– ಪ್ರಕಾಶ್ ಕಾರಟ್
ಮೋದಿ ಸರ್ಕಾರವು ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗದವರಿಗೆ ೧೦% ಮೀಸಲಾತಿ ನೀಡುವ ಒಂದು ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ ಅಂಗೀಕಾರ ಪಡೆದಿದೆ. ಸಾಮಾನ್ಯ ವರ್ಗ ಅಂದರೆ ಪರಿಶಿಷ್ಟ ಜಾತಿ(ಎಸ್.ಸಿ), ಪರಿಶಿಷ್ಟ ಬುಡಕಟ್ಟು(ಎಸ್.ಟಿ) ಮತ್ತು ಇತರೆ ಹಿಂದುಳಿದ ವರ್ಗ(ಒಬಿಸಿ)ಗಳಲಲಿ ಇಲ್ಲದವರು.
ಚುನಾವಣಾ ತಂತ್ರ
ಆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಲಾಯಿತು. ಕೇಂದ್ರ ಸಚಿವ ಸಂಪುಟದ ತೀರ್ಮಾನದಿಂದ ಹಿಡಿದು ಎರಡೂ ಸದನಗಳಲ್ಲಿ ಅಂಗೀಕಾರದ ತನಕ ಕೇವಲ ಮೂರು ದಿನಗಳ ಅವಧಿಯಲ್ಲಿ ಅದು ನಡೆದುಹೋಯಿತು. ನಿಸ್ಸಂಶಯವಾಗಿ, ಇನ್ನು ಕೇವಲ ಕೆಲವೇ ವಾರಗಳಷ್ಟು ದೂರವಿರುವ ಲೋಕಸಭಾ ಚುನಾವಣೆಯತ್ತ ಕಣ್ಣಿಟ್ಟುಕೊಂಡೇ ಅದನ್ನು ಮಾಡಲಾಗಿದೆ.
ಈ ನಡೆಯಲ್ಲಿ ಹತಾಶೆಯ ವಾಸನೆಯೂ ಬಡಿಯುತ್ತಿದೆ. ರಾಜಾಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಈ ಮೂರು ರಾಜ್ಯಗಳಲ್ಲಿನ ಚುನಾವಣಾ ಸೋಲು ಸಹಜವಾಗಿಯೇ ಬಿಜೆಪಿಯನ್ನು ಎದೆಗುಂದಿಸಿದೆ ಮತ್ತು ಅದು ಕಳೆದುಕೊಂಡ ನೆಲೆಯನ್ನು ಹಿಂದಕ್ಕೆ ಪಡೆಯುವ ದಾರಿ ಹುಡುಕುತ್ತಿದೆ. ಆಳವಾಗುತ್ತಿರುವ ಕಾರ್ಷಿಕ ಬಿಕ್ಕಟ್ಟು ಮತ್ತು ಏರುತ್ತಿರುವ ನಿರುದ್ಯೋಗಹೆಚ್ಚಿನ ಸಂಖ್ಯೆಯ ಜಾತಿ ಗುಂಪುಗಳನ್ನು ಮೀಸಲಾತಿಗಾಗಿ ಒತ್ತಾಯಿಸುವಂತೆ ಮಾಡುತ್ತಿವೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉದ್ಯೋಗದಲ್ಲಿ ೧೦% ಮೀಸಲಾತಿಯನ್ನು ಹೊಸದಾಗಿ ಕಲ್ಪಿಸುವ ಮೂಲಕ ಮೋದಿ ಸರ್ಕಾರವು ಅವುಗಳನ್ನು ತುಷ್ಟೀಕರಿಸಬಹುದು ಎಂಬ ಆಶಾಭಾವನೆ ಹೊಂದಿದೆ.
ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡುವ ಪ್ರಶ್ನೆ ಹೊಸದೇನಲ್ಲ. ಒಬಿಸಿಯವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಂಡಲ್ ಆಯೋಗದ ಶಿಫಾರಸುಗಳನ್ನು ೧೯೯೦ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ(ನ್ಯಾಷನಲ್ ಫ್ರಂಟ್)ವು ಜಾರಿ ಮಾಡಲು ತೀರ್ಮಾನ ಮಾಡಿದಾಗ ಆ ಪ್ರಶ್ನೆ ಮೇಲೆದ್ದಿತ್ತು. ಈ ತೀರ್ಮಾನವು ತೀವ್ರ ಒಡಕಿಗೆ ಮತ್ತು ಉಗ್ರ ಹೋರಾಟಕ್ಕೆ ಕಾರಣವಾಯಿತು. ಈ ಒಬಿಸಿಗಳಿಗೆ ಮೀಸಲಾತಿ ನೀಡುವುದರ ವಿರುದ್ಧ, ವಿಶೇಷವಾಗಿ ಉತ್ತರ ಭಾರತದ ಮೇಲ್ಜಾತಿ ಜನರ ವಿಷಕಾರಿ ಚಳುವಳಿ ನಡೆಯಿತು.
