ಬಂಗಾಲದ ಅನಿಷ್ಟಕಾರಿ ಬೆಳವಣಿಗೆ: ರಾಜಕೀಯ ದುರುದ್ದೇಶದ ವಾಸನೆ

“ಸಾರ್ವಜನಿಕ ಲೂಟಿಯ ಎಲ್ಲ ಅಪರಾಧಿಗಳನ್ನು, ಈಗ ಬಿಜೆಪಿಯಲ್ಲಿರಲಿ ಅಥವ ಟಿಎಂಸಿ ಯಲ್ಲಿರಲಿ, ಶಿಕ್ಷಿಸಬೇಕು”

ಪಶ್ಚಿಮ ಬಂಗಾಲದಲ್ಲಿ ಫೆಬ್ರುವರಿ 3ರ ರಾತ್ರಿಯಿಂದ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದರಲ್ಲಿ ರಾಜಕೀಯ ದುರುದ್ದೇಶಗಳ ವಾಸನೆ ಹೊಡೆಯುತ್ತಿದೆ ಎಂದು ಹೇಳಿದೆ. ಜನಗಳ ಕೋಟ್ಯಂತರ ರೂಪಾಯಿಗಳ ಲೂಟಿ ಹೊಡೆದ ಚಿಟ್ ಫಂಡ್‍ ಹಗರಣಗಳ ಸಿಬಿಐ ತನಿಖೆ ಪೂರ್ಣ ಐದು ವರ್ಷಗಳ ಕಾಲ ನಿಧಾನಗತಿಯಲ್ಲಿ ಸಾಗಿದ್ದು, ಈಗ ಇದ್ದಕಿದ್ದಂತೆ, ಕೊಲ್ಕತಾದ ಬ್ರಿಗೇಡ್‍ ಪರೇಡ್‍ ಮೈದಾನದಲ್ಲಿ ಎಡರಂಗದ ಚಾರಿತ್ರಿಕ ಮತ್ತು ಹಿಂದೆಂದೂ ಕಾಣದ ರೀತಿಯ ಬೃಹತ್‍ ರ‍್ಯಾಲಿ ನಡೆದ ಕೆಲವೇ ಗಂಟೆಗಳೊಳಗಾಗಿ ಈ ಬೆಳವಣಿಗೆಗಳು ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಮತ್ತು ಟಿಎಂಸಿ ಎರಡರ ವಿರುದ್ಧವೂ ಹೆಚ್ಚುತ್ತಿರುವ ಜನಗಳ ಪ್ರತಿಭಟನೆಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸುವ ಗುರಿಯನ್ನೂ ಹೊಂದಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಸಾರ್ವಜನಿಕ ಲೂಟಿಯ ಎಲ್ಲ ಅಪರಾಧಿಗಳನ್ನು, ಈಗ ಬಿಜೆಪಿಯಲ್ಲಿರಲಿ ಅಥವ ಟಿಎಂಸಿಯಲ್ಲಿರಲಿ, ಅವರನ್ನು ಶಿಕ್ಷಿಸಬೇಕು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಜನಗಳಿಂದ ಲೂಟಿ ಹೊಡೆದ ಹಣಗಳನ್ನು ಬಡ್ಡಿ ಸಹಿತ ಅವರಿಗೆ ಹಿಂದಿರುಗಿಸಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸಿದೆ.

ಸಿಪಿಐ(ಎಂ) ಪೊಲಿಟ್‍ ಬ್ಯುರೊ ಫೆಬ್ರುವರಿ 4 ರಂದು ನೀಡಿರುವ ಹೇಳಿಕೆಯ ಪೂರ್ಣ ಪಾಠವನ್ನು ಈ ಮುಂದೆ ಕೊಡಲಾಗಿದೆ:

ಬಹಳ ಹಿಂದೆ 2014ರಲ್ಲಿ ಸುಪ್ರಿಂ ಕೋರ್ಟ್ ಸಿಬಿಐ ಗೆ ಸಾರಧಾ, ರೋಸ್‍ ವ್ಯಾಲಿ ಮುಂತಾದ ಚಿಟ್‍ ಫಂಡ್‍ ಕಂಪನಿಗಳು ಜನಗಳ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಹೊಡೆಯುವುದರಲ್ಲಿ ಇರುವ ಒಂದು ದೊಡ್ಡ ಪಿತೂರಿಯ ತನಿಖೆ ನಡೆಸಲು ಹೇಳಿತ್ತು. ಪೂರ್ಣ ಐದು ವರ್ಷಗಳ ಕಾಲ ಮೋದಿ ಸರಕಾರ ತನ್ನ ಘೋಷಣೆಗಳಿಗೆ ವ್ಯತಿರಿಕ್ತವಾಗಿ, ಈ ವಿಷಯದಲ್ಲಿ ಗಂಭೀರವಾಗಿ ಮುಂದುವರೆಯಲಿಲ್ಲ. ಈ ಅವಧಿಯಲ್ಲಿ ಈ ಹಗರಣಗಳಲ್ಲಿ ಪ್ರಮುಖ ಆರೋಪಿಗಳಾಗಿದ್ದ ಸಂಸದರಾರ ಮುಕುಲ್‍ ರಾಯ್, ಹೇಮಂತ ಶರ್ಮರಂತವರು ಬಿಜೆಪಿಗೆ ಹೋದರು. ಬಿಜೆಪಿ ಮತ್ತು ಟಿಎಂಸಿ ಈ ಎರಡೂ ಪಕ್ಷಗಳವರು ಈ ಲೂಟಿಯಲ್ಲಿ ಪಾಲುದಾರರು ಮತ್ತು ಇದು ಸುಪ್ರಿಂ ಕೋರ್ಟ್ ಆದೇಶದ ತನಿಖೆಗಳು ನಿಧಾನಗೊಳ್ಳಲು ಕಾರಣ ಎಂಬುದು ಸ್ಪಷ್ಟ.

