೆ ನಡೆಸಿದ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸಮಿತಿ ಹೇಳಿದೆ.
ಜನಗಳ ಮೇಲೆ ಹೆಚ್ಚಿದ ಹೊರೆಗಳು:
ಜನಗಳ ಮೇಲಿನ ಹೊರೆಗಳು ಹೆಚ್ಚುತ್ತಲೇ ಇರುವ ಬಗ್ಗೆ ಕೇಂದ್ರಸಮಿತಿ ಗಂಭೀರ ಆತಂಕವನ್ನು ವ್ಯಕ್ತಪಡಿಸಿದೆ. ಒಟ್ಟಾರೆ ಆರ್ಥಿಕ ಸನ್ನಿವೇಶದ ಬಗ್ಗೆ ಮತ್ತು ಉದ್ಯೋಗದ ಸ್ಥಿತಿ-ಗತಿಯ ಬಗ್ಗೆ ನಿರಾಶಾಭಾವ ಹೆಚ್ಚುತ್ತಿದೆ ಎಂಬುದನ್ನು ಭಾರತೀಯ ರಿಝರ್ವ್ ಬ್ಯಾಂಕಿನ ನವಂಬರ್ ೨೦೧೮ರ ಬಳಕೆದಾರ ವಿಶ್ವಾಸ ಸರ್ವೆ ತೋರಿಸುತ್ತಿದೆ. ಜನಗಳ ವೆಚ್ಚಗಳ ಮಟ್ಟಗಳು ಇಳಿಯುತ್ತಿರುವುದು ಆಂತರಿಕ ಬೇಡಿಕೆಗಳು ಇಳಿಯುತ್ತಿರುವುದನ್ನು ಸೂಚಿಸು ತ್ತವೆ., ಇದು ಒಟ್ಟಾರೆ ಆರ್ಥಿಕ ಮೂಲಾಂಶಗಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಗಳನ್ನು ಮುಂದು ವರೆಸುತ್ತದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ಮುಂದುವರೆಯುತ್ತಿರುವ ಕರ್ಷಕ ಬಿಕ್ಕಟ್ಟನ್ನು ಗಮನಕ್ಕೆ ತಗೊಂಡ ಕೇಂದ್ರ ಸಮಿತಿ ಕೃಷಿ ಉತ್ಪಾದನೆ ನಿಧಾನ ಗೊಂಡಿರು ವುದರಿಂದ ಗ್ರಾಮೀಣ ಸಂಕಟ ಆಳಗೊಳ್ಳುತ್ತಿದೆ, ಇದರಿಂದಾಗಿ ಗ್ರಾಮೀಣ ಆದಾಯಗಳು ಕುಸಿಯುವಂತಾಗಿದೆ, ತನ್ಮೂಲಕ ಇದರಿಂದ ಗ್ರಾಮೀಣ ಬೇಡಿಕೆಗಳು ಕುಂಠಿತಗೊಳ್ಳುತ್ತ ಒಟ್ಟಾರೆ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ ಎಂದು ಹೇಳಿದೆ. ಮೋದಿ ಸರಕಾರ ಪ್ರಕಟಿಸಿರುವ ಹೆಚ್ಚಿನ ಕನಿಷ್ಟ ಬೆಂಬಲ ಬೆಲೆಗಳು ಅದು ಮಾಡಿರುವ ಮೋಸ ಎಂಬುದು ಬಯಲಾಗುತ್ತಿದೆ. ರೈತರ ಆದಾಯಗಳು ಇಳಿಯುತ್ತಲೇ ಇವೆ, ಈಗಲೂ ಉತ್ಪಾದನಾ ಖರ್ಚಿಗಿಂತ ಬಹಳ ಕೆಳಮಟ್ಟದಲ್ಲಿಯೇ ಇವೆ. ಇದು ಗ್ರಾಮೀಣ ಭಾರತದಲ್ಲಿ ಜನಗಳ sಸಂಕಷ್ಟಗಳನ್ನು ಮತ್ತಷ್ಟು ಆಳಗೊಳಿಸುತ್ತಿದೆ.
ದೇಶದಾದ್ಯಂತ ನಿರುದ್ಯೋಗ ಗಾಬರಿ ಹುಟ್ಟಿಸುವ ರೀತಿಯಲ್ಲಿ ಏರುತ್ತಿರುವ ಬಗ್ಗೆಯೂ ಕೇಂದ್ರ ಸಮಿತಿ ಆತಂಕ ವ್ಯಕ್ತಪಡಿಸಿದೆ.
ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು:
ಬ್ಯಾಂಕಿಂಗ್ ವಲಯವನ್ನು ಆವರಿಸಿರುವ ಬಿಕ್ಕಟ್ಟನ್ನು ಗಮನಕ್ಕೆ ತಗೊಂಡ ಕೇಂದ್ರ ಸಮಿತಿ ಮೋದಿ ಸರಕಾರ ಆರ್ಬಿಐ ಕಾಯ್ದೆಯ ಸೆಕ್ಷನ್ ೭ನ್ನು ಎತ್ತುವ ಅಭೂತಪೂರ್ವ ಕ್ರಮ ಕೈಗೊಂಡಿರುವುದು ಹಣಕಾಸು ನಿಯಂತ್ರಕನಾಗಿ ಭಾರತೀಯ ರಿಝರ್ವ್ ಬ್ಯಾಂಕಿನ ಸ್ವಾತಂತ್ರ್ಯದ ಬುಡಕ್ಕೇ ಏಟು ಕೊಟ್ಟಿದೆ ಎಂದು ಅಭಿಪ್ರಾಯ ಪಟ್ಟಿದೆ. ನೋಟುರದ್ಧತಿ, ಕೆಟ್ಟಸಾಲಗಳ ನಿರ್ವಹಣೆಯ ರೀತಿ, ಈ ಸರಕಾರದ ಅವಧಿಯಲ್ಲಿ ಪ್ರತಿವರ್ಷ ರಿಝರ್ವ್ ಬ್ಯಾಂಕಿನ ಲಾಭಗ 99%ವನ್ನು ತಗೊಂಡಿರುವುದು, ಮತ್ತು ಇತ್ತೀಚೆಗೆ ರಿಝರ್ವ್ ಬ್ಯಾಂಕ್ ತನ್ನ ಮೀಸಲುಗಳಿಂದ ೩.೫ಲಕ್ಷ ಕೋಟಿ ರೂ.ಗಳನ್ನು ಸರಕಾರಕ್ಕೆ ಅದರ ಹಣಕಾಸು ಕೊರತೆಯನ್ನು ತಡೆಯಲಿಕ್ಕಾಗಿ ಬಿಟ್ಟುಕೊಡುವಂತೆ ಬಲವಂತ ಮಾಡುವ ಪ್ರಯತ್ನ ಈ ವಿವಾದಗಳು ಗಂಭೀರ ಸೆಳೆತಗಳನ್ನು ಉಂಟು ಮಾಡಿವೆ. ಇದು ದೇಶದ ಈ ಕೇಂದ್ರೀಯ ಬ್ಯಾಂಕಿನ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿದೆ. ಈ ಒತ್ತಡಗಳು ಸ್ಪಷ್ಟವಾಗಿ ಮೋದಿ ಸರಕಾರ ಚಮಚಾ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಿರುವುದರ ಫಲಿತಾಂಶ ಎಂದು ಕೇಂದ್ರ ಸಮಿತಿ ವಿಶ್ಲೇಷಿಸಿದೆ.
ರಫೇಲ್ ಹಗರಣ: ಜೆಪಿಸಿ ರಚಿಸಿ:
ಮೋದಿ ಸರಕಾರ ರಫೆಲ್ ವ್ಯವಹಾರದಲ್ಲಿ ಸುಪ್ರಿಂ ಕೋರ್ಟನ್ನು ತಪ್ಪುದಾರಿಗೆಳೆದಿದೆ ಎಂಬುದನ್ನು ಕೇಂದ್ರ ಸಮಿತಿ ಗಮನಿಸಿದೆ. ಸಂವಿಧಾನ ವಿಧಿಸಿರುವಂತೆ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿಯೂ ಇಲ್ಲ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅದನ್ನು ಪರೀಕ್ಷಿಸಿಯೂ ಇಲ್ಲ ಎಂಬುದು ಸ್ಫಟಿಕದಷ್ಟು ಸ್ಪಷ್ಟ. ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಲು ಒಂದು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂಬ ತನ್ನ ಬೇಡಿಕೆಯನ್ನು ಕೇಂದ್ರ ಸಮಿತಿ ಪುನರುಚ್ಚರಿಸಿದೆ.
ಚುನಾವಣಾ ಬಾಂಡುಗಳು:
ಚುನಾವಣಾ ಬಾಂಡುಗಳನ್ನು ಕುರಿತಂತೆ ಸಿಪಿಐ(ಎಂ)ನ ನಿಲುವು ಸರಿಯೆಂದು ಸಾಬೀತಾಗಿದೆ ಎಂದು ಕೇಂದ್ರ ಸಮಿತಿ ಹೇಳಿದೆ. ಚುನಾವಣಾ ಬಾಂಡುಗಳು ಹೊಸ ತೆರಿಗೆ ವಂಚನಾಧಾಮಗಳಾಗಿವೆ. ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಸಿದ ಆಡಿಟ್ ಮತ್ತು ಆದಾಯ ತೆರಿಗೆ ವರದಿ ಚುನಾವಣಾ ಬಾಂಡುಗಳಿಂದ ೨೦೧೭-೧೮ರಲ್ಲಿ ೨೧೦ ರೂ.ಗಳ ಸ್ವಯಂಪ್ರೇರಿತ ವಂತಿಗೆಗಳು ಬಂದಿವೆ ಎಂದು ತೋರಿಸಿದೆ. ಈ ವರ್ಷದ ಮಾರ್ಚ್ವರೆಗಿನ ಅವಧಿಯಲ್ಲಿ ನೀಡಿರುವ ಚುನಾವಣಾ ಬಾಂಡುಗಳ ಒಟ್ಟು ಮೌಲ್ಯ ೨೨೨ ಕೋಟಿ ರೂ. ಹೀಗೆ ಬಿಜೆಪಿ ಈ ಒಟ್ಟು ಚುನಾವಣಾ ಬಾಂಡುಗಳ ೯೪.೫%ವನ್ನು ಪಡೆದಿದೆ. ೨೦೧೭-೧೮ರಲ್ಲಿ ಬಿಜೆಪಿ ಒಟ್ಟು ೧೦೨೭ ಕೋಟಿ ರೂ.ಗಳ ಭಾರೀ ಮೊತ್ತದ ಹಣವನ್ನು ಪಡೆದಿದೆ. .
ಬಿಜೆಪಿ ಮತ್ತು ಮೋದಿ ಸರಕಾರ ಇಂತಹ ಚಮಚಾ ಬಂಡವಾಳಶಾಹಿಯ ಮೂಲಕ ತನ್ನ ಚುನಾವಣಾ ಪ್ರಯೋಜನಕ್ಕೆ ಕಾರ್ಪೊರೇಟ್ ನಿಧಿ ನೀಡಿಕೆಗೆ ಸೌಕರ್ಯ ಒದಗಿಸಿ ಕೊಟ್ಟಿದೆ ಎಂಬುದು ಸ್ಪಷ್ಟ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ಕೋಮುಧ್ರುವೀಕರಣವನ್ನು ಆಳಗೊಳಿಸುವ ಪ್ರಯತ್ನ:
ಸಾರ್ವತ್ರಿಕ ಚುನಾವಣೆಗಳ ವೇಳೆಗೆ ಕೋಮುವಾದಿ ಉನ್ಮಾದವನ್ನು ಬೆಳೆಸುವ ಪ್ರಯತ್ನಗಳಲ್ಲಿ ಹಲವು ಹಿಂದುತ್ವ ಪಡೆಗಳು ತೊಡಗಿವೆ ಎಂದು ಕೇಂದ್ರ ಸಮಿತಿ ಆತಂಕ ವ್ಯಕ್ತಪಡಿಸಿದೆ. ತಮ್ಮ ಚುನಾವಣಾ ಜನಪ್ರಿಯತೆ ಮಾಯವಾಗುತ್ತಿರುವುದರಿಂದ ಆರೆಸ್ಸೆಸ್-ಬಿಜೆಪಿಗೆ ಹಿಂದುತ್ವ ಕೋಮುವಾದಿ ವೋಟ್ ಬ್ಯಾಂಕ್ನ್ನು ಕ್ರೋಡೀಕರಿಸಲು ಕೋಮುವಾದಿ ಧ್ರುವೀಕರಣವೇ ಏಕೈಕ ದಾರಿಯಾಗಿ ಕಾಣಿಸುತ್ತಿದೆ. ಇದು ಭಾರತದಲ್ಲಿ ವೋಟ್ ಬ್ಯಾಂಕಿನ ಅತ್ಯಂತ ಕೆಟ್ಟ ಅಭಿವ್ಯಕ್ತಿಯಾಗಿದೆ.
ಆರೆಸ್ಸೆಸ್-ಬಿಜೆಪಿ ಮುಖಂಡರು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಒಂದು ಶಾಸನ/ಸುಗ್ರೀವಾಜ್ಞೆ ತರಬೇಕು ಎಂದು ಕರೆ ನೀಡುತ್ತಿರುವುದು ಮತ್ತು ಇದಕ್ಕೆ ಸಂಬಂಧಪಟ್ಟಂತೆ ವಿವಿಧ ರ್ಯಾಲಿಗಳನ್ನು ನಡೆಸಿರುವುದು ಈ ದುಷ್ಟ ಕುತಂತ್ರವನ್ನು ಸ್ಪಷ್ಟವಾಗಿಯೇ ತೋರಿಸುತ್ತಿದೆ.
ಗೋರಕ್ಷಣೆ, ನೈತಿಕ ಪೋಲೀಸ್ಗಿರಿ ಮುಂತಾದವುಗಳ ಹೆಸರಲ್ಲಿ ಖಾಸಗಿ ಸೇನೆಗಳಿಗೆ ನೀಡುತ್ತಿರುವ ಪೋಷಣೆಯ ಫಲಿತಾಂಶವಾಗಿ ಕಾವಲುಕೋರತನ ಜನಜಂಗುಳಿಗಳು ಬಡಿದು ಸಾಯಿಸುವ ಘಟನೆಗಳು ನಡೆಯುವ ವರೆಗೆ ಬೆಳೆದಿದೆ. ಜನಜಂಗುಳಿಯ ಹಿಂಸಾಚಾರ ಮತ್ತು ಬಡಿದು ಸಾಯಿಸುವ ಘಟನೆಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕೆಂಬ ಸುಪ್ರಿಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘಿಸಲಾಗುತ್ತಿದೆ.
ಇದರ ಬದಲು ಈ ನಿರ್ದೇಶನದ ನಂತರ ಉತ್ತರಪ್ರದೇಶದ ಮೇರಠ್ ವ್ಯಾಪ್ತಿಯೊಂದರಲ್ಲೇ ೫೪ ಮಂದಿಯನ್ನು ದನಗಳ ಕಳ್ಳಸಾಗಾಣಿಕೆಯ ಆರೋಪದಲ್ಲಿ ಬಂಧಿಸಲಾಗಿದೆ. ಈ ಜಿಲ್ಲೆಯಲ್ಲಿ ಸಂದೇಹಾಸ್ಪದ ಸಂದರ್ಭಗಳಲ್ಲಿ ಕಳೇಬರಗಳನ್ನು ಕಂಡು ಗೋಹತ್ಯೆ ನಡೆದಿದೆ ಎಂಬ ನೆಪದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಸಮಯದಲ್ಲಿ ಒಬ್ಬ ಪೋಲೀಸ್ ಇನ್ಸ್ಪೆಕ್ಟರ್ರವರ ಕ್ರೂರ ಹತ್ಯೆ ನಡೆದಿದೆ. ಈ ನಿರ್ದಿಷ್ಟ ಘಟನೆಯಲ್ಲೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಮೊದಲಿಗೆ ಗೋಹತ್ಯೆಯ ಆರೋಪಗಳ ತನಿಖೆಗೆ ಆದೇಶ ನೀಡಿದರು, ನಂತರವೇ ಪೋಲಿಸ್ ಇನ್ಸ್ಪೆಕ್ಟರ್ ಹತ್ಯೆಯ ತನಿಖೆ ನಡೆಸಲಾಗುವುದು ಎಂದರು.
ಕೇರಳದಲ್ಲಿ, ಶಬರಿಮಲೆ ದೇವಸ್ಥಾನದ ತೀರ್ಪಿನ ವಿಷಯದಲ್ಲಿ ಆಸ್ತಿಕರ ಭಾವನೆಗಳ ದುರುಪಯೋಗ ಪಡೆಯುವ ಮತ್ತು ಕೋಮುವಾದಿ ಉದ್ವೇಗವನ್ನು ಸೃಷ್ಟಿಸುವ ಆರೆಸ್ಸೆಸ್-ಬಿಜೆಪಿ ಪ್ರಯತ್ನಗಳನ್ನು ಸಿಪಿಐ(ಎಂ) ಮತ್ತು ಎಲ್ಡಿಎಫ್ ಸರಕಾರ ದೃಢವಾಗಿ ಎದುರಿಸಿವೆ. ಕಾಂಗ್ರೆಸ್ ಪಕ್ಷ ಬಿಜೆಪಿಯ ಮಾರ್ಗವನ್ನು ಅನುಸರಿಸುತ್ತಿರುವುದನ್ನು ಕೇಂದ್ರ ಸಮಿತಿ ಖಂಡಿಸಿದೆ.
ಈ ಎರಡೂ ಪಕ್ಷಗಳು ಆರಂಭದಲ್ಲಿ ತೀರ್ಪನ್ನು ಸ್ವಾಗತಿಸಿದರೂ, ಆಸ್ತಿಕರಲ್ಲಿನ ಸಂದೇಹಗಳನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಸಿಪಿಐ(ಎಂ) ಮತ್ತು ಎಲ್ಡಿಎಫ್ ಸರಕಾರದ ವಿರುದ್ಧ ಬಳಸಲು ಪ್ರಯತ್ನಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ನಡೆಸಿರುವ ಸುಳ್ಳು ಪ್ರಚಾರವನ್ನು ಬಯಲಿಗೆಳೆಯಲು ಪಕ್ಷ ಮತ್ತು ಎಲ್ಡಿಎಫ್ ನಡೆಸಿರುವ ಪ್ರಚಾರಾಂದೋಲನದಲ್ಲಿ ಭಾಗವಹಿಸಬೇಕು ಎಂದು ಕೇರಳದ ಜನತೆಗೆ ಕೇಂದ್ರ ಸಮಿತಿ ಮನವಿ ಮಾಡಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರ :
ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿಗಳು ಹದಗೆಡುತ್ತಿರುವ ಬಗ್ಗೆ ಕೇಂದ್ರ ಸಮಿತಿ ತನ್ನ ಗಂಭೀರ ಆತಂಕವನ್ನು ವ್ಯಕ್ತಪಡಿಸಿತು. ಭದ್ರತಾ ಪಡೆಗಳು ನಿಶ್ಶಸ್ತ್ರ ಪ್ರತಿಭಟನಾಕಾರರ ಮೇಲೆ ನಡೆಸಿದ ಗೋಲೀಬಾರಿನಲ್ಲಿ ಏಳು ನಾಗರಿಕರು ಕೊಲ್ಲಲ್ಪಟ್ಟಿರುವುದು ದುರದೃಷ್ಟಕರ. ಇದನ್ನು ಒಪ್ಪಲು ಸಾಧ್ಯವಿಲ್ಲ. ಮೋದಿ ಸರಕಾರ ನಾಲ್ಕು ವರ್ಷಗಳ ಹಿಂದೆ ಒಂದು ರಾಜಕೀಯ ಸಂವಾದವನ್ನು ಆರಂಭಿಸುವುದಾಗಿ ಆಶ್ವಾಸನೆ ನೀಡಿತ್ತು. ಈ ಸಂವಾದ ನಡೆಸಲು ಅದಕ್ಕೆ ಆಸಕ್ತಿಯೇ ಇಲ್ಲ ಎಂದು ಕೇಂದ್ರ ಸಮಿತಿ ಖೇದ ವ್ಯಕ್ತಪಡಿಸಿದೆ.
