ಆನಂದ ತೇಲ್ತುಂಬ್ಡೆಯವರನ್ನು ಪುಣೆ ಪೋಲೀಸರು ಬಂಧಿಸಿದುದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ. ಭಾರತದ ಸರ್ವೋಚ್ಚ ನ್ಯಾಯಾಲಯ ಈ ಪ್ರತಿಷ್ಠಿತ ವಿದ್ವಾಂಸರಿಗೆ ಜಾಮೀನು ಪಡೆಯಲು ಅನುಕೂಲವಾಗುವಂತೆ ಫೆಬ್ರುವರಿ 11ರ ವರೆಗೆ ಬಂಧನ ಮಾಡದಂತೆ ರಕ್ಷಣೆ ನೀಡಿತ್ತು. ಈ ರಕ್ಷಣೆ ಫೆಬ್ರುವರಿ 11ರ ವೇಳೆಗಷ್ಟೇ ಕೊನೆಗೊಳ್ಳುತ್ತದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಗಮನ ಸೆಳೆದಿದೆ.
ಇದು ಮೋದಿ ನೇತೃತ್ವದ ಸರಕಾರ ಅದರ ವಿಚ್ಛಿದ್ರಕಾರಿ ಕೋಮುವಾದಿ ಅಜೆಂಡಾವನ್ನು ಟೀಕಿಸುವ ಪ್ರತಿಯೊಬ್ಬರ ವಿರುದ್ಧವೂ ಹಗೆ ಸಾಧಿಸುವ ಧೋರಣೆಯನ್ನು ತಳೆದಿದೆ ಎಂಬುದನ್ನು ಇದು ತೋರಿಸುತ್ತದೆ. ‘ನಗರ ನಕ್ಸಲ’ ರನ್ನು ಎದುರಿಸುವ ಹೆಸರಲ್ಲಿ ಸಂಘ ಪರಿವಾರ ಮಾನವ ಹಕ್ಕುಗಳ ಕಾರ್ಯಕರ್ತರು, ಮತ್ತು ಜಾತ್ಯತೀತ ಹಾಗೂ ಪ್ರಗತಿಪರ ವಿದ್ವಾಂಸರ ಹೆಸರುಗೆಡಿಸಿ ಬೇಟೆಯಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ಸಂಘಟನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಈ ಜನತಂತ್ರ-ವಿರೋಧಿ ಸರ್ವಾಧಿಕಾರಶಾಹಿ ದಾಳಿಯ ವಿರುದ್ಧ ಬಲವಾಗಿ ಪ್ರತಿಭಟಿಸಬೇಕು ಎಂದು ಎಲ್ಲ ಜನತಂತ್ರವಾದೀ ಮತ್ತು ಜಾತ್ಯತೀತ ಶಕ್ತಿಗಳಿಗೆ ಕರೆ ನೀಡಿದೆ.