ಈ ಹಿನ್ನೆಲೆಯಲ್ಲಿ, ಮೋದಿ ಸರಕಾರ ಬಿಜೆಪಿಯೇತರ ರಾಜ್ಯ ಸರಕಾರಗಳು ಮತ್ತು ಸಿಬಿಐ ಸೇರಿದಂತೆ ಸಂವಿಧಾನಿಕ ಸಂಸ್ಥೆಗಳ ಮೇಲೆ ಸರ್ವಾಧಿಕಾರಶಾಹಿ ದಾಳಿಗಳನ್ನು ನಡೆಸುತ್ತಿರುವುದನ್ನು ಕಾಣುತ್ತಿರುವಾಗ, ಅದರ ಈಗಿನ ನಡೆಯಲ್ಲಿ ರಾಜಕೀಯ ದುರುದ್ದೇಶದ ವಾಸನೆ ಹೊಡೆಯುತ್ತಿದೆ. ಬಂಗಾಲದಲ್ಲಿ ಪ್ರಜಾಪ್ರಭುತ್ವದ ಕೊಲೆಯ ದಾಖಲೆ ಹೊಂದಿರುವ ಟಿಎಂಸಿ ಸರಕಾರ ಮತ್ತು ಅದರ ಮುಖ್ಯಮಂತ್ರಿಗಳು ಅದಕ್ಕೆ ಸ್ಪಂದಿಸಿರುವ ರೀತಿಯಲ್ಲಿಯೂ ರಾಜಕೀಯ ದುರುದ್ದೇಶ ಕಾಣಿಸುತ್ತಿದೆ.

ಈ ದೈತ್ಯ ಪ್ರಮಾಣದ ಹಗರಣದ ಅಪರಾಧಿಗಳನ್ನು ಹಿಡಿದು ಹಾಕಬೇಕು, ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಅದನ್ನು ಜನಗಳಿಂದ ಲೂಟಿ ಹೊಡೆದ ಹಣವನ್ನು ಹಿಂದಿರುಗಿಸಲು ಬಳಸಬೇಕು ಎಂದು ಸಿಪಿಐ(ಎಂ) ನಿರಂತರವಾಗಿ ಆಗ್ರಹಿಸುತ್ತ ಬಂದಿದೆ.
ಬ್ರಿಗೇಡ್‍ ಪರೇಡ್‍ ಮೈದಾನದಲ್ಲಿ ಎಡರಂಗದ ಚಾರಿತ್ರಿಕ ಮತ್ತು ಹಿಂದೆಂದೂ ಕಾಣದ ರೀತಿಯ ಬೃಹತ್‍ ರ್ಯಾಲಿ ನಡೆದ ಕೆಲವೇ ಗಂಟೆಗಳೊಳಗಾಗಿ ಈ ಬೆಳವಣಿಗೆಗಳು ನಡೆದಿರುವುದು ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಮತ್ತು ಟಿಎಂಸಿ ಎರಡರ ವಿರುದ್ಧವೂ ಹೆಚ್ಚುತ್ತಿರುವ ಜನಗಳ ಪ್ರತಿಭಟನೆಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸುವ ಗುರಿಯನ್ನೂ ಹೊಂದಿದೆ.

ಈ ಸಾರ್ವಜನಿಕ ಲೂಟಿಯ ಎಲ್ಲ ಅಪರಾಧಿಗಳನ್ನು, ಅವರು ಈಗ ಬಿಜೆಪಿಯಲ್ಲಿರಲಿ ಅಥವ ಟಿಎಂಸಿ ಯಲ್ಲಿರಲಿ, ಶಿಕ್ಷಿಸಬೇಕು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಜನಗಳಿಂದ ಲೂಟಿ ಹೊಡೆದ ಹಣಗಳನ್ನು ಬಡ್ಡಿ ಸಹಿತ ಜನಗಳಿಗೆ ಹಿಂದಿರುಗಿಸಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸುತ್ತದೆ.

Leave a Reply

Your email address will not be published. Required fields are marked *