10% ಹೆಚ್ಚುವರಿ ಮೀಸಲಾತಿ: ತರಾತುರಿ ನಿರ್ಧಾರ, ಚುನಾವಣಾ ಲಾಭಕ್ಕಾಗಿಯಷ್ಟೇ

ಸಾಮಾನ್ಯ ಪ್ರವರ್ಗದಲ್ಲಿನ ಆರ್ಥಿಕವಾಗಿ ದುರ್ಬಲವಾದ ವಿಭಾಗಗಳಿಗೆ 10ಶೇ. ಮೀಸಲಾತಿ ನೀಡಲು ಕೇಂದ್ರ ಸಂಪುಟ ನಿರ್ಧರಿಸಿರುವುದು ಒಂದು ಚುನಾವಣಾ ಹೂಟ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಈ ನಿರ್ಧಾರ ಸಂಸತ್ತಿನ ಪ್ರಸಕ್ತ ಅಧಿವೇಶನ ಕೊನೆಗೊಳ್ಳಬೇಕಾಗಿರುವುದಕ್ಕಿಂತ ಒಂದು ದಿನ ಮೊದಲು ಮುಂಬರುವ ಸಾರ್ವತ್ರಿಕ ಚುನಾವಣೆಗಳ ಮೇಲೆ ಕಣ್ಣಿಟ್ಟುಕೊಂಡು ಬಂದಿದೆ. ಈ ಮೂಲಕ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಾನು ಉದ್ಯೋಗಾವಕಾಶ ನಿರ್ಮಾಣ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು  ಮೋದಿ ಸರಕಾರ ಒಪ್ಪಿಕೊಂಡಂತಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.  .

ಈ ವಿಷಯ ಮಂಡಲ್‍ ಆಯೋಗದ ದಿನಗಳಿಂದಲೂ ಚರ್ಚೆಯಲ್ಲಿದೆ. ಇಂತಹ ಒಂದು ಕ್ರಮದ ಅಗತ್ಯವಿದೆ ಎಂದು ಸಿಪಿಐ(ಎಂ) ಆಗಲೂ ಹೇಳಿತ್ತು, ಈಗಲೂ ಹೇಳುತ್ತಿದೆ. ಸಂಪುಟ ನಿರ್ಧಾರ ಯಾವುದೇ ಸಮಾಲೋಚನೆಗಳಿಲ್ಲದೇ, ನಿರ್ದಿಷ್ಟವಾಗಿ, ಇಂತಹ ಕ್ರಮದ ಫಲಾನುಭವಿಗಳನ್ನು ನಿರ್ಧರಿಸುವ ಮಾನದಂಡಗಳ ಬಗ್ಗೆ ಸಮಾಲೋಚನೆಗಳಿಲ್ಲದೇ ಬರುತ್ತಿದೆ. ಸಂಪುಟ ಆಗಲೇ ವಾರ್ಷಿಕ ಆದಾಯ ರೂ.8ಲಕ್ಷಕ್ಕಿಂತ ಕಡಿಮೆ ಮತ್ತಿತರ ಮಾನದಂಡಗಳನ್ನು ನಿಗದಿ ಮಾಡಿರುವಾಗ, ನಿಜಕ್ಕೂ ಈ ಮೀಸಲಾತಿ ನಿಜವಾಗಿಯೂ ವಂಚಿತರಾದವರಿಗೆ ಪ್ರಯೋಜನಕಾರಿಯಾಗುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಇಂದು (ಜನವರಿ 8) ಆರಂಭವಾಗಿರುವ ಎರಡು ದಿನಗಳ ದೇಶವ್ಯಾಪಿ ಕೈಗಾರಿಕಾ ಮುಷ್ಕರ ತಿಂಗಳಿಗೆ 18,000ರೂ. ಕನಿಷ್ಟ ವೇತನದ ಭರವಸೆಯ ಬೇಡಿಕೆ ಇಟ್ಟಿದೆ. ಅಂದರೆ ವಾರ್ಷಿಕ 2.16 ಲಕ್ಷ ರೂ. ಆದರೆ ಈ ಸರಕಾರ ಇದನ್ನೂ ಕೊಟ್ಟಿಲ್ಲ ಎಂಬುದನ್ನು ಸಿಪಿಐ(ಎಂ) ಈ ಹಿನ್ನೆಲೆಯಲ್ಲಿ ನೆನಪಿಸಿದೆ.