ಒಬಿಸಿಗಳು ಸಾಮಾಜಿಕವಾಗಿ ತಾರತಮ್ಯಕ್ಕೆ ಒಳಗಾಗಿದ್ದರಿಂದ ಸಂವಿಧಾನದ ಪ್ರಕಾರ “ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಾಗುತ್ತಾರೆ” ಎಂಬ ಆಧಾರದಲ್ಲಿ ಈ ಒಬಿಸಿಗಳಿಗೆ ಮೀಸಲಾತಿಯನ್ನು ಸಿಪಿಐ(ಎಂ) ಎತ್ತಿಹಿಡಿಯಿತು. ಆದಕಾರಣ, ಎಸ್.ಸಿ ಮತ್ತು ಎಸ್.ಟಿ.ಗಳಂತೆ ಒಬಿಸಿಗಳಿಗೂ ಮೀಸಲಾತಿ ಅಗತ್ಯವಿದೆ.
ಆದರೆ, ಮಂಡಲ ಆಯೋಗದಿಂದ ಭಿನ್ನವಾಗಿ, ಒಬಿಸಿ ಮೀಸಲಾತಿಯ ಒಳಗೇ ಆರ್ಥಿಕ ಮಾನದಂಡ ಇರಬೇಕು ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿತು. ಏಕೆಂದರೆ, ಜಮೀನು ಮತ್ತಿತರ ಸಂಪನ್ಮೂಲಗಳನ್ನು ಹೊಂದಿದ ಕೆಲವರು ಉತ್ತಮ ಸ್ಥಿತಿಯಲ್ಲಿರುವವರಿಂದಾಗಿ ಒಬಿಸಿಯ ಒಳಗಡೆಯೇ ದೊಡ್ಡ ಭಿನ್ನತೆ ಇದೆ. ಈ ಕೋಮುಗಳಲ್ಲಿರುವ ನಿಜವಾಗಿಯೂ ನಿರ್ಗತಿಕರಾದವರು ಈ ಮೀಸಲಾತಿಯ ಪ್ರಯೋಜನ ಪಡೆಯಬೇಕೆಂತಾದರೆ, ಆಗ ಉತ್ತಮ ಸ್ಥಿತಿಯಲ್ಲಿರುವವರಿಂದ ಅಂಥವರನ್ನು ಪ್ರತ್ಯೇಕಿಸಲು ಆರ್ಥಿಕ ಮಾನದಂಡ ಅತ್ಯಗತ್ಯ.
ಎಸ್.ಸಿ ಮತ್ತು ಎಸ್ಟಿ ವಿಷಯದಲ್ಲಿ, ಯಾವುದೇ ಆರ್ಥಿಕ ಮಾನದಂಡವಿಲ್ಲದ ಮೀಸಲಾತಿಯನ್ನು ಸಿಪಿಐ(ಎಂ) ದೃಢವಾಗಿ ಬೆಂಬಲಿಸುತ್ತದೆ. ಏಕೆಂದರೆ, ಅವರು ಶತಶತಮಾನಗಳಿಂದ ಜಾತಿವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ತುಳಿತಕ್ಕೊಳಗಾಗಿದ್ದಾರೆ ಮತ್ತು ಇವತ್ತಿಗೂ ಅದು ಮುಂದುವರಿಯುತ್ತಿದೆ.
ಕರ್ಪೂರಿ ಠಾಕೂರ್ ಸೂತ್ರ
ಆ ಕಾಲದಲ್ಲಿ ಸಿಪಿಐ(ಎಂ) ಹೊಸದಾಗಿ ತೆಗೆದುಕೊಂಡ ನಿಲುವಲ್ಲ ಅದು. ಅದಕ್ಕೂ ಮುಂಚೆಯೇ, ಕೇರಳದಲ್ಲಿ ಇ.ಎಂ.ಎಸ್ ನಂಬೂದಿರಿಪಾಡ್ ನೇತೃತ್ವದ ಸಂಯುಕ್ತ ರಂಗ(ಯುನೈಟೆಡ್ ಫ್ರಂಟ್) ಸರ್ಕಾರವು ಮೀಸಲಾತಿಗಳ ಪ್ರಶ್ನೆಯನ್ನು ಪರಿಶೀಲಿಸುವ ಸಲುವಾಗಿ ನೆಟ್ಟುರ್ ದಾಮೋದರನ್ ನೇತೃತ್ವದ ಆಯೋಗವೊಂದನ್ನು ಸ್ಥಾಪಿಸಿತ್ತು. ಈ ಆಯೋಗ ಸಲ್ಲಿಸಿದ ವರದಿಯಲ್ಲಿ ಒಬಿಸಿ ಒಳಗಡೆಯೇ ಆರ್ಥಿಕ ಮಾನದಂಡದ ಮೀಸಲಾತಿ ಪ್ರಾರಂಭಿಸಬೇಕೆಂದು ಶಿಫಾರಸು ಮಾಡಲಾಗಿತ್ತು. ಆ ಸಮಯದಲ್ಲಿ, ರಾಜ್ಯ ವಿಧಾನಸಭೆಯಲ್ಲಿ ಈ ವರದಿಯ ಚರ್ಚೆಯಾದಾಗ ಸಿಪಿಐ(ಎಂ) ಮಾತ್ರ ಅದನ್ನು ಬೆಂಬಲಿಸಿತ್ತು.
೧೯೭೮ರಲ್ಲಿ, ಕರ್ಪೂರಿ ಠಾಕೂರ್ ಸರ್ಕಾರ ಬಿಹಾರದಲ್ಲಿ ಒಬಿಸಿ ಮೀಸಲಾತಿಯನ್ನು ಘೋಷಣೆ ಮಾಡಿದಾಗ, ಪ್ರಬಲ ಮೀಸಲಾತಿ ವಿರೋಧಿ ಚಳುವಳಿ ನಡೆಯುತ್ತಿತ್ತು. ಆ ಸಮಯದಲ್ಲಿ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಇಎಂಎಸ್ ನಂಬೂದಿರಿಪಾಡ್ ಮತ್ತು ಲೋಹಿಯಾವಾದಿಯಾಗಿದ್ದ ಕರ್ಪೂರಿ ಠಾಕೂರ್ ನಡುವೆ ಮಾತುಕತೆಗಳಾದವು. ಈ ಮಾತುಕತೆಗಳ ಫಲವಾಗಿ ಮೀಸಲಾತಿ ಸೂತ್ರವೊಂದು ಸಿದ್ಧವಾಯಿತು, ಅದೇ ಕರ್ಪೂರಿ ಠಾಕೂರ್ ಸೂತ್ರ ಎಂದು ಪ್ರಸಿದ್ಧವಾಯಿತು.
ಕೆಲವು ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಒಳಗಡೆಯೇ ಆರ್ಥಿಕ ಮಾನದಂಡದ ಮೀಸಲಾತಿ ಮಾದರಿಯನ್ನು ಬಿಹಾರಿನಲ್ಲಿ ಎರಡು ಪಟ್ಟಿಗಳನ್ನು ಹೊಂದುವ ಮೂಲಕ ತರಲಾಗಿದೆ. ಮೊದಲ ಅನುಬಂಧದಲ್ಲಿ ೧೨% ಮೀಸಲಾತಿಯನ್ನು ಆರ್ಥಿಕ ಮಾನದಂಡವಿಲ್ಲದೇ ತೀರ ಹಿಂದುಳಿದ ವರ್ಗದವರಿಗೆ ನೀಡಿದರೆ, ಎರಡನೇ ಅನುಬಂಧದಲ್ಲಿ ೮% ಮೀಸಲಾತಿಯನ್ನು ಆರ್ಥಿಕ ಮಾನದಂಡದೊಂದಿಗೆ ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿದೆ. ಮುಂದುವರಿದು, ೩% ಮೀಸಲಾತಿಯನ್ನು ಮಹಿಳೆಯರಿಗೆ ಮತ್ತು ೩% ಮೀಸಲಾತಿಯನ್ನು ಮುಂದುವರಿದ ವರ್ಗಗಳ ಬಡವರಿಗೆ ನೀಡಲಾಗಿದೆ. ವಿ.ಪಿ.ಸಿಂಗ್ ಸರ್ಕಾರ ಒಬಿಸಿ ಮೀಸಲಾತಿಯನ್ನು ಘೋಷಣೆ ಮಾಡುವಾಗಲೇ ಒಂದು ದಶಕದಿಂದ ಈ ವ್ಯವಸ್ಥೆ ಬಿಹಾರಿನಲ್ಲಿ ಜಾರಿಯಲ್ಲಿತ್ತು.
ಸಿಪಿಐ(ಎಂ) ನಿಲುವು
1990ರಲ್ಲಿ ಒಬಿಸಿ ಮೀಸಲಾತಿ ಕುರಿತು ಸಿಪಿಐ(ಎಂ) ತನ್ನ ನಿಲುವನ್ನು ಈ ಕೆಳಗಿನಂತೆ ನಿರೂಪಿಸಿತು:
- ಉತ್ತಮ ಸ್ಥಿತಿಯಲ್ಲಿ ಇರುವವರನ್ನು ಹೊರತುಪಡಿಸಿ ಆರ್ಥಿಕ ಮಾನದಂಡದ ೨೭% ಮೀಸಲಾತಿಯನ್ನು ಒಬಿಸಿಯವರಿಗೆ ನೀಡಬೇಕು. ಒಂದೊಮ್ಮೆ ಹುದ್ದೆಗಳು ಬಡ ವಿಭಾಗದವರಿಂದ ತುಂಬಲಾಗದಿದ್ದರೆ, ಆಗ ಒಬಿಸಿ ವರ್ಗದೊಳಗಡೆಯವರಿಗೆ ಆ ಹುದ್ದೆಗಳು ಸಿಗಬೇಕು.
- ಕೆಲವು ಭಾಗದ ಮೀಸಲಾತಿಯನ್ನು (ಶೇಕಡಾ ೫ ರಿಂದ ೧೦ ರವರೆಗೆ) ಸಾಮಾನ್ಯ ವರ್ಗದ ಬಡವರಿಗೆ ನೀಡಬೇಕು.
- ಮೀಸಲಾತಿಯು ಒಂದು ಸೀಮಿತ ಪರಿಹಾರವನ್ನು ಮಾತ್ರ ನೀಡಬಲ್ಲುದು ಮತ್ತು ಅದು ಮೂಲ ಸಮಸ್ಯೆಗಳಾದ ಹಿಂದುಳಿದಿರುವಿಕೆ ಹಾಗೂ ನಿರುದ್ಯೋಗಗಳಿಗೆ ಪರಿಹಾರವಲ್ಲ ಎಂದು ಸಿಪಿಐ(ಎಂ) ಸ್ಪಷ್ಟಪಡಿಸುತ್ತದೆ. ಜನಸಮುದಾಯದ ಸರ್ವತೋಮುಖ ಏಳಿಗೆಗಾಗಿ ಮತ್ತು ಉದ್ಯೋಗ ಸೃಷ್ಟಿಗೆ ಆಮೂಲಾಗ್ರ ಭೂಸುಧಾರಣೆ, ಸಂಪತ್ತಿನ ಕೇಂದ್ರೀಕರಣವನ್ನು ಮುರಿಯುವುದು ಮತ್ತು ಸಮತೋಲದ ಅರ್ಥಿಕ ಬೆಳವಣಿಗೆ ಆಗಬೇಕು.
- ಜಾತಿ ತಾರತಮ್ಯ, ಹೊರಗಿಡುವಿಕೆ ಮತ್ತು ಒಂದು ಸಮರ್ಥಕ ಕ್ರಮವಾಗಿ ಮೀಸಲಾತಿ ಕುರಿತು ವ್ಯವಹರಿಸುವಾಗ ಒಂದು ವರ್ಗ ದೃಷ್ಟಿಕೋನವೂ ಸಿಪಿಐ(ಎಂ)ಗೆ ಇದೆ. ಜಾತಿ ವರ್ಗೀಕರಣವನ್ನು ಶಾಶ್ವತಗೊಳಿಸುವ ಮತ್ತು ಜಾತಿಯಾಧಾರಿತ ಅಸ್ಮಿತೆಯ ರಾಜಕಾರಣದ ಸಾಧನವಾಗಿ ಬಂಡವಾಳಶಾಹಿ ಪಕ್ಷಗಳು ಮೀಸಲಾತಿಯನ್ನು ಬಳಸುತ್ತವೆ. ದಮನಿತ ಜಾತಿಗಳ ಕೆಲವು ಸಂಘಟನೆಗಳು ಕೂಡ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಸಂಕುಚಿತವಾಗಿ ಉದ್ಯೋಗದಲ್ಲಿನ ಮೀಸಲಾತಿಗೆ ಸೀಮಿತಗೊಳಿಸಲು ಯತ್ನಿಸುತ್ತವೆ.
ದುಡಿಯುವ ಜನರನ್ನು ಮತ್ತು ಎಲ್ಲಾ ಜಾತಿ ಮತ್ತು ಕೋಮುಗಳ ಬಡವರನ್ನು ಒಂದುಗೂಡಿಸುವುದೇ ಸಿಪಿಐ(ಎಂ)ನ ಪರಮಗುರಿ. ಈ ಹಾದಿಯಲ್ಲಿ ಮಾತ್ರ ಈಗಿರುವ ದಮನಕಾರಿ ಸಮಾಜೋ ಆರ್ಥಿಕ ವ್ಯವಸ್ಥೆಯ ವಿರುದ್ಧ ಹೋರಾಡಲು ಸಾಧ್ಯ. ಎಲ್ಲಾ ಜಾತಿಯ ಬಡವರ ನಡುವೆ ಐಕ್ಯತೆ ಸಾಧಿಸಲು ಮತ್ತು ಮೀಸಲಾತಿ ಪ್ರಶ್ನೆಯು ಹುಟ್ಟುಹಾಕುವ ವಿಭಜನೆಗಳನ್ನು ಮೀರಿ ಹೋಗಲು ಸಾಮಾನ್ಯ ವರ್ಗದ ಬಡವರಿಗೂ ಒಂದು ಭಾಗ ಮೀಸಲಾತಿಯನ್ನು ನೀಡಬೇಕೆಂದು ಸಿಪಿಐ(ಎಂ) ಪ್ರತಿಪಾದಿಸುತ್ತದೆ.
ಈ ಮುಂಚಿನ ಪ್ರಯತ್ನಗಳು
ಮಂಡಲ್ ಆಯೋಗದ ವರದಿ ಅನುಷ್ಠಾನದ ನಂತರ, ಹಲವಾರು ರಾಜಕೀಯ ಪಕ್ಷಗಳು ಮೇಲ್ಜಾತಿಯ ಬಡವರಿಗೂ ಸ್ವಲ್ಪ ಪರಿಹಾರ ಸಿಗಬೇಕೆಂಬ ನಿಲುವನ್ನು ಒಪ್ಪಿಕೊಂಡರು. ವಾಸ್ತವದಲ್ಲಿ, ವಿ.ಪಿ.ಸಿಂಗ್ ಅವರು ಒಬಿಸಿ ಮೀಸಲಾತಿ ಘೋಷಣೆ ಮಾಡುವಾಗ ಅಂಥದೊಂದು ಕ್ರಮವನ್ನು ಪ್ರಸ್ತಾಪಿಸಿದ್ದರು.
