ಗೃಹ ವ್ಯವಹಾರಗಳ ಮಂತ್ರಾಲಯ ಹತ್ತು ಕೇಂದ್ರೀಯ ಸಂಸ್ಥೆಗಳಿಗೆ ಕಂಪ್ಯೂಟರಿನಲ್ಲಿ ಉಂಟು ಮಾಡಿದ, ಪ್ರಸರಿಸಿದ, ಪಡೆದ ಅಥವ ಇಟ್ಟಿರುವ ಯಾವುದೇ ಮಾಹಿತಿಯನ್ನು ಮಧ್ಯದಲ್ಲಿ ತಡೆಯಲು, ಮಾನಿಟರ್ ಮಾಡಲು ಮತ್ತು ಗೂಢಲಿಪಿಯಿಂದ ಸಾಮಾನ್ಯ ಭಾಷೆಗಿಳಿಸಲು ಅಧಿಕಾರ ನೀಡುವ ಒಂದು ಆದೇಶವನ್ನು ಹೊರಡಿಸಿದೆ.
ಇದು ನಮ್ಮ ಸಂವಿಧಾನ ಪ್ರತಿಯೊಂದು ನಾಗರಿಕನಿಗೆ ಕೊಟ್ಟಿರುವ ಖಾಸಗಿತ್ವದ ಮೂಲಭೂತ ಹಕ್ಕಿನ ಮೇಲೆ ಒಂದು ಭಂಡ ದಾಳಿ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ. ಇದು ದೂರವಾಣಿ ಕದ್ದಾಲಿಕೆ ಮಾರ್ಗನಿರ್ದೇಶಕ ಸೂತ್ರಗಳ ಮೇಲಿನ ಸುಪ್ರಿಂ ಕೋರ್ಟ್ ತೀರ್ಪುಗಳು, ಖಾಸಗಿತ್ವದ ಹಕ್ಕಿನ ತೀರ್ಪು ಮತ್ತು ಆಧಾರ್ ತೀರ್ಪಿನ ಭಾವಕ್ಕೆ ವಿರುದ್ಧವಾದ ಒಂದು ಆದೇಶ.
ಆರೆಸ್ಸೆಸ್/ಬಿಜೆಪಿ ಕಣ್ಣೋಟವನ್ನು ಒಪ್ಪದ ನಾಗರಿಕರಿಗೆ ಕಿರುಕುಳ ಕೊಡುವ, ಅವರ ಬೆನ್ನಟ್ಟುವ ಈ ಸರಕಾರದ ದಾಖಲೆ ಪ್ರತಿಯೊಬ್ಬರ ಕಣ್ಣ ಮುಂದಿದೆ. ಅವರ ಪ್ರತಿಷ್ಠೆಗೆ ಹಾನಿಕಾರಕ ಎಂದು ಅವರಿಗೆ ಅನಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗಾಗಿ ವ್ಯಕ್ತಿಗಳನ್ನು ಕರೆದೊಯ್ಯುವುದನ್ನು ಜನ ಕಾಣುತ್ತಿದ್ದಾರೆ.
ಆದ್ದರಿಂದ ಈ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.