ಈ  ವಿಷಯದಲ್ಲಿ ಯಾವುದೇ ಕ್ರಿಯೆಗೆ ಮುಂದಾಗಲು ಇದುವರೆಗೂ ಮೋದಿ ಸರಕಾರ ನಿರಾಕರಿಸಿಕೊಂಡು ಬಂದಿತ್ತು. ಈಗ   ಸಂಪುಟ ನಿರ್ಧಾರವನ್ನು ಕೈಗೊಂಡಿರುವುದು,  ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಅದರ ಸೋಲಿನ ನಂತರ ತನ್ನ ಚುನಾವಣಾ ಗಳಿಕೆಗಳಿಗಾಗಿ ಬೆಂಬಲವನ್ನು ಕಲೆಹಾಕಬೇಕಾದ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರದ ಹತಾಶೆಯನ್ನು ಬಯಲಿಗೆಳೆಯುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟಿಪ್ಪಣಿ ಮಾಡಿದೆ.

ಈ ಕ್ರಮಕ್ಕೆ ಸಂವಿಧಾನದ ಕಲಮು 15 ಮತ್ತು 16ಕ್ಕೆ ತಿದ್ದುಪಡಿಗಳನ್ನು ತರಬೇಕಾಗುತ್ತದೆ. ಸಂವಿಧಾನ ತಿದ್ದುಪಡಿಗೆ ಕಾಲಾವಕಾಶ ಬೇಕಾಗುತ್ತದೆ, ಮತ್ತು ಅದನ್ನು ಜಾರಿಗೆ ತರಲು ಬಹುಪಾಲು ರಾಜ್ಯ ವಿಧಾನ ಮಂಡಲಗಳ ಮಂಜೂರಾತಿಯೂ ಬೇಕಾಗುತ್ತದೆ. ಹೀಗಿರುವಾಗ ಕೇಂದ್ರ ಸಂಪುಟ ಈ ತರಾತುರಿಯ ನಿರ್ಧಾರ ಇದನ್ನು ಕೇವಲ ಚುನಾವಣಾ ಲಾಭಕ್ಕಾಗಿ ಬಳಸುವ ಮೋದಿ ಸರಕಾರದ ಹುನ್ನಾರವನ್ನು ಬಯಲಿಗೆಳೆದಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಮೋದಿ ಸರಕಾರ ಅನುಸರಿಸಕೊಂಡು ಬಂದಿರುವ ಧೋರಣೆಗಳು ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುವ ಬದಲು ಈಗಿರುವ ಉದ್ಯೋಗಗಳೇ ನಷ್ಟಗೊಳ್ಳುವಂತೆ ಮಾಡಿವೆ. ಈಗಿರುವ ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು ಒಬಿಸಿ ಮೀಸಲು ಹುದ್ದೆಗಳನ್ನೆ ಭರ್ತಿ ಮಾಡುತ್ತಿಲ್ಲ.

ನವ-ಉದಾರವಾದಿ ಧೋರಣೆಗಳನ್ನು ಉಗ್ರ ರೀತಿಯಲ್ಲಿ ಅನುಸರಿಸುತ್ತಿರುವುದರಿಂದಾಗಿ ಮತ್ತು ಖಾಸಗಿ ವಲಯವನ್ನು ಮೀಸಲಾತಿಯ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದಾಗಿ ಮೀಸಲಾತಿಯ ಪ್ರಯೋಜನಗಳು ಹೆಚ್ಚೆಚ್ಚು ಕ್ಷೀಣ ಗೊಳ್ಳುತ್ತಿವೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸಂಸತ್ತಿನ ಮುಂದೆ ಇಂತಹ ಯಾವುದೇ ತಿದ್ದುಪಡಿಯನ್ನು ತರುವ ಮೊದಲು ವ್ಯಾಪಕ ಸಮಾಲೋಚನೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *