ಕಾಮ್ರೇಡ್ ನಿರುಪಮ್‍ ಸೆನ್ ನಿಧನ

ಹಿಂದೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ರರಾಗಿದ್ದ ಕಾಮ್ರೇಡ್‍ ನಿರುಪಮ್‍ ಸೆನ್ ಡಿಸೆಂಬರ್‍ 24ರಂದು ನಿಧನರಾಗಿದ್ದಾರೆ. 72 ವರ್ಷ ವಯಸ್ಸಾಗಿದ್ದ ಅವರು ದೀರ್ಘಕಾಲದಿಂದ ಅಸ್ವಸ್ಥರಾಗಿದ್ದರು. ಅವರು ಪಕ್ಷದ ಒಬ್ಬ ಶ್ರೇಷ್ಠ ಮುಖಂಡರಾಗಿದ್ದರು ಎಂದು ಪೊಲಿಟ್‍ ಬ್ಯುರೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದೆ.

ಒಬ್ಬ ವಿದ್ಯಾರ್ಥಿ ಕಾರ್ಯಕರ್ತನಾಗಿ ತನ್ನ ರಾಜಕೀಯ ಜೀವನ ಆರಂಭಿಸಿದ ನಿರುಪಮ್‍ ಸೆನ್, ನಂತರ ಎಸ್‍ ಎಫ್‍ ಐ  ಎಂದು ಹೆಸರು ಪಡೆದ ಬಂಗಾಲ ಪ್ರಾಂತ್ಯ ವಿದ್ಯಾರ್ಥಿ ಫೆಡರೇಶನ್‍ ನ  ಒಬ್ಬ ಪ್ರಮುಖ ಮುಖಂಡರಾದರು. 1964ರಲ್ಲಿ ಅವರು ಪಕ್ಷವನ್ನು ಸೇರಿ, ಬರ್ದ್ವಾನ್ ಜಿಲ್ಲೆಯಲ್ಲಿ ರೈತಾಪಿಗಳು ಮತ್ತು ಕಾರ್ಮಿಕ ವರ್ಗದ ವಿವಿಧ ಹೋರಾಟಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು. ಎಪ್ಪತ್ತರ ದಶಕದ ಆರಂಭದಲ್ಲಿ ಅವರ ಮೇಲೆ ಸುಳ್ಳು ಕೇಸುಗಳನ್ನು ಹೇರಿದಾಗ ತಲೆ ಮರೆಸಿಕೊಂಡಿರಬೇಕಾಯಿತು.

1968ರಲ್ಲಿ ಸೆನ್‍ ಅವರು ಪಕ್ಷದ ಪೂರ್ಣಕಾಲದ ಕಾರ್ಯಕರ್ತರಾದರು. ಬರ್ದ್ವಾನ್ ಜಿಲ್ಲೆಯಲ್ಲಿ ಪಕ್ಷದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು 1989ರಿಂದ 1995 ರ ವರೆಗೆ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿದ್ದರು.

1985ರಲ್ಲಿ ನಿರುಪಮ್‍ ಸೆನ್‍ ಸಿಪಿಐ(ಎಂ)ನ ಪಶ್ಚಿಮ ಬಂಗಾಲ ಜಿಲ್ಲಾ ಸಮಿತಿಗೆ ಚುನಾಯಿತರಾದರು, 1995ರಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯರಾದರು. 1998ರಲ್ಲಿ ಪಕ್ಷದ 16ನೇ ಮಹಾಧಿವೇಶನದಲ್ಲಿ ಅವರು ಕೇಂದ್ರ ಸಮಿತಿಗೆ ಚುನಾಯಿತರಾದರು. 2008ರಲ್ಲಿ ಪೊಲಿಟ್‍ ಬ್ಯುರೊದ ಒಬ್ಬ ಸದಸ್ಯರಾದರು. ಸ್ವಲ್ಪ ಕಾಲ ಅಸ್ವಸ್ಥರಾದ ನಂತರ ಅವರು 2015ರಿಂದ 2018ರ ವರೆಗೆ ಕೇಂದ್ರ ಸಮಿತಿಯ ಒಬ್ಬ ವಿಶೇಷ ಆಹ್ವಾನಿತರಾದರು.

ಕಾಮ್ರೇಡ್‍ ಸೆನ್‍ ಮೂರು ಬಾರಿ ಪಶ್ಚಿಮ ಬಂಗಾಲ ವಿಧಾನಸಭೆಗೆ ಚುನಾಯಿತರಾದರು. 2001ರಲ್ಲಿ ಅವರು ಎಡರಂಗ ಸರಕಾರದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಮಂತ್ರಿಯಾದರು. ಎರಡು ಅವಧಿಗೆ ಅವರು ಈ ಹುದ್ದೆಯಲ್ಲಿದ್ದರು. ಮಂತ್ರಿಯಾಗಿ ಅವರು ಪಶ್ಚಿಮ ಬಂಗಾಲದ ಕೈಗಾರಿಕಾ ಅಭಿವೃದ್ಧಿಯ ನಕಾಶೆ ಸಿದ್ಧಪಡಿಸುವಲ್ಲಿ  ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ, ಗ್ರಾಮೀಣ ಶಿಕ್ಷಣ, ಪ್ರಾಥಮಿಕ ಆರೋಗ್ಯ ಮೂಲರಚನೆಗಳು ಮತ್ತು ಸ್ವಸಹಾಯ ಗುಂಪುಗಳಿಗೆ ಸಂಬಂಧಪಟ್ಟಂತೆ ಧೋರಣೆಗಳನ್ನು ರೂಪಿಸುವಲ್ಲಿ ಒಂದು ನೇತೃತ್ವದ ಪಾತ್ರವನ್ನು ವಹಿಸಿದರು.

ನಿರುಪಮ್‍ ಸೆನ್ ಮಾರ್ಕ್ಸ್ ವಾದದ  ಒಬ್ಬ ಸ್ಫುಟವಾದ ಪ್ರತಿಪಾದಕರಾಗಿದ್ದು, ಪಕ್ಷದ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವರು ಒಬ್ಬ ಜನಪ್ರಿಯ ವಾಗ್ಮಿಯೂ ಆಗಿದ್ದರು, ವಿಭಿನ್ನ ವಿಷಯಗಳ ಮೇಲೆ ಪಕ್ಷದ ಅಭಿಪ್ರಾಯಗಳನ್ನು ಅವರು ಪರಿಣಾಮಕಾರಿಯಾಗಿ ಮುಂದಿಡುತ್ತಿದ್ದರು. 2013ರಲ್ಲಿ ಅವರು ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿ, ಭಾಗಶಃ ಪಾರ್ಶ್ವವಾಯುವಿಗೆ ತುತ್ತಾದರು. ಈ ವಿಕಲತೆಯ ನಡುವೆಯೂ ಅವರು ಸಭೆಗಳಲ್ಲಿ ಭಾಗವಹಿಸುವುದನ್ನು ಮುಂದುವರೆಸಿದರು ಮತ್ತು ಸಂಗಾತಿಗಳೊಡನೆ ಸಂಪರ್ಕವಿಟ್ಟುಕೊಂಡಿದ್ದರು.

ನಿರುಪಮ್‍ ಸೆನ್ ಒಬ್ಬ ಸಮರ್ಪಿತ ಮಾರ್ಕ್ಸ್ ವಾದಿಯಾಗಿದ್ದರು, ತನ್ನ ಸೌಮ್ಯ ಮತ್ತು ನಮ್ರ ವರ್ತನೆಗಳಿಂದಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದರು ಎಂದು ನೆನಪಿಸಿಕೊಂಡಿರುವ ಸಿಪಿಐ(ಎಂ) ಪೊಲಿಟ್  ಬ್ಯುರೊ, ಅವರ ನಿಧನದಿಂದಾಗಿ ಪಕ್ಷ ಮತ್ತು ಎಡಪಂಥೀಯ ಆಂದೋಲನ ಒಬ್ಬ ಅಮೂಲ್ಯ ಮುಖಂಡರನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದೆ. ನಿರುಪಮ್‍ ಸೆನ್‍ ಅವರ ನೆನಪಿಗೆ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತ, ಪೊಲಿಟ್‍ ಬ್ಯುರೊ ಅವರ ಪತ್ನಿ ಚಂದ್ರಬಾಲಿ, ಮಗಳು, ಮಗ ಮತ್ತು ಅವರ ಕುಟುಂಬದ ಇತರ ಸದಸ್ಯರಿಗೆ ಹಾರ್ದಿಕ ಸಂತಾಪಗಳನ್ನು ವ್ಯಕ್ತಗೊಳಿಸಿದೆ.

Leave a Reply

Your email address will not be published. Required fields are marked *