1991ರಲ್ಲಿ ಪಿ.ವಿ.ನರಸಿಂಹ ರಾವ್ ಸರ್ಕಾರ ಹೊರಡಿಸಿದ ಒಬಿಸಿಗಳಿಗೆ ೨೭% ಮೀಸಲಾತಿಯ ಆದೇಶದಲ್ಲಿ ಆರ್ಥಿಕ ಮಾನದಂಡವನ್ನು ಅಳವಡಿಸಲಾಗಿತ್ತು; ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ೧೦% ಮೀಸಲಾತಿಯನ್ನು ಗೊತ್ತುಪಡಿಸಲಾಗಿತ್ತು. ಇದು ಸಂಪೂರ್ಣವಾಗಿ ಸಿಪಿಐ(ಎಂ)ನ ಧೋರಣೆಗೆ ಅನುಗುಣವಾಗಿತ್ತು. ಆದರೆ, ಸುಪ್ರೀಂಕೋರ್ಟ್ ೧೯೯೨ರಲ್ಲಿ ಸಾಮಾನ್ಯ ವರ್ಗದ ಮೀಸಲಾತಿಯನ್ನು ತೆಗೆದುಹಾಕಿ, ಕೆನೆಪದರವನ್ನು ಹೊರತುಪಡಿಸಿದ ೨೭% ಒಬಿಸಿ ಮೀಸಲಾತಿಯನ್ನು ಎತ್ತಿಹಿಡಿಯಿತು.
ಕೆನೆಪದರವನ್ನು ಹೊರತುಪಡಿಸಿ ೨೭% ಒಬಿಸಿ ಮೀಸಲಾತಿಯನ್ನು ಎತ್ತಿಹಿಡಿದ ತೀರ್ಪನ್ನು ಸಿಪಿಐ(ಎಂ) ಸ್ವಾಗತಿಸಿತು. ಜತೆಯಲ್ಲೇ ಮೀಸಲಾತಿಯಿಲ್ಲದ ಜಾತಿಗಳ ಬಡವರು ಮತ್ತ ನಿರ್ಗತಿಕರಿಗೂ ಏನಾದರೂ ಪರಿಹಾರ ಒದಗಿಸುವ ವಿಧಾನವೊಂದನ್ನು ಸರ್ಕಾರ ಕಂಡುಹಿಡಿಯಬೇಕೆಂದು ಸ್ಪಷ್ಟಪಡಿಸಿತು.
ಆದರೆ ಸಾಮಾನ್ಯ ವರ್ಗದವರಿಗೆ ನೀಡುವ ಪರಿಹಾರವು ಯಾವುದೇ ಕಾರಣಕ್ಕೂ ಎಸ್.ಸಿ, ಎಸ್.ಟಿ. ಮತ್ತು ಒಬಿಸಿಯವರಿಗೆ ಸಿಗುವ ಸಂವಿಧಾನದತ್ತ ಮೀಸಲಾತಿಗೆ ಕುಂದಾಗದಂತೆ ಅಥವಾ ಅದು ದುರ್ಬಲವಾಗದಂತೆ ಇರಬೇಕೆಂದು ಸಿಪಿಐ(ಎಂ) ದೃಢವಾಗಿ ಹೇಳಿದೆ.
ಮೋದಿ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಸಿಪಿಐ(ಎಂ) ತಳೆದಿರುವ ನಿಲುವನ್ನು ಈ ಮೇಲಿನ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ತಾನು ಭರವಸೆ ನೀಡಿದಂತೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಶೋಚನೀಯವಾಗಿ ವಿಫಲವಾಗಿರುವ ಮತ್ತು ಕೃಷಿ ಬಿಕ್ಕಟ್ಟನ್ನು ಪರಿಹರಿಸಲು ಅಸಮರ್ಥವಾದ ಮೋದಿ ಸರ್ಕಾರ ಮುಂದಿನ ಚುನಾವಣೆಗೆ ಮುಂಚೆ ಚುನಾವಣಾ ಹೂಟವಾಗಿ ಮೀಸಲಾತಿಯನ್ನು ಬಳಸಲು ನೋಡುತ್ತಿದೆ.
ಹುಸಿ ಮಾನದಂಡ
2018ರಲ್ಲೇ ಅದಾಗಲೇ ಇದ್ದ 1.1 ಕೋಟಿ ಉದ್ಯೋಗ ನಷ್ಟವಾಗಿರುವ ನಿರಾಶಾದಾಯಕ ಸಂಗತಿಯನ್ನು ಜನರಿಂದ ಮರೆಮಾಚಲೇಬೇಕಾದ ತುರ್ತು ಬಿಜೆಪಿ ಸರ್ಕಾರಕ್ಕೆ ಇತ್ತು. “ಆರ್ಥಿಕವಾಗಿ ದುರ್ಬಲರಾಗಿರುವ ವಿಭಾಗದವರಿU” ೧೦% ಮೀಸಲಾತಿ ಕಲ್ಪಿಸಿದ ಮೋದಿ ಸರ್ಕಾರದ ರೀತಿ ವಂಚನೆಯಿಂದ ಕೂಡಿದೆ. ಆರ್ಥಿಕವಾಗಿ ದುರ್ಬಲರು ಯಾರು ಎಂದು ನಿರ್ಣಯಿಸಲು ನಿಗದಿಮಾಡಿದ ಮಾನದಂಡವೇ ತೋರಿಸುತ್ತದೆ ಅದು ನಿಜವಾಗಿಯೂ ವಂಚಿತರು ಮತ್ತು ಬಡವರಿಗಾಗಿ ಅಲ್ಲ ಎನ್ನುವುದನ್ನು.
ಅದು ನಿಗದಿ ಮಾಡಿರುವ ಮಾನದಂಡದ ಪ್ರಕಾರ, ಕುಟುಂಬದ ಆದಾಯ ವರ್ಷಕ್ಕೆ ರೂ.೮ ಲಕ್ಚಕ್ಕಿಂತ ಕಡಿಮೆಯಿರುವ ಅಥವಾ ೫ ಎಕರೆಗಿಂತಲೂ ಕಡಿಮೆ ಕೃಷಿ ಭೂಮಿ ಹೊಂದಿರುವ ಅಥವಾ ೧೦೦೦ ಚದರ ಅಡಿಗಿಂತಲೂ ಕಡಿಮೆಯ ವಸತಿ ನಿವೇಶನ ಅಥವಾ ಅನುಸೂಚಿತ ಮುನಿಸಿಪಾಲಿಟಿಯ ವ್ಯಾಪ್ತಿಯಲ್ಲಿ ೧೦೦ ಗಜಗಳಿಗಿಂತಲೂ ಕಡಿಮೆ ಅಥವಾ ಅನುಸೂಚಿತವಲ್ಲದ ಮುನಿಸಿಪಾಲಿಟಿ ವ್ಯಾಪ್ತಿಯಲ್ಲಿ ೨೦೦ ಗಜಗಳಿಗಿಂತಲೂ ಕಡಿಮೆ ವಸತಿ ನಿವೇಶನ ಹೊಂದಿರುವವರು ಈ ಮೀಸಲಾತಿಗೆ ಅರ್ಹರು. ಇದರ ಅರ್ಥ ಸಾಮಾನ್ಯ ವರ್ಗದ ೯೫% ಜನರೆಲ್ಲರೂ ಈ ಮೀಸಲಾತಿಯ ವ್ಯಾಪ್ತಿಯ ಅಡಿಯಲ್ಲಿ ಬರುತ್ತಾರೆ. ಇದು, ಬಡ ವಿಭಾಗಗಳಿಗೆ ಮೀಸಲಾತಿ ನೀಡಬೇಕೆಂಬ ಮೂಲ ಉದ್ದೇಶವನ್ನೇ ಹಾಳುಮಾಡುತ್ತದೆ.
ಸಾಮಾನ್ಯ ವರ್ಗದವರಿಗೆ ಈ ಮಾನದಂಡದ ಆಧಾರದಲ್ಲಿ ಮೀಸಲಾತಿ ವಿಸ್ತರಿಸಬೇಕೆನ್ನುವುದನ್ನು ಸಿಪಿಐ(ಎಂ) ಅತ್ಯುಗ್ರವಾಗಿ ವಿರೋಧಿಸುತ್ತದೆ. ಮತ್ತೊಂದು ಅಂಶವನ್ನು ಇಲ್ಲಿ ಸ್ಪಷ್ಟಪಡಿಸಬೇಕಾದ ಅಗತ್ಯವಿದೆ. ಈಗ ಅಂಗೀಕರಿಸಿದ ಸಂವಿಧಾನ ತಿದ್ದುಪಡಿಯು ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲ ವಿಭಾಗದವರಿಗೆ ೧೦% ಮೀಸಲಾತಿಯನ್ನು ಮಾತ್ರ ನೀಡುತ್ತದೆ. ಈ ಮೇಲೆ ತಿಳಿಸಿದ ಮಾನದಂಡದ ಬಗ್ಗೆ ಈ ತಿದ್ದುಪಡಿ ಏನೂ ತಿಳಿಸುವುದಿಲ್ಲ. ಪಕ್ಷವು ಈ ಮೀಸಲಾತಿಯನ್ನು ತಾತ್ವಿಕವಾಗಿ ಬೆಂಬಲಿಸುತ್ತಾದ್ದರಿಂದ ಸಂಸತ್ತಿನಲ್ಲಿರುವ ಸಿಪಿಐ(ಎಂ) ಸಂಸದರು ಸಂವಿಧಾನ ತಿದ್ದುಪಡಿಗೆ ಮತ ನೀಡಿದರು. ಆದರೆ ಪಕ್ಷವು ಈ ಮೇಲಿನ ಮಾನದಂಡವನ್ನು ನಿಗದಿಪಡಿಸುವ ಯಾವುದೇ ಶಾಸನವನ್ನು ಅಥವ ಅಧಿಸೂಚನೆಯನ್ನು ವಿರೋಧಿಸುತ್ತದೆ.
ಜಾರಿಯಲ್ಲಿ ನಿರಾಶಾದಾಯಕ ದಾಖಲೆ
ಈಗ ಎಸ್.ಸಿ, ಎಸ್.ಟಿ ಮತ್ತು ಒಬಿಸಿಗೆ ಇರುವ ಕೋಟಾವನ್ನು ಸರ್ಕಾರಿ ಹುದ್ದೆಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತುಂಬದಿರುವ ಅಂಶವೂ ಈ ಮೇಲಿನ ಸರ್ಕಾರದ ಕ್ರಮಗಳಿಗೆ ನಮ್ಮ ವಿರೋಧಕ್ಕೆ ಕಾರಣ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಒಬಿಸಿಗೆ ಮೀಸಲಿರುವ ೨೭% ಕ್ಕೆ ಹೋಲಿಸಿದರೆ ೨೧.೭ % ಹುದ್ದೆಗಳನ್ನು ಮಾತ್ರ ತುಂಬಲಾಗಿದೆ. ಎಸ್.ಸಿ ಮತ್ತು ಎಸ್.ಟಿ. ವರ್ಗಗಳಲ್ಲಿ ಸರ್ಕಾರಿ ಹುದ್ದೆಗಳ ಎ ಮತ್ತು ಬಿ ವರ್ಗಗಳಲ್ಲಿ ಕೊರತೆ ಇದೆ ಮತ್ತು ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಬಿದ್ದಿವೆ.
