ಮೋದಿಯವರಿಗೆ ಹೊಡೆತ ಮನಸ್ಸಾಕ್ಷಿ ಎಂಬುದಿದ್ದಿದ್ದರೆ ಅವರು ರಾಜೀನಾಮೆ ನೀಡಬೇಕಿತ್ತು
ಅಲೋಕ್ ವರ್ಮ ಸಿಬಿಐ ನಿರ್ದೇಶಕರ ತಮ್ಮ ಹುದ್ದೆಯಲ್ಲಿ ಕಾರ್ಯನಿರ್ವಹಿಸದಂತೆ ಮಾಡಿರುವ ಮೋದಿ ಸರಕಾರದ ಕ್ರಮವನ್ನು ಸುಪ್ರಿಂ ಕೋರ್ಟ್ ರದ್ದು ಮಾಡಿ, ಅವರನ್ನು ಆ ಹುದ್ದೆಯಲ್ಲಿ ಮುಂದುವರೆಸಬೇಕು ಎಂದು ತೀರ್ಪು ನೀಡಿರುವುದು ಮೋದಿ ಸರಕಾರ ಹೇಗೆ ಸಿಬಿಐನಂತಹ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಪ್ರತಿಯೊಂದು ನಿಯಮ, ವಿಧಿ-ವಿಧಾನವನ್ನು ತಲೆಕೆಳಗೆ ಮಾಡುತ್ತಿದೆ ಮತ್ತು ತನ್ನ ಸಂಕುಚಿತ ರಾಜಕೀಯ ಹಿತಾಸಕ್ತಿಗಳಿಗೆ ಒಳಪಡಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟಿಪ್ಪಣಿ ಮಾಡಿದೆ.
ಈ ತೀರ್ಪು ಮೋದಿ ಸರಕಾರದ ಮೇಲಿನ, ನಿರ್ದಿಷ್ಟವಾಗಿ , ಸ್ವತಃ ಪ್ರಧಾನ ಮಂತ್ರಿಗಳ ಮೇಲಿನ ಒಂದು ಬಲವಾದ ದೋಷಾರೋಪಣೆ ಎಂದು ಅದು ಹೇಳಿದೆ. ಏಕೆಂದರೆ ಸಿಬಿಐ ಕೆಲಸ ನಿರ್ವಹಿಸುತ್ತಿರುವುದು ಅವರ ನೇರ ಉಸ್ತುವಾರಿಯಲ್ಲಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿದೆ.
ಪ್ರಧಾನ ಮಂತ್ರಿಗಳಿಗೆ ಮನಸ್ಸಾಕ್ಷಿ ಎಂಬುದಿದ್ದಿದ್ದರೆ ಅವರು ರಾಜೀನಾಮೆ ನೀಡಬೇಕಿತ್ತು. ಮುಂಬರುವ ಚುನಾವಣೆಗಳಲ್ಲಿ ಜನತೆ ಅವರನ್ನು ಅಧಿಕಾರದಿಂದ ತೆಗೆಯಲೇ ಬೇಕು ಎಂಬುದಕ್ಕೆ ಇದು ಮತ್ತೊಂದು ಕಾರಣವಾಗುತ್ತದೆ ಎಂದು ಪೊಲಿಟ್ಬ್ಯುರೊ ಹೇಳಿದೆ.