ಕಳೆದ ಮೂರು ವರ್ಷಗಳಲ್ಲಿ ಮುನ್ನೂರಕ್ಕೂ ಹೆಚ್ಚು ನಾಗರಿಕರು ಸತ್ತಿದ್ದಾರೆ. ದುರದೃಷ್ಟವಶಾತ್, ಈ ಸಾವುಗಳ ಬಗ್ಗೆ ಯಾವುದೇ ತನಿಖೆಯನ್ನು ನಡೆಸಿಲ್ಲ, ಇದಕ್ಕೆ ಯಾರೊಬ್ಬರನ್ನೂ ಹೊಣೆಯಾಗಿಸಿಲ್ಲ. ಈ ಸನ್ನಿವೇಶ ಜನಗಳಲ್ಲಿ ಇನ್ನಷ್ಟು ಪರಕೀಯ ಭಾವ ಬೆಳೆಯುವಂತೆ ಮಾಡುತ್ತದಷ್ಟೇ ಎಂದು ಕೇಂದ್ರ ಸಮಿತಿ ಎಚ್ಚರಿಸಿದೆ.
ಬಿಜೆಪಿಗೆ ಇಂತಹ ಸನ್ನಿವೇಶ ಮುಂದುವರಿಯಬೇಕೆಂದೇ ಆಸಕ್ತಿ. ಮುಂಬರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಕೋಮುವಾದಿ ಧ್ರುವೀಕರಣದ ಅದರ ಇನ್ನೂ ದೊಡ್ಡದಾದ ಅಜೆಂಡಾಕ್ಕಾಗಿ ಅದು ಹೀಗೆ ಮಾಡುತ್ತಿದೆ; ಯಾವ ರಾಜಕೀಯ ಹೊಣೆಗಾರಿಕೆಯೂ ಇಲ್ಲ, ಅದು ಉಂಟುಮಾಡಿರುವ ಅವ್ಯವಸ್ಥೆಯ ಬಗ್ಗೆ ಹೊಣೆಗಾರಿಕೆ ಇಲ್ಲ. ಈ ಪ್ರಶ್ನೆಗಳನ್ನು ಸಂಪೂರ್ಣವಾಗಿ ತಪ್ಪಾಗಿ ಅದು ನಿರ್ವಹಿಸಿರುವುದು ಭಾರತವನ್ನು ಘಾಸಿಗೊಳಿಸಿದೆ ಎಂದು ಕೇಂದ್ರ ಸಮಿತಿ ವಿಶ್ಲೇಷಿಸಿದೆ.
ಮೋದಿ ಸರಕಾರ ತಕ್ಷಣವೇ, ಈ ಹಿಂದೆ ನೀಡಿದ್ದ ತನ್ನ ಆಶ್ವಾಸನೆಯಂತೆ, ಸಂಬಂಧಪಟ್ಟ ಎಲ್ಲರೊಂದಿಗೂ ಸಂವಾದದ ಪ್ರಕ್ರಿಯೆಯನ್ನು ಆರಂಭಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸಮಿತಿ ಆಗ್ರಹಿಸಿದೆ.
ಹೆಚ್ಚುತ್ತಿರುವ ಜನ ಹೋರಾಟಗಳು:
ಇತ್ತೀಚಿನ ಅವಧಿಯಲ್ಲಿ ಜನತೆಯ ಹೋರಾಟಗಳು ಬೆಳೆಯುತ್ತಿವೆ ಎಂದು ಗಮನಿಸಿದ ಕೇಂದ್ರ ಸಮಿತಿ ಮೋದಿ ಸರಕಾರ ಹೇರುತ್ತಿರುವ ಹೆಚ್ಚೆಚ್ಚು ಸಂಕಷ್ಟಗಳ ವಿರುದ್ಧ ಜನಗಳ ಹೋರಾಟಗಳನ್ನು ಮತ್ತಷ್ಟು ಬಲಪಡಿಸುವುದನ್ನು ಸಿಪಿಐ(ಎಂ) ಮತ್ತು ಎಡಪಂಥೀಯರು ಮುಂದುವರೆಸುತ್ತಾರೆ ಎಂದು ಹೇಳಿದೆ.