ಉನ್ನತ ಶಿಕ್ಷಣದ ಪ್ರವೇಶದಲ್ಲಿ, ಎಸ್.ಸಿ, ಎಸ್.ಟಿ. ಮತ್ತು ಒಬಿಸಿಗಳನ್ನು ತೆಗೆದುಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ೯೩ನೇ ಸಂವಿಧಾನ ತಿದ್ದುಪಡಿ (೨೦೦೬)ಯು ನೀಡಿದ ಕೋಟಾವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಒಬಿಸಿ ಮೀಸಲಾತಿಯನ್ನು, ಅದಕ್ಕೆ ಅನುವು ಮಾಡಿ ಕೊಡುವ ಶಾಸನವನ್ನು ತಂದಿಲ್ಲವಾದ್ದರಿಂದ ಜಾರಿ ಮಾಡುತ್ತಿಲ್ಲ. ಎಲ್ಲಾ ಸರ್ಕಾರಿ ವಲಯಗಳಲ್ಲಿ ಮತ್ತು ಉನ್ನತ ಶಿಕ್ಷಣದಲ್ಲಿ ಎಸ್.ಸಿ., ಎಸ್.ಟಿ. ಮತ್ತು ಒಬಿಸಿ ಕೋಟಾಗಳನ್ನು ತುಂಬಲು ತುರ್ತಿನ ಕ್ರಮ ತೆಗೆದುಕೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಈ ವಿಚಾರದಲ್ಲಿ ಮೋದಿ ಸರ್ಕಾರದ ನಿರಾಶಾದಾಯಕ ದಾಖಲೆಯಿಂದಾಗಿ, ಸಾಮಾನ್ಯ ವರ್ಗಕ್ಕೆ ಇತ್ತೀಚಿನ ೧೦% ಮೀಸಲಾತಿಯು ದಮನಿತ ಜಾತಿಗಳ ಮೀಸಲಾತಿಯನ್ನು ದುರ್ಬಲಗೊಳಿಸಲು ಮಾಡುತ್ತಿರುವ ಒಂದು ಷಡ್ಯಂತ್ರವೇನೋ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಜಾತಿ ಆಧಾರಿತ ಮೀಸಲಾತಿಗೆ ಆರ್.ಎಸ್.ಎಸ್. ವಿರೋಧ ಇರುವುದರಿಂದ ಆ ಸಂಶಯ ಇನ್ನೂ ಗಟ್ಟಿಯಾಗುತ್ತಿದೆ.
ಖಾಸಗಿ ವಲಯದಲ್ಲಿ ಮೀಸಲಾತಿ
ಮೋದಿ ಸರ್ಕಾರವು ಬುದ್ಧಿಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿರುವ ಮತ್ತೊಂದು ಪ್ರಮುಖ ವಿಷಯವೇನೆಂದರೆ ಮೀಸಲಾತಿಯನ್ನು ಖಾಸಗಿ ವಲಯಕ್ಕೆ ವಿಸ್ತರಿಸದೇ ಇರುವುದು. ಸರಿ ಸುಮಾರು ಮೂರು ದಶಕಗಳ ನವ ಉದಾರೀಕರಣ ನೀತಿಗಳು ಮತ್ತು ಖಾಸಗೀಕರಣದಿಂದಾಗಿ, ಸರ್ಕಾರ ಮತ್ತು ಸಾರ್ವಜನಿಕ ವಲಯಗಳಲ್ಲಿ ಮೀಸಲಾತಿಯ ಅವಕಾಶ ತೀಕ್ಷ್ಣವಾಗಿ ಕುಸಿಯುತ್ತಿದೆ. ಖಾಸಗಿ ವಲಯಗಳಲ್ಲಿ ಮೀಸಲಾತಿ ಇಲ್ಲದೆ, ಒಂದು ಸಮರ್ಥಕ ಕ್ರಮವಾಗಿ ಮೀಸಲಾತಿಯು ತೀವ್ರವಾಗಿ ಕ್ಷೀಣಿಸುತ್ತಿದೆ.
ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಎಸ್.ಸಿ., ಎಸ್.ಟಿ. ಮತ್ತು ಒಬಿಸಿ ಕೋಟವನ್ನು ತುಂಬದಿರುವ ಹಾಗೂ ಮೀಸಲಾತಿಯನ್ನು ಖಾಸಗಿ ವಲಯಕ್ಕೆ ವಿಸ್ತರಿಸದಿರುವ ಮೋದಿ ಸರಕಾರದ ವಿಫಲತೆ ಮೀಸಲಾತಿ ಕುರಿತಂತೆ ಅದರ ಬೂಟಾಟಿಕೆಯ ನಿಲುವನ್ನು ಬಲಯಲಿಗೆಳೆಯುತ್ತದೆ.
