ಕರ್ನಾಟಕ ಸರಕಾರ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲೀಷ್ ಮಾದ್ಯಮದ ಶಾಲೆಗಳನ್ನು ತೆರೆಯುವ ಕನ್ನಡ ವಿರೋಧಿ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು ಎಂದು ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯ ಸಮಿತಿಯು ಮುಖ್ಯಮಂತ್ರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ.
ಸರಕಾರದ ಈ ನಿಲುಮೆ ಖಂಡಿತಾ ಕನ್ನಡದ ಮೇಲಿನ ದೊಡ್ಡ ಧಾಳಿಯಾಗಿ ಪರಿಣಮಿಸಲಿದೆಯೆಂದು ಸಿಪಿಐ(ಎಂ) ಎಚ್ಚರಿಸಿದೆ. ಅದೇ ಸಂದರ್ಭದಲ್ಲಿ ಕನ್ನಡ ಮಾದ್ಯಮದ ಶಾಲೆಗಳಲ್ಲಿ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸಲು ಅಗತ್ಯ ಕ್ರಮ ವಹಿಸುವುದನ್ನು ಸಿಪಿಐ(ಎಂ) ಪಕ್ಷ ಬೆಂಬಲಿಸಲಿದೆ ಎಂದು ಪುನಃ ಒತ್ತಿ ಹೇಳಿದೆ. ತಕ್ಷಣವೇ ಈ ಕುರಿತು ರಾಜ್ಯ ಸರಕಾರ ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸುತ್ತದೆ.
ಇಂಗ್ಲೀಷ್ ಮಾದ್ಯಮದ ಖಾಸಗೀ ಶಾಲೆಗಳು ಯಾವುದೇ ಅಗತ್ಯ ಮೂಲ ಸೌಕರ್ಯಗಳಿಲ್ಲದೇ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದನ್ನು ಹಾಗೂ ಅವುಗಳ ವ್ಯಾಪಕ ಲೂಟಿಗಳನ್ನು ತಡೆಯುವಲ್ಲಿ ಸರಕಾರ ಘೋರವಾಗಿ ವಿಫಲವಾಗಿದೆ ಎಂದು ಸಿಪಿಐ(ಎಂ) ಕಟುವಾಗಿ ಠೀಕಿಸಿದೆ. ಅಲ್ಲದೆ ಅವುಗಳ ಬೆಳವಣಿಗೆಯನ್ನು ತೋರಿಸಿ ತಾನು ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲೀಷ್ ಮಾದ್ಯಮದ ಶಾಲೆಗಳನ್ನು ತೆರೆಯಲು ಮುಂದಾಗುತ್ತಿರುವುದು ಕನ್ನಡ ವಿರೋಧಿಯಾಗಿದೆ ಎಂದು ಬಲವಾಗಿ ಖಂಡಿಸುತ್ತದೆ.
ಕೂಡಲೇ ಲೂಟಿಕೋರ ಖಾಸಗಿ ವ್ಯಾಪಾರಿ ಸಂಸ್ಥೆಗಳಿಗೆ ಇಂಗ್ಲೀಷ್ ಮಾದ್ಯಮದ ಶಾಲೆಗಳನ್ನು ತೆರೆಯಲು ಹಿಂಬಾಗಿಲಿಂದ ಪರೋಕ್ಷ ಬೆಂಬಲ ಮತ್ತು ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಹಾಗೂ ಅವುಗಳ ಬೆಳವಣಿಗೆಯನ್ನು ನಿಲ್ಲಿಸಲು ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಕನ್ನಡ ಮಾದ್ಯಮದ ಶಾಲೆಗಳಲ್ಲಿ ಕೇವಲ ಇಂಗ್ಲೀಷ್ ಒಂದು ಭಾಷೆಯಾಗಿ ಕಲಿಸುವ ಶಾಲೆಗಳನ್ನು ಪ್ರೋತ್ಸಾಹಿಸಲು ಆದ್ಯತೆ ನೀಡುವಂತೆ ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸುತ್ತದೆ.