ಸಿ.ಎ.ಜಿ. ಯನ್ನೂ ಎಲ್ಲಾ ಮಾಹಿತಿಗಳನ್ನು ಒದಗಿಸದೆ ಕತ್ತಲಲ್ಲಿ ಇಟ್ಟಿಲ್ಲವಲ್ಲ ?
ಸಾರ್ವತ್ರಿಕ ಚುನಾವಣೆ ಮುಂಚಿನ ಕೊನೆಯ ದಿನದಂದು ಸಭೆ ಸೇರಿದ ಸಂಸತ್ತಿನಲ್ಲಿ ಮಹಾ ಲೆಕ್ಕ ಪರಿಶೋಧಕರ(ಸಿ.ಎ.ಜಿ.) ‘ಭಾರತೀಯ ವಿಮಾನ ಪಡೆಯ ಬಂಡವಾಳ ಗಳಿಕೆ ಕುರಿತು’ ಎಂಬ ವರದಿ ಈ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಒದಗಿಸುವುದಕ್ಕಿಂತ ಹೆಚ್ಚಾಗಿ ಪ್ರಶ್ನೆಗಳನ್ನೇ ಎತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
-
ಈ ವರದಿ ರಫೆಲ್ ವ್ಯವಹಾರದಲ್ಲಿನ ‘ಆಫ್ ಸೆಟ್’ ಗುತ್ತಿಗೆಗಳ ಬಗ್ಗೆ ಏನೂ ಹೇಳಿಲ್ಲ. ಆದ್ದರಿಂದ ರಿಲಯಂಸ್ ಡಿಫೆನ್ಸ್ ನ ಮತ್ತು 108 ಫೈಟರ್ ಜೆಟ್ ಗಳನ್ನು ತಯಾರಿಸಬೇಕಾಗಿದ್ದ ಮೂಲ ಸಾರ್ವಜನಿಕ ವಲಯದ ಭಾಗೀದಾರ ಕಂಪನಿಯಾದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಹೆಚ್.ಎ. ಎಲ್.) ನ್ನು ಸಂಪೂರ್ಣವಾಗಿ ಆಫ್ ಸೆಟ್ ಗುತ್ತಿಗೆಯಿಂದ ತೆಗೆದು ಹಾಕಿದುದರ ಪ್ರಸ್ತಾಪವೇ ಇದರಲ್ಲಿ ಇಲ್ಲ. ಇದನ್ನು ಒಂದು ಪ್ರತ್ಯೇಕ ಸಿ.ಎ.ಜಿ. ವರದಿಯಲ್ಲಿ ಕೊಡಲಾಗುವುದು ಎಂದು ತಿಳಿಸಲಾಗಿದೆ!
-
ಸಿ.ಎ.ಜಿ. ವರದಿ 2016ರ ಹೊಸ ರಫೆಲ್ ವ್ಯವಹಾರದಲ್ಲಿನ ವೆಚ್ಚಗಳ ಮೊತ್ತ ಹಿಂದಿನ 2007ರ ವ್ಯವಹಾರದಲ್ಲಿ ಇದ್ದುದಕ್ಕಿಂತ 2.8%ದಷ್ಟು ಕಡಿಮೆಯಾಗಿದೆ ಎಂದು ಹೇಳಿಕೊಂಡಿದೆ.
-
ಆದರೆ 2007ರ ವ್ಯವಹಾರದಲ್ಲಿ, ಭಾರತ ಸರಕಾರ 126 ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿಯ ನಿಗದಿತ ವೆಚ್ಚವನ್ನು ಮಾಡಬೇಕಾಗಿತ್ತು. ಮೋದಿ ಸರಕಾರ ಎಲ್ಲ ವಿಧಿ-ವಿಧಾನಗಳನ್ನು ಉಲ್ಲಂಘಿಸಿ ಮತ್ತು ಯಾವುದೇ ತಾರ್ಕಿಕ ಆಧಾರವಿಲ್ಲದೆ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸಿದಾಗ ಪ್ರತಿ ವಿಮಾನದ ವೆಚ್ಚ ವಿಪರೀತವಾಗಿ 41% ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರುತ್ತದೆ. ಸಿ.ಎ.ಜಿ. ಲೆಕ್ಕ ಪರಿಶೋಧಕರಾಗಿ ಈ ಪ್ರಶ್ನೆಯನ್ನು ಪರಿಶೀಲಿಸಿಬೇಕಾಗಿತ್ತು. ಆದರೆ ಹಾಗೆ ಮಾಡಿಲ್ಲ.
-
ಈಗಿನ ಪವ್ಯವಹಾರದಲ್ಲಿ ಬ್ಯಾಂಕ್ ಖಾತ್ರಿ ಇಲ್ಲವಾದ್ದರಿಂದ ಅದು ಡಸಾಲ್ಟ್ ಎವಿಯೇಷನ್ ಕಂಪನಿಗೆ ಉಳಿತಾಯವೇ ಹೊರತು ಭಾರತ ಸರಕಾರಕ್ಕಲ್ಲ ಎಂಬುದನ್ನು ಈ ಸಿ.ಎ.ಜಿ. ವರದಿ ಕೂಡ ಒಪ್ಪಿಕೊಂಡಿದೆ. ಇಂದಿನ(ಫೆ.13) ‘ದಿ ಹಿಂದು’ ಪತ್ರಿಕೆ ಈ ರೀತಿ ಬ್ಯಾಂಕ್ ಖಾತ್ರಿ ಇಲ್ಲದ್ದರ ಹಣಕಾಸು ಪ್ರಮಾಣ 574 ಮಿಲಿಯನ್ ಯುರೋಗಳು ಎಂದು ಈ ವ್ಯವಹಾರಕ್ಕೆಂದು ನೇಮಿಸಿದ್ದ ಭಾರತೀಯ ಮಾತುಕತೆ ತಂಡ(ಐ.ಎನ್.ಟಿ.) ಲೆಕ್ಕ ಹಾಕಿರುವುದಾಗಿ ಹೊರಗೆಡಹಿದೆ.
-
ಸಿ.ಎ.ಜಿ. ಪ್ರಸ್ತುತಪಡಿಸಿದ ಲೆಕ್ಕಾಚಾರಗಳಲ್ಲಿ ಮೂರ್ತ ಅಂಕಿ-ಅಂಶಗಳೇನೂ ಇಲ್ಲ. ಕೇವಲ ಶೇಕಡಾವಾರು ಬದಲಾವಣೆಗಳ ಬಗ್ಗೆ ಮಾತ್ರ ವರದಿ ಹೇಳುತ್ತದೆ. ಯಾವುದೇ ಲೆಕ್ಕ ಪರಿಶೋಧನಾ ವರದಿ ಹೀಗಿರುವುದಿಲ್ಲ. ಇದು ಯಾವುದೇ ರೀತಿಯ ಪಾರದರ್ಶಕತೆ ಇಲ್ಲದ ಅಸಾಮಾನ್ಯ ವರದಿ.
-
ರಾಷ್ಟ್ರೀಯ ಭದ್ರತೆಯ ಆತಂಕಗಳಿಂದಾಗಿ ಫೈಟರ್ ವಿಮಾನಗಳು ತುರ್ತಾಗಿ ಬೇಕಾಗಿತ್ತು, ಆದ್ದರಿಂದಲೇ ಈ ಹೊಸ ವ್ಯವಹಾರ ನಡೆಸಬೇಕಾಯಿತು ಎಂಬುದು ಮೋದಿ ಸರಕಾರದ ಒಂದು ಪ್ರಮುಖ ತರ್ಕವಾಗಿದೆ. ಆದರೆ ಈ ವ್ಯವಹಾರದ 36 ವಿಮಾನಗಳಲ್ಲಿ ಮೊದಲ 18 ವಿಮಾನಗಳು 36 ರಿಂದ 53ನೇ ತಿಂಗಳ ನಡುವೆ ಸಾಕಷ್ಟು ವಿಳಂಬವಾಗಿಯೇ ಬರುತ್ತಿವೆ. ಉಳಿದ 18 ವಿಮಾನಗಳು 67ನೇ ತಿಂಗಳ ವೇಳೆಗೆ ಬರುತ್ತವೆ ಎಂದು ಸಿ.ಎ.ಜಿ. ವರದಿಯೇ ಗಮನಿಸಿದೆ.
-
2007ರ ವ್ಯವಹಾರ ಹೆಚ್.ಎ.ಎಲ್. ಗೆ ಉಳಿದ 108 ವಿಮಾನಗಳನ್ನು ತಯಾರಿಸಲು ತಂತ್ರಜ್ಞಾನ ವರ್ಗಾವಣೆಯ ಒಂದು ಅಂಶವನ್ನು ಒಳಗೊಂಡಿತ್ತು. ಮೋದಿ ಸರಕಾರದ ವ್ಯವಹಾರದಲ್ಲಿ ತಂತ್ರಜ್ಞಾನ ವರ್ಗಾವಣೆಯ ಅಂಶವೇನೂ ಇಲ್ಲ. ಇದರಿಂದಾಗಿ ಪ್ರತಿ ವಿಮಾನದ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಬೇಕಿತ್ತು. ಆದರೆ ತದ್ವಿರುದ್ಧವಾದುದೇ ಸಂಭವಿಸಿದೆ.