1992ರಲ್ಲಿ ಸುಪ್ರೀಂಕೋರ್ಟ್ ಇಂದ್ರ ಸಾಹ್ನೆ ತೀರ್ಪಿನ ಮೂಲಕ ಎಲ್ಲಾ ಪ್ರವರ್ಗಗಳ ಒಟ್ಟು ಮೀಸಲಾತಿಗೆ ೫೦% ಗರಿಷ್ಠ ಮಿತಿ ಇದೆ. ಸಂವಿಧಾನ ತಿದ್ದುಪಡಿಯನ್ನು ತರಾತುರಿಯಲ್ಲಿ ಮಂಡಿಸಿ ಮತ್ತು ಅಂಗೀಕರಿಸಿದ ರೀತಿಯು ಮೋದಿ ಸರ್ಕಾರ ಅಲ್ಪಾವಧಿಯ ಚುನಾವಣಾ ಲಾಭಗಳಲ್ಲಿ ಮಾತ್ರ ಆಸಕ್ತವಾಗಿದೆ ಎಂಬುದನ್ನು ತೋರಿಸುತ್ತದೆ. ಕಾನೂನಾತ್ಮಕ ಸಂವಿಧಾನಾತ್ಮಕ ಸವಾಲುಗಳನ್ನು ಎದುರಿಸಲು ಚೆನ್ನಾಗಿ ಯೋಚಿಸಿದ ಕ್ರಮವನ್ನು ಅದು ಸಿದ್ಧಪಡಿಸಿಲ್ಲ. ಅದು ಮತ್ತೊಂದು ಚುನಾವಣಾ ’ಜುಮ್ಲಾ’ ಅಂದರೆ ಬೊಗಳೆಯಾಗಿ ಪರಿಣಮಿಸಬಹುದು.
ಮೀಸಲಾತಿಯಿರದ ಸಾಮಾನ್ಯ ವರ್ಗಗಳ ಬಡವರಿಗೆ ೧೦% ಮೀಸಲಾತಿಯನ್ನು ಮೂರೇ ದಿನಗಳಲ್ಲಿ ಕೊಟ್ಟಿರುವ ಅಸಾಮಾನ್ಯ ಕೆಲಸವನ್ನು ಮೋದಿಯವರು ಮಾತ್ರ ಮಾಡಿ ತೋರಿಸಲು ಸಾಧ್ಯ ಎಂದು ತುತ್ತೂರಿ ಊದಲಾಗುತ್ತಿದೆ. ಆದರೆ ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡುವ ಪ್ರಶ್ನೆ ಹೊಸದೇನಲ್ಲ ಎಂಬ ಸಂಗತಿಯನ್ನು ಮರೆಮಾಚಲಾಗುತ್ತಿದೆ. ಈ ಪ್ರಯತ್ನಗಳು ಯಾವವು, ಅವು ಏಕೆ ಇನ್ನೂ ಫಲ ನೀಡಿಲ್ಲ, ಹಾಗೆ ನೀಡದಿರಲು ಕಾರಣವಾದ ಅಡ್ಡಿಗಳನ್ನು ಈ ಅಸಾಮಾನ್ಯ ಮೋದಿಯವರು ನಿವಾರಿಸಿದ್ದಾರೆಯೇ? ಸಿಪಿಐ(ಎಂ)ನ ಹಿರಿಯ ಮುಖಂಡರಾದ ಪ್ರಕಾಶ ಕಾರಟ್ ಈ ಲೇಖನದಲ್ಲಿ ಪರಿಶೀಲಿಸಿದ್ದಾರೆ.
ಈ ಸಂವಿಧಾನ ತಿದ್ದುಪಡಿಯನ್ನು ತರಾತುರಿಯಲ್ಲಿ ಮಂಡಿಸಿ ಮತ್ತು ಅಂಗೀಕರಿಸಿದ ರೀತಿಯು ಮೋದಿ ಸರ್ಕಾರ ಅಲ್ಪಾವಧಿಯ ಚುನಾವಣಾ ಲಾಭಗಳಲ್ಲಿ ಮಾತ್ರ ಆಸಕ್ತವಾಗಿದೆ ಎಂಬುದನ್ನು ತೋರಿಸುತ್ತದೆ. ಕಾನೂನಾತ್ಮಕ ಸಂವಿಧಾನಾತ್ಮಕ ಸವಾಲುಗಳನ್ನು ಎದುರಿಸಲು ಚೆನ್ನಾಗಿ ಯೋಚಿಸಿದ ಕ್ರಮವನ್ನು ಅದು ಸಿದ್ಧಪಡಿಸಿಲ್ಲ. ಅದರ ಆವಶ್ಯಕತೆಯೂ ಬಹುಶಃ ಅದಕ್ಕಿಲ್ಲ. ಅದು ಮತ್ತೊಂದು ಚುನಾವಣಾ ’ಜುಮ್ಲಾ’ ಅಂದರೆ ಬೊಗಳೆಯಾಗಿ ಪರಿಣಮಿಸಬಹುದು ಎನ್ನುತ್ತಾರೆ ಲೇಖಕರು.
ಅನು: ಸುರೇಂದ್ರ ರಾವ್