ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರುಬಂಡವಾಳ ಒದಗಿಸಲು 41,೦೦೦ ಕೋಟಿ ರೂ.ಗಳಿಗೆ ಮಂಜೂರಾತಿ ಪಡೆಯಲು ಸರಕಾರ ಮತ್ತೊಮ್ಮೆ ಪ್ರಯತ್ನಿಸಿದೆ. ಇದು ಈ ವರ್ಷದ ಮರು ಬಂಡವಾಳೀಕರಣದ ಮೊತ್ತವನ್ನು 1,06,000 ಕೋಟಿ ರೂ.ಗಳಿಗೆ ಒಯ್ಯುತ್ತದೆ .
ಬ್ಯಾಂಕಿಂಗ್ ಬಿಕ್ಕಟ್ಟು ಮೋದಿ ಸರಕಾರ ತನ್ನ ಚಮಚಾಗಳಿಗೆ ಸಾಲ ಪಡೆಯಲು, ಅದರೊಂದಿಗೆ ದೇಶವನ್ನು ಬಿಟ್ಟು ಹೋಗಲು ನೀಡಿರುವ ಕೃಪಾಪೋಷಣೆಯಿಂದಾಗಿ ಉಂಟಾಗಿದೆ. ಈ ಸಾಲಗಳನ್ನು ವಸೂಲಿ ಮಾಡುವ ಬದಲು, ಈ ಸಾರ್ವಜನಿಕ ಹಣದ ಲೂಟಿಗೆ ಹಣಕಾಸು ಹೊಂದಿಸಲು ಸಾರ್ವಜನಿಕ ಹಣವನ್ನು ತುಂಬಿಸಲಾಗುತ್ತಿದೆ. ಇದು ಭಾರತೀಯ ಜನತೆ ಶ್ರಮಪಟ್ಟು ಮಾಡಿರುವ ಉಳಿತಾಯಗಳ ಇಮ್ಮಡಿ ಲೂಟಿ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡಿಸಿದೆ.
ಇದುವರೆಗೆ, ಮೋದಿ ಸರಕಾರ ಚಮಚಾ ಬಂಡವಾಳಿಗರ, ಅವರು ಪಡೆದ ಸಾಲಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈ ರೀತಿಯ ಪಾರದರ್ಶಕತೆಯ ಅಭಾವ ಮೋದಿ ಸರಕಾರ ಸಾರ್ವಜನಿಕ ಹಣದ ಇಂತಹ ಲೂಟಿಗೆ ಪೋಷಣೆ ಒದಗಿಸುತ್ತಿದೆ ಎಂಬ ಸಂದೇಹವನ್ನು ಆಳಗೊಳಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಇಂತಹ ಚಮಚಾ ಬಂಡವಾಳಶಾಹಿಗಳ ಪಟ್ಟಿಯನ್ನು ಸಾರ್ವಜನಿಕಗೊಳಿಸಬೇಕು ಮತ್ತು ಈ ಮೊತ್ತಗಳನ್ನು ಅವರಿಂದ ವಸೂಲಿ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.