ಹೀಗಿರುವಾಗ, ಮೋದಿ ಸರಕಾರದ ವ್ಯವಹಾರ ಹೆಚ್ಚು ವೆಚ್ಚದಾಯಕವಾದದ್ದು; ವಿಮಾನಗಳನ್ನು ಪಡೆಯುವ ವೇಗವೂ ಹೆಚ್ಚಾಗಿಲ್ಲ, ಮತ್ತು ಮಹತ್ವದ ಸಂಗತಿಯೆಂದರೆ, ಭಾರತೀಯ ವಿಮಾನ ಪಡೆ ಅದಕ್ಕೆ ವಾಸ್ತವವಾಗಿ ಬೇಕಾಗಿರುವ ಪ್ರಮಾಣದಲ್ಲಿ ವಿಮಾನಗಳನ್ನು ಪಡೆಯುತ್ತಿಲ್ಲ. ಆದ್ದರಿಂದ, ಈ ವ್ಯವಹಾರ ನಮ್ಮ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಿಗೆ ಅಪಾಯವೊಡ್ಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ವಿಶ್ಲೇಷಿಸಿದೆ.
ಫೆಬ್ರುವರಿ 13ರ ‘ದಿ ಹಿಂದು’ ಪತ್ರಿಕೆ ಈ ವ್ಯವಹಾರದ ಬಗ್ಗೆ ಮಾತುಕತೆ ನಡೆಸಲು ನೇಮಿಸಿದ ತಂಡ(ಐ.ಎನ್.ಟಿ.)ದ ಪ್ರಮುಖ ಸದಸ್ಯರು ಸಲ್ಲಿಸಿದ್ದ ಎಂಟು ಪುಟಗಳ ಭಿನ್ನಮತದ ಟಿಪ್ಪಣಿಯನ್ನು ಪ್ರಕಟಿಸಿದ್ದು ಸರಕಾರ ಅದಕ್ಕೆ ಉತ್ತರ ನೀಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ಅಲ್ಲದೆ ಸುಪ್ರಿಂ ಕೋರ್ಟಿಗೆ ಎಲ್ಲ ಮಾಹಿತಿಗಳನ್ನು ಕೊಡದೆ ಕತ್ತಲಲ್ಲಿ ಇಟ್ಟಂತೆ, ಸಿ.ಎ.ಜಿ.ಗೂ ಎಲ್ಲಾ ಮಾಹಿತಿಗಳನ್ನು ಒದಗಿಸದೆ ಅದನ್ನೂ ಕತ್ತಲಲ್ಲಿ ಇಟ್ಟಿಲ್ಲವಲ್ಲ? ಇದನ್ನೂ ಸರಕಾರ ಸ್ಪಷ್ಟೀಕರಿಸಬೇಕಾಗಿದೆ ಎಂದೂ ಪೊಲಿಟ್ ಬ್ಯುರೊ ಹೇಳಿದೆ.
ಈ ಸಿ.ಎ.ಜಿ. ವರದಿ ಈ ವ್ಯವಹಾರಕ್ಕೆ ಸಂಬಂಧಪಟ್ಟಂತ ಭ್ರಷ್ಟಾಚಾರ ಮತ್ತು ಚಮಚಾ ಬಂಡವಾಳಶಾಹಿಯ ಒಂದೇ ಒಂದು ಪ್ರಶ್ನೆಗೂ ಉತ್ತರ ನೀಡಿಲ್ಲ. ಈ ಉತ್ತರಗಳನ್ನು ಇನ್ನು ಮುಂದಿನ ಒಂದು ಸೂಕ್ತವಾದ ಸ್ವತಂತ್ರ ತನಿಖೆ ಮಾತ್ರವೇ ನೀಡಬಲ್ಲದು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಇದು ಸತ್ಯವನ್ನು ಸಂಪೂರ್ಣವಾಗಿ ಮಸುಕುಗೊಳಿಸುವ ಒಂದು ವರದಿ ಎಂದು ಅದು ಬಣ್ಣಿಸಿದೆ.
ಈ ಮೋದಿ ಸರಕಾರ ಸಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಮೇಲೆ ಹೇಗೆ ದಾಳಿಗಳನ್ನು ನಡೆಸುತ್ತಿದೆ ಎಂಬುದನ್ನು ಇದು ಮತ್ತೊಮ್ಮೆ ದೃಢಪಡಿಸಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.